ಪೂರ್ವ ಯುರೋಪ್ ಗೆ ಅಮೆರಿಕದ ಪಡೆ ಶೀಘ್ರ ರವಾನೆ: ಬೈಡನ್ ಘೋಷಣೆ
ವಾಷಿಂಗ್ಟನ್, ಜ.29: ಉಕ್ರೇನ್ ವಿಷಯಕ್ಕೆ ಸಂಬಂಧಿಸಿದಂತೆ ರಶ್ಯಾದ ಮೇಲೆ ಒತ್ತಡ ಮುಂದುವರಿಸಲು ಬಯಸಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಪೂರ್ವ ಯುರೋಪ್‌ಗೆ ಅಮೆರಿಕದ ಸಣ್ಣ ಸೇನಾ ತುಕಡಿಯನ್ನು ಶೀಘ್ರವೇ ನಿಯೋಜಿಸುವುದಾಗಿ ಶುಕ್ರವಾರ ಘೋಷಿಸಿದ್ದಾರೆ.
ಪೂರ್ವ ಯುರೋಪ್‌ನಲ್ಲಿ ನೇಟೊ ಪಡೆಯ ಉಪಸ್ಥಿತಿಗೆ ಶಕ್ತಿ ತುಂಬುವ ಉದ್ದೇಶದಿಂದ ಅಮೆರಿಕದ ಸಣ್ಣ ತುಕಡಿಯೊಂದನ್ನು ಶೀಘ್ರ ರವಾನಿಸುವುದಾಗಿ ಬೈಡನ್ ಘೋಷಿಸಿದ್ದಾರೆ. ಈಗಾಗಲೇ ಪಶ್ಚಿಮ ಯುರೋಪ್‌ನಲ್ಲಿ ಅಮೆರಿಕದ ಸಾವಿರಾರು ಯೋಧರು ಕಾರ್ಯಾಚರಣೆಯಲ್ಲಿದ್ದಾರೆ. ಈ ಮಧ್ಯೆ, ರಾಜತಾಂತ್ರಿಕ ಮಾರ್ಗದ ಮೂಲಕ ರಶ್ಯಾದ ಮೇಲೆ ಒತ್ತಡ ಹೇರುವುದು ಒಳಿತು ಎಂದು ಅಮೆರಿಕದ ರಕ್ಷಣಾ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿಯಾಗಿದೆ.
ಉಕ್ರೇನ್‌ಗೆ ಬೆದರಿಕೆಯೊಡ್ಡಲು ಸಾಲುವಷ್ಟು ಸೇನೆ ಮತ್ತು ಶಸ್ತ್ರಾಸ್ತ್ರಗಳನ್ನು ರಶ್ಯಾ ಈಗ ಗಡಿಭಾಗದಲ್ಲಿ ಜಮೆಗೊಳಿಸಿದೆ ಎಂದು ಪೆಂಟಗಾನ್(ಅಮೆರಿಕ ರಕ್ಷಣಾ ಇಲಾಖೆ)ಯ ಉನ್ನತ ಅಧಿಕಾರಿಗಳು ಹೇಳಿದ್ದಾರೆ. ಆದರೆ ಈ ರೀತಿಯ ಸಂಘರ್ಷ ಉಭಯ ದೇಶಗಳಿಗೂ ಭಯಾನಕವಾಗಿರಲಿದೆ. ರಶ್ಯಾವು ಉಕ್ರೇನ್ ಮೇಲೆ ಬಲಪ್ರಯೋಗಿಸಿದರೆ ಅದು ಗಮನಾರ್ಹ ಪ್ರಮಾಣದ ನಾಶ ನಷ್ಟಕ್ಕೆ ಕಾರಣವಾಗಲಿದೆ ಎಂದು ಅಮೆರಿಕದ ಉನ್ನತ ಸೇನಾ ಮುಖಂಡ ಮಾರ್ಕ್ ಮಿಲ್ಲಿ ಹೇಳಿದ್ದಾರೆ.
ಯುದ್ಧ ನಡೆಯುವುದನ್ನು ಈಗಲೂ ತಪ್ಪಿಸಬಹುದಾಗಿದೆ. ಸಂಘರ್ಷ ಅನಿವಾರ್ಯವಲ್ಲ. ಈಗಲೂ ರಾಜತಾಂತ್ರಿಕ ಉಪಕ್ರಮಗಳಿಗೆ ಸಮಯಾವಕಾಶವಿದೆ . ಪುಟಿನ್ ಕೂಡಾ ಸರಿಯಾದ ಕೆಲಸವನ್ನು ಮಾಡಬಹುದು. ಪರಿಸ್ಥಿತಿ ಸಂಘರ್ಷದ ಸ್ಥಿತಿಗೆ ಬದಲಾಗುತ್ತದೆ ಎಂದು ಈಗಲೇ ಹೇಳುವಂತಿಲ್ಲ ಎಂದು ರಕ್ಷಣಾ ಕಾರ್ಯದರ್ಶಿ ಲಾಯ್ಡಿ ಆಸ್ಟಿನ್ ಹೇಳಿದ್ದಾರೆ.
ಉಕ್ರೇನ್ ಗಡಿಭಾಗದಲ್ಲಿ ರಶ್ಯಾದ ಬೃಹತ್ ಸೇನಾ ಜಮಾವಣೆ ಕುರಿತು ಆತಂಕವನ್ನು ಪ್ರಚೋದಿಸದಂತೆ ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆಂಸ್ಕಿ ಪಾಶ್ಚಿಮಾತ್ಯ ದೇಶಗಳ ಮುಖಂಡರನ್ನು ಆಗ್ರಹಿಸಿದ್ದಾರೆ. ಉದ್ವಿಗ್ನತೆ ಶಮನಗೊಳಿಸುವ ಉಪಕ್ರಮದ ಅಗತ್ಯವಿದೆ ಎಂದು ರಶ್ಯಾ ಅಧ್ಯಕ್ಷ ಪುಟಿನ್ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್ ಸಹಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪುಟಿನ್ ಆಕ್ರಮಣ ನಡೆಸುವ ಯೋಜನೆ ಹೊಂದಿಲ್ಲ ಎಂಬುದು ಅವರೊಂದಿಗೆ ಅರ್ಧಗಂಟೆಗೂ ಹೆಚ್ಚು ಕಾಲ ಫೋನ್ನಲ್ಲಿ ನಡೆಸಿದ ಸಂಭಾಷಣೆಯಲ್ಲಿ ಸ್ಪಷ್ಟವಾಗಿದೆ ಎಂದು ಮಾಕ್ರನ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.