ಹೌದಿ ಬಂಡುಗೋರರು ನೇಮಕ ಮಾಡಿಕೊಂಡಿದ್ದ 2000 ಯೆಮನ್ ಮಕ್ಕಳು ಹೋರಾಟದಲ್ಲಿ ಮೃತ್ಯು: ವಿಶ್ವಸಂಸ್ಥೆ

Update: 2022-01-30 18:02 GMT

ವಿಶ್ವಸಂಸ್ಥೆ, ಜ.30: ಯೆಮನ್ ನ ಹೌದಿ ಬಂಡುಗೋರರು ನೇಮಕ ಮಾಡಿಕೊಂಡಿದ್ದ ಸುಮಾರು 2000 ಮಕ್ಕಳು 2020ರ ಜನವರಿಯಿಂದ 2021ರ ಮೇ ಅವಧಿಯಲ್ಲಿ ನಡೆದ ಹೋರಾಟದಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಇರಾನ್ ಬೆಂಬಲಿತ ಹೌದಿಗಳು ಯುವಕರನ್ನು ಹೋರಾಟಕ್ಕೆ ಸೇರಿಸಿಕೊಳ್ಳುವ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಿದ್ದಾರೆ ಎಂದು ವಿಶ್ವಸಂಸ್ಥೆ ತಜ್ಞರ ಸಮಿತಿ ವರದಿ ಹೇಳಿದೆ.

ಸಾಂಸ್ಕೃತಿಕ ತರಬೇತಿ ಕಾರ್ಯಕ್ರಮಕ್ಕೆ ದಾಖಲಾತಿ ಎಂದು ಹೇಳಿ ಮಕ್ಕಳನ್ನು ನೇಮಿಸಿಕೊಂಡು ಬಳಿಕ ಹೋರಾಟಕ್ಕೆ ಬಳಸಲಾಗುತ್ತಿರುವ 10 ಪ್ರಕರಣವನ್ನು ಸಮಿತಿ ದಾಖಲಿಸಿದೆ. ಮಕ್ಕಳು ಹೌದಿ ಜತೆಗಿನ ಯುದ್ಧದಲ್ಲಿ ಪಾಲ್ಗೊಂಡಿದ್ದಾರೆ ಎಂಬ ಕಾರಣಕ್ಕೆ ಅಥವಾ ಶಿಕ್ಷಕರು ಹೌದಿ ಪಠ್ಯಕ್ರಮ ಬೋಧಿಸುತ್ತಿದ್ದಾರೆ ಎಂಬ ಕಾರಣಕ್ಕೆ ಕುಟುಂಬಕ್ಕೆ ಮಾನವೀಯ ನೆರವು ನಿರಾಕರಿಸಲ್ಪಟ್ಟಿರುವ 9 ಪ್ರಕರಣ ದಾಖಲಿಸಲಾಗಿದೆ. ಮಿಲಿಟರಿ ತರಬೇತಿಯಲ್ಲಿ ಭಾಗಿಯಾಗಿದ್ದಾನೆ ಎಂಬ ಕಾರಣಕ್ಕೆ ಒಂದು ಮಗುವಿನ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಅಲ್ಲದೆ ಸಮುದ್ರದ ಮೂಲಕ ಹಾಗೂ ವಾಯುಮಾರ್ಗದಿಂದ ಸೌದಿ ಅರೆಬಿಯಾದ ಮೇಲಿನ ದಾಳಿಯನ್ನು ಹೌದಿಗಳು ಮುಂದುವರಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೆಲವು ಶಾಲೆ ಹಾಗೂ ಮಸೀದಿಗಳಲ್ಲಿನ ಬೇಸಿಗೆ ತರಬೇತಿ ಶಿಬಿರದ ಚಟುವಟಿಕೆಯನ್ನು ಪರಿಶೀಲಿಸಿದಾಗ, ಅಲ್ಲಿ ಹೌದಿ ಬಂಡುಗೋರರು ತಮ್ಮ ಸಿದ್ಧಾಂತಗಳನ್ನು ಪ್ರಸಾರ ಮಾಡಿ ಮಕ್ಕಳನ್ನು ಯೆಮನ್ ನ  ಅಂತರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರದ ವಿರುದ್ಧದ ಹೋರಾಟಕ್ಕೆ ಉತ್ತೇಜಿಸುತ್ತಿರುವುದು ಬೆಳಕಿಗೆ ಬಂದಿದೆ. ಮಕ್ಕಳಿಗೆ ‘ಅಮೆರಿಕಕ್ಕೆ ಸಾವು, ಇಸ್ರೇಲ್‌ಗೆ ಸಾವು, ಯೆಹೂದಿಗಳನ್ನು ಶಪಿಸಿ, ಇಸ್ಲಾಮ್ ಗೆ ಗೆಲುವು’  ಎಂಬ ಹೌದಿಯ ಘೋಷಣೆಯನ್ನು ಕೂಗಲು ಸೂಚಿಸಲಾಗುತ್ತದೆ. ಒಂದು ಶಿಬಿರದಲ್ಲಿ 7 ವರ್ಷದ ಮಕ್ಕಳಿಗೆ ಬಂದೂಕು ಸ್ವಚ್ಛಗೊಳಿಸಲು, ರಾಕೆಟ್ ದಾಳಿಯಿಂದ ತಪ್ಪಿಸಿಕೊಳ್ಳಲು ಕಲಿಸಲಾಗುತ್ತಿತ್ತು ಎಂದು 4 ಸದಸ್ಯರ ತಜ್ಞರ ಸಮಿತಿ ಹೇಳಿದೆ.

ಹೌದಿಗಳು ನೇಮಕಗೊಳಿಸಿ 2020ರಲ್ಲಿ ಯುದ್ಧರಂಗದಲ್ಲಿ ಮೃತಪಟ್ಟ 1,406 ಮಕ್ಕಳು ಹಾಗೂ 2021ರ ಜನವರಿಯಿಂದ ಮೇ ಅವಧಿಯಲ್ಲಿ ಮೃತಪಟ್ಟ 562 ಮಕ್ಕಳ ಮಾಹಿತಿ ಲಭಿಸಿದೆ. ಇವರೆಲ್ಲಾ 10ರಿಂದ 17 ವರ್ಷದವರಾಗಿದ್ದರು. ಇವರಲ್ಲಿ ಹೆಚ್ಚಿನ ಮಕ್ಕಳು ಅರ್ಮಾನ್, ಧಮರ್, ಹಜ್ಜಾಹ್, ಹಡೀಬಾ, ಇಬಬ್, ಸಾದಾ ಮತ್ತು ಸನಾ ಪ್ರದೇಶದಲ್ಲಿ ನಡೆದ ಸಂಘರ್ಷದಲ್ಲಿ ಮೃತಪಟ್ಟವರು ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News