ಜನಾರ್ದನ ಪೂಜಾರಿಯನ್ನು ಭೇಟಿಯಾದ ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್

Update: 2022-01-31 08:51 GMT

ಬಂಟ್ವಾಳ, ಜ.31: ಕರ್ನಾಟಕ ವಿಧಾನಸಭೆಯ ಪ್ರತಿಪಕ್ಷದ ಉಪ ನಾಯಕನನ್ನಾಗಿ ಆಯ್ಕೆ ಮಾಡಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸುತ್ತೇನೆ. ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿಭಾಯಿಸಿ ಇಡೀ ರಾಜ್ಯ ಹಾಗೂ ಕ್ಷೇತ್ರದ ಜನರಿಗೆ ಗೌರವ ತರುವ ಕೆಲಸ ಮಾಡುತ್ತೇವೆ. ಈ ಜವಾಬ್ದಾರಿ ತನ್ನ ಕ್ಷೇತ್ರದ ಮತದಾರರಿಗೆ ಸಂದ ಗೌರವಾಗಿದೆ ಎಂದು ವಿಧಾನಸಭಾ ವಿಪಕ್ಷ ಉಪನಾಯಕ, ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.

ಅವರು ಬಂಟ್ವಾಳದಲ್ಲಿ ಹಿರಿಯ ಕಾಂಗ್ರೆಸ್ ಮುಂದಾಳು ಬಿ.ಜನಾರ್ದನ ಪೂಜಾರಿ ಅವರ ಆಶೀರ್ವಾದ ಪಡೆದು ಬಳಿಕ ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.

ತನ್ನ ಆಯ್ಕೆಗೆ ಕಾರಣರಾದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ, ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸೇರಿದಂತೆ ಎಲ್ಲಾ ಹಿರಿಯ - ಕಿರಿಯ ನಾಯಕರಿಗೆ ಕ್ಷೇತ್ರದ ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ. ಪಕ್ಷಕ್ಕೆ ನನ್ನಿಂದಾಗುವ ಸಹಕಾರ ನೀಡುತ್ತೇನೆ ಎಂದರು.

ತಾನು ವಿದ್ಯಾರ್ಥಿಯಾಗಿದ್ದಾಗ ಹಿರಿಯ ನಾಯಕ ಜನಾರ್ದನ ಪೂಜಾರಿ ತನ್ನನ್ನು ಮೊದಲ ಬಾರಿಗೆ ಎನ್‌ಎಸ್‌ಯುಐನ ಕಾರ್ಯದರ್ಶಿಯನ್ನಾಗಿ ಮಾಡಿದ್ದರು. ಹೀಗಾಗಿ ಅವರ ಆಶೀರ್ವಾದ ಪಡೆದಿದ್ದೇನೆ. ಜತೆಗೆ ಜಿಲ್ಲೆಯ ಎಲ್ಲಾ ಹಿರಿಯ - ಕಿರಿಯ ಮುಖಂಡರ ಆಶೀರ್ವಾದವನ್ನು ಕೇಳುತ್ತಿದ್ದೇನೆ ಎಂದು ಹೇಳಿದರು.

ಸಿ.ಎಂ.ಇಬ್ರಾಹಿಂ ಅವರು ನಮ್ಮ ಹಿರಿಯ ನಾಯಕರಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮುಂದೆಯೂ ಕಾಂಗ್ರೆಸ್‌ನಲ್ಲೇ ಇರುತ್ತಾರೆ. ಅವರ ಕೊಡುಗೆ ಅತಿ ಅಗತ್ಯವಾಗಿದೆ. ದೇಶ - ರಾಜ್ಯದ ಜತೆಗೆ ಜನಸಾಮಾನ್ಯರಿಗೆ ವಿರೋಧವಾಗಿರುವ ಬಿಜೆಪಿ ಸರಕಾರವನ್ನು ಕಿತ್ತೊಗೆಯುವುದು ನಮ್ಮ ಪ್ರಮುಖ ಉದ್ದೇಶವಾಗಿದೆ.

ವಿಧಾನ ಪರಿಷತ್ತೇ ಬೇರೆ ವಿಧಾನಸಭೆಯೇ ಬೇರೆ. ಉಪ ನಾಯಕನ ಸ್ಥಾನದ ಕುರಿತು ಹಿಂದೆಯೇ ಚರ್ಚೆಯಾಗಿತ್ತು. ಸಿ.ಎಂ.ಇಬ್ರಾಹಿಂ ಅವರ ವಿಚಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

ತಾನು ಸಣ್ಣ ವಯಸ್ಸಿನಿಂದಲೂ ಕಾಂಗ್ರೆಸ್‌ನಲ್ಲಿ ಬೇರೆ ಬೇರೆ ಸ್ಥಾನಗಳನ್ನು ಅಲಂಕರಿಸಿ ಶಾಸಕನಾಗಿ, ಸಚಿವನಾಗಿ ಪ್ರಮುಖ ಇಲಾಖೆಗಳನ್ನು ಪ್ರಾಮಾಣಿಕನಾಗಿ ನಿರ್ವಹಿಸಿದ ಕಾರಣ ಈ ಸ್ಥಾನ ಲಭಿಸಿದೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಇರಾ ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಜಿಲ್ಲಾ ಕಾಂಗ್ರೆಸ್ ಒಬಿಸಿ ಘಟಕದ ಉಪಾಧ್ಯಕ್ಷ ದಿನೇಶ್ ಪೂಜಾರಿ, ಜಬ್ಬಾರ್ ಬೋಳಿಯಾರ್, ಮಜೀದ್ ಫರಂಗಿಪೇಟೆ, ಇಕ್ಬಾಲ್ ಸುಜೀರ್ ಮೊದಲಾದವರಿದ್ದರು.

ಬಳಿಕ ಮಾಜಿ ಸಚಿವ ಬಿ.ರಮಾನಾಥ ರೈಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News