×
Ad

ಶಿರವಸ್ತ್ರ ವಿವಾದ; ವಿದ್ಯಾರ್ಥಿನಿಯರನ್ನು ವಿದ್ಯೆಯಿಂದ ಹೊರಗಿಡುವ ಹುನ್ನಾರ ಖಂಡನೀಯ: ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ

Update: 2022-02-04 15:36 IST

ಉಡುಪಿ, ಫೆ.4: ಮುಸ್ಲಿಮ್ ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸಿ ಬಂದರೆ ಕಾಲೇಜು ಒಳಗಡೆ ಬಿಡುವುದಿಲ್ಲ ಎಂದು ಹೇಳಿದ್ದಲ್ಲದೆ, ಸ್ವತಃ ತಾವೇ ಗೇಟನ್ನು ಮುಚ್ಚಿ ವಿದ್ಯಾರ್ಥಿನಿಯರು ಕಾಲೇಜಿನೊಳಗೆ ಬರದಂತೆ ತಡೆದಿರುವ ಕುಂದಾಪುರ ಸರಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಙ ಇವರ ಕ್ರಮವನ್ನು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ಹೇಳಿದ್ದಾರೆ.

ಈ ವಿದ್ಯಾರ್ಥಿನಿಯರು ಶೈಕ್ಷಣಿಕ ವರ್ಷದ ಆರಂಭದಿಂದಲೂ ಮತ್ತು ಈ ಹಿಂದೆ ಇದೇ ಕಾಲೇಜಿನಿಂದ ಶಿಕ್ಷಣ ಪೂರ್ತಿಗೊಳಿಸಿದ ವಿದ್ಯಾರ್ಥಿನಿಯರು ಕೂಡಾ ಹಲವಾರು ವರ್ಷಗಳಿಂದ ನಿರಂತರವಾಗಿ ಕಾಲೇಜಿಗೆ ಶಿರವಸ್ತ್ರ ಧರಿಸಿಯೇ ಬಂದು ತಮ್ಮ ಒಂದು ಹಂತದ ಶಿಕ್ಷಣ ಪೂರ್ತಿಗೊಳಿಸಿದ್ದಾರೆ. ಈಗ ಏಕಾಏಕಿ ಫೆ.3ರಿಂದ ಶಿರವಸ್ತ್ರ ಧರಿಸಿ ಬಂದಲ್ಲಿ ಕಾಲೇಜಿನ ಒಳಗಡೆ ಪ್ರವೇಶವಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಹೇಳುತ್ತಿದ್ದಾರೆ ಎಂದು ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.

ಕಾಲೇಜಿನ ಪ್ರಾಂಶುಪಾಲರ ಸದರಿ ಹೇಳಿಕೆ ಮತ್ತು ವಿದ್ಯಾರ್ಥಿನಿಯರನ್ನು ಶಿಕ್ಷಣ ಪಡೆಯಲು ತರಗತಿಗೆ ಬರದಂತೆ ತಡೆಹಿಡಿಯುತ್ತಿರುವುದರ ಹಿಂದೆ ಯಾರ ಹುನ್ನಾರವಿದೆ ?. ಶಿಕ್ಷಣ ಪಡೆಯುವಲ್ಲಿ ಬರಬಹುದಾದ ಅಡೆತಡೆಗಳನ್ನು ನಿವಾರಿಸಿ ವಿದ್ಯೆ ನೀಡಬೇಕಾದ ಪ್ರಾಂಶುಪಾಲರೇ ವಿದ್ಯಾರ್ಥಿನಿಯರಿಗೆ ನ್ಯಾಯಯುತವಾಗಿ ಸಿಗಬೇಕಾದ ವಿದ್ಯೆಯ ಬಾಗಿಲನ್ನು ಏಕೆ ಮುಚ್ಚುತ್ತಿದ್ದಾರೆ ಎಂದು ಒಕ್ಕೂಟ ಹೇಳಿಕೆಯಲ್ಲಿ ಪ್ರಶ್ನಿಸಿದೆ.

ಪ್ರಾಂಶುಪಾಲರು ತಮ್ಮ ಕರ್ತವ್ಯ ನಿಷ್ಠೆಯನ್ನು ಏಕೆ ಮರೆತಿದ್ದಾರೆ. ಇದು ಬೇಜವಾಬ್ದಾರಿತನದ ನಡವಳಿಕೆಯಲ್ಲವೆ? ವಿದ್ಯಾರ್ಥಿಗಳ ಏಳಿಗೆ ಮತ್ತವರ ಯಶಸ್ಸನ್ನು ಬಯಸುವ ಒಬ್ಬ ನಿಜವಾದ ಗುರು ವಿದ್ಯೆಗಾಗಿ ಪರಿತಪಿಸುವ ತನ್ನ ವಿದ್ಯಾರ್ಥಿಗಳನ್ನು ವಿದ್ಯಾಮಂದಿರದ ಒಳಗಡೆ ಪ್ರವೇಶಿಸಲು ಬಿಡದೆ ಹೀಗೆ ಗಂಟೆಗಟ್ಟಲೆ ಬಿಸಿಲಲ್ಲಿ ಕೂರಿಸಿ ಕಾಯಿಸಲು ಸಾಧ್ಯವೇ ಎಂದು ಕೇಳಿರುವ ಒಕ್ಕೂಟ, ಇದು ಅಮಾನವೀಯ ನಡೆ ಅಲ್ಲವೇ ಎಂದಿದೆ.

ಇದು ದೇಶದ ಸಂವಿಧಾನದ ಮೂಲತತ್ವಗಳ ಉಲ್ಲಂಘನೆ ಮತ್ತು ಶಿಕ್ಷಣದ ಹಕ್ಕಿನ ನಿರಾಕರಣೆಯಾಗಿದೆ. ಈ ಕುರಿತು ‘ಮಾನವ ಹಕ್ಕು ಆಯೋಗ’ ಮಧ್ಯೆ ಪ್ರವೇಶಿಸಿ ವಿದ್ಯಾರ್ಥಿನಿಯರಿಗೆ ನ್ಯಾಯ ಕೊಡಿಸಿ ಅವರ ಶೈಕ್ಷಣಿಕ ಬದುಕು ಹಾಗೂ ಅವರ ಭವಿಷ್ಯ ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಮುಸ್ಲಿಂ ಒಕ್ಕೂಟ ಒತ್ತಾಯಿಸಿದೆ.

ಈ ಮುಂಚೆ ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸಿ ತರಗತಿಗೆ ಹೇಗೆ ಹಾಜರಾಗುತ್ತಿದ್ದರೋ ಅದೇ ರೀತಿಯಲ್ಲಿ ಇನ್ನು ಮುಂದೆಯೂ ತರಗತಿಗೆ ಹಾಜರಾಗಲು ಅವಕಾಶ ಒದಗಿಸಬೇಕು. ವಿದ್ಯಾರ್ಥಿನಿಯರ ಶೈಕ್ಷಣಿಕ ಬದುಕಿಗೆ ವಿದ್ಯೆ ನೀಡಬೇಕಾದವರೇ ಅವರ ಭವಿಷ್ಯಕ್ಕೆ ಅಡ್ಡಗಾಲು ಹಾಕಬಾರದು ಎಂದು ಒಕ್ಕೂಟದ ಅಧ್ಯಕ್ಷರು ಕಾಲೇಜು ಆಡಳಿತ ಮಂಡಳಿ ಮತ್ತು ಕಾಲೇಜಿನ ಪ್ರಾಂಶುಪಾಲರನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News