×
Ad

ಮಂಗಳೂರು; ಲೀಸ್‌ಗೆ ಮನೆ ಕೊಡಿಸುವುದಾಗಿ ಹೇಳಿ ವಂಚನೆ: ಇಬ್ಬರು ಆರೋಪಿಗಳ ಬಂಧನ

Update: 2022-02-03 17:33 IST
ಇಮ್ತಿಯಾಝ್ - ದೀಪಕ್

ಮಂಗಳೂರು, ಫೆ.3: ಬೆಳ್ತಂಗಡಿ ಮೂಲದ ಮಹಿಳೆಯೊಬ್ಬರಿಗೆ ನಗರದಲ್ಲಿ ಲೀಸ್‌ಗೆ ಮನೆ ಕೊಡಿಸುವುದಾಗಿ ಹೇಳಿ ಐದು ಲಕ್ಷ ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಉತ್ತರ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ವಾಮಂಜೂರು ನಿವಾಸಿ ಪ್ರದೀಪ್ ಯಾನೆ ದೀಪಕ್ ಸಾವಿಯೋ ಅಂದ್ರಾದೆ (31), ಫಳ್ನೀರ್ ನಿವಾಸಿ ಇಮ್ತಿಯಾಝ್ (43) ಎಂದು ಗುರುತಿಸಲಾಗಿದೆ.

ಬೆಳ್ತಂಗಡಿ ನಿವಾಸಿ ಹಾಗೂ ನಗರದ ಕರಂಗಲ್ಪಾಡಿಯ ಮೆಡಿಕಲ್‌ನಲ್ಲಿ ಉದ್ಯೋಗಿಯಾಗಿರುವ ಪ್ರಿಯಾ ಕೆ. ಆರ್. ಎಂಬವರಿಗೆ 2020ರ ಜೂನ್‌ ತಿಂಗಳಿನಲ್ಲಿ ಲೀಸಂಗೆ ಮನೆ ಕೊಡಿಸುವುದಾಗಿ ಹೇಳಿ ಕೆ.ಎಸ್. ರಾವ್ ರೋಡ್‌ನ ಅಪಾರ್ಟ್‌ಮೆಂಟ್‌ನಲ್ಲಿ ಖಾಲಿ ಫ್ಲ್ಯಾಟ್ ತೋರಿಸಿ 2 ವರ್ಷದ ಅವಧಿಗೆ ಲೀಸ್‌ಗೆಂದು ಹೇಳಿ ಐದು ಲಕ್ಷ ರೂ.ಗಳನ್ನು ಈ ಆರೋಪಿಗಳು ಪಡೆದಿದ್ದರು.

ಬಳಿಕ ಪ್ರಿಯಾ ಅವರು ಮನೆಯವರ ಜತೆ ಫ್ಲ್ಯಾಟ್ ನಲ್ಲಿ ವಾಸವಿದ್ದ ವೇಳೆ, 2021ರ ಫೆಬ್ರವರಿಯಲ್ಲಿ ಮನೆಯ ಅಸಲಿ ಮಾಲಕ ಮುಹಮ್ಮದ್ ಅಲಿ ಎಂಬವರು ತಮ್ಮ ಫ್ಲ್ಯಾಟ್ ಗೆ ಬಂದಾಗ ಪ್ರಿಯಾಗೆ ತಾನು ಮೋಸ ಹೋಗಿರುವುದು ತಿಳಿದು ಬಂದಿದೆ. ಈ ಗ್ಗೆ ದೂರು ದಾಖಲಾಗಿದ್ದು, ಆರೋಪಿಗಳನ್ನು ಫೆ. 1ರಂದು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.

ಈ ಆರೋಪಿಗಳ ವಿರುದ್ಧ ಮಂಗಳೂರ ಪೂರ್ವ ಪೊಲೀಸ್ ಠಾಣೆಯಲ್ಲಿಯೂ ವಂಚನೆ ಪ್ರಕರಣ ದಾಖಲಾಗಿದ್ದು, ಒಟ್ಟು ಮೂರು ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಇದಲ್ಲದೆ ಇತರ ಕಡೆಗಳಲ್ಲಿಯೂ ಈ ಆರೋಪಿಗಳು ಮೋಸ, ವಂಚನೆ ಮಾಡಿರುವ ಮಾಹಿತಿ ಲಭ್ಯವಾಗಿದೆ ಎಂದು ಕಮಿಷನರ್ ಹೇಳಿದ್ದಾರೆ.

ಮನೆ ಬಾಡಿಗೆ, ಲೀಸ್ ಪಡೆಯುವ ಸಂದರ್ಭ ಇರಲಿ ಎಚ್ಚರ

ಮನೆಯನ್ನು ಲೀಸ್ ಅಥವಾ ಬಾಡಿಗೆ ಪಡೆಯುವ ಸಂದರ್ಭ ಅಥವಾ ಆನ್‌ ಲೈನ್ ವಸ್ತುಗಳ ಖರೀದಿ ಸಂದರ್ಭ ನಕಲಿ ಗುರುತು, ಪರಿಚಯ ನೀಡಿ ವಂಚಿಸುವ ಜಾಲದ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News