ದ.ಕ. ಜಿಲ್ಲಾ ಕೊರಗರ ಸಮಿತಿಯಿಂದ ಪ್ರತಿಭಟನೆ
ಮಂಗಳೂರು, ಜ.31: ಗಣರಾಜ್ಯೋತ್ಸವ ದಿನದಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಗೌರವ ತೋರಿದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರನ್ನು ತಕ್ಷಣ ನ್ಯಾಯಾಧೀಶ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿ ದ.ಕ.ಜಿಲ್ಲಾ ಕೊರಗರ ಸಮಿತಿಯ ವತಿಯಿಂದ ಸೊಮವಾರ ಮಂಗಳೂರು ತಹಶೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಯಿತು.
ಸಮಿತಿಯ ಜಿಲ್ಲಾಧ್ಯಕ್ಷ ರಮೇಶ್ ಮಂಚಕಲ್ ಮಾತನಾಡಿ ನ್ಯಾಯಾಂಗದ ಪ್ರಮುಖ ಹುದ್ದೆಯಲ್ಲಿರುವ ಜಿಲ್ಲಾ ನ್ಯಾಯಾಧೀಶರು ಸಂವಿಧಾನವನ್ನು, ಶಿಷ್ಟಾಚಾರವನ್ನು ಪಾಲನೆ ಮಾಡಿ ಇತರರಿಗೆ ಮಾದರಿಯಾಗಬೇಕಿತ್ತು. ಆದರೆ ಆ ನ್ಯಾಯಾಧೀಶರು ಸಂವಿಧಾನ ಶಿಲ್ಪಿಗೆ ಅಗೌರವ ತೋರಿರುವುದು ಅಕ್ಷಮ್ಯ. ಅವರಿಂದ ಶೋಷಿತ ಸಮುದಾಯಕ್ಕೆ ನ್ಯಾಯ ಸಿಗುವುದು ಕನಸಿನ ಮಾತಾಗಿದೆ ಎಂದರು.
ಪ್ರತಿಭಟನೆಯಲ್ಲಿ ಕೊರಗ ಸಮುದಾಯದ ಮುಖಂಡರಾದ ಸುಂದರ ಬೆಳುವಾಯಿ, ಕೊಗ್ಗ, ಶಶಿಕಲಾ ಕೋಟಿಕಲ್, ಬಾಬು ಪಾಂಗಾಳ, ಕಿರಣ್ ಬಜ್ಪೆ, ಮನೋಜ್ ಮತ್ತಿತರರು ಪಾಲ್ಗೊಂಡಿದ್ದರು.