ಫೆಬ್ರವರಿ ಅಂತ್ಯದೊಳಗೆ ಮನೆ ಬಾಗಿಲಿಗೆ ಹಕ್ಕುಪತ್ರ: ಸಚಿವ ಸೋಮಶೇಖರ್

Update: 2022-02-02 08:06 GMT

ಬೆಂಗಳೂರು, ಫೆ. 2 ಸರಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡವರಿಗೆ '94ಸಿಸಿ'ಯಡಿ ಹಕ್ಕು ಪತ್ರ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಫೆಬ್ರವರಿ ಅಂತ್ಯದ ವೇಳೆಗೆ ಎಲ್ಲಾ ಫಲಾನುಭಾವಿಗಳ ಮನೆ ಬಾಗಿಲಿಗೆ ಹಕ್ಕು ಪತ್ರ ತಲುಪಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಬುಧವಾರ ಯಶವಂತಪುರ ವಿಧಾನಸಭಾ ಕ್ಷೇತ್ರದ ರಾಮೋಹಳ್ಳಿ ಗ್ರಾಮ ಪಂಚಾಯತ್ ನಲ್ಲಿ 94ಸಿಸಿಯಡಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿ ಮಾತನಾಡಿದ ಸಚಿವರು, ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಹಕ್ಕು ಪತ್ರ ತಲುಪಿಸಲಾಗುವುದು ಎಂದರು.

ಮನೆ ಇಲ್ಲದವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಅರ್ಜಿ ಆಹ್ವಾನಿಸಲಾಗಿದೆ. 14 ಸಾವಿರ ಮನೆಗಳ‌ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಜಿಪಂ, ತಾಪಂನಲ್ಲಿ 7 ಸಾವಿರ ಮನೆಗಳು ನಿರ್ಮಾಣವಾಗಲಿದೆ. ಈ ಭಾಗದಲ್ಲಿ 400 ಜನ ಅರ್ಜಿ ಸಲ್ಲಿಸಿದ್ದು ಪ್ರತಿಯೊಬ್ಬರಿಗೂ ಮನೆ ಸಿಗಲಿದೆ ಎಂದರು.

ಹಕ್ಕು ಪತ್ರದ ಜೊತೆಗೆ ಮನೆ ಬಾಗಿಲಿಗೆ ಪಿಂಚಣಿ ತಲುಪಿಸುವ ಕೆಲಸ ಕೂಡ ಮಾಡಲಾಗುತ್ತಿದೆ. ವಿಕಲಚೇತನರಿಗೆ ನಿವೇಶನ ಹಂಚಿಕೆ ಮಾಡಲು ಚಲಘಟ್ಟ ಗ್ರಾಮದಲ್ಲಿ 5 ಎಕರೆ ಜಾಗ ನೀಡಲಾಗಿದೆ. ಈ ಭಾಗದಲ್ಲಿ ಒಂದು ಎಕರೆ ಜಾಗ ಸಿಕ್ಕರೆ ಆಸ್ಪತ್ರೆ ನಿರ್ಮಾಣಕ್ಕೂ ಚಾಲನೆ ನೀಡಬಹುದು. ಸರ್ಕಾರಿ ಜಾಗ ಗುರುತಿಸುವಂತೆ ಸಚಿವರು ತಿಳಿಸಿದರು.

ಇದೇ ವೇಳೆ ರಾಮೋಹಳ್ಳಿ ರಂಗಮಂದಿರ ಬಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಸಚಿವ ಸೋಮಶೇಖರ್ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಪಂಚಾಯತ್ ವ್ಯಾಪ್ತಿಯಲ್ಲಿ ವಿದ್ಯುದ್ದೀಪ ಅಳವಡಿಸುವ ವಾಹನ ಹಾಗೂ ಕಸದ ವಾಹನಗಳಿಗೆ ಚಾಲನೆ ನೀಡಿದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹನುಮಂತಪ್ಪ, ಗ್ರಾಪಂ ಅಧ್ಯಕ್ಷರಾದ ವೆಂಕಟಲಕ್ಷ್ಮಮ್ಮ, ತಾಪಂ ಇಒ ನಾಗವೇಣಿ, ಡಿಆರ್ ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News