ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ: ಬ್ರಹ್ಮಾಂಡದ ವಿಸ್ಮಯಗಳಿಗೆ ಉತ್ತರ ತಿಳಿಸುವುದೇ?

Update: 2022-01-29 19:30 GMT

ಒಂದು ತಿಂಗಳ ಸುದೀರ್ಘ ಪ್ರಯಾಣದ ನಂತರ, ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ (JWST) ಈಗ ತನ್ನ ಅಂತಿಮ ಗಮ್ಯಸ್ಥಾನವನ್ನು ತಲುಪಿದೆ. ಪ್ರಯಾಣದ ತಾಪದಿಂದ ಬಳಲಿದ ಅದು ಈಗ ತಣ್ಣಗಾಗುತ್ತ, ದಣಿವಾರಿಸಿಕೊಳ್ಳುತ್ತಿದೆ ಮತ್ತು ತನ್ನಲ್ಲಿರುವ ಉಪಕರಣಗಳನ್ನು ನಿಗದಿತ ಕಾರ್ಯಕ್ಕೆ ನಿಯೋಜಿಸುತ್ತಿದೆ. ದೂರದರ್ಶಕವು ಅತ್ಯಾಕರ್ಷಕ ಹೊಸ ಚಿತ್ರಣಗಳೊಂದಿಗೆ ಸಂಶೋಧನೆಗಳು ಮತ್ತು ವರದಿ ಮಾಡಲು ಪ್ರಾರಂಭಿಸಲು ಬೇಕಾದ ಸಿದ್ಧತೆಯಲ್ಲಿದೆ. ಹಬಲ್ ಬಾಹ್ಯಾಕಾಶ ದೂರದರ್ಶಕದ ಉತ್ತರಾಧಿಕಾರಿ ಎನಿಸಿದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ಆಧುನಿಕ ಮತ್ತು ಹೆಚ್ಚು ಸುಧಾರಿತ ಬಾಹ್ಯಾಕಾಶ ವೀಕ್ಷಣಾಲಯವಾಗಿದ್ದು, ಹಲವಾರು ಗುರಿಗಳೊಂದಿಗೆ ಬಾಹ್ಯಾಕಾಶ ಪ್ರವಾಸ ಕೈಗೊಂಡಿದೆ. ಪ್ರಮುಖವಾಗಿ ಕ್ಷೀರಪಥದ ಬಗ್ಗೆ ನಮ್ಮ ತಿಳುವಳಿಕೆಯನ್ನು ಗಾಢವಾಗಿಸಲು ಅಧಿಕೃತ ಮಾಹಿತಿ ಸಂಗ್ರಹಿಸಲಿದೆ. ಜೊತೆಗೆ ದೂರದ ಬಾಹ್ಯ ಗ್ರಹಗಳು ಮತ್ತು ಆಕಾಶ ವಸ್ತುಗಳನ್ನು ಇಣುಕಿ ನೋಡುವ ಮೂಲಕ ಕಪ್ಪುರಂಧ್ರದ ಪುರಾವೆಗಳಿಗಾಗಿ ಸಂಶೋಧನೆ ಮಾಡಲಿದೆ.

ಪ್ರಸ್ತುತ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ ಎಲ್ಲಿದೆ? ಅದು ಹಬಲ್‌ಗಿಂತ ಹೇಗೆ ಭಿನ್ನವಾಗಿದೆ? ದೂರದರ್ಶಕಕ್ಕೆ ಹೆಸರಿಸಲಾದ ವ್ಯಕ್ತಿ ಜೇಮ್ಸ್ ವೆಬ್ ಯಾರು? ಮುಂತಾದ ಪ್ರಶ್ನೆಗಳು ಕಾಡುವುದು ಸಹಜ. ಪ್ರಸ್ತುತ ಲೇಖನದಲ್ಲಿ ಈ ಕುರಿತ ಒಂದಿಷ್ಟು ಮಾಹಿತಿಗಳನ್ನು ಚರ್ಚಿಸೋಣ. ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ಈಗ ಅದರ ಅಂತಿಮ ಗಮ್ಯಸ್ಥಾನ ತಲುಪಿದ್ದು, ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿದೆ. ಇದು ತನ್ನ ಪ್ರಯಾಣ ಪೂರ್ಣಗೊಳಿಸಲು ಸರಿಸುಮಾರು ಒಂದು ತಿಂಗಳು ತೆಗೆದುಕೊಂಡಿದೆ. ನಾಸಾದ ಜಾಲತಾಣದಲ್ಲಿನ ‘where is web’ ವೈಶಿಷ್ಟ್ಯದೊಂದಿಗೆ ನೀವು ಅದರ ಪ್ರಗತಿಯನ್ನು ಟ್ರ್ಯಾಕ್ ಮಾಡಬಹುದು. ಇದು ಭೂಮಿಯಿಂದ ಪ್ರಸ್ತುತ ಇರುವ ದೂರವನ್ನು ಮಾತ್ರವಲ್ಲದೆ ದೂರದರ್ಶಕದ ವೇಗ, ತಾಪಮಾನ, ಅದು ಎಷ್ಟು ಕಾಲ ಕಕ್ಷೆಯಲ್ಲಿದೆ ಮತ್ತು ಅದರ ಮುಂದಿನ ಹಂತ ಏನು ಎಂಬುದನ್ನು ಗ್ರಾಫಿಕ್ಸ್ ಚಿತ್ರಗಳೊಂದಿಗೆ ತೋರಿಸುತ್ತದೆ. ದೂರದರ್ಶಕವನ್ನು 24ನೇ ಡಿಸೆಂಬರ್ 2021ರಂದು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಯಿತು. ಇಡೀ ಜಗತ್ತು ಕ್ರಿಸ್‌ಮಸ್ ಈವ್ ಆಚರಣೆಯಲ್ಲಿ ತೊಡಗಿದ ಸಮಯದಲ್ಲಿ ಈ ದೂರದರ್ಶಕ ಬಾಹ್ಯಾಕಾಶಕ್ಕೆ ತನ್ನ ಪ್ರಯಾಣವನ್ನು ಆರಂಭಿಸಿತು. ಬಾಹ್ಯಾಕಾಶ ಅಭಿಮಾನಿಗಳಿಗೆ ಕ್ರಿಸ್‌ಮಸ್ ಈವ್ ಮತ್ತಷ್ಟು ಸಡಗರ ತಂದಿತ್ತು. ದೂರದರ್ಶಕವು ಈಗ ಅಧಿಕೃತವಾಗಿ ಉಡಾವಣೆಗೊಂಡಿದ್ದರೂ, ಈ ಹಂತ ತಲುಪಲು ಅನೇಕ ವಿಳಂಬ ಪ್ರಯತ್ನಗಳನ್ನು ಕಂಡಿದೆ. ವೀಕ್ಷಣಾಲಯವನ್ನು ಮೂಲತಃ 2007ರಲ್ಲಿ ಪ್ರಾರಂಭಿಸಲು ನಿರೀಕ್ಷಿಸಲಾಗಿತ್ತು. ಆದರೆ ಕೆಲ ತಾಂತ್ರಿಕ ಕಾರಣಗಳಿಂದ ಇದು ಸಾಧ್ಯವಾಗಿರಲಿಲ್ಲ. 24ನೇ ಡಿಸೆಂಬರ್ 2021ರಂದು ತನ್ನ ಪ್ರಯಾಣ ಆರಂಭಿಸಿದೆ. ಈ ಪ್ರಯಾಣವು ಇಲ್ಲಿನವರೆಗೆ ಒಟ್ಟು 16 ಉಡಾವಣೆ ವಿಳಂಬಗಳನ್ನು ಅನುಭವಿಸಿದೆ.

ದೂರದರ್ಶಕವನ್ನು ಏರಿಯನ್-5 ರಾಕೆಟ್‌ನಲ್ಲಿ ಉಡಾವಣೆ ಮಾಡಲಾಯಿತು. ಇದು ವಿಶೇಷವಾದ ರಾಕೆಟ್ ಆಗಿದ್ದು, ಉಪಗ್ರಹಗಳು ಮತ್ತು ಇತರ ಪೇಲೋಡ್‌ಗಳನ್ನು ವರ್ಗಾವಣೆ ಅಥವಾ ಕಡಿಮೆ ಭೂಮಿಯ ಕಕ್ಷೆಗೆ ತೆಗೆದುಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಇಂತಹ ಐತಿಹಾಸಿಕ ದೂರದರ್ಶಕಕ್ಕೆ ಜೇಮ್ಸ್ ವೆಬ್ ಅವರ ಹೆಸರನ್ನು ಯಾಕೆ ಇಟ್ಟರು ಎಂದು ನೀವು ಯೋಚಿಸುತ್ತಿರಬಹುದು. ನಾಸಾದ ಎರಡನೇ ನಿರ್ವಾಹಕರಾದ ಜೇಮ್ಸ್ ಎಡ್ವಿನ್ ವೆಬ್ ಅಪೊಲೊವನ್ನು ಶಿರೋನಾಮೆ ಮಾಡಲು ಹೆಸರುವಾಸಿಯಾಗಿದ್ದರು ಮತ್ತು ಮಾನವರನ್ನು ಚಂದ್ರನಲ್ಲಿಗೆ ಕಳುಹಿಸುವ ಮೊದಲ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಹೆಚ್ಚು ಕೆಲಸ ಮಾಡಿದವರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆಗಳಿಗೆ ಕಾರಣವಾದ ಜೇಮ್ಸ್ ವೆಬ್ 1992ರಲ್ಲಿ 85ನೇ ವಯಸ್ಸಿನಲ್ಲಿ ನಿಧನರಾದರು. ಹಬಲ್ ಅವರ ಉತ್ತರಾಧಿಕಾರಿ ಎನಿಸಿದ ಜೇಮ್ಸ್ ವೆಬ್ ಅವರ ಗೌರವಾರ್ಥವಾಗಿ ಈ ಯೋಜನೆಗೆ ಅವರ ಹೆಸರಿಸುವುದು ಸೂಕ್ತವಾಗಿದೆ ಎಂದು ನಾಸಾದ ಮಾಜಿ ಆಡಳಿತಗಾರ ಸೀನ್ ಒ ಕೀಫ್ ಅವರು ವೀಕ್ಷಣಾಲಯದ ಹೆಸರಿನ ಬಗ್ಗೆ ಹೇಳಿದ್ದಾರೆ. ‘‘ಜೇಮ್ಸ್ ವೆಬ್ ಅವರ ಪ್ರಯತ್ನಗಳಿಗೆ ಧನ್ಯವಾದಗಳು ಕೇವಲ ನಾಟಕೀಯ ಎನಿಸುತ್ತವೆ. ಅವರು ನಮ್ಮ ರಾಷ್ಟ್ರವನ್ನು ಪರಿಶೋಧನೆಯ ಮೊದಲ ಸಮುದ್ರಯಾನಕ್ಕೆ ಕರೆದೊಯ್ದರು, ನಮ್ಮ ಕಲ್ಪನೆಯನ್ನು ವಾಸ್ತವಕ್ಕೆ ತಿರುಗಿಸಿದರು’’ ಎಂದು ಸೀನ್ ಒ ಕೀಫ್ ವಿವರಿಸುತ್ತಾರೆ. ದೂರರ್ಶಕವು ಮೊದಲ ತಿಂಗಳಲ್ಲಿ ಉಪಗ್ರಹವು ತನ್ನ ಸಂಕೀರ್ಣ ಘಟಕಗಳಲ್ಲಿ ಕಾರ್ಯಾರಂಭ ಮಾಡಲಿದೆ. ಪ್ರಯಾಣದುದ್ದಕ್ಕೂ ಹೆಚ್ಚು ಬಿಸಿಯಾಗಿದ್ದ ದೂರದರ್ಶಕ ಮತ್ತು ಉಪಕರಣಗಳು ಈ ಹಂತದಲ್ಲಿ ವೇಗವಾಗಿ ತಣ್ಣಗಾಗುತ್ತವೆ. ಅವು ಸ್ಥಿರ ತಾಪಮಾನಕ್ಕೆ ತಣ್ಣಗಾಗಲು ಇನ್ನೂ ಕೆಲವು ವಾರಗಳನ್ನು ತೆಗೆದುಕೊಳ್ಳುತ್ತದೆ. ಈ ಹಂತದಲ್ಲಿ ಕನ್ನಡಿಗಳು ತಮ್ಮ ಕೆಲಸವನ್ನು ಹೇಗೆ ನಿರ್ವಹಿಸುತ್ತವೆ ಎಂದು ಖಚಿತಪಡಿಸಿಕೊಳ್ಳಲು ಪರೀಕ್ಷೆಗಳನ್ನು ಮಾಡಲಾಗುತ್ತದೆ.

ಇದರ ನಂತರ ಮುಂದಿನ ಒಂದೆರಡು ತಿಂಗಳು, ಉಪಗ್ರಹವು ತನ್ನ ಪರೀಕ್ಷೆಗಳನ್ನು ಪ್ರಾರಂಭಿಸುತ್ತದೆ. ಫೈನ್ ಗೈಡೆನ್ಸ್ ಸೆನ್ಸರ್ ಅನ್ನು ಬಳಸಿಕೊಂಡು, ಜೆಡಬ್ಲ್ಯೂಎಸ್‌ಟಿಯನ್ನು ಪ್ರಕಾಶಮಾನವಾದ ನಕ್ಷತ್ರದ ಕಡೆಗೆ ತಿರುಗಿಸಲಾಗುತ್ತದೆ. ಅದು ಗುರಿಗಳನ್ನು ಪಡೆದುಕೊಳ್ಳಬಹುದು ಮತ್ತು ಲಾಕ್ ಮಾಡಬಹುದು. ನಂತರ ದೂರದರ್ಶಕ ದೃಗ್ವಿಜ್ಞಾನವನ್ನು ಜೋಡಿಸುವ ದೀರ್ಘ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಇದರ ನಂತರ ಎಲ್ಲಾ ವೈಜ್ಞಾನಿಕ ಉಪಕರಣಗಳ ಕಾರ್ಯಾಚರಣೆಯ ವಿವಿಧ ವಿಧಾನಗಳ ಮೇಲೆ ಮಾಪನಾಂಕ ನಿರ್ಣಯಗಳನ್ನು ಮಾಡಲಾಗುತ್ತದೆ. ಈ ಹಂತದಲ್ಲಿ ನಮ್ಮ ಸೌರವ್ಯೆಹದಲ್ಲಿ ಕ್ಷುದ್ರಗ್ರಹಗಳು, ಧೂಮಕೇತುಗಳು, ಚಂದ್ರಗಳು ಮತ್ತು ಗ್ರಹಗಳಂತಹ ಚಲಿಸುವ ಆಕಾಶಕಾಯಗಳನ್ನು ಟ್ರ್ಯಾಕ್ ಮಾಡುವ ವೀಕ್ಷಣೆಗಳು ಪ್ರಾರಂಭವಾಗುತ್ತವೆ. ಈ ಹಂತದಿಂದ ವೆಬ್ ತನ್ನ ವಿಜ್ಞಾನ ಮಿಷನ್ ಅನ್ನು ಪ್ರಾರಂಭಿಸುತ್ತದೆ. ವಾಡಿಕೆಯ ಪರೀಕ್ಷೆಗಳನ್ನು ನಡೆಸುತ್ತದೆ ಮತ್ತು ಮಾಹಿತಿಯನ್ನು ಹಿಂದಿರುಗಿಸುತ್ತದೆ.

ಹಬಲ್ ಬಾಹ್ಯಾಕಾಶ ದೂರದರ್ಶಕದ ಉತ್ತರಾಧಿಕಾರಿ ಎಂದು ಇದನ್ನು ಹೇಳಲಾಗುತ್ತದೆ. ಇದಕ್ಕೆ ಕಾರಣಗಳು ಸ್ಪಷ್ಟ. ಜೆಡಬ್ಲ್ಯೂಎಸ್‌ಟಿ ಇದುವರೆಗೆ ನಿರ್ಮಿಸಲಾದ ಅತಿದೊಡ್ಡ ಬಾಹ್ಯಾಕಾಶ ವೀಕ್ಷಣಾಲಯವಾಗಿದೆ. ಇದರ ದೈತ್ಯಾಕಾರದ ಸನ್‌ಶೀಲ್ಡ್ ಬೇಸ್ ಸರಿಸುಮಾರು ಟೆನಿಸ್ ಕೋರ್ಟ್‌ನ ಗಾತ್ರದಂತೆಯೇ ಇರುತ್ತದೆ. ಹಬಲ್‌ಗಿಂತ ಸುಮಾರು ಎರಡು ಪಟ್ಟು ದೊಡ್ಡದಾದರೂ (ಇದು ಕೇವಲ 13 ಮೀ. ಉದ್ದ), 6,500ಕೆ.ಜಿ. ತೂಕವನ್ನು ಹೊಂದಿದೆ. ಜೆಡಬ್ಲ್ಯೂಎಸ್‌ಟಿಯ ಚಿನ್ನದ ಲೇಪಿತ ಕನ್ನಡಿಗಳು ಒಟ್ಟು 6.5ಎಂ ವ್ಯಾಸವನ್ನು ಹೊಂದಿವೆ. ಹಬಲ್‌ನ 2.4ಎಂ ವ್ಯಾಸದ ಪ್ಲೇಟ್‌ಗಳಿಗಿಂತ ದೊಡ್ಡದಾಗಿದೆ. ಒಟ್ಟಾರೆಯಾಗಿ, ಜೆಡಬ್ಲ್ಯೂಎಸ್‌ಟಿ ಹಬಲ್‌ಗಿಂತ ಸರಿಸುಮಾರು 15 ಪಟ್ಟು ವಿಶಾಲವಾದ ನೋಟವನ್ನು ಹೊಂದಿರುತ್ತದೆ.

 ಜೆಡಬ್ಲ್ಯೂಎಸ್‌ಟಿ ವೀಕ್ಷಣಾಲಯವು ಅದರ ಅತಿಗೆಂಪು ದೂರದರ್ಶಕವನ್ನು ಬಳಸಿಕೊಂಡು, 13.6 ಶತಕೋಟಿ ಬೆಳಕಿನ ವರ್ಷಗಳ ದೂರದಲ್ಲಿರುವ ವಸ್ತುಗಳನ್ನು ಪರೀಕ್ಷಿಸುತ್ತದೆ. ಬ್ರಹ್ಮಾಂಡದಾದ್ಯಂತ ಪ್ರಯಾಣಿಸಲು ಬೆಳಕು ತೆಗೆದುಕೊಳ್ಳುವ ಅಂದರೆ, 13.6 ಶತಕೋಟಿ ವರ್ಷಗಳ ಹಿಂದಿನ ಬಾಹ್ಯಾಕಾಶ ವಸ್ತುಗಳನ್ನು ಪರಿಣಾಮಕಾರಿಯಾಗಿ ನೋಡುತ್ತದೆ, ಇದರರ್ಥ ಜೆಡಬ್ಲ್ಯೂಎಸ್‌ಟಿ ಬಿಗ್ ಬ್ಯಾಂಗ್‌ನ ನಂತರ ಅಂದಾಜು 100 ರಿಂದ 250 ಮಿಲಿಯನ್ ವರ್ಷಗಳ ನಂತರದ ಬಹುತೇಕ ಬಾಹ್ಯಾಕಾಶ ವಸ್ತುಗಳ ಕುರಿತು ಅಧ್ಯಯನ ಮಾಡಲಿದೆ. ಇದು ಹಿಂದೆಂದೂ ಮಾನವಕುಲ ಗಮನಿಸಿದ ಸಮಯದ ಹಿಂದಿನ ಅಂಶಗಳ ಕುರಿತು ಅಧ್ಯಯನ ಮಾಡಲಿದೆ.

ಜೆಡಬ್ಲ್ಯೂಎಸ್‌ಟಿ ಬಾಹ್ಯಾಕಾಶಕ್ಕೆ ಉಡಾವಣೆಯಾದ ನಂತರ ಸೂರ್ಯನ ಸುತ್ತ ಒಂದು ಸುತ್ತು ಹಾಕಿ ಭೂಮಿಯಿಂದ 1.5 ಮಿಲಿಯನ್‍ ಕಿ.ಮೀ. ವರೆಗೆ 223°ಸಿ ತಾಪಮಾನದಲ್ಲಿ ಹಾರುತ್ತಿದೆ. ಹಬಲ್ ಬಾಹ್ಯಾಕಾಶ ದೂರದರ್ಶಕವು ನಮ್ಮ ಗ್ರಹದ ಮೇಲೆ ಕೇವಲ 570 ಕಿ.ಮೀ. ಎತ್ತರದಲ್ಲಿ ಹಾರುತ್ತದೆ. ಇದು ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣೆ ಒಟ್ಟಿಗೆ ಕೆಲಸ ಮಾಡುವ ಸ್ಥಳದಲ್ಲಿ ಇರುತ್ತದೆ. ಜೊತೆಗೆ ಇದು ಭೂಮಿಯ ಪ್ರತಿಫಲಿತ ವಿಕಿರಣದಿಂದ ದೂರವಿರುತ್ತದೆ. ಏಕೆಂದರೆ ದೂರದರ್ಶಕವು ತಂಪಾಗಿರಿಸಲು ಈ ಸ್ಥಳ ಹೆಚ್ಚು ಸಹಾಯ ಮಾಡುತ್ತದೆ. ಜೆಡಬ್ಲ್ಯೂಎಸ್‌ಟಿಯು ನಾಸಾ, ಯುರೋಪಿಯನ್ ಸ್ಪೇಸ್ ಏಜೆನ್ಸಿ ಮತ್ತು ಕೆನಡಿಯನ್ ಸ್ಪೇಸ್ ಏಜೆನ್ಸಿಗಳ ಸಂಯುಕ್ತ ಕಾರ್ಯಾಚರಣೆಯೊಂದಿಗೆ ಈ ಕಾರ್ಯ ಪ್ರಾರಂಭವಾಗಿದೆ. ಇದು ಬ್ರಹ್ಮಾಂಡದ ಮೊದಲ ಬೆಳಕು ಮತ್ತು ಬಿಗ್‌ಬ್ಯಾಂಗ್ ನಂತರ ರೂಪುಗೊಂಡ ಆಕಾಶ ವಸ್ತುಗಳನ್ನು ಪರೀಕ್ಷಿಸುತ್ತದೆ. ಗೆಲಾಕ್ಸಿಗಳು ಹೇಗೆ ರೂಪುಗೊಳ್ಳುತ್ತವೆ ಮತ್ತು ಹೇಗೆ ವಿಕಸನಗೊಳ್ಳುತ್ತವೆ ಎಂಬುದನ್ನು ತನಿಖೆ ಮಾಡುತ್ತದೆ. ದೂರದ ಹೊರಗ್ರಹಗಳ ವಾತಾವರಣವನ್ನು ಅಧ್ಯಯನ ಮಾಡುತ್ತದೆ. ನಮ್ಮದೇ ಸೌರವ್ಯೆಹದಲ್ಲಿ ಗ್ರಹಗಳ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಕಪ್ಪುರಂಧ್ರಗಳ ಬಗ್ಗೆ ಪುರಾವೆಗಳನ್ನು ಪತ್ತೆ ಮಾಡುತ್ತದೆ. ಇದು ಕಾರ್ಯಾರಂಭವಾದ ನಂತರ ಐದು ವರ್ಷಗಳವರೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಆದಾಗ್ಯೂ, ವೀಕ್ಷಣಾಲಯವು 10 ವರ್ಷಗಳಿಗಿಂತ ಹೆಚ್ಚು ಕಾಲ ಉಳಿಯುತ್ತದೆ ಎಂದು ನಾಸಾ ಆಶಿಸಿದೆ. ದುರದೃಷ್ಟವಶಾತ್ ವೀಕ್ಷಣಾಲಯವು ಶಾಶ್ವತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇದು ಬಹುಪಾಲು ಸೌರಚಾಲಿತವಾಗಿದ್ದರೂ, ಜೆಡಬ್ಲ್ಯೂಎಸ್‌ಟಿ ತನ್ನ ಕಕ್ಷೆ ಮತ್ತು ಉಪಕರಣಗಳನ್ನು ನಿರ್ವಹಿಸಲು ಕಡಿಮೆ ಪ್ರಮಾಣದ ಸೀಮಿತ ಇಂಧನದ ಅಗತ್ಯವಿದೆ. ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ಹಬಲ್‌ಗಿಂತ ಹಲವಾರು ಅಂಶಗಳಲ್ಲಿ ಭಿನ್ನವಾಗಿದೆ. ಮೊದಲನೆಯದಾಗಿ ಎರಡೂ ದೂರದರ್ಶಕಗಳು ಬೆಳಕನ್ನು ವಿಭಿನ್ನ ರೀತಿಯಲ್ಲಿ ನೋಡುತ್ತವೆ. ಹಬಲ್‌ನ ಮುಖ್ಯ ಗಮನವು ಗೋಚರ ಮತ್ತು ನೇರಳಾತೀತ ಬೆಳಕಿನ ಮೇಲೆ ಇದೆ. ಅತಿಗೆಂಪು ಸ್ಪೆಕ್ಟ್ರಮ್‌ನ ಅತ್ಯಂತ ಚಿಕ್ಕ ಭಾಗವನ್ನು ಇದು ಗಮನಿಸಬಹುದಾದರೂ, ಸಂಪೂರ್ಣವಾಗಿ ಅಲ್ಲ. ಆದರೆ ಜೆಡಬ್ಲ್ಯೂಎಸ್‌ಟಿ ಅತಿಗೆಂಪು ವರ್ಣಪಟಲದ ಮೇಲೆ ಸಂಪೂರ್ಣವಾಗಿ ತನ್ನ ಗಮನ ಕೇಂದ್ರೀಕರಿಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಈ ದೂರದರ್ಶಕದಿಂದ ತುಂಬಾ ದೂರದ ಗೆಲಾಕ್ಸಿಗಳಂತಹ ಪ್ರಕಾಶಮಾನವಾದ ವಸ್ತುಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ.

ಜೇಮ್ಸ್ ವೆಬ್ ಟೆಲಿಸ್ಕೋಪ್ ಕೂಡ ಹಬಲ್‌ಗಿಂತ ದೊಡ್ಡದಾಗಿದೆ. ಅದರಲ್ಲೂ ಅದರ ದೊಡ್ಡ ಸನ್‌ಶೀಲ್ಡ್ ನಿಂದಾಗಿ ಹಬಲ್‌ಗಿಂತ ದೊಡ್ಡ ಗಾತ್ರ ಹೊಂದಿದೆ. ಜೇಮ್ಸ್ ವೆಬ್ ಬಹಳ ಮುಖ್ಯವಾಗಿ ಅದರಲ್ಲಿ ಬಳಸಿದ ಅತಿಗೆಂಪು ಕ್ಯಾಮರಾಗಳಿಂದ ವಿಶೇಷವಾಗಿದೆ. ಈ ಕ್ಯಾಮರಾಗಳನ್ನು ತಂಪಾಗಿ ಇರಿಸದಿದ್ದರೆ, ಅದು ವೀಕ್ಷಿಸಲು ಪ್ರಯತ್ನಿಸುತ್ತಿರುವ ವಸ್ತುಗಳ ದೀಪಗಳಿಗೆ ಸ್ವತಃ ಕುರುಡಾಗುವ ಅಪಾಯವಿದೆ. ಎರಡು ಉಪಗ್ರಹಗಳ ನಡುವಿನ ಮತ್ತೊಂದು ಪ್ರಮುಖ ವ್ಯತ್ಯಾಸವೆಂದರೆ ಅವುಗಳನ್ನು ಇಡುವ ದೂರ. ಹಬಲ್ ದೂರದರ್ಶಕವು ಭೂಮಿಯ ವಾತಾವರಣದ ಮೇಲೆ ಸುತ್ತುತ್ತದೆ ಅದನ್ನು ರಿಪೇರಿ ಮಾಡಬೇಕಾದರೆ ಅದು ಸಾಕಷ್ಟು ಹತ್ತಿರದಲ್ಲಿದೆ. ಆದರೆ ಜೇಮ್ಸ್ ವೆಬ್ ಟೆಲಿಸ್ಕೋಪ್ ತುಂಬಾ ದೂರದಲ್ಲಿರುವುದರಿಂದ ಯಾವುದೇ ಮಾನವರು ಅಲ್ಲಿಗೆ ತೆರಳಿ ರಿಪೇರಿ ಮಾಡುವ ಯೋಜನೆಗಳು ಸದ್ಯಕ್ಕೆ ಲಭ್ಯವಾಗಿಲ್ಲ. ಇಂತಹ ಮಹತ್ವಾಕಾಂಕ್ಷಿಯುಳ್ಳ ಜೇಮ್ಸ್ ವೆಬ್ ಟೆಲಿಸ್ಕೋಪ್ ಇದೀಗ ಕಾರ್ಯಾರಂಭ ಮಾಡುತ್ತಿದೆ. ಅದರ ಕಾರ್ಯ ವೈಖರಿ ಹೇಗಿರಲಿದೆ? ಅದರಿಂದ ನಮಗೆ ಎಂತಹ ಮಾಹಿತಿಗಳು ಲಭ್ಯವಾಗಲಿವೆ? ಅವು ನಮಗೆ ಎಷ್ಟು ಉಪಯುಕ್ತವಾಗಲಿವೆ? ಮುಂತಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.

Writer - ಆರ್.ಬಿ.ಗುರುಬಸವರಾಜ

contributor

Editor - ಆರ್.ಬಿ.ಗುರುಬಸವರಾಜ

contributor

Similar News