ಅಮೆರಿಕದ ಗುವಾಂ ದ್ವೀಪಕ್ಕೆ ಅಪ್ಪಳಿಸುವ ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ: ಉತ್ತರ ಕೊರಿಯಾ
ಪಾಂಗ್ಯಾಂಗ್, ಜ.31: ಮಧ್ಯಮ ದೂರ ವ್ಯಾಪ್ತಿಯ ಪ್ರಕ್ಷೇಪಕ ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿದ್ದು ಈ ಕ್ಷಿಪಣಿ ಅಮೆರಿಕದ ವ್ಯಾಪ್ತಿಯಲ್ಲಿರುವ ಗುವಾಂ ದ್ವೀಪಕ್ಕೆ ಅಪ್ಪಳಿಸುವ ಸಾಮರ್ಥ್ಯ ಹೊಂದಿದೆ ಎಂದು ಉತ್ತರ ಕೊರಿಯಾ ಸೋಮವಾರ ದೃಢಪಡಿಸಿದೆ.
ಇತ್ತೀಚೆಗೆ ರಕ್ಷಣಾ ಪಡೆಗೆ ನಿಯೋಜಿಸಲಾಗಿರುವ ಹ್ವಸಾಂಗ್-12 ಕ್ಷಿಪಣಿಗಳ ಒಟ್ಟಾರೆ ನಿಖರತೆಯನ್ನು ದೃಢಪಡಿಸುವುದು ಈ ಪರೀಕ್ಷೆಯ ಉದ್ದೇಶವಾಗಿದೆ ಎಂದು ಕೊರಿಯಾದ ಸೆಂಟ್ರಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಪೂರ್ವದ ತೀರದತ್ತ ಕ್ಷಿಪಣಿಯನ್ನು ಉಡಾವಣೆಗೊಳಿಸಿದ್ದು ಎತ್ತರದ ಕೋನದಿಂದ ಉಡಾಯಿಸಿರುವ ಕಾರಣ ಇತರ ದೇಶಗಳ ವಾಯುಕ್ಷೇತ್ರದ ಮೂಲಕ ಹಾದುಹೋಗಿಲ್ಲ ಎಂದು ವರದಿ ಹೇಳಿದೆ. ಕ್ಷಿಪಣಿ ಸುಮಾರು 800 ಕಿ.ಮೀ ದೂರ ಚಲಿಸಿದ್ದು 2000 ಕಿ.ಮೀಗಳ ಗರಿಷ್ಟ ಎತ್ತರವನ್ನು ತಲುಪಿದೆ ಮತ್ತು ಕೊರಿಯಾ ಪರ್ಯಾಯ ದ್ವೀಪ ಮತ್ತು ಜಪಾನ್ ನ ನಡುವಿನ ಸಮುದ್ರಕ್ಕೆ ಅಪ್ಪಳಿಸಿದೆ ಎಂದು ದಕ್ಷಿಣ ಕೊರಿಯಾ ಮತ್ತು ಜಪಾನ್ ನ ಅಧಿಕಾರಿಗಳು ಹೇಳಿದ್ದಾರೆ.
2017ರ ಬಳಿಕ ಉತ್ತರಕೊರಿಯಾ ಪರೀಕ್ಷೆ ನಡೆಸಿದ ಅತ್ಯಂತ ಶಕ್ತಿಶಾಲಿ ಕ್ಷಿಪಣಿ ಇದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 2017ರಲ್ಲಿ ಉತ್ತರ ಕೊರಿಯಾ ಪರೀಕ್ಷಿಸಿದ ಹ್ವಸಾಂಗ್ -12 ಕ್ಷಿಪಣಿಯು ಉತ್ತರ ಏಶ್ಯಾ, ಪೆಸಿಫಿಕ್ ಪ್ರದೇಶದಲ್ಲಿರುವ ಅಮೆರಿಕದ ಸೇನಾ ನೆಲೆ ಮಾತ್ರವಲ್ಲ, ಅಮೆರಿಕದ ನೆಲದ ಮೇಲಿನ ಗುರಿಯನ್ನೂ ತಲುಪುವ ಸಾಮರ್ಥ್ಯ ಹೊಂದಿತ್ತು. ನೆಲದಿಂದ ನೆಲಕ್ಕೆ ಉಡಾಯಿಸುವ ಹ್ವಸಾಂಗ್-12 ಕ್ಷಿಪಣಿ ಪರಮಾಣು ಸಿಡಿತಲೆಯನ್ನು ಹೊಂದಿದ್ದು ಗರಿಷ್ಟ 4,500 ಕಿ.ಮೀ ದೂರದ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ.
ಇದರೊಂದಿಗೆ ಅಮೆರಿಕಕ್ಕೆ ನೇರ ಬೆದರಿಕೆ ನೀಡುವ ರೀತಿಯ ಪರಮಾಣು ಸಿಡಿತಲೆ ಒಯ್ಯುವ ಸಾಮರ್ಥ್ಯದ ಕ್ಷಿಪಣಿ, ದೀರ್ಘವ್ಯಾಪ್ತಿಯ ಕ್ಷಿಪಣಿ ಪರೀಕ್ಷೆಯ ಕಾರ್ಯಕ್ರಮವನ್ನು ಉತ್ತರಕೊರಿಯಾ ಮುಂದುವರಿಸಿದಂತಾಗಿದೆ. ಅಮೆರಿಕ ವಿಧಿಸಿರುವ ನಿರ್ಬಂಧ ಸಡಿಲಿಕೆಗೆ ಒತ್ತಡ ಹೇರುವುದು ಅಥವಾ ಕಾನೂನುಬದ್ಧ ಪರಮಾಣು ಕಾರ್ಯಕ್ರಮ ನಡೆಸುವ ದೇಶವಾಗಿ ಅಂತರಾಷ್ಟ್ರೀಯ ಮಾನ್ಯತೆ ಪಡೆಯುವ ಉದ್ದೇಶ ಈ ಪರೀಕ್ಷೆಗಳ ಹಿಂದಿದೆ. ಒಂದು ವೇಳೆ ಉತ್ತರ ಕೊರಿಯಾದ ವಿರುದ್ಧ ಮತ್ತಷ್ಟು ನಿರ್ಬಂಧ ಜಾರಿಗೊಂಡರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಾಯಕಾರಿ ಕ್ಷಿಪಣಿ ಪರೀಕ್ಷೆ ನಡೆಸಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.