ಜೀವಾವಧಿ ಶಿಕ್ಷೆಗೊಳಗಾದವರ ಅವಧಿಪೂರ್ವ ಬಿಡುಗಡೆ: ತನ್ನ ನೀತಿಯ ಮರುಪರಿಶೀಲನೆಗೆ ಉ.ಪ್ರದೇಶಕ್ಕೆ ಸುಪ್ರೀಂ ನಿರ್ದೇಶ

Update: 2022-02-03 17:23 GMT

ಹೊಸದಿಲ್ಲಿ,ಫೆ.3: ಜೀವಾವಧಿ ಶಿಕ್ಷೆಗೊಳಗಾದ ಆರೋಪಿಗಳನ್ನು ಅವಧಿಪೂರ್ವ ಬಿಡುಗಡೆಗೊಳಿಸಲು ತನ್ನ ನೀತಿಯನ್ನು ಪುನರ್‌ಪರಿಶೀಲಿಸುವಂತೆ ಉತ್ತರ ಪ್ರದೇಶ ಸರಕಾರಕ್ಕೆ ನಿರ್ದೇಶ ನೀಡಿರುವ ಸರ್ವೋಚ್ಚ ನ್ಯಾಯಾಲಯವು,ಇಂತಹ ಬಿಡುಗಡೆಗಾಗಿ ಕನಿಷ್ಠ ವಯಸ್ಸನ್ನು 60 ವರ್ಷಗಳಿಗೆ ನಿಗದಿಗೊಳಿಸಿರುವುದು ಸಮರ್ಥನೀಯವಾಗಿ ಕಂಡು ಬರುತ್ತಿಲ್ಲ ಎಂದು ಹೇಳಿದೆ.

ಜೈಲಿನಿಂದ ತನ್ನ ಅವಧಿಪೂರ್ವ ಬಿಡುಗಡೆಗೆ ನಿರ್ದೇಶವನ್ನು ಕೋರಿ ಶಿಕ್ಷಿತ ಅಪರಾಧಿಯೋರ್ವ ಸಲ್ಲಿಸಿದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಎಂ.ಎಂ. ಸುಂದರೇಶ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಉ.ಪ್ರದೇಶ ಸರಕಾರದ ನೀತಿಯಂತೆ ಯಾವುದೇ ಕಡಿತವಿಲ್ಲದೆ 20 ವರ್ಷಗಳ ಜೈಲುವಾಸ ಮತ್ತು ಕಡಿತದೊಂದಿಗೆ 25 ವರ್ಷಗಳ ಜೈಲುವಾಸವನ್ನು ಅನುಭವಿಸಿರುವ ಮತ್ತು ಕನಿಷ್ಠ 60 ವರ್ಷ ವಯಸ್ಸು ಪೂರ್ಣಗೊಂಡಿರುವ ಎಲ್ಲ ಕೈದಿಗಳು ಅವಧಿಪೂರ್ವ ಬಿಡುಗಡೆಗೆ ಪರಿಗಣಿಸಲು ಅರ್ಹರಾಗಿದ್ದಾರೆ. ‘ಕನಿಷ್ಠ ವಯಸ್ಸನ್ನು 60 ವರ್ಷಗಳಿಗೆ ನಿಗದಿಗೊಳಿಸಿರುವ ನಿಬಂಧನೆಯ ಸಿಂಧುತ್ವದ ಬಗ್ಗೆ ನಾವು ಸಂದೇಹ ವ್ಯಕ್ತಪಡಿಸಲು ಬಯಸುತ್ತೇವೆ. ಈ ನಿಬಂಧನೆಯಿಂದಾಗಿ 20 ವರ್ಷ ಪ್ರಾಯದ ಯುವ ಅಪರಾಧಿಯು ತನ್ನ ಪ್ರಕರಣವು ಅವಧಿಪೂರ್ವ ಬಿಡುಗಡೆಗೆ ಪರಿಗಣಿಸಲ್ಪಡಲು 40 ವರ್ಷಗಳ ಕಾಲ ಜೈಲಿನಲ್ಲಿರಬೇಕಾಗುತ್ತದೆ. ಈ ಅಂಶವನ್ನು ಪರೀಕ್ಷಿಸುವ ಅಗತ್ಯ ನಮಗಿಲ್ಲವಾದರೂ ನಾವು ನೀಡಿರುವ ಉದಾಹರಣೆಯ ಹಿನ್ನೆಲೆಯಲ್ಲಿ ಸಮರ್ಥನೀಯವಲ್ಲ ಎಂದು ಕಂಡು ಬರುತ್ತಿರುವ ತನ್ನ ನೀತಿಯ ಈ ಭಾಗವನ್ನು ಪುನರ್‌ಪರಿಶೀಲಿಸುವಂತೆ ನಾವು ರಾಜ್ಯ ಸರಕಾರಕ್ಕೆ ಕರೆ ನೀಡುತ್ತಿದ್ದೇವೆ. ಈ ಬಗ್ಗೆ ಅಗತ್ಯ ಕ್ರಮವನ್ನು ನಾಲ್ಕು ತಿಂಗಳೊಳಗೆ ತೆಗೆದುಕೊಳ್ಳಬೇಕು ’ ಎಂದು ಹೇಳಿದ ಪೀಠವು, ಅರ್ಜಿದಾರನ ಅರ್ಜಿಯನ್ನು ಮೂರು ತಿಂಗಳಲ್ಲಿ ಪರಿಗಣಿಸುವಂತೆ ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶ ನೀಡಿತು.

ಸರಕಾರದ ಶಿಕ್ಷೆ ಕಡಿತ ನೀತಿಯನ್ನು ಈ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ ಎಂದು ಉ.ಪ್ರದೇಶ ಪರ ವಕೀಲರು ಮಾಹಿತಿ ನೀಡಿದ್ದಾರೆ,ಆದರೆ ರಾಜ್ಯ ಸರಕಾರವು ತನ್ನ ನೀತಿಯನ್ನು ಮರುಪರಿಶೀಲಿಸಲು ಅದು ಅಡ್ಡಿಯಾಗುವುದಿಲ್ಲ ಎಂದೂ ಪೀಠವು ತಿಳಿಸಿತು.

ಅರ್ಜಿದಾರನು ಯಾವುದೇ ಕಡಿತವಿಲ್ಲದೆ 22 ವರ್ಷಗಳನ್ನು ಮತ್ತು ಕಡಿತ ಸಹಿತ 28 ವರ್ಷಗಳನ್ನು ಈಗಾಗಲೇ ಜೈಲಿನಲ್ಲಿ ಕಳೆದಿರುವ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಆತನಿಗೆ ಜಾಮೀನು ಮಂಜೂರು ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News