ಮಂಗಳೂರು: ಪಡೀಲ್ ಬಳಿ ‘ಆತ್ಮಶಕ್ತಿ ಸೌಧ’ ಉದ್ಘಾಟನೆ
ಮಂಗಳೂರು, ಜ. 30: ನಗರದ ಪಡೀಲ್‌ನ ಬೈರಾಡಿ ಕೆರೆಯ ಬಳಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಆಡಳಿತ ಕಚೇರಿ ಮತ್ತು ಹಾಸ್ಟೆಲ್ ಒಳಗೊಂಡ 10,000 ಚದರಡಿ ವಿಸ್ತೀರ್ಣದ ಕಟ್ಟಡ ‘ಆತ್ಮಶಕ್ತಿ ಸೌಧ’ವನ್ನು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಚಿವ ಎಸ್.ಟಿ. ಸೋಮಶೇಖರ್, ರಾಜ್ಯದಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಹಕಾರಿ ವ್ಯವಸ್ಥೆಯ ಮೂಲಕ 30,86,000 ರೈತರಿಗೆ 20,810 ಕೋಟಿ ರೂ. ಸಾಲ ವಿತರಿಸುವ ಗುರಿ ಹೊಂದಿದ್ದು, ಈ ಪೈಕಿ ಈಗಾಗಲೇ 20 ಲಕ್ಷ ರೈತರಿಗೆ 14,000 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದರು.
ಬಾಕಿ ಉಳಿದ ರೈತರಿಗೆ ಸಾಲ ವಿತರಣೆಯನ್ನು 2022 ಮಾರ್ಚ್ 25 ರೊಳಗೆ ಪೂರ್ತಿಗೊಳಿಸಲು ಸ್ಪಷ್ಟ ನಿರ್ದೆಶನ ನೀಡಲಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಇರುವ 260 ಪಟ್ಟಣ ಸಹಕಾರಿ ಬ್ಯಾಂಕುಗಳ ಪೈಕಿ 254 ಬ್ಯಾಂಕುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಬೆರಳೆಣಿಕೆಯ ಕೆಲವು ಸಹಕಾರಿ ಬ್ಯಾಂಕುಗಳು ಕಳಪೆ ನಿರ್ವಹಣೆ ತೋರುತ್ತಿದ್ದು, ಅವುಗಳಿಂದಾಗಿ ಇಡೀ ಸಹಕಾರಿ ರಂಗಕ್ಕೆ ಕೆಟ್ಟ ಹೆಸರು ಬರುವಂತಾಗಿದೆ. ಹಾಗಾಗಿ ಜನರಿಂದ ಜನರಿಗಾಗಿ ಕಾರ್ಯ ನಿರ್ವಹಿಸುವ ಸಹಕಾರಿ ಸಂಸ್ಥೆಗಳ ಆಡಳಿತದಾರರು ಪ್ರಜ್ಞಾವಂತಿಕೆಯನ್ನು ಬೆಳೆಸಿಕೊಳ್ಳಬೇಕೆಂದರು.
ಸಂಸ್ಥೆಯ ಆಡಳಿತ ಮಂಡಳಿ ಸಭಾ ಭವನವನ್ನು ಸಂಸದ ನಳಿನ್ ಕುಮಾರ್ ಕಟೀಲ್, ಕೇಂದ್ರ ಕಚೇರಿಯ ಶಾಖೆಯನ್ನು ಶಾಸಕ ಉಮಾನಾಥ ಕೋಟ್ಯಾನ್, ಆಡಳಿತ ಕಚೇರಿಯನ್ನು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಹಾಸ್ಟೆಲ್ ಕಟ್ಟಡವನ್ನು ಕಿಯಾನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಭದ್ರತಾ ಕೊಠಡಿಯನ್ನು ಮುಡಾ ಅಧ್ಯಕ್ಷ ರವಿಶಂಕರ ಮಿಜಾರ್, ಬೋರ್ಡ್ ರೂಮ್‌ಅನ್ನು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಉಪಾಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ ಅವರು ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಮೇಯರ್ ಪ್ರೇಮಾನಂದ ಶೆಟ್ಟಿ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಕಾಶ್ ರಾವ್, ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಪ್ರವೀಣ್ ನಾಯಕ್, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ, ಕಾರ್ಪೊರೇಟರ್‌ಗಳಾದ ಸಂದೀಪ್ ಗರೋಡಿ ಮತ್ತು ರೂಪಶ್ರೀ ಪೂಜಾರಿ, ರೇವಣ್ಣ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಸ್ವಾಗತಿಸಿದರು. ಸಂಘವು 2012 ಜನವರಿ 30ರಂದು ನಗರದ ಬೆಂದೂರ್‌ವೆಲ್‌ನ ಶ್ರೀ ಆರ್ಕೇಡ್ ಕಟ್ಟಡದಲ್ಲಿ ಪ್ರಾರಂಭಗೊಂಡಿದ್ದು, ಇದೀಗ 10 ವರ್ಷಗಳ ಬಳಿಕ ಅದೇ ದಿನದಂದು ಪಡೀಲ್‌ನಲ್ಲಿ ಸ್ವಂತ ಕಟ್ಟಡವನ್ನು ಹೊಂದಿದೆ ಎಂದರು.20 ನೇ ಶಾಖೆ ಇಲ್ಲಿ ಆರಂಭವಾಗಿದ್ದು, 19 ಶಾಖೆಗಳಲ್ಲಿ ಮಹಿಳೆಯರೇ ಮ್ಯಾನೇಜರ್‌ಗಳಾಗಿದ್ದಾರೆ. ಸಂಸ್ಥೆಯ ಶೇ. 95 ರಷ್ಟು ಉದ್ಯೋಗಿಗಳೂ ಮಹಿಳೆಯರೇ ಇದ್ದಾರೆ. 2020-21ನೇ ಸಾಲಿನಲ್ಲಿ 858 ಕೋಟಿ ರೂ. ವ್ಯವಹಾರದೊಂದಿಗೆ 1.41ಕೋಟಿ ರೂ. ಲಾಭಗಳಿಸಿ ಪ್ರಾರಂಭದ ವರ್ಷದಿಂದಲೇ ಶೇ. 15 ಡಿವಿಡೆಂಡ್ ನೀಡುತ್ತಾ ಬಂದಿದೆ ಎಂದವರು ಹೇಳಿದರು.
ಉಪಾಧ್ಯಕ್ಷ ನೇಮಿರಾಜ್ ಪಿ. ವಂದಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೌಮ್ಯಾ ವಿಜಯ್ ವೇದಿಕೆಯಲ್ಲಿದ್ದರು. ಆಡಳಿತ ಮಂಡಳಿ ನಿರ್ದೇಶಕರಾದ ಪರಮೇಶ್ವರ ಜಿ. ಪೂಜಾರಿ, ಆನಂದ್ ಎಸ್. ಕೊಂಡಾಣ, ಸೀತಾರಾಮ್ ಎನ್, ರಮಾನಾಥ್ ಸನಿಲ್, ಚಂದ್ರಹಾಸ್ ಮರೋಳಿ , ಮುದ್ದು ಮೂಡುಬೆಳ್ಳೆ, ದಿವಾಕರ್ ಬಿ.ಪಿ., ಗೋಪಾಲ್ ಎಂ. , ಚಂದ್ರಾವತಿ ಮತ್ತು ಉಮಾವತಿ ಅವರು ಸಹಕರಿಸಿದರು.ದಿನೇಶ್ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು.
ಜನಾರ್ದನ ಪೂಜಾರಿಯನ್ನು ಹೊಗಲಿದ ಸಚಿವ ಸೋಮಶೇಖರ್
10 ವರ್ಷಗಳ ಹಿಂದೆ ಜನಾರ್ದನ ಪೂಜಾರಿ ಅವರು ಉದ್ಘಾಟಿಸಿದ ಆತ್ಮ ಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಲ್ಪಾವಧಿಯಲ್ಲಿ ಇಷ್ಟೊಂದು ಬೆಳವಣಿಗೆ ಕಾಣಲು ಜನಾರ್ದನ ಪೂಜಾರಿ. ಸಹಕಾರ ಕ್ಷೇತ್ರ ಮತ್ತು ರಾಜಕಾರಣ ಶಿಸ್ತು ಬದ್ಧವಾಗಿರಬೇಕೆಂದು ಪೂಜಾರಿ ಹೇಳುತ್ತಿದ್ದರು. ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ ಕಚೇರಿಗೆ ಹೋಗುವುದಾದರೆ ಅವರ ಅಪಾಂಯ್ಟೆಮೆಂಟ್ ಪಡೆಯಬೇಕಾಗಿತ್ತು. ಆದರೆ ಇಂದು ಆ ಶಿಸ್ತು ಇಲ್ಲ ಎಂದು ಸಚಿವ ಸೋಮಶೇಖರ್ ಹೇಳಿದರು.