×
Ad

ಸಂವಾದ ಹುಟ್ಟು ಹಾಕುವ ಕಲೆಯೇ ಧರ್ಮ, ರಾಜಕೀಯಕ್ಕಿಂತ ಮುಖ್ಯ: ಕಾಸರವಳ್ಳಿ

Update: 2022-01-31 21:29 IST

ಉಡುಪಿ, ಜ.31: ಸಿನೆಮಾ, ಕಲೆ, ಸಾಹಿತ್ಯವು ಸಂವಾದವನ್ನು ಹುಟ್ಟು ಹಾಕಬೇಕೇ ಹೊರತು ವಾದವನ್ನು ಅಲ್ಲ. ಒಳ್ಳೆಯ ಕಲೆ ಸಂವಾದವನ್ನು ಹುಟ್ಟು ಹಾಕಿದರೆ, ಧರ್ಮ, ರಾಜಕೀಯ ಸಭೆಗಳು ಒಂದು ಸಿದ್ಧಾಂತವನ್ನು ನಮ್ಮ ಮೇಲೆ ಹೇರುವ ಕೆಲಸ ಮಾಡುತ್ತದೆ. ಆದುದರಿಂದ ಧರ್ಮ, ರಾಜಕೀಯಕ್ಕಿಂತ ಕಲೆಯೇ ಬಹಳ ದೊಡ್ಡದು ಮತ್ತು ಹೆಚ್ಚು ಮುಖ್ಯವಾಗಿದೆ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದ್ದಾರೆ.

ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಸಹಕಾರದೊಂದಿಗೆ ಕಾಲೇಜಿನ ಮುದ್ದಣ ಮಂಟಪದಲ್ಲಿ ಸೋಮ ವಾರ ಆಯೋಜಿಸಲಾದ ಸಂಸ್ಕೃತಿ ಉತ್ಸವದಲ್ಲಿ ಪ್ರಭಾವತಿ ಶೆಣೈ ಹಾಗೂ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ ಒಂದು ಲಕ್ಷ ರೂ. ಗೌರವಧನ ಸಹಿತ ‘ವಿಶ್ವಪ್ರಭಾ’ ಪುರಸ್ಕಾರವನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.

ಮನುಷ್ಯ ಹುಟ್ಟಿನಲ್ಲೇ ಕ್ರೂರಿ ಆಗಿರುವುದಿಲ್ಲ. ಆಯಾ ಸಂದರ್ಭಗಳು ಆತನನ್ನು ಕ್ರೂರಿಯನ್ನಾಗಿ ಮಾಡುತ್ತದೆ. ಆ ಸಂದರ್ಭವನ್ನು ನಾವು ಅರ್ಥ ಮಾಡದೆ ಮನುಷ್ಯತ್ವವನ್ನು ಅರ್ಥ ಮಾಡಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

ಕ್ರೌರ್ಯದ ಮೂಲ ಇತರ ಪ್ರಕ್ರಿಯೆಗಳಾಗಿವೆ. ಅದನ್ನು ಅರ್ಥಮಾಡಿಕೊಳ್ಳ ಬೇಕಾದರೆ ಸಹಾನುಭೂತಿಯಿಂದ ನೋಡುವುದನ್ನು ಕಲಿಯಬೇಕು. ವಾದ ಕೌರ್ಯಕ್ಕೆ ಕಾರಣವಾದರೆ, ಚರ್ಚೆ ಮಾತುಕತೆಯನ್ನು ಹುಟ್ಟು ಹಾಕಿ ಅರಿವು ಮೂಡಿಸುತ್ತದೆ. ಇಂದಿನ ಎಲ್ಲ ಸಾಮಾಜಿಕ ತಲ್ಲಣಗಳಿಗೆ ಉತ್ತರ ವಾದ ಅಲ್ಲ, ಅರ್ಥ ಮಾಡಿಕೊಳ್ಳುವುದು ಮುಖ್ಯ. ಸಿನೆಮಾ, ಕಲೆ ಹುಟ್ಟು ಹಾಕಬೇಕಾದ ಒಳನೋಟ ಇದಾಗಿದೆ ಎಂದರು.

ಕಾರ್ಯಕ್ರಮವನ್ನು ಮೂಡಬಿದ್ರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್ ಶೆಣೈ ಕುರಿತು ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಲಾಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ರಮೇಶ್ ಬೇಗಾರ್ ಅಭಿನಂದನಾ ಭಾಷಣ ಮಾಡಿದರು.

ಪ್ರಭಾವತಿ ಮತ್ತು ಉಡುಪಿ ವಿಶ್ವನಾಥ ಶೆಣೈ, ಉದ್ಯಮಿ ರಘುವೀರ ಶೆಣೈ, ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್.ನಾಯ್ಕಾ ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಂಕರ್ ಸ್ವಾಗತಿಸಿದರು. ಪುರಸ್ಕಾರ ಸಮಿತಿ ಸಂಚಾ ಲಕ ಮರವಂತೆ ನಾಗರಾಜ್ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು.

ನಂತರ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರಿಂದ ಜೀವನ್ ರಾಂ ಸುಳ್ಯ ನಿರ್ದೇಶನದ ಮಕ್ಕಳ ಮಾಯಾಲೋಕ ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News