ಕೆನಡಾ: ಕೋವಿಡ್ ನಿರ್ಬಂಧ ವಿರೋಧಿಸಿ ಬೃಹತ್ ಪ್ರತಿಭಟನೆ

Update: 2022-01-30 16:04 GMT
 ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ (file photo: PTI)

ಒಟ್ಟಾವ, ಜ.30: ಲಸಿಕೆ ಕಡ್ಡಾಯಗೊಳಿಸಿರುವುದನ್ನು ಹಾಗೂ ಕೊರೋನ ನಿರ್ಬಂಧಗಳನ್ನು ವಿರೋಧಿಸಿ ಕೆನಡಾದ ರಾಜಧಾನಿ ಒಟ್ಟಾವದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆದಿದೆ.

ಕೋವಿಡ್ ನಿರ್ಬಂಧ ಮತ್ತು ಲಸಿಕೆ ಕಡ್ಡಾಯ ನಿಯಮವನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರೆ, ಇನ್ನೂ ಕೆಲವರು ಪ್ರಧಾನಿ ಜಸ್ಟಿನ್ ಟ್ರೂಡೋರನ್ನು ಉಚ್ಚಾಟಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 10,000 ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಎಂದು ಸಂಸತ್‌ಭವನದ ರಕ್ಷಣಾ ಪಡೆ ಹೇಳಿದೆ.

ಒಟ್ಟಾವದ ಡೌನ್‌ಟೌನ್ ವೃತ್ತ, ಪಾರ್ಲಿಮೆಂಟ್ ಹಿಲ್ ಹಾಗೂ ರಾಷ್ಟ್ರೀಯ ಯುದ್ಧ ಸ್ಮಾರಕದ ಆವರಣದಲ್ಲಿ ಹಲವಾರು ವಾಹನಗಳನ್ನು ಪಾರ್ಕ್ ಮಾಡಿ ನಿರಂತರ ಹಾರ್ನ್ ಬಾರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಕೋವಿಡ್ ನಿರ್ಬಂಧವನ್ನು ಫ್ಯಾಸಿಸಂಗೆ ಹೋಲಿಸಿದ ಪ್ರತಿಭಟನಾಕಾರರು, ಲಸಿಕೆ ಕಡ್ಡಾಯಗೊಳಿಸಿರುವ ಕ್ರಮ ಆರೋಗ್ಯರಕ್ಷಣೆಗೆ ಸಂಬಂಧಿಸಿಲ್ಲ, ಇದು ಸರಕಾರದ ನಿಯಂತ್ರಣ ಉಪಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದರು. ಟ್ರಕ್‌ಗಳಲ್ಲಿ ಕೆನಡಾದ ಧ್ವಜವನ್ನು ಮತ್ತು ಒಕ್ಕೂಟದ ಧ್ವಜವನ್ನು ತಲೆಕೆಳಗಾಗಿ ಸಿಕ್ಕಿಸಿ, ಸ್ವಾತಂತ್ರ್ಯ ಕಡ್ಡಾಯ ಎಂಬ ಘೋಷಣೆಯನ್ನು ಅದಕ್ಕೆ ಅಂಟಿಸಲಾಗಿತ್ತು. ಕೆನಡಾದ ರಾಷ್ಟ್ರೀಯ ಹೀರೋ ಟೆರೀ ಫಾಕ್ಸ್ ಅವರ ಪ್ರತಿಮೆಗೆ ತಲೆಕೆಳಗಾದ ರಾಷ್ಟ್ರಧ್ವಜವನ್ನು ಸಿಕ್ಕಿಸಿ ಅದರ ಮೇಲೆ ‘ಸ್ವಾತಂತ್ರ್ಯ ಕಡ್ಡಾಯ’ ಎಂದು ಬರೆಯಲಾಗಿತ್ತು.

ಮೃತ ಸೈನಿಕರ ಸಮಾಧಿ ಸ್ಥಳದ ಮೇಲೆ ವಾಹನಗಳನ್ನು ಪಾರ್ಕ್ ಮಾಡಿರುವುದು ಅಗೌರವ ಸೂಚಿಸುವ ಕ್ರಿಯೆಯಾಗಿದೆ ಎಂದು ಒಟ್ಟಾವ ಮೇಯರ್ ಜಿಮ್ ವಾಟ್ಸನ್ ಟ್ವೀಟ್ ಮಾಡಿದ್ದಾರೆ. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ತೆರವುಗೊಳಿಸಿದರು. ಈ ಮಧ್ಯೆ, ಟ್ರಕ್ ಹಾಗೂ ಇತರ ವಾಹನಗಳ ಸಾಲಿನ ಮೂಲಕ ಪ್ರತಿಭಟನಾಕಾರರು ಸಾಗಿ ಬಂದಾಗ ಹಿಂಸಾಚಾರದ ಸಾಧ್ಯತೆಯನ್ನು ಮನಗಂಡ ಪೊಲೀಸರು ರಸ್ತೆಗೆ ಇಳಿಯದಂತೆ ಜನತೆಗೆ ಸೂಚಿಸಿದರು. ಅಲ್ಲದೆ, ಮನೆಯ ಬಾಗಿಲು ಹಾಕಿಕೊಂಡು ಮನೆಯೊಳಗೇ ಇರುವಂತೆ ಜನಪ್ರತಿನಿಧಿಗಳಿಗೆ ಸಲಹೆ ನೀಡಿದರು. ಪ್ರಧಾನಿ ಜಸ್ಟಿನ್ ಟ್ರೂಡೊ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಮೂಲಗಳು ಹೇಳಿವೆ. ಜನವರಿ 15ರಿಂದ ಕೆನಡಾದಲ್ಲಿ ಜಾರಿಗೆ ಬಂದಿರುವ ಹೊಸ ನಿಯಮದ ಪ್ರಕಾರ, ಕೆನಡಾ ಪ್ರವೇಶಿಸುವ ಲಾರಿಗಳ ಚಾಲಕರು ಕೊರೋನ ಸೋಂಕಿನ ವಿರುದ್ಧ ಪೂರ್ಣಪ್ರಮಾಣದ ಲಸಿಕೆ ಪಡೆದಿರಬೇಕು. ಅಮೆರಿಕ ಕೂಡಾ ಇದೇ ನಿಯಮವನ್ನು ಜಾರಿಗೊಳಿಸಿದೆ. ಈ ನಿಯಮಕ್ಕೆ ವ್ಯಾಪಕ ವಿರೋಧ ಎದುರಾಗಿದ್ದರೂ, ಪ್ರತಿಭಟನೆಯಲ್ಲಿ ಪಾಲ್ಗೊಂಡವರಲ್ಲಿ

ಟ್ರಕ್ ಉದ್ಯಮಕ್ಕೆ ಸಂಬಂಧಿಸಿದವರಿಲ್ಲ. ನಾವು ನಿಯಮವನ್ನು ಗೌರವಿಸುತ್ತೇವೆ ಎಂದು ಕೆನಡಾ ಟ್ರಕ್ ಉದ್ಯಮಿಗಳ ಒಕ್ಕೂಟ ಹೇಳಿದೆ.

ಪ್ರಮುಖ ವಿಪಕ್ಷ ಕನ್ಸರ್ವೇಟಿವ್ ಪಕ್ಷದ ಕೆಲವು ಸಂಸದರು ಪ್ರತಿಭಟನಾಕಾರರಿಗೆ ಪಾನೀಯದ ವ್ಯವಸ್ಥೆ ಮಾಡಿದ್ದರಲ್ಲದೆ ಕೆಲವು ಟ್ರಕ್ ಚಾಲಕರನ್ನು ಭೇಟಿಮಾಡಿ ಬೆಂಬಲ ಸೂಚಿಸಿದರು. ಜೊತೆಗೆ ಡೊನಾಲ್ಡ್ ಟ್ರಂಪ್ ಜೂನಿಯರ್ (ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಅವರ ಪುತ್ರ ಹಾಗೂ ಉದ್ಯಮಿ) ಹಾಗೂ ಫಾಕ್ಸ್ ನ್ಯೂಸ್ ಸಂಸ್ಥೆಯ ಕೆಲವು ಸಿಬಂದಿಗಳೂ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News