ಸುಬ್ರಹ್ಮಣ್ಯದಲ್ಲಿ ನರೇಗಾ ದಿವಸ್ ಆಚರಣೆ
Update: 2022-02-02 21:55 IST
ಮಂಗಳೂರು, ಫೆ. 2:ದ.ಕ.ಜಿಲ್ಲೆಯಲ್ಲಿ ನರೇಗಾ ಯೋಜನೆಯ ಮೂಲಕ ಉತ್ತಮ ಕೆಲಸಗಳನ್ನು ಮಾಡಲಾಗಿದೆ. ಜಲಸಂರಕ್ಷಣೆ, ಮೂಲ ಸೌಕರ್ಯ ಸಹಿತ ಅಭಿವೃದ್ಧಿಗೆ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಜಿಪಂ ಸಿಇಒ ಡಾ.ಕುಮಾರ್ ತಿಳಿಸಿದರು.
ಕರ್ನಾಟಕ ರಾಜ್ಯ ಮಹಾತ್ಮ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ)ದ ದ.ಕ ಜಿಲ್ಲಾ ಘಟಕದ ವತಿಯಿಂದ ಕುಕ್ಕೆ ಶ್ರಿ ಸುಬ್ರಮಣ್ಯದ ಕುಮಾರಧಾರ ಸ್ನಾನ ಘಟ್ಟದ ಬಳಿ ಬುಧವಾರ ನಡೆದ ನರೇಗಾ ದಿವಸ್ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ನರೇಗಾ ಯೋಜನೆಯಡಿ 100 ದಿನದ ಕೆಲಸ ಮಾಡಿದವರನ್ನು ಗೌರವಿಸಲಾಯಿತು. ಸ್ಪಚ್ಛ ಗ್ರಾಮ ಮಾಡುವ ಸಲುವಾಗಿ ಕಸದ ಬುಟ್ಟಿಯನ್ನು ವಿತರಿಸಲಾಯಿತು.
ಕುಕ್ಕೆ ಶ್ರೀಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ಪುತ್ತೂರು ತಾಲೂಕು ನರೇಗಾ ಸಹಾಯಕ ನಿರ್ದೇಶಕಿ ಶೈಲಜಾ ಭಟ್ ಮತ್ತಿತರರು ಉಪಸ್ಥಿತರಿದ್ದರು.