ಯುರೋಪ್ ಗಡಿಯಾದ್ಯಂತ ಹೆಚ್ಚುವರಿ ನ್ಯಾಟೋ ಪಡೆ ನಿಯೋಜನೆ: ಬ್ರಿಟನ್

Update: 2022-01-30 18:28 GMT
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

ಲಂಡನ್, ಜ.30: ಉಕ್ರೇನ್ ಗಡಿಭಾಗದಲ್ಲಿ ರಶ್ಯಾ ಬೃಹತ್ ಸಂಖ್ಯೆಯಲ್ಲಿ ಸೇನೆಯನ್ನು ನಿಯೋಜಿಸಿರುವ ಹಿನ್ನೆಲೆಯಲ್ಲಿ, ಯುರೋಪ್‌ನ ಗಡಿಭಾಗಗಳನ್ನು ಬಲಪಡಿಸಲು ಅಧಿಕ ಸಂಖ್ಯೆಯಲ್ಲಿ ನ್ಯಾಟೋ ಪಡೆಯನ್ನು ನಿಯೋಜಿಸುವ ಬಗ್ಗೆ ಬ್ರಿಟನ್ ಪರಿಶೀಲಿಸುತ್ತಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ನಮ್ಮ ನ್ಯಾಟೋ ಮಿತ್ರರಿಗೆ ನೆರವನ್ನು ಖಾತರಿಪಡಿಸಲು ಮುಂದಿನ ವಾರ ಯುರೋಪ್‌ನಾದ್ಯಂತ ನಿಯೋಜನೆಗೆ ಸಿದ್ಧರಿರುವಂತೆ ಸಶಸ್ತ್ರ ಪಡೆಗಳಿಗೆ ಆದೇಶಿಸಿದ್ದೇನೆ. ಅವರ ಅಸ್ಥಿರಗೊಳಿಸುವ ಚಟುವಟಿಕೆಯನ್ನು ನಾವು ಸಹಿಸುವುದಿಲ್ಲ ಮತ್ತು ರಶ್ಯಾದ ಆಕ್ರಮಣದ ಸಂದರ್ಭ ನಮ್ಮ ನೇಟೊ ಮಿತ್ರರೊಂದಿಗೆ ನಿಲ್ಲಲಿದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ರಶ್ಯಾಕ್ಕೆ ಈ ಮೂಲಕ ರವಾನಿಸಲಾಗುವುದು ಎಂದವರು ಹೇಳಿದ್ದಾರೆ.

ಉಕ್ರೇನ್ ವಿರುದ್ಧದ ರಶ್ಯಾ ಯಾವುದೇ ರೀತಿಯಲ್ಲಿ ಆಕ್ರಮಣ ನಡೆಸಿದರೂ ಅದನ್ನು ತ್ವರಿತ ನಿರ್ಬಂಧಗಳೊಂದಿಗೆ ಎದುರಿಸಲಾಗುವುದು ಮತ್ತು ಇಂತಹ ಉಪಕ್ರಮ ಎರಡೂ ಕಡೆಯವರಿಗೆ ವಿನಾಶಕಾರಿಯಾಗಲಿದೆ. ತಾನು ಮುಂದಿನ ವಾರ ಈ ವಲಯಕ್ಕೆ ಭೇಟಿ ನೀಡಲಿದ್ದು ರಶ್ಯಾ ಅಧ್ಯಕ್ಷ ಪುಟಿನ್‌ರೊಂದಿಗೆ ಫೋನ್ ಮೂಲಕ ಮಾತುಕತೆ ನಡೆಸುವುದಾಗಿ ಜಾನ್ಸನ್ ಹೇಳಿದ್ದಾರೆ. ಈ ವಲಯದಲ್ಲಿ ಈಗಾಗಲೇ ಬ್ರಿಟನ್‌ನ ಸುಮಾರು 1,150 ಪಡೆಗಳಿವೆ.

 ಆದರೆ, ರಶ್ಯಾದ ಆಕ್ರಮಣ ಸಂದರ್ಭ ಉಕ್ರೇನ್ ಪಡೆಗಳಿಗೆ ನೆರವಾಗಲು ಬ್ರಿಟನ್ ಪಡೆಯನ್ನು ರವಾನಿಸುವ ಸಾಧ್ಯತೆ ಬಹುತೇಕ ಅಸಾಧ್ಯ ಎಂದು ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ಲಿರ್ ಟ್ರುಸ್ ರವಿವಾರ ಹೇಳಿದ್ದಾರೆ. ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಆದರೆ ಉಕ್ರೇನ್ ಪಡೆಗಳಿಗೆ ಎಲ್ಲಾ ರೀತಿಯ ನೆರವು ಒದಗಿಸಲು ಬ್ರಿಟನ್ ಬದ್ಧ ಎಂದಿದ್ದಾರೆ. ‘ನ್ಯಾಟೋ ಒಕ್ಕೂಟದ ಸದಸ್ಯನಲ್ಲದ ಉಕ್ರೇನ್‌ಗೆ ನ್ಯಾಟೋ ಪಡೆಯನ್ನು ರವಾನಿಸುವ ಸಾಧ್ಯತೆಯಿಲ್ಲ . ನೆರವು ಒದಗಿಸುವತ್ತ ನಾವು ಗಮನ ನೀಡಲಿದ್ದೇವೆ. ನ್ಯಾಟೋ ಸದಸ್ಯನಾಗಿರುವುದು ಮತ್ತು ಉಕ್ರೇನ್‌ನಂತಹ ಬಲಿಷ್ಟ ಮತ್ತು ಮೌಲ್ಯಯುತ ಪಾಲುದಾರನಾಗಿರುವುದರಲ್ಲಿ ವ್ಯತ್ಯಾಸವಿದೆ’  ಎಂದು ನ್ಯಾಟೋದ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟಾಲ್ಟನ್‌ಬರ್ಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News