ನಾಳೆ ಹಲವು ನಿರೀಕ್ಷೆಗಳ ಬಜೆಟ್ ಮಂಡನೆ
ಹೊಸದಿಲ್ಲಿ, ಜ. 31: ಕೇಂದ್ರ ಬಜೆಟ್-2022ಕ್ಕೆ ಕ್ಷಣ ಗಣನೆ ಆರಂಭವಾಗಿರುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಮಂಡಿಸಲಿರುವ ನಾಲ್ಕನೇ ಬಜೆಟ್ ಬಗ್ಗೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಕಳೆದ ವರ್ಷ ನಿರ್ಮಲಾ ಸೀತಾರಾಮನ್ ಅವರು ಮೊದಲ ಬಾರಿಗೆ ಕಾಗದ ರಹಿತ ಬಜೆಟ್ ಮಂಡಿಸಿದ್ದರು. ಅಂದು ಅವರು ಸಾಂಪ್ರದಾಯಿಕ ‘ಬಾಹಿ-ಖಟಾ’ದ ಬಲು ಟ್ಯಾಬ್ಲೆಟ್ನೊಂದಿಗೆ ಬಜೆಟ್ ಮಂಡನೆಗೆ ಆಗಮಿಸಿದ್ದರು. ಈ ಬಾರಿ ಕೂಡ ಅವರು ಕಾಗದ ರಹಿತ ಬಜೆಟ್ ಮಂಡಿಸಲಿದ್ದಾರೆ.
ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಜನವರಿ 31ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾಷಣದೊಂದಿಗೆ ಆರಂಭವಾಗಿದೆ. ಸಂಸತ್ತಿನ ಕೇಂದ್ರ ಬಜೆಟ್ ಅಧಿವೇಶನದ ಮೊದಲ ಭಾಗ ಜನವರಿ 31ರಿಂದ ಫೆಬ್ರವರಿ 11ರ ವರೆಗೆ ನಡೆಯಲಿದೆ. ಬಜೆಟ್ ಅಧಿವೇಶನದ ಎರಡನೇ ಭಾಗ ಮಾರ್ಚ್ 14ರಿಂದ ಎಪ್ರಿಲ್ 8ರ ವರೆಗೆ ನಡೆಯಲಿದೆ.
ಲೋಕಸಭೆ ಹಾಗೂ ರಾಜ್ಯ ಸಭೆಯ ಸಮಯ ಏರುಪೇರಾಗಿರುವ ಹೊರತಾಗಿಯೂ ಕೇಂದ್ರ ಬಜೆಟ್ 2022 ಫೆಬ್ರವರಿ 1ರಂದು ಬೆಳಗ್ಗೆ 11 ಗಂಟೆಗೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಈ ಬಜೆಟ್ ಮಂಡನೆ 90 ನಿಮಿಷದಿಂದ 120 ನಿಮಿಷಗಳ ಕಾಲ ತೆಗೆದುಕೊಳ್ಳಲಿದೆ. ಆದರೆ, 2020ರಲ್ಲಿ ನಿರ್ಮಲಾ ಸೀತಾರಾಮನ್ ಅವರು ಭಾರತದ ಇತಿಹಾಸದಲ್ಲಿ ಅತೀ ದೀರ್ಘ ಸುಮಾರು 160 ನಿಮಿಷಗಳ ಬಜೆಟ್ ಭಾಷಣ ಮಾಡಿದ್ದರು.
ಬಜೆಟ್ ಮಂಡನೆಯು ಲೋಕಸಭಾ ಟಿ.ವಿ.ಯಲ್ಲಿ ನೇರ ಪ್ರಸಾರವಾಗಲಿದೆ. ಇತರ ಹಲವು ಸುದ್ದಿ ವಾಹಿನಿಗಳು ಹಾಗೂ ಯುಟ್ಯೂಬ್ ಹಾಗೂ ಟ್ವಿಟ್ಟರ್ ನಂತಹ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಜನರು ಬಜೆಟ್ ಮಂಡನೆಯನ್ನು ವೀಕ್ಷಿಸಬಹುದು. ಬಜೆಟ್ ದಾಖಲೆಗಳು ಸಂಸದರಿಗೆ ಹಾಗೂ ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗಲು ನಿರ್ಮಲಾ ಸೀತಾರಾಮನ್ ಅವರು ಕಳೆದ ವರ್ಷ ಬಜೆಟ್ ಮೊಬೈಲ್ ಆ್ಯಪ್ ಅನ್ನು ಲೋಕಾರ್ಪಣೆಗೊಳಿಸಿದ್ದರು.