ಅಮೆರಿಕ: ಇಸ್ರೇಲ್ ಬಹಿಷ್ಕಾರ ವಿರೋಧಿಸುವ ನಿಯಮ ಒಪ್ಪದ ಸಂಸ್ಥೆಯ ವಿರುದ್ಧದ ಕ್ರಮಕ್ಕೆ ನ್ಯಾಯಾಲಯ ತಡೆ

Update: 2022-01-30 17:11 GMT
ಸಾಂದರ್ಭಿಕ ಚಿತ್ರ

ಚಿಕಾಗೊ, ಜ.30: ಇಸ್ರೇಲ್ ಅನ್ನು ಬಹಿಷ್ಕರಿಸುವುದಿಲ್ಲ ಎಂಬ ವಾಗ್ದಾನಕ್ಕೆ ಸಹಿ ಹಾಕಲು ನಿರಾಕರಿಸಿದ ಪೆಲೆಸ್ತೀನಿಯನ್-ಅಮೆರಿಕನ್ ಗುತ್ತಿಗೆದಾರನ ವಿರುದ್ಧ ಇಸ್ರೇಲ್ ಬಹಿಷ್ಕಾರ ನಿರ್ಬಂಧ ಕಾಯ್ದೆಯಡಿ ಕ್ರಮ ಕೈಗೊಳ್ಳದಂತೆ ಟೆಕ್ಸಾಸ್ ರಾಜ್ಯಕ್ಕೆ ಅಮೆರಿಕದ ಫೆಡರಲ್ ನ್ಯಾಯಾಲಯ ಸೂಚಿಸಿದೆ.

ಇಸ್ರೇಲ್ ವಿರುದ್ಧ ಬಿಡಿಎಸ್ ಅಭಿಯಾನ(ಬಹಿಷ್ಕಾರ, ಹೂಡಿಕೆ ಹಿಂಪಡೆಯುವುದು ಮತ್ತು ನಿರ್ಬಂಧ)ದಲ್ಲಿ ಪಾಲ್ಗೊಂಡಿರುವ ಸಂಸ್ಥೆಗಳೊಂದಿಗೆ ಸರಕಾರಿ ಸಂಸ್ಥೆಗಳು ವ್ಯವಹಾರ ಸಂಬಂಧ ಹೊಂದಿರಬಾರದು ಎಂಬ ಟೆಕ್ಸಾಸ್ ರಾಜ್ಯದ ನಿಯಮವನ್ನು ಪ್ರಶ್ನಿಸಿ ಎಆ್ಯಂಡ್‌ಆರ್ ಇಂಜಿನಿಯರಿಂಗ್ ಸಂಸ್ಥೆಯ ಮಾಲಕ ರಾಸ್ಮಿ ಹಸ್ಸೌನ ಎಂಬವರು ನವೆಂಬರ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದರು. ತಾನು ಯೆಹೂದಿ ವಿರೋಧಿಯಲ್ಲ, ಆದರೆ ಇಸ್ರೇಲ್ ಸರಕಾರದ ಉಪಕ್ರಮಗಳನ್ನು ತಾನು ವಿರೋಧಿಸುತ್ತೇನೆ ಎಂದು ಹಸ್ಸೌನ ವಾದಿಸಿದ್ದರು.

ಇಸ್ರೇಲ್ ಸರಕಾರವನ್ನು ಬಹಿಷ್ಕರಿಸುವುದಿಲ್ಲ ಎಂಬ ವಾಗ್ದಾನಕ್ಕೆ ಸಹಿ ಹಾಕಲು ನಿರಾಕರಿಸುವ ಗುತ್ತಿಗೆದಾರರನ್ನು ಶಿಕ್ಷಿಸುವ ಆದೇಶಕ್ಕೆ ಅಮೆರಿಕದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಆ್ಯಂಡ್ರೂ ಹ್ಯಾನೆನ್ ತಡೆ ನೀಡಿದ್ದಾರೆ. ಅರ್ಜಿದಾರರು ಯೆಹೂದಿ ವಿರೋಧಿಯಲ್ಲ ಮತ್ತು ಇಸ್ರೇಲ್ ಸರಕಾರದ ಉಪಕ್ರಮಗಳನ್ನು ಮಾತ್ರ ವಿರೋಧಿಸುವುದಾಗಿ ಸ್ಪಷ್ಟವಾಗಿ ಉಲ್ಲೇಖಿಸಿರುವುದರಿಂದ ಅವರ ವಾದವನ್ನು ಎತ್ತಿಹಿಡಿಯಲಾಗಿದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News