ಮೊಘಲರ ಜೊತೆಗೆ ಕೈಜೋಡಿಸಿ ಶಿವಾಜಿಗೆ ವಂಚಿಸಿದ ಬಿಜೆಪಿ ಪರಂಪರೆ !

Update: 2022-01-31 06:26 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮೊಘಲರ ವಿರುದ್ಧ ಹೋರಾಡಿದ ಪರಂಪರೆ ಇರುವುದು ಬಿಜೆಪಿಗೆ ಮಾತ್ರ ಎಂದಿದ್ದಾರೆ ಅಮಿತ್ ಶಾ. ಉತ್ತರ ಪ್ರದೇಶದ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಇದೀಗ ಮೊಘಲರನ್ನು ಎಳೆದು ತರುವುದು ಬಿಜೆಪಿಗೆ ಅನಿವಾರ್ಯವಾಗಿದೆ. ಸ್ವಾತಂತ್ರ ಹೋರಾಟದೊಂದಿಗೆ ಸಂಬಂಧವೇ ಇಲ್ಲದ, ಗಾಂಧೀಜಿಯ ರಕ್ತದಿಂದ ಕಳಂಕಿತಗೊಂಡ ಹಿನ್ನೆಲೆಯಿರುವ, ಇತ್ತೀಚಿನ ರೈತರ ಹೋರಾಟಕ್ಕೆ ಬೆಚ್ಚಿ ಬಿದ್ದಿರುವ ಬಿಜೆಪಿಗೆ, ತನ್ನನ್ನು ತಾನು ಹೋರಾಟಗಾರನೆಂದು ಬಿಂಬಿಸಲು ಮೊಘಲರ ಕಾಲಕ್ಕೆ ಹಾರಿದೆ. ನಿಜಕ್ಕೂ ಮೊಘಲರ ವಿರುದ್ಧವಾದರೂ ಹೋರಾಡಿದ ಹಿನ್ನೆಲೆ ಬಿಜೆಪಿಗೆ ಇದೆಯೋ ಎಂದರೆ ಅಲ್ಲೂ ಬಿಜೆಪಿಗೆ ಮತ್ತೆ ಮುಖಭಂಗವಾಗುತ್ತದೆ. ಬಿಜೆಪಿಗಿರುವುದು ಮೊಘಲರ ವಿರುದ್ಧ ಹೋರಾಡಿದ ಪರಂಪರೆಯಲ್ಲ, ಮೊಘಲರ ಜೊತೆಗೆ ಸೇರಿ, ದೇಶೀಯ ರಾಜರ ವಿರುದ್ಧ ಹೋರಾಡಿದ ಪರಂಪರೆ ಮಾತ್ರ ಎನ್ನುವುದು ಇತಿಹಾಸದ ಪ್ರಾಥಮಿಕ ಜ್ಞಾನವಿರುವವರಿಗೂ ಗೊತ್ತಾಗಿ ಬಿಡುತ್ತದೆ.

ಬಿಜೆಪಿ ಮೇಲ್‌ಜಾತಿಗಳ ಪಕ್ಷ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಆರೆಸ್ಸೆಸ್ಸ್‌ನ ರಾಜಕೀಯ ಮುಖವೇ ಬಿಜೆಪಿ. ಈ ಆರೆಸ್ಸೆಸ್ ಬ್ರಾಹ್ಮಣರೂ ಸೇರಿದಂತೆ ಮೇಲ್‌ಜಾತಿಗಳ ನಿಯಂತ್ರಣದಲ್ಲಿದೆ. ಈ ಮೇಲ್‌ಜಾತಿಗಳಿಗೂ ಮೊಘಲರಿಗೂ ಇರುವ ಸಂಬಂಧ ಇತಿಹಾಸ ಗೊತ್ತಿದ್ದವರಿಗೆ ವಿವರಿಸಬೇಕಾಗಿಲ್ಲ. ಮೊಘಲರ ವಿರುದ್ಧ ನಿರಂತರ ಯುದ್ಧ ಸಾರಿ ಭಾಗಶಃ ಗೆಲುವನ್ನು ಕಂಡ ಪ್ರಮುಖ ರಾಜ ಶಿವಾಜಿ. ಈ ದೇಶದ ದಲಿತರು ಮತ್ತು ಮುಸ್ಲಿಮರನ್ನು ಸಂಘಟಿಸಿ ಮೊಘಲರ ವಿರುದ್ಧ ಯುದ್ಧ ಸಾರಿದ. ಶಿವಾಜಿ ಭೋಸಳೆ ಎನ್ನುವ ಕೆಳಜಾತಿಗೆ ಸೇರಿದ ರಾಜ. ಈತ ಮರಾಠ ಜಾತಿಗೆ ಸೇರಿದವನಲ್ಲ. ಇಬ್ರಾಹೀಂ ಖಾನ್, ದೌಲತ್ ಖಾನ್, ಸಿದ್ದಿ ವಾಹ್‌ವಾಹ್, ದಾರ್ಯ ಸಾರಂಗ್ ಮೊದಲಾದ ಮುಸ್ಲಿಮ್ ನಾಯಕರು ಶಿವಾಜಿಯ ದಂಡನಾಯಕರಾಗಿದ್ದರು. ಶಿವಾಜಿಯ ಜಲಸೇನೆಯ ದಂಡನಾಯಕನೂ ಮುಸ್ಲಿಮನೇ ಆಗಿದ್ದನು. ಅತ್ತ ಮೊಘಲರ ಸೇನೆಯ ನೇತೃತ್ವವನ್ನು ವಹಿಸಿದವರು ಮರಾಠರು, ಜಾಟರು, ರಜಪೂತರು. ರಾಜರಾಯ ಸಿಂಗ್, ಸುಜನ್ ಸಿಂಗ್, ಹರಿಬಾನ್ ಸಿಂಗ್, ಉದಯಬಾನ್ ಗೌರ್, ಶೇರ್‌ಸಿಂಹ್ ರಾಥೋಡ್, ಚತುರ್ಭುಜ ಚೌಹಾನ್, ಮಿತ್ರಸೇನ, ಬಾಜಿರಾವ್ ಚಂದ್ರರಾವ್ ಮೊದಲಾದವರು ಮೊಘಲರ ದಂಡನಾಯಕರಾಗಿದ್ದರು. ಹಲವು ಮೊಘಲ್ ಅರಸರ ಪ್ರಧಾನು ಮಂತ್ರಿಗಳು ಮೇಲ್‌ವರ್ಣೀಯರಾಗಿದ್ದರು. ಶಿವಾಜಿಯು ಅಫಜಲ್‌ಖಾನ್‌ನನ್ನು ಭೇಟಿಯಾಗುವ ಸಂದರ್ಭದಲ್ಲಿ, ಶಿವಾಜಿಯ ಓರ್ವ ಆಪ್ತ ಅಂಗರಕ್ಷಕ ಇಬ್ರಾಹೀಂ ಖಾನ್. ಇನ್ನೋರ್ವ ಅಂಗರಕ್ಷಕ ದಲಿತ ಸೇನಾನಿ ಜೀವಾ ಮಹಾರ್. ಅಫಜಲ್ ಖಾನ್‌ನ ಅಂಗರಕ್ಷಕನ ಹೆಸರು ಕೃಷ್ಣಜೀ ಭಾಸ್ಕರ್ ಕುಲಕರ್ಣಿ. ಕುಲಕರ್ಣಿ ಹಿಂದುಗಡೆಯಿಂದ ಶಿವಾಜಿಯ ಮೇಲೆ ದಾಳಿ ಮಾಡಿದಾಗ ಆತನನ್ನು ಕೊಂದಿರುವುದು ದಲಿತ ಅಂಗರಕ್ಷಕ ಜೀವಾ ಮಹಾರ್. ಸಂತ ತುಕರಾಮರು ಇದನ್ನು ಹಾಡಿನಲ್ಲಿ ‘‘ಜೀವಾಜಿ ಇದ್ದುದಕ್ಕೆ ಶಿವಾಜಿ ಬದುಕಿದ’’ ಎಂದು ಬಣ್ಣಿಸುತ್ತಾರೆ.

ರಾಜಾ ಜಯಸಿಂಹನ ನೇತೃತ್ವದಲ್ಲಿ ಶಿವಾಜಿಯ ವಿರುದ್ಧ ಮೊಘಲರು ಯುದ್ಧ ಹೂಡಿದಾಗ, ಶಿವಾಜಿಯ ಸೋಲಿಗಾಗಿ ರಾಜ ಜಯಸಿಂಹನು 400 ಬ್ರಾಹ್ಮಣರಿಂದ ಕೋಟಿ ಚಂಡಿಕಾ ಹವನವನ್ನು ಮಾಡಿಸಿದ. ಮೂರು ತಿಂಗಳ ಕಾಲ ಬಗಲಮುಖಿ ಕಾಳರಾತ್ರಿ ಪ್ರೀತ್ಯರ್ಥ ಜಪ ಮಾಡಲಾಯಿತು ಎಂದು ಇತಿಹಾಸ ಹೇಳುತ್ತದೆ. ಈ ಯುದ್ಧದಲ್ಲೇ ಶಿವಾಜಿ ಮತ್ತು ಅವನ ಪುತ್ರ ಮೊಘಲರಿಗೆ ಸೆರೆ ಸಿಕ್ಕುತ್ತಾರೆ. ಆದರೆ ದಲಿತನೊಬ್ಬನ ಸಾಹಸದಿಂದ ಶಿವಾಜಿ ಮತ್ತು ಅವನ ಪುತ್ರ ಅಲ್ಲಿಂದ ಪಾರಾಗುತ್ತಾರೆೆ. ಶಿವಾಜಿ ಪಟ್ಟ ಏರದಂತೆ ತಡೆಯಲು ಏನೆಲ್ಲ ಸಂಚುಗಳು ನಡೆದವು ಎನ್ನುವುದೂ ಇತಿಹಾಸ. ಶಿವಾಜಿಯ ಬಳಿಕ ಆತನ ಪುತ್ರ ಸಂಭಾಜಿ ಪಟ್ಟವೇರಿದರೂ, ಮಂತ್ರಿಗಳಾಗಿದ್ದ ಪೇಶ್ವೆಗಳ ಸಂಚಿನಿಂದ ಸಂಭಾಜಿ ಮೊಘಲರಿಗೆ ಸೆರೆ ಸಿಕ್ಕುತ್ತಾನೆ. ಆತನನ್ನು ಮೊಘಲರು ಕೊಂದು ಎಸೆಯುತ್ತಾರೆ. ಆ ಸಂದರ್ಭದಲ್ಲಿ ಸಂಭಾಜಿಯ ಅಂತ್ಯಕ್ರಿಯೆಯನ್ನು ಕೂಡ ಪೇಶ್ವೆಗಳು ಮಾಡುವುದಿಲ್ಲ. ಸಂಭಾಜಿಯ ಮೃತದೇಹದ ಅಂತಿಮ ಸಂಸ್ಕಾರ ನೆರವೇರಿಸಿರುವುದು ಗೋವಿಂದ ಗೋಪಾಲ್ ಎನ್ನುವ ಮಹಾರ್ ದಲಿತ. ಮುಂದೆ ಈತ ಮೃತಪಟ್ಟಾಗ, ಸಂಭಾಜಿ ಗೋರಿಯ ಪಕ್ಕದಲ್ಲೇ ಆತನ ಮೃತದೇಹದ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಇಬ್ಬರ ಗೋರಿಗಳು ಅಕ್ಕಪಕ್ಕದಲ್ಲಿ ಈಗಲೂ ಇವೆ.

ಶಿವಾಜಿ ಕಟ್ಟಿದ ರಾಜ್ಯವನ್ನು ಪೇಶ್ವೆಗಳು ವಂಚನೆಯಿಂದ ತಮ್ಮದಾಗಿಸಿಕೊಳ್ಳುತ್ತಾರೆ. ಶಿವಾಜಿಗೆ ಬೆನ್ನೆಲುಬಾಗಿ ನಿಂತ ಮಹಾರ್ ದಲಿತರನ್ನು ಕೀಳಾಗಿ ಕಂಡ ಪರಿಣಾಮವಾಗಿ ದಲಿತರು ಬಂಡೇಳುತ್ತಾರೆ. ಅಂತಿಮವಾಗಿ ಎರಡನೇ ಬಾಜೀರಾವ್ ಪೇಶ್ವೆಯ 20,000 ಯೋಧರಿರುವ ಸೇನೆಯನ್ನು ಬರೇ 500 ಮಂದಿ ದಲಿತ ಯೋಧರು ಸೋಲಿಸುತ್ತಾರೆ. ಆ ವಿಜಯ ದಿನವನ್ನು ಕೋರೆಗಾಂವ್ ವಿಜಯ ದಿನವಾಗಿ ಇಂದಿಗೂ ಆಚರಿಸಲಾಗುತ್ತದೆ. ಶಿವಾಜಿಗೆ ವಂಚಿಸಿದ ಪೇಶ್ವೆ ವಂಶಸ್ಥನೇ ನಾಥೂರಾಂ ಗೋಡ್ಸೆ. ಈತ ಮಹಾತ್ಮಾ ಗಾಂಧೀಜಿಯನ್ನು ಕೊಂದು ಹಾಕುತ್ತಾನೆ. ಗೋಡ್ಸೆಯನ್ನು ತಯಾರು ಮಾಡಿದ ಹಿಂದೂ ಸಭಾ ಬೇರೆ ಬೇರೆ ರೂಪಗಳನ್ನು ಪಡೆದು ಇಂದು ಆರೆಸ್ಸೆಸ್ ಮತ್ತು ಬಿಜೆಪಿಯಾಗಿ ನಮ್ಮ ಮುಂದೆ ನಿಂತಿದೆ. ಮೊಘಲರ ಜೊತೆಗೆ ಹೋರಾಡಿದ ಪರಂಪರೆ ಬಿಜೆಪಿಯದ್ದಲ್ಲ. ಮೊಘಲರ ಜೊತೆಗೆ ಕೈ ಜೋಡಿಸಿ ಶಿವಾಜಿ ಮತ್ತು ಸಂಭಾಜಿಗೆ ವಂಚಿಸಿದ ಪರಂಪರೆಯಷ್ಟೇ ಬಿಜೆಪಿಯದ್ದು. ಬ್ರಿಟಿಷರ ಕಾಲದಲ್ಲಿ ಬ್ರಿಟಿಷರ ಜೊತೆಗೆ ಕೈಜೋಡಿಸಿ ಸ್ವಾತಂತ್ರ ಹೋರಾಟಗಾರರ ವಿರುದ್ಧ ಪಿತೂರಿ ನಡೆಸಿದ ಪರಂಪರೆಯನ್ನೂ ಬಿಜೆಪಿ ಹೊಂದಿದೆ. ಗೋಡ್ಸೆಯ ಸಂತತಿಗಳು ಇಂದು ದೇಶಭಕ್ತರ ವೇಷದಲ್ಲಿ ಮತ್ತೆ ಭಾರತದ ವಿರುದ್ಧ ತನ್ನ ಪಿತೂರಿಗಳನ್ನು ಮುಂದುವರಿಸುತ್ತಿದ್ದಾರೆ. ಗಾಂಧೀಜಿಯ ಹತ್ಯೆಯನ್ನು ಬಹಿರಂಗವಾಗಿ ಸಂಭ್ರಮಿಸಿ ಗೋಡ್ಸೆಯನ್ನು ವೈಭವೀಕರಿಸುತ್ತಿದ್ದಾರೆ. ಇವೆಲ್ಲವೂ ಬಿಜೆಪಿ ನೇತೃತ್ವದ ಸರಕಾರ ಮೂಗಿನಡಿಯಲ್ಲೇ ನಡೆಯುತ್ತಿದೆ. ಆದರೂ ಸರಕಾರ ವೌನವಾಗಿದೆ. ಬಿಜೆಪಿಯ ಪರಂಪರೆಯ ಬಗ್ಗೆ ಅರಿವಿದ್ದವರಿಗೆ ಈ ವೌನ ಖಂಡಿತವಾಗಿಯೂ ಅರ್ಥವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News