ಸಮವಸ್ತ್ರದ ಹೆಸರಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚಿಸ ಹೊರಟವರು!

Update: 2022-02-04 04:07 GMT

ಕೊನೆಗೂ ರಾಜ್ಯದ ಸರಕಾರಿ ಶಾಲೆ, ಕಾಲೇಜುಗಳು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡುತ್ತಿವೆ. ಅದಕ್ಕಾಗಿ ಈ ರಾಜ್ಯದ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಬೇಕಾಗಿದೆ. ಸರಕಾರಿ ಶಾಲೆಗಳು, ಕಾಲೇಜುಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಸ್ಥಿತಿಗೆ ಬಂದಿದೆ ಎಂದು ರಾಜಕಾರಣಿಗಳು ಗೋಳಾಡುತ್ತಿರುವ ಈ ದಿನಗಳಲ್ಲೇ, ಉಡುಪಿಯ ಪದವಿಪೂರ್ವ ಕಾಲೇಜುಗಳು ಈಗಾಗಲೇ ತಮ್ಮಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಿ ಗೇಟು ಮುಚ್ಚುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಮತ್ತು ಇದರ ನೇತೃತ್ವವನ್ನು ಕಾಲೇಜಿನ ಪ್ರಾಂಶುಪಾಲರೇ ವಹಿಸಿದ್ದಾರೆ. ಬಹುಶಃ ಸರಕಾರಿ ಶಾಲೆಗಳಿಗೆ ಆಗಮಿಸುವ ವಿದ್ಯಾರ್ಥಿಗಳನ್ನು ಬೇರೆ ಬೇರೆ ನೆಪದಲ್ಲಿ ಹೊರ ಹಾಕಿ, ಅಳಿದುಳಿದ ಸರಕಾರಿ ಶಾಲೆಗಳನ್ನು ಸಂಪೂರ್ಣವಾಗಿ ಇಲ್ಲವಾಗಿಸುವ ಗುತ್ತಿಗೆಯನ್ನು ಆಯಾ ಶಾಲೆಗಳ ಪ್ರಾಂಶುಪಾಲರಿಗೆ ಸರಕಾರ ವಹಿಸಿದೆಯೆ ಎಂಬ ಅನುಮಾನ ಜನರನ್ನು ಕಾಡುತ್ತಿದೆ. ಸರಕಾರಿ ಶಾಲೆಗಳು ಸ್ಥಾಪನೆಯಾಗಿರುವುದೇ ಈ ದೇಶದ ದುರ್ಬಲ ಸಮುದಾಯಗಳಿಗೂ ಶಿಕ್ಷಣ ಸಿಗಬೇಕು ಎನ್ನುವ ಕಾರಣಕ್ಕೆ. ಬಡತನ, ಹಸಿವು, ಅಜ್ಞಾನ, ಅನಾರೋಗ್ಯ ಮೊದಲಾದ ಕಾರಣಗಳಿಂದ ಶಾಲೆಗಳಿಂದ ವಂಚಿತರಾಗಿರುವ ಜನರನ್ನು ಮತ್ತೆ ಶಾಲೆಯ ಕಡೆಗೆ ಕರೆದೊಯ್ಯಲು ಈ ದೇಶದಲ್ಲಿ ದೊಡ್ಡ ಆಂದೋಲನವೇ ನಡೆದಿದೆ. ಅಷ್ಟೇ ಅಲ್ಲ, ಅದಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಈವರೆಗೆ ಸುರಿಯಲಾಗಿದೆ. ಶಾಲೆಗೆ ಆಕರ್ಷಿಸುವುದಕ್ಕಾಗಿಯೇ ಬಿಸಿಯೂಟವನ್ನು ಆರಂಭಿಸಲಾಯಿತು. ಉಚಿತ ಪುಸ್ತಕ, ಉಚಿತ ಸಮವಸ್ತ್ರಗಳನ್ನು ಕೂಡ ಸರಕಾರ ನೀಡಲಾರಂಭಿಸಿತು. ಬಟ್ಟೆಯಿಲ್ಲದೆ ಶಾಲೆಗೆ ಬರುವುದು ಸಾಧ್ಯವಿಲ್ಲ ಎನ್ನುವವರಿಗೆ ಸರಕಾರ ನೀಡಿದ ಬಟ್ಟೆ ಬಡವರಿಗೆ ಮಾನ ಉಳಿಸಿಕೊಳ್ಳಲು ಬಹುದೊಡ್ಡ ವರದಾನವಾಯಿತು. ಬಟ್ಟೆ,ಊಟದ ಕಾರಣಕ್ಕಾಗಿಯೇ ಲಕ್ಷಾಂತರ ಜನ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಲಾರಂಭಿಸಿದರು. ಇಂದು ಇದೇ ಸರಕಾರಿ ಶಾಲೆಗಳಿಂದ ಅಸಂಖ್ಯಾತ ಪ್ರತಿಭಾವಂತರು ಅತ್ಯುನ್ನತ ಸ್ಥಾನಗಳಲ್ಲಿ ಮಿಂಚುತ್ತಿದ್ದಾರೆ. ದಲಿತರು, ಅಲ್ಪಸಂಖ್ಯಾತರು ಇಂದು ಸಮಾಜದ ವಿವಿಧ ವಲಯಗಳಲ್ಲಿ ಸಾಧನೆ ಮಾಡುತ್ತಿದ್ದರೆ ಅದಕ್ಕೆ ಕಾರಣ ಸರಕಾರಿ ಶಾಲೆಗಳು. ಇಂತಹ ಸರಕಾರಿ ಶಾಲೆಗಳನ್ನು ಇಲ್ಲವಾಗಿಸಲು ಬೇರೆ ಬೇರೆ ರೀತಿಯಲ್ಲಿ ತಂತ್ರಗಳು ನಡೆಯುತ್ತಿವೆ. ಮತ್ತು ಆ ತಂತ್ರಗಳು ಭಾಗಶಃ ಯಶಸ್ವಿಯೂ ಆಗುತ್ತಿವೆ. ದಿನ ದಿನಕ್ಕೆ ಇಳಿಮುಖವಾಗುತ್ತಿರುವ ಸರಕಾರಿ ಶಾಲೆಗಳೇ ಇದಕ್ಕೆ ಉದಾಹರಣೆ. ಮೇಲ್ನೋಟಕ್ಕೆ ‘ಇಂಗ್ಲಿಷ್ ಮಾಧ್ಯಮ’ಗಳನ್ನು ಹೊಣೆ ಮಾಡಲಾಗುತ್ತಿದೆಯಾದರೂ, ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುವುದಕ್ಕೆ ಆ ಶಾಲೆಯ ಶಿಕ್ಷಕರು, ಪ್ರಾಂಶುಪಾಲರೂ ಹೇಗೆ ಹೊಣೆಯಾಗಿದ್ದಾರೆ ಎನ್ನುವುದನ್ನು ಉಡುಪಿಯ ಕುಂದಾಪುರ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಘಟನೆ ಬಹಿರಂಗ ಪಡಿಸುತ್ತಿದೆ.

 ಕುಂದಾಪುರದ ಸರಕಾರಿ ಕಾಲೇಜು ಇಲ್ಲಿನ 20ಕ್ಕೂ ಅಧಿಕ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಅವರ ಧಿರಿಸಿನ ಕಾರಣಕ್ಕಾಗಿ ಶಾಲೆಯಿಂದ ಹೊರ ಹಾಕಿದೆ. ಶಾಲೆಗೆ ಆಗಮಿಸಿದ ವಿದ್ಯಾರ್ಥಿನಿಯರನ್ನು ಒಳಗೆ ಬರಲು ಬಿಡದೆ ಪ್ರಾಂಶುಪಾಲರು ಗೇಟು ಬಾಗಿಲು ಹಾಕುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಉಡುಪಿ ಜಿಲ್ಲೆಯ ಮಾನವನ್ನು ಹರಾಜು ಹಾಕಿದೆ. ಧಿರಿಸನ್ನು ಮುಂದಿಟ್ಟು ವಿದ್ಯಾರ್ಥಿನಿಯರಿಗೆ ಶಿಕ್ಷಣವನ್ನು ನಿರಾಕರಿಸುವ ಪ್ರಾಂಶುಪಾಲನ ಮನಸ್ಥಿತಿಯ ಹಿಂದೆ ಏನಿದೆ ಎನ್ನುವುದು ಬಹಿರಂಗವಾಗಿ ಬಿಡುತ್ತದೆ. ಈತನಿಗೆ ಸಮಸ್ಯೆಯಾಗಿರುವುದು ಧಿರಿಸುಗಳಲ್ಲ. ದಲಿತರು, ಅಲ್ಪಸಂಖ್ಯಾತರು , ಮಹಿಳೆಯರು ಶಿಕ್ಷಣ ಕಲಿಯುವುದೇ ಈತನ ಪ್ರಮುಖ ಸಮಸ್ಯೆಯಾಗಿದೆ. ಒಂದು ಕಾಲದಲ್ಲಿ ಅಂಬೇಡ್ಕರ್ ಶಾಲಾ ಕಾಲೇಜುಗಳಲ್ಲಿ ಇಂತಹದೇ ಸಮಸ್ಯೆಗಳನ್ನು ಎದುರಿಸಿದ್ದರು. ಹೆಚ್ಚಿನ ಸರಕಾರಿ ಶಾಲೆಗಳಲ್ಲಿ ದಲಿತರ ಬಗ್ಗೆಯೂ ಶಿಕ್ಷಕರಲ್ಲಿ ಅಸಹನೆಯಿದೆ. ಆದರೆ ಸದ್ಯದ ಕಠಿಣ ಕಾನೂನಿನಿಂದಾಗಿ ತಮ್ಮ ಅಸಹನೆಯನ್ನು ನುಂಗಿಕೊಂಡಿದ್ದಾರೆ. ಆದರೆ ಇಲ್ಲಿ, ‘ಯುನಿಫಾರ್ಮ್’ ಎನ್ನುವ ನೆಪವೊಂದು ಅವರಿಗೆ ಸಿಕ್ಕಿದೆ. ಅದನ್ನು ಮುಂದಿಟ್ಟುಕೊಂಡು ‘ಸಮಾನತೆ’ಯ ಬಗ್ಗೆ ಈ ಪ್ರಾಂಶುಪಾಲರು ಮಾತನಾಡುತ್ತಿದ್ದಾರೆ. ಆದರೆ ಇದೇ ಶಾಲೆಯಲ್ಲಿ ಹತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳು ಯಾವ ಅಡ್ಡಿಯೂ ಇಲ್ಲದೆ ನಡೆಯುತ್ತಾ ಬಂದಿವೆ. ಆಗ ಆತನಿಗೆ ಶಾಲೆಗಳಲ್ಲಿ ಧಾರ್ಮಿಕತೆಯನ್ನು ತರುವುದು ಸಮಸ್ಯೆಯಾಗಲಿಲ್ಲ. ಇಲ್ಲಿಯವರೆಗೂ ಸ್ಕಾರ್ಫ್ ಹಾಕಿಕೊಂಡು ಬಂದಾಗ ಇಲ್ಲದ ಸಮಸ್ಯೆ ಈಗ ಏಕಾಏಕಿ ಪ್ರಾಂಶುಪಾಲರಿಗೆ ಕಾಡಿದೆ. ವಿದ್ಯೆ ಕಲಿಯುವುದಕ್ಕೆಂದು ಬಂದ ವಿದ್ಯಾರ್ಥಿಗಳನ್ನು ಧಿರಿಸಿನ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಹೊರಹಾಕುವ ಮೂಲಕ ತನ್ನ ವೃತ್ತಿಗೇ ಆ ಪ್ರಾಂಶುಪಾಲರು ಕಳಂಕ ಎಸಗಿದ್ದಾರೆ. ಈ ಮೂಲಕ ವಿದ್ಯೆ ಕಲಿಸುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ.

ಒಂದು ಕಾಲದಲ್ಲಿ ‘ಮುಸ್ಲಿಮ್ ಮಹಿಳೆಯರು ಶಾಲೆ ಕಲಿಯಬೇಕು’ ಎಂದು ಉಪದೇಶಗಳನ್ನು ನೀಡುತ್ತಿದ್ದರು. ಹಾಗೆಯೇ ಆ ಉಪದೇಶಗಳಿಗೆ ತಲೆಬಾಗಿ ಶಾಲೆ ಕಲಿತು ಇಂದು ಮುಸ್ಲಿಮ್ ಮಹಿಳೆಯರು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಸಾಧಿಸುತ್ತಿದ್ದಾರೆ. ಇದೀಗ ಮುಸ್ಲಿಮ್ ತರುಣಿಯರು ಶಾಲೆ ಕಲಿಯಬೇಕಾದರೆ ಕೆಲವು ‘ತ್ಯಾಗಗಳನ್ನು ಮಾಡಬೇಕು’ ಎಂದು ಕರೆ ನೀಡುತ್ತಿದ್ದಾರೆ. ಎಳೆಯ ಮಕ್ಕಳಲ್ಲಿ ‘ಸ್ಕಾರ್ಫ್ ಮುಖ್ಯವೋ-ಶಿಕ್ಷಣ ಮುಖ್ಯವೋ’ ಎಂದು ಕೇಳುತ್ತಿದ್ದಾರೆ. ಇದೇ ಶಿಕ್ಷಕರಲ್ಲಿ ‘ಯುನಿಫಾರ್ಮ್ ಮುಖ್ಯವೋ- ಶಿಕ್ಷಣ ಮುಖ್ಯವೋ’ ಎನ್ನುವ ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಶಿಕ್ಷಣಕ್ಕೆ ಪೂರಕವಾಗಿ ಯುನಿಫಾರ್ಮ್ ಇದೆಯೇ ಹೊರತು, ಯುನಿಫಾರ್ಮ್‌ಗಾಗಿ ಶಿಕ್ಷಣವಲ್ಲ. ಸರಕಾರಿ ಶಾಲೆಗಳಿಗೂ ಯುನಿಫಾರ್ಮ್‌ಗಳಿಗೂ ಯಾವ ಸಂಬಂಧವೂ ಇಲ್ಲ. ಸರಕಾರಿ ಶಾಲೆಗಳ ಉದ್ದೇಶವೇ ಶಿಕ್ಷಣವನ್ನು ತಳಸ್ತರದ ಜನರವರೆಗೆ ತಲುಪಿಸುವುದು. ತಳಸ್ತರದ ಜನರನ್ನು ಶಿಕ್ಷಣದಿಂದ ಹೊರಗಿಟ್ಟು ತಮ್ಮ ಯುನಿಫಾರ್ಮ್‌ಗಳನ್ನು ಕಾಪಾಡಿಕೊಂಡು ಸರಕಾರಿ ಶಾಲೆಗಳು ಸಾಧಿಸುವುದಾದರೂ ಏನನ್ನು? ಭಾರತೀಯ ಸೇನೆಯೂ ಯುನಿಫಾರ್ಮ್ ಪಾಲಿಸುತ್ತದೆ. ಆದರೆ ಅಲ್ಲಿ ಸಿಖ್ ಸಮುದಾಯದ ಯುವಕರಿಗೆ ಟರ್ಬನ್ ಹಾಕಿಕೊಳ್ಳಲು ಅವಕಾಶ ನೀಡುತ್ತದೆ. ಹೀಗಿರುವಾಗ ಸರಕಾರಿ ಶಾಲೆಗಳು ಸೇನೆಯನ್ನು ಮೀರಿ ಯುನಿಫಾರ್ಮ್‌ನ್ನು ಅಳವಡಿಸಲು ಹೊರಟಿರುವುದರ ಹಿಂದೆ ಇರುವುದು ಎರಡೇ ಎರಡು ಅಜೆಂಡಾಗಳು. ಒಂದು ಸರಕಾರಿ ಶಾಲೆ, ಕಾಲೇಜುಗಳಲ್ಲಿ ಈಗಾಗಲೇ ಇರುವ ವಿದ್ಯಾರ್ಥಿಗಳನ್ನು ಬೇರೆ ಬೇರೆ ನೆಪದಲ್ಲಿ ಹೊರ ಹಾಕಿ ಅವುಗಳನ್ನು ಮುಚ್ಚಿಸುವುದು. ಜೊತೆಗೆ, ತಳಸ್ತರದ ಸಮುದಾಯದ ಮಕ್ಕಳು ಅದರಲ್ಲೂ ಮಹಿಳೆಯರನ್ನು ಶಿಕ್ಷಣದಿಂದ ಶಾಶ್ವತವಾಗಿ ವಂಚಿಸುವಂತೆ ಮಾಡುವುದು. ಇಂತಹ ಧೂರ್ತ ಕೃತ್ಯಕ್ಕೆ ಶಿಕ್ಷಕರೇ ಶಾಮೀಲಾಗಿ ನಿಂತಿರುವುದು ವರ್ತಮಾನದ ಅತಿ ದೊಡ್ಡ ದುರಂತವಾಗಿದೆ. ವಿದ್ಯಾರ್ಥಿನಿಯರನ್ನು ಧರ್ಮ, ಧಿರಿಸಿನ ಹೆಸರಿನಲ್ಲಿ ಹೊರ ಹಾಕಿದ ಶಿಕ್ಷಕರ ಮೇಲೆ ಸೂಕ್ತ ಕ್ರಮವನ್ನು ತೆಗೆದುಕೊಂಡು, ರಾಜ್ಯಕ್ಕೆ ಆಗಿರುವ ಕಳಂಕವನ್ನು ಶಿಕ್ಷಣ ಸಚಿವರು ತೊಳೆದುಕೊಳ್ಳಬೇಕಾಗಿದೆ. ಇದೇ ಸಂದರ್ಭದಲ್ಲಿ ಹುಡುಗರು ಕೇಸರಿ ಶಾಲು ಹಾಕಿಕೊಂಡು ಬರುತ್ತಾರಾದರೆ ಅದಕ್ಕೂ ಅವಕಾಶ ನೀಡಿ, ‘ಸರ್ವರಿಗೂ ಶಿಕ್ಷಣ’ ತಲುಪುವ ನಿಟ್ಟಿನಲ್ಲಿ ಸರಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News