ಮ್ಯಾನ್ಮಾರ್‌ನಲ್ಲಿನ ಅಂತರ್ಯುದ್ಧದ ರೀತಿಯ ಪರಿಸ್ಥಿತಿಯನ್ನು ತಪ್ಪಿಸಬೇಕು: ಚೀನಾ ಒತ್ತಾಯ

Update: 2022-01-29 17:34 GMT

ವಿಶ್ವಸಂಸ್ಥೆ, ಜ.29: ಮ್ಯಾನ್ಮಾರ್‌ನಲ್ಲಿ ಇನ್ನಷ್ಟು ಹಿಂಸಾಚಾರ ಮತ್ತು ಅಂತರ್ಯುದ್ಧ ನಡೆಯುವುದನ್ನು ತಪ್ಪಿಸಲು ಜಾಗತಿಕ ಸಮುದಾಯ ಒಗ್ಗೂಡಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಚೀನಾ ವಿಶ್ವಸಂಸ್ಥೆಯಲ್ಲಿ ಒತ್ತಾಯಿಸಿದೆ.

ಅದು ನಮ್ಮ ಮನಸ್ಸಿನಲ್ಲಿ ಇರಬೇಕಾದ ಪ್ರಾಥಮಿಕ ಗುರಿಯಾಗಬೇಕು ಎಂದು ವಿಶ್ವಸಂಸ್ಥೆಯಲ್ಲಿನ ಚೀನಾದ ರಾಯಭಾರಿ ಝಾಂಗ್ ಜುನ್ ಹೇಳಿದ್ದಾರೆ. ಭದ್ರತಾ ಸಮಿತಿ ಎರಡೂವರೆ ಗಂಟೆ ನಡೆಸಿದ ಗೌಪ್ಯ ಸಭೆಯ ಬಳಿಕ ಅವರು ಸುದ್ಧಿಗಾರರ ಜತೆ ಮಾತನಾಡಿದರು.ಮ್ಯಾನ್ಮಾರ್‌ಗೆ  ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ನೊಯಿಲೀನ್ ಹೀಝರ್, ಆ ದೇಶಕ್ಕೆ ಭೇಟಿ ನೀಡಲು ಸೇನಾಡಳಿತದ ಅನುಮತಿ ಕೇಳಿದ್ದಾರೆ . ಅವರಿಗೆ ಇನ್ನಷ್ಟು ಕಾಲಾವಕಾಶದ ಅಗತ್ಯವಿದೆ. ಮ್ಯಾನ್ಮಾರ್‌ನಲ್ಲಿ ಸಂಬಂಧಪಟ್ಟ ಎಲ್ಲಾ ಪ್ರತಿನಿಧಿಗಳ ಜತೆ ಮಾತನಾಡಲು ಅನುಮತಿ ಕೋರಿದ್ದು ಅನುಮತಿ ಲಭಿಸುವ ನಿರೀಕ್ಷೆಯಿದೆ ಎಂದು ಜುನ್ ಹೇಳಿದ್ದಾರೆ.

ವಿಶೇಷ ಪ್ರತಿನಿಧಿ ಹೀಝರ್ ಮ್ಯಾನ್ಮಾರ್‌ಗೆ ಶೀಘ್ರ ಭೇಟಿ ನೀಡಲು ಪ್ರಯತ್ನಿಸಲಿದ್ದಾರೆ. ಆದರೆ ಅಲ್ಲಿನ ಪರಿಸ್ಥಿತಿ ಸೂಕ್ತವಾಗಿರಬೇಕು ಎಂದು ಬ್ರಿಟನ್‌ನ ಉಪರಾಯಭಾರಿ ಜೇಮ್ಸ್ ಕೈರುಕಿ ಹೇಳಿದ್ದಾರೆ. ಕಳೆದ ವರ್ಷದ ಫೆಬ್ರವರಿ 1ರಂದು ಕ್ಷಿಪ್ರಕ್ರಾಂತಿಯ ಮೂಲಕ ಆಂಗ್ ಸೂಕಿ ನೇತೃತ್ವದ ಸರಕಾರವನ್ನು ಪದಚ್ಯುತಗೊಳಿಸಿದ್ದ ಸೇನೆ ಅಧಿಕಾರವನ್ನು ಕೈವಶ ಮಾಡಿಕೊಂಡಿತ್ತು. ಇದನ್ನು ವಿರೋಧಿಸಿದವರನ್ನು ನಿಗ್ರಹಿಸಲು ನಿರ್ದಯ ಕಾರ್ಯಾಚರಣೆ ನಡೆಸಿದ್ದು ಕನಿಷ್ಟ 1,500 ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕು ಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News