ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮಸಲತ್ತು

Update: 2022-02-01 04:12 GMT

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಭಾರತದ ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹುನ್ನಾರಗಳನ್ನು ನಡೆಸುತ್ತಲೇ ಬಂದಿದೆ. ರಾಜ್ಯಗಳ ಸ್ವಾಯತ್ತತೆಗೆ ನಿರಂತರವಾಗಿ ಏಟು ಕೊಡುತ್ತಲೇ ಬಂದಿದೆ. ಇದೀಗ ಭಾರತೀಯ ಆಡಳಿತ ಸೇವೆಯ(ಐಎಎಸ್) ಅಧಿಕಾರಿಗಳನ್ನು ನಿಯೋಜನೆ ಮಾಡುವ ಕುರಿತು ರಾಜ್ಯ ಸರಕಾರಗಳೊಂದಿಗೆ ಕಿತ್ತಾಟ ನಡೆಸಿದೆ. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ರಾಜ್ಯಗಳ ಒಪ್ಪಿಗೆ ಪಡೆದು ವರ್ಗಾವಣೆ ಮಾಡುವ ಪದ್ಧತಿಯನ್ನು ಈವರೆಗೆ ಪಾಲಿಸಿಕೊಂಡು ಬರಲಾಗಿತ್ತು. ಆದರೆ ಮೋದಿ ಸರಕಾರ ಈಗ ರಾಜ್ಯಗಳ ಅನುಮತಿ ಪಡೆಯದೆ ಅಧಿಕಾರಿಗಳನ್ನು ನಿಯೋಜನೆ ಮಾಡುವ ಅಧಿಕಾರವನ್ನು ತನ್ನ ಬಳಿ ಇಟ್ಟುಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಐಎಎಸ್ (ಕೇಡರ್)ನಿಯಮಗಳು 1954ಕ್ಕೆ ತಿದ್ದುಪಡಿ ತರಲು ಸುತ್ತೋಲೆ ಹೊರಡಿಸಲಾಗಿದೆ. ರಾಜ್ಯಗಳ ವ್ಯಾಪ್ತಿಯಲ್ಲಿ ಒಕ್ಕೂಟ ಸರಕಾರದ ಹಸ್ತಕ್ಷೇಪಕ್ಕೆ ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸರಕಾರಗಳು ಸೇರಿದಂತೆ ಆರು ರಾಜ್ಯ ಸರಕಾರಗಳು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿವೆ.

 ವಾಸ್ತವವಾಗಿ ಅಖಿಲ ಭಾರತ ಮಟ್ಟದ ಸೇವಾ ವ್ಯವಸ್ಥೆ ಸಾಂವಿಧಾನಿಕವಾಗಿ ಯಾರ ಅಧೀನಕ್ಕೂ ಒಳಪಟ್ಟಿಲ್ಲ. ಅದು ಒಕ್ಕೂಟ ಸರಕಾರದ ಸಂಪೂರ್ಣ ನಿಯಂತ್ರಣದಲ್ಲೂ ಇಲ್ಲ, ರಾಜ್ಯ ಸರಕಾರಗಳ ಹಿಡಿತದಲ್ಲೂ ಇಲ್ಲ. ಒಟ್ಟಾರೆ ಒಕ್ಕೂಟ (ಫೆಡರಲ್) ವ್ಯವಸ್ಥೆಯ ಅಧೀನಕ್ಕೊಳಪಟ್ಟಿದೆ. ಸಂವಿಧಾನಾತ್ಮಕವಾಗಿ ಅತ್ಯಂತ ಸೂಕ್ಷ್ಮವಾದ ವಿಷಯಗಳ ಬಗ್ಗೆ ಉದ್ದೇಶ ಪೂರ್ವಕವಾಗಿ ಪದೇ ಪದೇ ಅಜ್ಞಾನ ಪ್ರದರ್ಶಿಸುತ್ತಾ ಬಂದ ಬಿಜೆಪಿ ಸರಕಾರ ರಾಜ್ಯಗಳ ಮೇಲೆ ಯಜಮಾನಿಕೆ ಮಾಡಲು ಹೊರಟಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಬಿಜೆಪಿ ಹೈಕಮಾಂಡ್ ತನ್ನ ಸಂಘಟನೆಯ ರಾಜ್ಯ ಘಟಕಗಳ ಮೇಲೆ ತನ್ನ ತೀರ್ಮಾನಗಳನ್ನು ಹೇರಬಹುದು. ಆದರೆ ಒಕ್ಕೂಟ ವ್ಯವಸ್ಥೆಯಲ್ಲಿ ದಿಲ್ಲಿಯ ಸರಕಾರ ರಾಜ್ಯಗಳ ಹೈ ಕಮಾಂಡ್ ಅಲ್ಲ.
ಕೊರೋನ ನಿರ್ವಹಣೆಯ ಸಂದರ್ಭದಲ್ಲೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಬದಿಗೊತ್ತಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೇರವಾಗಿ ಜಿಲ್ಲಾಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದರು. ಬಿಜೆಪಿಯೇತರ ಸರಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಿ ಅಭದ್ರಗೊಳಿಸಲು ಎಲ್ಲ ಮಸಲತ್ತುಗಳನ್ನು ನಡೆಸುತ್ತಾ ಬಂದರು. ಈಗ ರಾಜ್ಯಗಳಿಗೆ ಪತ್ರ ಬರೆದು ಐಎಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಲು ರಾಜ್ಯ ಸರಕಾರಗಳ ಒಪ್ಪಿಗೆ ಬೇಕಾಗಿಲ್ಲ ಎಂದು ತಿಳಿಸಲಾಗಿದೆ.
 ಈ ವರೆಗೆ ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಈ ಮೂರು ರೀತಿಯ ನೌಕರಿಗೆ ಒಕ್ಕೂಟ ಸರಕಾರ ನೇಮಕ ಮಾಡಿಕೊಳ್ಳುತ್ತಿತ್ತು. ಆದರೆ ನೇಮಕಗೊಂಡ ಅಧಿಕಾರಿಗಳ ಕಾರ್ಯಕ್ಷೇತ್ರ ರಾಜ್ಯಗಳಾಗಿದ್ದಲ್ಲಿ, ಅವರಿಗೆ ಹುದ್ದೆಗಳನ್ನು ನೀಡುವ ಅಧಿಕಾರ ಆಯಾ ರಾಜ್ಯ ಸರಕಾರಗಳ ಬಳಿ ಇತ್ತು. ಒಕ್ಕೂಟ ಸರಕಾರ ತನ್ನ ಕೆಲಸಕ್ಕೆ ಬೇಕಾದ ಅಧಿಕಾರಿಗಳನ್ನು ರಾಜ್ಯಗಳಿಂದ ನಿಯೋಜನೆ ಮೇಲೆ ಕರೆಸಿ ಕೊಳ್ಳುತ್ತಾ ಬಂದಿದೆ. ಇದಕ್ಕೆ ರಾಜ್ಯ ಸರಕಾರಗಳ ಒಪ್ಪಿಗೆ ಮತ್ತು ಸಂಬಂಧ ಪಟ್ಟ ನೌಕರರ ಸಮ್ಮತಿ ಅಗತ್ಯವಿತ್ತು. ಇನ್ನು ಮುಂದೆ ಇದು ಬದಲಾಗಿ ರಾಜನಿಂದ ಕರೆ ಬಂದಾಗ ಸಾಮಂತ ರಾಜ ತನ್ನ ರಾಜ್ಯದ ಯೋಧರನ್ನು ಕಳುಹಿಸುವ ಹಳೆಯ ಪದ್ಧತಿಯಂತೆ ದಿಲ್ಲಿಯ ದೊರೆ ಹೇಳಿದ ತಕ್ಷಣ ರಾಜ್ಯಗಳು ಬಾಯಿ ಮುಚ್ಚಿ ಐಎಎಸ್ ಸಿಬ್ಬಂದಿಯನ್ನು ಕಳಿಸಿಕೊಡಬೇಕಾಗುತ್ತದೆ.
ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ನಿಯೋಜನೆ ಮಾಡುವ ಅಧಿಕಾರವನ್ನು ಮತ್ತು ವರ್ಗಾವಣೆ ಮಾಡುವ ಅಧಿಕಾರವನ್ನು ತನ್ನ ಬಳಿ ಇಟ್ಟುಕೊಳ್ಳಲು ಮುಂದಾಗಿರುವ ಬಿಜೆಪಿ ಸರಕಾರದ ಉದ್ದೇಶ ಪ್ರಾಮಾಣಿಕವಾದುದಲ್ಲ. ಪ್ರತಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಆಡಳಿತದ ಮೇಲೆ ನಿಯಂತ್ರಣ ಸಾಧಿಸುವುದು ಇದರ ಒಳಗುರಿಯಾಗಿದೆ. ಈ ಗುರಿ ಸಾಧನೆಗಾಗಿ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲ ಗೊಳಿಸಲು ಮೋದಿ ನೇತೃತ್ವದ ಬಿಜೆಪಿ ಸರಕಾರ ಹೊರಟಿದೆ.
ಅಖಿಲ ಭಾರತ ಮಟ್ಟದ ನೌಕರಿ ವ್ಯವಸ್ಥೆ ಎಂಬುದು ಆಡಳಿತದ ಅನುಕೂಲಕ್ಕಾಗಿ ಮಾಡಿಕೊಂಡ ಏರ್ಪಾಟು. ಇದು ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳ ನಡುವೆ ಹಂಚಿಕೊಳ್ಳಲು ಮಾಡಿಕೊಂಡ ಅಲಿಖಿತ ಒಪ್ಪಂದವಿದ್ದಂತೆ. ನಮ್ಮ ಸಂವಿಧಾನದ ನಿರ್ಮಾಪಕರು ಅತ್ಯಂತ ನಾಜೂಕಿನಿಂದ ದೂರದೃಷ್ಟಿಯಿಂದ ಈ ಸೂತ್ರವನ್ನು ರೂಪಿಸಿದ್ದಾರೆ. ಇಡೀ ಭಾರತದ ಒಕ್ಕೂಟ ವ್ಯವಸ್ಥೆಯ ಹಿತವನ್ನು ರಕ್ಷಿಸಲು ಆಡಳಿತಾತ್ಮಕ ಸಮತೋಲನವನ್ನು ಕಾಪಾಡಲು ಈ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಅದಕ್ಕೀಗ ಧಕ್ಕೆ ಬಂದಿದೆ.
ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿಯನ್ನು ಒಕ್ಕೂಟ ಸರಕಾರದ ಸೇವೆಗೆ ಬಿಟ್ಟು ಕೊಡಲು ಆ ರಾಜ್ಯದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿಯವರು ಒಪ್ಪಿಗೆ ನೀಡಲಿಲ್ಲ ಎಂಬಂತಹ ಕೆಲ ಕಾರಣಗಳಿಗಾಗಿ ರಾಜ್ಯಗಳ ಅಧಿಕಾರವನ್ನು ಕಿತ್ತುಕೊಳ್ಳಲು ಮೋದಿ ಸರಕಾರ ಮುಂದಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
ಸ್ವಾತಂತ್ರಾ ನಂತರದ ಎಪ್ಪತ್ತು ವರ್ಷಗಳ ಕಾಲಾವಧಿಯಲ್ಲಿ ರೂಪುಗೊಂಡ ಈ ಆಡಳಿತ ಸೇವಾ ವ್ಯವಸ್ಥೆ ಒಕ್ಕೂಟ ವ್ಯವಸ್ಥೆಗೆ ಅತ್ಯಂತ ಸೂಕ್ತವಾದ ವ್ಯವಸ್ಥೆಯಾಗಿದೆ. ಇದರಲ್ಲಿ ಮೋದಿ ಸರಕಾರ ತನ್ನ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ತರಲು ನಿಯಮಾವಳಿಗೆ ತಿದ್ದುಪಡಿ ಮಾಡಲು ಮುಂದಾಗಿರುವುದು ಪ್ರಜಾಪ್ರಭುತ್ವ ವಿರೋಧಿಯಾದ ಸರ್ವಾಧಿಕಾರಿ ಧೋರಣೆಯಲ್ಲದೆ ಬೇರೇನೂ ಅಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News