ಕನ್ನಡ ರಕ್ಷಣೆಗೆ ‘ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ’

Update: 2022-01-30 03:03 GMT

ಬೆಂಗಳೂರು: ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿ ಮತ್ತು ಕರ್ನಾಟಕಕ್ಕೆ ಸೇರಿದ ಜನರ ಉನ್ನತಿಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಇದೇ ಮೊದಲ ಬಾರಿಗೆ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಸರಕಾರಕ್ಕೆ ಸಲ್ಲಿಸಿದೆ. ಇದೇ ವಿಧೇಯಕದಲ್ಲಿ ರಾಜಭಾಷಾ ಆಯೋಗದ ರಚನೆ, ಖಾಸಗಿ ಕೈಗಾರಿಕೆ, ಕಾರ್ಯಸಂಸ್ಥೆಗಳಲ್ಲಿ ಕರ್ನಾಟಕಕ್ಕೆ ಸೇರಿದ ವ್ಯಕ್ತಿಗಳಿಗೆ ಮೀಸಲಾತಿ ಕಲ್ಪಿಸಲು ಈ ವಿಧೇಯಕದ ಮೂಲಕ ಸಮಗ್ರ ಕಾನೂನು ತರಲು ಪ್ರಸ್ತಾಪಿಸಲಾಗಿದೆ.

ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಅನುದಾನದ ಕೊರತೆ, ಹಿಂದಿ ಹೇರಿಕೆ, ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ ಜಮೀನು ನೀಡಿಕೆ, ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವುದರ ಕುರಿತು ಕಳೆದ ಹಲವು ದಿನಗಳಿಂದ ತೀವ್ರ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಟಿ.ಎಸ್. ನಾಗಾಭರಣ ಅಧ್ಯಕ್ಷತೆಯಲ್ಲಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಮಂಡಿಸಲು ಉದ್ದೇಶಿಸಿರುವ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕಕ್ಕೆ ಮಹತ್ವ ಬಂದಿದೆ.

ಈ ಸಂಬಂಧ ಕರಡು ವಿಧೇಯಕವನ್ನು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆಯು ತಯಾರಿಸಿದೆ. ಇದರ ಪ್ರತಿ ‘the-file.in’ಗೆ ಲಭ್ಯವಾಗಿದೆ.

 ಶಿಕ್ಷಣದಲ್ಲಿ ಕನ್ನಡ ಭಾಷೆ, ನ್ಯಾಯಾಲಯಗಳಲ್ಲಿನ ಭಾಷೆ, ಭಾಷೆ ಅಭಿವೃದ್ಧಿಗಾಗಿ ತೆಗೆದುಕೊಳ್ಳಬೇಕಾದ ಸಾಮಾನ್ಯ ಕ್ರಮಗಳು, ಮಾಹಿತಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆ ಬಳಕೆ, ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಪೋತ್ಸಾಹಗಳು, ರಿಯಾಯಿತಿ, ತೆರಿಗೆ ಸೋಡಿ, ಉದ್ಯೋಗ ಪೋರ್ಟಲ್, ನಿಯಮಗಳ ರಚನಾಧಿಕಾರ ಕುರಿತು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಅಲ್ಲದೆ ಆಡಳಿತದಲ್ಲಿ ಕನ್ನಡ ಅನುಷ್ಠಾನ, ಸರಕಾರದ ಆದೇಶ, ಸುತ್ತೋಲೆ, ಅಧಿಕೃತ ಜ್ಞಾಪನ ಪತ್ರಗಳಿಗೆ ಈ ವಿಧೇಯಕದಿಂದ ಕಾನೂನಿನ ಮಾನ್ಯತೆ ದೊರಕಿದಂತಾಗುತ್ತದೆ.

ಎಲ್ಲಾ ವಲಯಗಳಲ್ಲಿ ಕನ್ನಡದ ಅಭಿವೃದ್ಧಿಗಾಗಿ ಮತ್ತು ರಾಜ್ಯದ ಎಲ್ಲಾ ಅಧಿಕೃತ ಉದ್ದೇಶಗಳಿಗಾಗಿ ಹಾಗೂ ಕನ್ನಡ ಭಾಷೆಯ ಪ್ರಸಾರ ಮತ್ತು ಅಭಿವೃದ್ಧಿಯನ್ನು ಖಾತ್ರಿಪಡಿಸಿಕೊಳ್ಳುವುದು, ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಸಂಬಂಧಿಸಿದ ಚಟುವಟಿಕೆಗಳನ್ನು ಸಮನ್ವಯಗೊಳಿಸುವುದಕ್ಕೆ ತೆರಿಗೆ ವಿನಾಯಿತಿ, ಸಹಾಯನುದಾನ ಪ್ರಯೋಜನ ಪಡೆಯುತ್ತಿರುವ ಖಾಸಗಿ ಕೈಗಾರಿಕೆ ಮತ್ತು ಕಾರ್ಯ ಸಂಸ್ಥೆಗಳಲ್ಲಿ ಕರ್ನಾಟಕಕ್ಕೆ ಸೇರಿದ ವ್ಯಕ್ತಿಗಳಿಗೆ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಒಂದು ಸಮಗ್ರ ಕಾನೂನು ತರುವುದು ಅಗತ್ಯವಾಗಿದೆ ಎಂದಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಿಧೇಯಕವನ್ನು ಸಮರ್ಥಿಸಿಕೊಂಡಿದೆ.

ಭಾರತ ಸಂವಿಧಾನದ 346 ಮತ್ತು 347ನೇ ಅನುಚ್ಛೇದಗಳಿಗೆ ಬಾಧಕವಾಗದಂತೆ ಕನ್ನಡ ಭಾಷೆಯನ್ನು ರಾಜ್ಯದ ಎಲ್ಲ ಉದ್ದೇಶಗಳಿಗೆ ಬಳಸತಕ್ಕದ್ದು. ಭಾರತ ಸರಕಾರ, ವಿದೇಶಿ ರಾಷ್ಟ್ರಗಳು, ಇತರ ರಾಜ್ಯಗಳು, ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯದೊಂದಿಗೆ ಪತ್ರ ವ್ಯವಹಾರಕ್ಕಾಗಿ ಹಾಗೂ ಕಾನೂನಿನ ಮೂಲಕ ಇಂಗ್ಲಿಷ್ ಭಾಷೆಯನ್ನು ಬಳಸಲೇಬೇಕಾದ ಯಾವುದೇ ಇತರ ಸಂದರ್ಭಗಳಲ್ಲಿ ಇಂಗ್ಲೀಷ್ ಭಾಷೆಯನ್ನು ಬಳಸಬಹುದು. ಭಾಷಾ ಅಲ್ಪಸಂಖ್ಯಾತರು ರಾಜ್ಯ ಸರಕಾರದ ಸಚಿವಾಲಯದೊಂದಿಗೆ, ಇಲಾಖೆ ಮುಖ್ಯಸ್ಥರುಗಳೊಂದಿಗೆ ಮತ್ತು ಇತರ ಸರಕಾರಿ ಕಚೇರಿಗಳೊಂದಿಗೆ ಪತ್ರ ವ್ಯವಹಾರಕ್ಕಾಗಿ ತಮ್ಮ ಸ್ವಂತ ಭಾಷೆ ಅಥವಾ ಇಂಗ್ಲಿಷ್ ಭಾಷೆಯನ್ನು ಬಳಸಬಹುದು. ಅಂಥ ಸಂದರ್ಭಗಳಲ್ಲಿ ಪ್ರತ್ಯುತ್ತರಗಳು ಅವರವರ ಭಾಷೆಗಳಲ್ಲಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಇರಬಹುದು ಎಂಬ ಅಂಶವನ್ನು ವಿಧೇಯಕದಲ್ಲಿ ಸೇರಿಸಲಾಗಿದೆ.

 ಕನ್ನಡವು ಸ್ಥಳೀಯ ಪ್ರಾಧಿಕಾರಗಳ ಅಧಿಕೃತ ಭಾಷೆಯಾಗಿರಬೇಕು ಎಂದು ವಿಧೇಯಕದಲ್ಲಿ ಸೇರಿಸ ಲಾಗಿದೆಯಲ್ಲದೆ ಕೇಂದ್ರ ಸರಕಾರದ ಕಚೇರಿಗಳು, ಇತರ ರಾಜ್ಯ ಸರಕಾರಗಳ ಕಚೇರಿಗಳು ಮತ್ತು ಮಹಾಲೇಖಪಾಲರ ಕಚೇರಿಗಳ ಜೊತೆ ಪತ್ರ ವ್ಯವಹಾರಗಳನ್ನು ನಡೆಸಲು ಇಂಗ್ಲಿಷ್ ಭಾಷೆಯನ್ನು ಬಳಸಬಹುದು ಎಂದೂ ಹೇಳಲಾಗಿದೆ.

ಭಾಷೆ ಅಭಿವೃದ್ಧಿ ಬಗ್ಗೆ ತೆಗೆದುಕೊಳ್ಳಬಹುದಾದ ಸಾಮಾನ್ಯ ಕ್ರಮ

ವಾಣಿಜ್ಯ ಕೈಗಾರಿಕೆಗಳು, ವ್ಯಾಪಾರ ಉದ್ಯಮ, ಟ್ರಸ್ಟ್, ಆಪ್ತ ಸಮಾಲೋಚನ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನರಂಜನಾ ಕೇಂದ್ರಗಳು ಮತ್ತು ಹೋಟೆಲ್‌ಗಳ ಹೆಸರನ್ನು ಪ್ರದರ್ಶಿಸುವ ಫಲಕದ ಮೊದಲ ಅರ್ಧ ಭಾಗವು ಕನ್ನಡ ಭಾಷೆಯಲ್ಲಿರಬೇಕು ಎಂದು ವಿಧೇಯಕದಲ್ಲಿ ಹೇಳಲಾಗಿದೆಯಲ್ಲದೆ ರಸ್ತೆಗಳು, ಬಡಾವಣೆಗಳ ಹೆಸರೂ ಸೇರಿದಂತೆ ಸರಕಾರದ ವಿವಿಧ ಇಲಾಖೆಗಳು, ರಾಜ್ಯ ಸ್ಥಳೀಯ ಪ್ರಾಧಿಕಾರಗಳ ಮೇಲ್ವಿಚಾರಣೆಯಲ್ಲಿ ಹಾಕಲಾದ ಫಲಕಗಳಲ್ಲಿ ಪ್ರದರ್ಶಿಸುವ ವಿವರಗಳು ಸಹ ಕನ್ನಡ ಭಾಷೆಯಲ್ಲಿಯೇ ಇರತಕ್ಕದ್ದು ಎಂದು ಹೇಳಲಾಗಿದೆ.

 ಹಾಗೆಯೇ ಸರಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಪ್ರತಿಫಲವನ್ನು ಸ್ವೀಕರಿಸಿ ಕೈಗೊಂಡ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹಾಕಲಾಗುವ ಪ್ರದರ್ಶನ ಫಲಕಗಳ ಮೊದಲ ಅರ್ಧಭಾಗದಲ್ಲಿ ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಬೇಕು. ಅನುದಾನ, ರಿಯಾಯಿತಿಗಳನ್ನು ಪಡೆದು ಅನುಷ್ಠಾನಗೊಳಿಸುತ್ತಿರುವ ಯಾವುದೇ ಯೋಜನೆಗೆ ಸಂಬಂಧಿಸಿದಂತೆ ಜಾಹೀರಾತುಗಳು, ರಸೀದಿಗಳು, ಬಿಲ್‌ಗಳು, ನೋಟೀಸ್, ರಾಜ್ಯದಲ್ಲಿ ಉತ್ಪಾದಿಸಿ ಮಾರಾಟ ಮಾಡಲಾಗುವ ಎಲ್ಲಾ ಕೈಗಾರಿಕಾ ಮತ್ತು ಇತರ ಉತ್ಪನ್ನಗಳಲ್ಲಿ ಉತ್ಪನ್ನಗಳ ಹೆಸರು ಮತ್ತು ಅವುಗಳ ಬಳಕೆಗೆ ಸಂಬಂಧಿಸಿದಂತೆ ನಿರ್ದೇಶನಗಳೂ ಸೇರಿದಂತೆ ಇತರ ವಿಚಾರಗಳು ಕನ್ನಡ ಭಾಷೆಯಲ್ಲಿರಬೇಕು.

ಸರಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳು ಹೊರಡಿಸಿದ ಎಲ್ಲಾ ಟೆಂಡರ್ ಪ್ರಕಟನೆಗಳು, ಜಾಹೀರಾತುಗಳು, ಅರ್ಜಿ ನಮೂನೆ, ಡಿಜಿಟಲ್ ನಮೂನೆ, ಪ್ರಮಾಣ ಪತ್ರಗಳು, ಅಧಿಸೂಚನೆಗಳು, ಕಾರ್ಯಕ್ರಮಗಳ ಕರಪತ್ರ, ಸೂಚನಾ ಪತ್ರ, ಸರಕಾರಿ ಜಾಹೀರಾತುಗಳ ಅಳತೆಯ ಒಂದು ನಿಗದಿತ ಶೇಕಡವಾರು ಪ್ರಮಾಣವು ಸೇರಿದಂತೆ ಜಾಹೀರಾತುಗಳಲ್ಲಿ ಇಂಗ್ಲಿಷ್ ಭಾಷೆಯ ಬಳಕೆಯ ಅಗತ್ಯವಿರುವ ಕಡೆ ಹೊರತುಪಡಿಸಿ ಉಳಿದಂತೆ ಜಾಹೀರಾತುಗಳು ಕನ್ನಡ ಭಾಷೆಯಲ್ಲಿರಬೇಕು.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News