ಇನ್ನೂ ಮಾಯದ ಭಾರತ ವಿಭಜನೆಯ ಗಾಯ

Update: 2022-01-31 04:35 GMT

ಭಾರತದ ವಿಭಜನೆಯ ಗಾಯ ಇನ್ನೂ ಮಾಯ್ದಿಲ್ಲ. ಈ ಗಾಯ ಮಾಯದಂತೆ ಮತ್ತೆ ಮತ್ತೆ ಚುಚ್ಚಿ ಚುಚ್ಚಿ ಕೆದರುವ ಕರಾಳ, ದುಷ್ಟ ಶಕ್ತಿಗಳು ರಣ ಕೇಕೆ ಹಾಕುತ್ತಿರುವ ಕಾಲವಿದು. ಈಗ ಗಾಂಧಿ, ಅಂಬೇಡ್ಕರ್, ನೆಹರೂ, ಸುಭಾಷ್‌ರಂತಹ ಮನುಷ್ಯ ಪ್ರೀತಿಯ ಮುತ್ಸದ್ದಿಗಳಿಲ್ಲ. ರಾಷ್ಟ್ರದ ರಕ್ಷಾ ಕವಚವಾದ ಸಂವಿಧಾನವನ್ನೇ ಸಮಾಧಿ ಮಾಡಲು ಹುನ್ನಾರ ನಡೆದಿರುವ ಈ ದಿನಗಳಲ್ಲಿ ಪಲ್ಲವಿ ಇಡೂರರ ಈ ಪುಸ್ತಕ ಹೊಸ ಬೆಳಕನ್ನು ಚೆಲ್ಲುತ್ತದೆ. ಹೊಸ ಪೀಳಿಗೆಯ ಯುವಕರು ಓದಿ ಹೊಸ ದಾರಿ ಕಂಡುಕೊಳ್ಳಲು ಇದು ಮಾರ್ಗದರ್ಶಿಯಾಗಿದೆ.

ಭಾರತ ಸ್ವತಂತ್ರಗೊಂಡು 7 ದಶಕಗಳೇ ಗತಿಸಿದವು. ಆದರೆ, ನಮ್ಮ ಸ್ವಾತಂತ್ರದ ಕತೆ ಉಳಿದ ದೇಶಗಳಂತಲ್ಲ. ಬ್ರಿಟಿಷರೇನೋ ತೊಲಗಿದರು. ಆದರೆ, ದೇಶ ಒಡೆದು ಎರಡಾಯಿತು. ಇದಕ್ಕೆ ಕಾರಣ ಧರ್ಮದ ಹೆಸರಿನ ರಾಜಕೀಯ.

ಭಾರತ ವಿಭಜನೆಯ ಈ ಸಂಕಟದ ಕುರಿತ ಸಾಹಿತ್ಯ ಕನ್ನಡದಲ್ಲಿ ಅಪರೂಪ. ಪಲ್ಲವಿ ಇಡೂರು ಅವರ ಇತ್ತೀಚಿನ ಕೃತಿ ‘ಆಗಸ್ಟ್’ ಮಾಸದ ರಾಜಕೀಯ ಕಥನ ಕೃತಿಯು ಈ ಕೊರತೆಯನ್ನು ನೀಗಿಸಿದೆ.

ಜೊಲಾಂಟಾದಂತಹ ಅಪರೂಪದ ಪುಸ್ತಕವನ್ನು ಕನ್ನಡಕ್ಕೆ ನೀಡಿದ ಪಲ್ಲವಿ ಇಡೂರು ಅವರು ದೇಶ, ವಿದೇಶಗಳಿಂದ ಮಾಹಿತಿ ಕಲೆ ಹಾಕಿ ನೂರಾರು ಪುಸ್ತಕಗಳನ್ನು ತರಿಸಿ ಓದಿ ಸತತ ಮೂರು ವರ್ಷಗಳ ಪರಿಶ್ರಮದ ಫಲವಾಗಿ ಬಂದ ಈ ಪುಸ್ತಕ ಭಾರತ ವಿಭಜನೆಯ ಕುರಿತಾದ ಹಲವಾರು ಹೊಸ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ.

ಭಾರತದ ವಿಭಜನೆಗೆ ಧರ್ಮದ ರಾಜಕೀಯವೇ ಕಾರಣ ಎಂದು ಗುರುತಿಸುವ ಲೇಖಕಿ, ‘ಛಿದ್ರಗೊಂಡ ಸ್ವಾತಂತ್ರವನ್ನು ಪಕ್ಕಕ್ಕಿಟ್ಟು ನೋಡಿದರೂ, ಈ ಸ್ವಾತಂತ್ರ ನಮಗೆ ಶಾಂತಿಯನ್ನೇನೂ ಉಳಿಸಿಲ್ಲ. ಮುಂದೆಯೂ ಶಾಂತಿ ನೆಲೆಸಬಹುದು ಎಂಬ ಆಶಾವಾದವನ್ನೂ ಉಳಿಸಿಲ್ಲ. ಧರ್ಮದ ರಾಜಕೀಯ ಕೋಮುವಾದ ವಿಭಜನೆಯ ನಂತರ ಅಕ್ಕಪಕ್ಕದ ಸೋದರರಂತೆ ಬೆಳೆಯಬೇಕಾಗಿದ್ದ ಎರಡೂ ದೇಶಗಳ ಜನರ ನಡುವೆ ಮುಗಿಯಲಾರದ ವೈಷಮ್ಯ ತುಂಬಿ ಅದೀಗ ಹೆಮ್ಮರವಾಗಿ ಬೆಳೆಯುವಂತಾಗಿದೆ’ ಎಂದು ವಿಷಾದಿಸುತ್ತಾರೆ.

150 ಪುಟಗಳ ಪುಸ್ತಕದಲ್ಲಿ ಭಾರತ ವಿದೇಶಿ ದಾಸ್ಯದಿಂದ ಬಿಡುಗಡೆಯಾಗುವ ಕಾಲಘಟ್ಟದ ಮರೆಯಲಾಗದ ಘಟನೆಗಳನ್ನು ಲೇಖಕಿ ದಾಖಲಿಸಿದ್ದಾರೆ.

ಭಾರತ ವಿಭಜನೆಗೆ ಯಾರು ಕಾರಣ? ಜಿನ್ನಾ ಮಾತ್ರ ಕಾರಣವೇ? ಈ ಪ್ರಶ್ನೆಗೆ ಉತ್ತರ ಅತ್ಯಂತ ಸರಳವಾಗಿ ಈ ಪುಸ್ತಕದಲ್ಲಿ ಸಿಗುತ್ತದೆ. ಜಿನ್ನಾಗಿಂತಹ ಮುಂಚೆ ಕೂಡ ಬ್ರಿಟಿಷರನ್ನು ಒಲೈಸಲು ಸಾವರ್ಕರರ ಹಿಂದೂ ಮಹಾ ಸಭಾ ಹಿಂದೂ ಮತ್ತು ಮುಸ್ಲಿಂ ಎಂಬುದು ಎರಡು ಪ್ರತ್ಯೇಕ ರಾಷ್ಟ್ರೀಯತೆಗಳು ಒಂದು ರಾಷ್ಟ್ರವಾಗಲು ಸಾಧ್ಯವಿಲ್ಲ ಎಂದು ಹೇಳಿದ್ದನ್ನೇ ಬಳಸಿಕೊಂಡ ಜಿನ್ನಾ ಪ್ರತ್ಯೇಕ ರಾಷ್ಟ್ರದ ಒಡಕಿನ ಧ್ವನಿ ಎತ್ತಿದರು. ಇದಕ್ಕೆ ಭಾರತದ ಎಲ್ಲಾ ಮುಸಲ್ಮಾನರ ಬೆಂಬಲವಿರಲಿಲ್ಲ. ಗಾಂಧೀಜಿ ಜೊತೆಗಿದ್ದ ಮೌಲಾನಾ ಅಬುಲ್ ಕಲಾಮ್ ಆಝಾದ್ ಮೊದಲಾದವರು ಭಾರತದ ವಿಭಜನೆಯನ್ನು ವಿರೋಧಿಸಿದ್ದನ್ನು ಲೇಖಕಿ ದಾಖಲಿಸಿದ್ದಾರೆ.

  ಹಿಂದೂ ಮುಸ್ಲಿಮ್ ಎಂಬ ಬೆಂಕಿ ಬ್ರಿಟಿಷರು ತಮ್ಮ ಲಾಭಕ್ಕಾಗಿ ಮೊದಲು ಹೊತ್ತಿಸಿದ ಕಿಡಿ. ಇದು ಬರಬರುತ್ತ ಮನುಷ್ಯತ್ವವೆಂಬ ಅಸ್ಮಿತೆಯನ್ನೇ ಮರೆಯುವ ಮಟ್ಟಿಗೆ ಇವತ್ತಿಗೂ ಸುಡುತ್ತಲೇ ಇದೆ. ಇದರಿಂದ ಘಾಸಿಗೊಂಡ ಗಾಂಧೀಜಿ ನಾನು ಸೋತಿದ್ದೇನೆ. ವಿಭಜನೆ ಬಂದು ಬಿಟ್ಟಿದೆ’ ಎಂದು ನಿಟ್ಟುಸಿರು ಬಿಟ್ಟರು.

ಭಾರತದ ಸ್ವಾತಂತ್ರ ಹೋರಾಟದ ಪರಿಚಯವೇ ಇಲ್ಲದ ವಾಟ್ಸ್‌ಆ್ಯಪ್ ಯುನಿವರ್ಸಿಟಿಗಳಲ್ಲಿ ರಾಶಿ ರಾಶಿಯಾಗಿ ಬಂದು ಬೀಳುವ ಸುಳ್ಳುಗಳನ್ನೇ ತಿಳಿದೋ, ತಿಳಿಯದೆಯೋ ನಂಬಿ ಗಾಂಧಿ ಮತ್ತು ನೆಹರೂ ತೇಜೋವಧೆ ಮಾಡುತ್ತಿರುವ ಇಂದಿನ ಪೀಳಿಗೆಯ ಯುವಕರು ಓದಬೇಕಾದ ಪುಸ್ತಕವಿದು.

150 ಪುಟಗಳಲ್ಲಿ ಇಡೀ ಸ್ವಾತಂತ್ರ ಹೋರಾಟದ ಕಥನವನ್ನು ಹಿಡಿದಿಡುವುದು, ಜೊಳ್ಳನ್ನು ತೂರಿ ವಾಸ್ತವ ಸಂಗತಿಯನ್ನು ದಾಖಲಿಸುವುದು ಸುಲಭದ ಸಂಗತಿಯಲ್ಲ. ಪಲ್ಲವಿ ಇಡೂರು ತುಂಬಾ ಪರಿಶ್ರಮ ಪಟ್ಟು ಚರಿತ್ರೆಗೆ ನ್ಯಾಯ ಒದಗಿಸಿದ್ದಾರೆ.

ಹಿಂದೂ ಮತ್ತು ಮುಸಲ್ಮಾನರ ನಡುವಿನ ವೈಷಮ್ಯಕ್ಕೆ ಬ್ರಿಟಿಷ್ ಸಾಮ್ರಾಜ್ಯಶಾಹಿಗಳೇ ಕಾರಣ ಎಂದು ದಾಖಲೆಗಳ ಸಹಿತ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಎಲ್ಲ ಜನ ಸಮುದಾಯಗಳ ಜನರು ಸೇರಿ ನಡೆಸಿದ ಸ್ವಾತಂತ್ರ ಹೋರಾಟದಲ್ಲಿ ಒಡಕಿನ ವಿಷಬೀಜ ಬಿತ್ತುವುದು ಬ್ರಿಟಿಷ್‌ಆಡಳಿತಗಾರರ ಸ್ವಹಿತಾಸಕ್ತಿಯಾಗಿತ್ತು.

ಎರಡು ಪ್ರತ್ಯೇಕ ರಾಷ್ಟ್ರಗಳಾದರೂ ರಕ್ಷಣೆ, ವಿದೇಶಾಂಗ ವ್ಯವಹಾರ, ಅಬಕಾರಿ ಮತ್ತು ವಾಣಿಜ್ಯ ವ್ಯವಹಾರಗಳು ಒಂದೇ ಆಗಿರಬೇಕು ಎಂದು ಗಾಂಧೀಜಿ ಪ್ರತಿಪಾದಿಸಿದ್ದರು. ಇದನ್ನು ಒಪ್ಪದ ಜಿನ್ನಾ ನಾವೊಂದು ಪ್ರತ್ಯೇಕ ಬಯಸುತ್ತೇವೆ ಎಂದು ಹೇಳಿದರು. ಹೀಗಾಗಿ ಪ್ರತ್ಯೇಕತೆ ಅನಿವಾರ್ಯವಾಯಿತು.

ಭಾರತದ ವಿಭಜನೆಯನ್ನು ತಪ್ಪಿಸಲು ಗಾಂಧೀಜಿ ಮತ್ತು ಬ್ಯಾರಿಸ್ಟರ್ ಜಿನ್ನಾ ನಡುವೆ 18 ದಿನಗಳಷ್ಟು ಸುದೀರ್ಘ ಮಾತುಕತೆ ನಡೆಯಿತು. ಗಾಂಧೀಜಿ ಪ್ರಕಾರ, ಭಾರತ ಎಂಬುದು ಎರಡು ಅಥವಾ ಮೂರು ರಾಷ್ಟ್ರವಾಗಿ ಒಡೆದು ಹೋಗುವಂತಹದಲ್ಲ. ಇದು ಬಹಳ ಜನರಿರುವ ಕೂಡು ಕುಟುಂಬ. ಇದರಲ್ಲಿ ಮುಸಲ್ಮಾನರು ಮಾತ್ರ ಒಂದು ಪ್ರದೇಶದಲ್ಲಿ ವಾಸವಾಗಿದ್ದು ಬಹುಸಂಖ್ಯಾತರಾದ ಕಾರಣ ಭಾರತದಿಂದ ಪ್ರತ್ಯೇಕವಾಗಬೇಕೆಂಬ ಇರಾದೆ ಸರಿಯಲ್ಲ. ಇದನ್ನು ಅಣ್ಣ ತಮ್ಮಂದಿರ ನಡುವಿನ ಬಿರುಕು ಎಂದು ಪ್ರತಿಪಾದಿಸಿದರು. ‘ಪ್ರತ್ಯೇಕವಾಗುವುದಾದರೆ, ಅದು ಒಂದು ಕುಟುಂಬಕ್ಕೆ ಅಂಟಿಕೊಂಡೇ ಪ್ರತ್ಯೇಕವಾಗಬೇಕು. ಇದು ಮನೆಯೊಳಗಿನ ಆಂತರಿಕ ವಿಷಯ. ಜಗತ್ತಿನ ಎದುರು ನಾವು ಒಂದಾಗಿರಬೇಕು’ ಎಂದು ಗಾಂಧೀಜಿ ಹೇಳಿದರು.

ಹಾಗೆ ನೋಡಿದರೆ ಜಿನ್ನಾ ಧಾರ್ಮಿಕ ಕಟ್ಟರ್‌ವಾದಿಯಲ್ಲ. ಪ್ರತ್ಯೇಕ ರಾಷ್ಟ್ರವಾಗಿ ಪಾಕಿಸ್ತಾನ ಅಸ್ತಿತ್ವಕ್ಕೆ ಬಂದ ನಂತರವೂ ‘ಇದು ಹಿಂದೂ, ಮುಸ್ಲಿಮ್, ಕ್ರೈಸ್ತ ಹೀಗೆ ಎಲ್ಲಾ ಸಮುದಾಯಗಳಿಗೆ ಸೇರಿದ ರಾಷ್ಟ್ರ’: ಎಂದು ಜಿನ್ನಾ ಪ್ರತಿಪಾದಿಸಿದರು.

  ಎಲ್.ಕೆ .ಅಡ್ವಾಣಿ ಅವರು ರಾವಲ್ಪಿಂಡಿಗೆ ಹೋದಾಗ ಜಿನ್ನಾ ಅವರನ್ನು ಶ್ಲಾಘಿಸಿದರು. ಇದರಿಂದ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಗುರುಗಳಿಗೆ ಕೋಪಗೊಂಡು ಅಡ್ವಾಣಿ ಮೂಲೆ ಗುಂಪಾಗಬೇಕಾಯಿತು. ಜಸ್ವಂತ್ ಸಿಂಗರಿಗೂ ಅದೇ ಗತಿ ಬಂತು. ನಂತರ ಮೋದಿ, ಯೋಗಿ ಅವತಾರಗಳ ಕತೆ ಎಲ್ಲರಿಗೂ ಗೊತ್ತು.

 ಭಾರತದ ವಿಭಜನೆಯ ಕುರಿತ ಈ ಪುಸ್ತಕದಲ್ಲಿ ಪಲ್ಲವಿ ಇಡೂರು ಎಲ್ಲೂ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಬಲವಂತವಾಗಿ ಹೇರಿಲ್ಲ. ವಾಸ್ತವಾಂಶಗಳನ್ನು ತಮ್ಮದೇ ಶೈಲಿಯಲ್ಲಿ ದಾಖಲಿಸುತ್ತ ಹೋಗಿದ್ದಾರೆ. ಇದು ಇತಿಹಾಸ, ರಾಜಕೀಯ ಶಾಸ್ತ್ರ ಮುಂತಾದ ವಿಷಯಗಳಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಮಾತ್ರವಲ್ಲ ಅಧ್ಯಾಪಕರು ಓದಬೇಕಾದ ಪುಸ್ತಕ. ರಾಜ್ಯದ, ಕಾಲೇಜುಗಳು ವಿಶ್ವ ವಿದ್ಯಾನಿಲಯಗಳು ಪಠ್ಯ ಪುಸ್ತಕವನ್ನಾಗಿ ಮಾಡಲು ಇದು ಅತ್ಯಂತ ಸೂಕ್ತ ಪುಸ್ತಕ ಎಂದರೆ ಅತಿಶಯೋಕ್ತಿಯಲ್ಲ.

ಇಂತಹ ಕ್ಲಿಷ್ಟ ವಿಷಯವನ್ನು ಆದಷ್ಟು ಸರಳವಾಗಿ ಬರೆಯಲು ಲೇಖಕಿ ಸಾಕಷ್ಟು ಪ್ರಯತ್ನಿಸಿದ್ದಾರೆ. ಇದಕ್ಕೆ ಪೂರಕವಾದ ಅಂಶಗಳು ಗೊತ್ತಿದ್ದರೆ ಮಾತ್ರ ಈ ಪುಸ್ತಕ ಓದಿಸಿಕೊಂಡು ಹೋಗುತ್ತದೆ. ತಿಳಿದುಕೊಳ್ಳುವ ಹಸಿವು ಇದ್ದವರಿಗೆ ಇದು ನಿರಾಶೆಯನ್ನು ಮಾಡುವುದಿಲ್ಲ. ಕಾನ್ಕೆವ್ ಮಾಧ್ಯಮ ಪ್ರಕಾಶನ ಬೆಳಕಿಗೆ ತಂದ ಈ ವಿಭಜನೆಯ ಕತೆ ಅಮೂಲ್ಯ ದಾಖಲೆ ಎಂಬುದಂತೂ ನಿಜ.

ಭಾರತದ ವಿಭಜನೆಯ ಗಾಯ ಇನ್ನೂ ಮಾಯ್ದಿಲ್ಲ. ಈ ಗಾಯ ಮಾಯದಂತೆ ಮತ್ತೆ ಮತ್ತೆ ಚುಚ್ಚಿ ಚುಚ್ಚಿ ಕೆದರುವ ಕರಾಳ, ದುಷ್ಟ ಶಕ್ತಿಗಳು ರಣ ಕೇಕೆ ಹಾಕುತ್ತಿರುವ ಕಾಲವಿದು. ಈಗ ಗಾಂಧಿ, ಅಂಬೇಡ್ಕರ್, ನೆಹರೂ, ಸುಭಾಷ್‌ರಂತಹ ಮನುಷ್ಯ ಪ್ರೀತಿಯ ಮುತ್ಸದ್ದಿಗಳಿಲ್ಲ. ರಾಷ್ಟ್ರದ ರಕ್ಷಾ ಕವಚವಾದ ಸಂವಿಧಾನವನ್ನೇ ಸಮಾಧಿ ಮಾಡಲು ಹುನ್ನಾರ ನಡೆದಿರುವ ಈ ದಿನಗಳಲ್ಲಿ ಪಲ್ಲವಿ ಇಡೂರರ ಈ ಪುಸ್ತಕ ಹೊಸ ಬೆಳಕನ್ನು ಚೆಲ್ಲುತ್ತದೆ. ಹೊಸ ಪೀಳಿಗೆಯ ಯುವಕರು ಓದಿ ಹೊಸ ದಾರಿ ಕಂಡುಕೊಳ್ಳಲು ಇದು ಮಾರ್ಗದರ್ಶಿಯಾಗಿದೆ.

Writer - ಸನತ್ ಕುಮಾರ ಬೆಳಗಲಿ

contributor

Editor - ಸನತ್ ಕುಮಾರ ಬೆಳಗಲಿ

contributor

Similar News