ಅಸದುದ್ದೀನ್ ಉವೈಸಿ ಕಾರಿನತ್ತ ಗುಂಡು ಹಾರಿಸಿದ ಆರೋಪಿಗೆ ಬಿಜೆಪಿ ನಂಟು?

Update: 2022-02-04 08:32 GMT
Photo credit: indiatoday.in

ಹೊಸದಿಲ್ಲಿ: ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸದುದ್ದೀನ್ ಉವೈಸಿ ಅವರಿದ್ದ ಕಾರಿನತ್ತ ಉತ್ತರ ಪ್ರದೇಶದ ಹಾಪುರ್ ಎಂಬಲ್ಲಿ ಗುರುವಾರ ಗುಂಡು ಹಾರಿಸಿದ ಪ್ರಕರಣದಲ್ಲಿ ಬಂಧಿತ ಆರೋಪಿ ಸಚಿನ್ ಪಂಡಿತ್ ಎಂಬಾತ ಬಿಜೆಪಿಯ ಸದಸ್ಯ ತಾನೆಂದು ತನ್ನನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿಕೊಂಡಿದ್ದಾನೆ ಎಂದು indiatoday.in ವರದಿ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ಆತ ತನ್ನ ಬಳಿಯಿರುವ ಬಿಜೆಪಿ ಸದಸ್ಯತನದ ಚೀಟಿಯ ಪ್ರತಿಯನ್ನು ಪೋಸ್ಟ್ ಮಾಡಿದ್ದಾನೆ. ಅದರಲ್ಲಿ ಆತನ ಹೆಸರನ್ನು ದೇಶಭಕ್ತ್ ಸಚಿನ್ ಹಿಂದು ಎಂದು ಬರೆಯಲಾಗಿದೆ. ಆತ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್, ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಸಂಸದ ಮಹೇಶ್ ವರ್ಮ ಜತೆಗಿರುವ ಚಿತ್ರಗಳೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಗ್ರೇಟರ್ ನೊಯ್ಡಾದ ದುರೈ ಗ್ರಾಮದ ನಿವಾಸಿಯಾಗಿರುವ ಈತ ಕಾನೂನು ವಿದ್ಯಾರ್ಥಿಯಾಗಿದ್ದು ಆತನ ತಂದೆ ವಿನೋದ್ ಪಂಡಿತ್ ಗುತ್ತಿಗೆ ಆಧಾರದಲ್ಲಿ ಖಾಸಗಿ ಕಂಪೆನಿಗೆ ಕೆಲಸ ಮಾಡುತ್ತಿದ್ದಾರೆ. ಆತನ ಮೇಲೆ ಈ ಹಿಂದೆ ಕೊಲೆಯತ್ನ ಪ್ರಕರಣ ದಾಖಲಿಸಲಾಗಿತ್ತು ಎಂದು ಪೊಲೀಸರು ಕಂಡುಕೊಂಡಿದ್ದಾರೆ.

ಗುರುವಾರ ಆತನ ಬಂಧನದ ಬೆನ್ನಲ್ಲೇ ಗ್ರೇಟರ್ ನೊಯ್ಡಾ ಪೊಲೀಸರು ಆತನ ಸಂಬಂಧಿಕರನ್ನೂ ತಡರಾತ್ರಿವರೆಗೆ ವಿಚಾರಣೆ ನಡೆಸಿದ್ದಾರೆ. ಆತನ ತಂದೆ ಖಾಸಗಿ ಕಂಪೆನಿಗಳಿಗೆ ಗುತ್ತಿಗೆಯಾಧಾರದ ಕಾರ್ಮಿಕರನ್ನು ಒದಗಿಸುತ್ತಿದ್ದರೆ ಸಚಿನ್ ಕೂಡ ತನ್ನೊಂದಿಗೆ ಕೆಲಸ ಮಾಡುತ್ತಾನೆಂದು ಪೊಲೀಸರಿಗೆ ತಿಳಿಸಿದ್ದಾರೆ.

"ಗುರುವಾರ ಬೆಳಿಗ್ಗೆ 8 ಗಂಟೆಗೆ ಒಂದು ಕಂಪೆನಿಯ ಆಡಳಿತದ ಜತೆ ಚರ್ಚಿಸಲು ಇದೆಯೆಂದು ಆತ ಹೊರಗೆ ಹೋಗಿದ್ದ, ಕಳೆದ ಎರಡು ಮೂರುದಿನಗಳಿಂದ ಸ್ವಲ್ಪ ಚಿಂತಿತನಾಗಿದ್ದಂತೆ ಇತ್ತು,'' ಎಂದು ಆತನ ತಂದೆ ಪೊಲೀಸರಿಗೆ ಹೇಳಿದ್ದಾರೆ.

ಇನ್ನೊಬ್ಬ ಆರೋಪಿ ಶುಭಂ ಎಂಬಾತ ಸಹರಣಪುರ ನಿವಾಸಿಯಾಗಿದ್ದಾನೆ. ಹತ್ತನೇ ತರಗತಿ ತನಕ ಕಲಿತಿರುವ ಆತ ರೈತನಾಗಿದ್ದು ಆತನ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು indiatoday.in ವರದಿ ಮಾಡಿದೆ.

ಅಸದುದ್ದೀನ್ ಉವೈಸಿ ಮತ್ತವರ ಸೋದರ ಅಕ್ಬರುದ್ದೀನ್ ಉವೈಸಿ ಅವರ ಹೇಳಿಕೆಗಳಿಂದ ತಮಗೆ ಕೋಪ ಬಂದಿದೆ ಎಂದು ಇಬ್ಬರು ಆರೋಪಿಗಳೂ ವಿಚಾರಣೆ ವೇಳೆ ಹೇಳಿದ್ದಾರೆ. ಉವೈಸಿ ಅವರ ಭಾಷಣಗಳನ್ನು ಫೇಸ್ಬುಕ್, ಟ್ವಿಟರ್ ಮೂಲಕ ನೋಡಿದ್ದಾಗಿಯೂ ಅವರು ಹೇಳಿದ್ದಾರೆಂದು ವರದಿಯಾಗಿದೆ.

ಅವರ ಬಳಿಯಿಂದ ದೇಶೀ ನಿರ್ಮಿತ ಪಿಸ್ತೂಲು ವಶಪಡಿಸಿಕೊಳ್ಳಲಾಗಿದೆ. ಪಿಸ್ತೂಲು ತಾವು ಯಾರಿಂದ ಪಡೆದುಕೊಂಡಿದ್ದು ಎಂಬ ಮಾಹಿತಿಯನ್ನೂ ಅವರು ಪೊಲೀಸರಿಗೆ ನೀಡಿದ್ದು ಅವರನ್ನು ಸದ್ಯದಲ್ಲಿಯೇ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಇಬ್ಬರನ್ನೂ ಇಂದು ಹಾಪುರ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News