×
Ad

ಉಡುಪಿ ಕಾಲೇಜಿನಲ್ಲಿ ಸ್ಕಾರ್ಫ್ ವಿವಾದ; ಮಾನವ ಹಕ್ಕುಗಳ ಆಯೋಗದಿಂದ ನೋಟೀಸ್‌

Update: 2022-02-02 20:17 IST

ಉಡುಪಿ, ಫೆ.2: ಉಡುಪಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸ್ಕಾರ್ಫ್ ವಿವಾದಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಜಾರಿಗೊಳಿಸಿದ ನೋಟೀಸ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ, ಕುಂದಾಪುರ ಉಪವಿಭಾಗದ ಆಯುಕ್ತರು ಹಾಗೂ ಉಡುಪಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದಾರೆ.

ಸ್ಕಾರ್ಫ್ ವಿವಾದಕ್ಕೆ ಸಂಬಂಧಿಸಿ ಎರಡು ಮೂರು ದಿನಗಳ ಹಿಂದೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ನೋಟೀಸ್ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ನಾಲ್ಕು ವಾರದೊಳಗೆ ವರದಿ ಸಲ್ಲಿಸುವಂತೆ ನೋಟೀಸ್‌ನಲ್ಲಿ ಸೂಚಿಸಲಾಗಿದೆ. ಈ ಸಂಬಂಧ ವರದಿ ನೀಡುವಂತೆ ಎಸಿ ರಾಜು ಹಾಗೂ ಡಿಡಿಪಿಯು ಮಾರುತಿ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಈ ಸಮಿತಿ ನೀಡುವ ವರದಿಯನ್ನು ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ತಿಳಿಸಿದರು.

ಜಿಲ್ಲಾಧಿಕಾರಿ ಸೂಚನೆಯಂತೆ ಇಂದು ಡಿಡಿಪಿಯು ನೇತೃತ್ವದ ಮೂವರು ಸದಸ್ಯರ ಸಮಿತಿಯು ಕಾಲೇಜಿಗೆ ಭೇಟಿ ನೀಡಿತು. ಈ ಸಂದರ್ಭದಲ್ಲಿ ಕಾಲೇಜಿ ನಲ್ಲಿ ಹಾಜರಿದ್ದ ಉಪನ್ಯಾಸಕರು, ವಿದ್ಯಾರ್ಥಿಗಳ ಅಭಿಪ್ರಾಯ ಪಡೆದು ಕೊಂಡಿತು. ಯಾವುದೇ ವಿಶೇಷ ಸಭೆ ನಡೆಸದೆ ಅಲ್ಲಿ ಹಾಜರಿದ್ದವರಿಂದ ಮಾತ್ರ ಅಭಿಪ್ರಾಯವನ್ನು ಸಂಗ್ರಹಿಸಿತು. ಸಮಿತಿಯು ಈ ಸಂಬಂಧ ತಯಾರಿಸಿದ ವರದಿಯನ್ನು ಡಿಡಿಪಿಯು ಮಾರುತಿ ಅವರಿಗೆ ಸಲ್ಲಿಸಿದೆ. ಅವರು ಈ ವರದಿ ಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಿದ್ದಾರೆ. ಎಸಿ ನೇತೃತ್ವದ ಸಮಿತಿ ಪ್ರತ್ಯೇಕವಾಗಿ ಕಾಲೇಜಿಗೆ ಭೇಟಿ ನೀಡಲಿದೆ ಎಂದು ಖಚಿತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News