ನಿಜ, ಶಾಲೆ-ಕಾಲೇಜುಗಳಿರುವುದು ಧರ್ಮಗಳ ಆಚರಣೆಗಳಿಗಲ್ಲ

Update: 2022-02-05 04:07 GMT

ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ಹಿನ್ನೆಲೆಯಲ್ಲಿ ರಾಜ್ಯದ ಗೃಹ ಸಚಿವರು ‘ಶಾಲೆಗಳಿರುವುದು ಧರ್ಮದ ಆಚರಣೆಗೆ ಅಲ್ಲ’ ಎನ್ನುವ ಅಪರೂಪದ ಮಾತೊಂದನ್ನು ಆಡಿದ್ದಾರೆ. ಅಷ್ಟೇ ಅಲ್ಲ, ‘ಪ್ರಾರ್ಥನೆ ಮಾಡುವುದಕ್ಕೆ ದೇವಸ್ಥಾನ, ಚರ್ಚ್, ಮಸೀದಿಗಳಿವೆ. ಆಯಾ ಶಾಲಾ ಆಡಳಿತ ಮಂಡಳಿ ಇದನ್ನು ಪಾಲಿಸಬೇಕು. ನಾವೆಲ್ಲ ಭಾರತ ಮಾತೆಯ ಮಕ್ಕಳು’ ಎಂದು ಸಮಾನತೆಯ ಬೋಧನೆಯನ್ನು ನೀಡಿದ್ದಾರೆ. ಅವರ ಈ ಹೇಳಿಕೆ ಕೇವಲ ಹಿಜಾಬ್ ಧಾರಣೆಗೆ ಮಾತ್ರ ಅಲ್ಲ ಎನ್ನುವುದು ಮೇಲ್ನೋಟಕ್ಕೆ ಅರ್ಥವಾಗಿ ಬಿಡುತ್ತದೆ. ಶಾಲೆ ಎಂದಲ್ಲ, ಯಾವುದೇ ಸರಕಾರಿ ಸಂಸ್ಥೆಗಳು ಎಲ್ಲ ಜಾತಿ, ಧರ್ಮೀಯರಿಗೆ ಸೇರಿದ್ದು. ಬ್ರಾಹ್ಮಣರು, ದಲಿತರು, ಮುಸ್ಲಿಮರು, ಬಿಲ್ಲವರು, ಮೊಗವೀರರು, ಕ್ರೈಸ್ತರು, ಬಂಟರು ...ಹೀಗೆ ಎಲ್ಲ ಕೊಡುಗೆಗಳ ಮೂಲಕ ಸರಕಾರಿ ಸಂಸ್ಥೆಗಳನ್ನು ಕಟ್ಟಲಾಗಿದೆ. ಸರಕಾರಿ ಸಂಸ್ಥೆಗಳು ಎಲ್ಲರಿಗೂ ಸೇರಿದ್ದಾಗಿರುವುದರಿಂದ ಅಲ್ಲಿ ದೇಶ, ನಾಡಿಗೆ ಸಂಬಂಧಿಸಿದ ಅಸ್ಮಿತೆಗಳನ್ನು ಮುಂದಿಟ್ಟು ಕಾರ್ಯಕ್ರಮಗಳನ್ನು ನಡೆಸಬೇಕು. ಕನ್ನಡ ರಾಜ್ಯೋತ್ಸವ, ಸ್ವಾತಂತ್ರ ದಿನ, ಗಣರಾಜ್ಯೋತ್ಸವ ಮೊದಲಾದ ಕಾರ್ಯಕ್ರಮಗಳು ಈ ಸರಕಾರಿ ಸಂಸ್ಥೆಗಳಲ್ಲಿ ನಡೆಯಬೇಕು. ಜನರು ಜಾತಿ, ಧರ್ಮಗಳ ಭೇದ ತೊರೆದು ಇಲ್ಲಿ ‘ಭಾರತ ಮಾತೆಯ ಮಕ್ಕಳಾಗಿ’ ಸೇರಬೇಕು. ಆರಗಜ್ಞಾನೇಂದ್ರ ಅವರು ಈ ಹಿನ್ನೆಲೆಯನ್ನಿಟ್ಟುಕೊಂಡು ಮಾತನಾಡಿದ್ದೇ ಆಗಿದ್ದರೆ ಅದು ಶ್ಲಾಘನೀಯವಾಗಿದೆ.

ಇದು ಕೇವಲ ಬಾಯಿ ಮಾತಾಗಿ ತೇಲಿ ಹೋಗಬಾರದು. ಆರಗ ಜ್ಞಾನೇಂದ್ರ ಅವರ ಮಾತುಗಳನ್ನು ಎಲ್ಲ ಸರಕಾರಿ ಸಂಸ್ಥೆಗಳು, ಶಾಲೆಗಳು ಗಂಭೀರವಾಗಿ ಸ್ವೀಕರಿಸಬೇಕು. ಸಚಿವರ ಮಾತುಗಳು ಆದೇಶದ ರೂಪದಲ್ಲಿ ಎಲ್ಲ ಸರಕಾರಿ ಕಚೇರಿಗಳಿಗೆ ರವಾನೆಯಾಗಬೇಕು. ಮುಖ್ಯವಾಗಿ, ಶಾಲೆ ಕಾಲೇಜುಗಳಲ್ಲಿ ಯಾವುದೇ ಧರ್ಮದ ಆಚರಣೆಗಳನ್ನು ನಿಷೇಧಿಸಬೇಕು. ಸರಸ್ವತಿ ಪೂಜೆ, ಗಣೇಶೋತ್ಸವ, ಕ್ರಿಸ್‌ಮಸ್ ಆಚರಣೆ, ಬಕ್ರೀದ್ ಆಚರಣೆ ಇವುಗಳಿಗೆ ಯಾವ ಕಾರಣಕ್ಕೂ ಶಾಲೆಗಳಲ್ಲಿ ಅನುಮತಿ ನೀಡಬಾರದು. ಇವೆಲ್ಲವನ್ನು ಆಚರಿಸುವುದಕ್ಕೆ ತಮ್ಮ ತಮ್ಮ ಮಂದಿರ, ಮಸೀದಿ, ಚರ್ಚ್ ಮತ್ತು ಮನೆಗಳಲ್ಲಿ ಸರ್ವ ಸ್ವತಂತ್ರರಿದ್ದಾರೆ. ಶಾಲೆಗಳು ಸರ್ವಜನಾಂಗದ ತೋಟವಾಗಿರುವುದರಿಂದ ನಾಡು, ನುಡಿಯ ಮೂಲಕ ವಿದ್ಯಾರ್ಥಿಗಳನ್ನು ಜಾತ್ಯತೀತವಾಗಿ ಬೆಸೆಯುವ ಕಾರ್ಯಕ್ರಮಗಳನ್ನಷ್ಟೇ ಮಾಡಲು ಸರಕಾರ ಸ್ಪಷ್ಟ ಆದೇಶವನ್ನು ನೀಡಬೇಕು. ಈ ಬಗ್ಗೆ ಒಂದು ಕಾನೂನನ್ನು ಮಾಡಿದರೆ ಇನ್ನೂ ಪರಿಣಾಮಕಾರಿಯಾಗಿರುತ್ತದೆ.

ಮಂಗಳೂರು ಸೇರಿದಂತೆ ಬಹುತೇಕ ವಿಶ್ವವಿದ್ಯಾನಿಲಯಗಳಲ್ಲಿ ಗಣೇಶೋತ್ಸವವನ್ನು ಭರ್ಜರಿಯಾಗಿ ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿ, ವಾದ್ಯ ಗದ್ದಲದೊಂದಿಗೆ ಇಡೀ ವಿಶ್ವವಿದ್ಯಾನಿಲಯದ ಶಾಂತ ವಾತಾವರಣವನ್ನು ಹಲವು ದಶಕಗಳಿಂದ ಕೆಡಿಸುತ್ತಾ ಬರುತ್ತಿದ್ದಾರೆ. ಹಲವು ಶಾಲೆ, ಕಾಲೇಜುಗಳಲ್ಲೂ ಗಣೇಶೋತ್ಸವ ಕಾರ್ಯಕ್ರಮಗಳು, ದೀಪಾವಳಿ ಆಚರಣೆಗಳು ನಡೆಯುತ್ತಿವೆ. ಇವೆಲ್ಲವೂ ಧಾರ್ಮಿಕ ಮಂದಿರಗಳಲ್ಲಿ ಅಥವಾ ಅವರ ಮನೆಗಳಲ್ಲಿ ನಡೆಯಬೇಕಾದ ಕಾರ್ಯಕ್ರಮ. ಶಾಲೆ ಕಲಿಕೆಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ. ಆದುದರಿಂದ, ಇನ್ನು ಮುಂದೆ ಇಂತಹ ಯಾವುದೇ ಕಾರ್ಯಕ್ರಮಗಳು ಶಾಲೆ ಕಾಲೇಜುಗಳಲ್ಲಿ ನಡೆಸದಂತೆ ಶಿಕ್ಷಕರಿಗೆ ಸ್ಪಷ್ಟ ಆದೇಶವನ್ನು ನೀಡಬೇಕಾಗಿದೆ. ಇಂತಹ ಕಾರ್ಯಕ್ರಮಗಳನ್ನು ನಡೆಸುವ ಶಿಕ್ಷಕರ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ. ಹಲವು ಪ್ರಾಥಮಿಕ ಶಾಲೆಗಳಲ್ಲಿ ‘ಶಾರದ ಪೂಜೆ’ ನಡೆಯುವುದಿದೆ. ಇಂದು ಶಾಲೆಗಳಲ್ಲಿ ನಡೆಯಬೇಕಾಗಿರುವುದು, ಎಲ್ಲ ವರ್ಗದವರಿಗೂ ಶಿಕ್ಷಣ ದೊರಕುವಂತೆ ಆಂದೋಲನ ಮಾಡಿದ ಸಾವಿತ್ರಿಬಾ ಫುಲೆಯವರ ಕುರಿತ ಕಾರ್ಯಕ್ರಮ. ಶಾರದೆಯ ವಿದ್ಯೆ ಕೇವಲ ಮೇಲ್‌ಜಾತಿಯವರಿಗಷ್ಟೇ ಸೀಮಿತವಾಗಿತ್ತು. ಸಾವಿತ್ರಿ ಭಾ ಪುಲೆ, ಫಾತಿಮಾ ಶೇಖ್‌ರಂತಹ ಮಹಿಳೆಯರು ಶಿಕ್ಷಣವನ್ನು ತಳವರ್ಗಕ್ಕೆ ತಲುಪಿಸಿದವರು. ಆದುದರಿಂದ ಶಾರದ ಪೂಜೆಯಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಿಲ್ಲಿಸಿ, ಸಾವಿತ್ರಿ ಫುಲೆ, ಫಾತಿಮಾ ಶೇಖ್ ಅವರನ್ನು ನೆನೆಯುವ ಕೆಲಸವನ್ನು ಶಾಲೆಗಳು ಮಾಡಬೇಕು.

ಮಾನ್ಯ ಗೃಹ ಸಚಿವರ ಉಸ್ತುವಾರಿಯಲ್ಲಿ ಬರುವ ಬಹುತೇಕ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯವನ್ನು ಬದಿಗಿಟ್ಟು ಆಯುಧ ಪೂಜೆ, ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಕಳೆದ ವರ್ಷ ಒಂದು ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ ಆಚರಿಸಿದ ಪೊಲೀಸರು ಬಳಿಕ ತಮ್ಮ ಖಾಕಿ ಧಿರಿಸು ಕಳಚಿಟ್ಟು ಕೇಸರಿ ಸಮವಸ್ತ್ರ ಧರಿಸಿ ಸಾಮೂಹಿಕವಾಗಿ ಫೋಟೊ ಹೊಡೆಸಿಕೊಂಡಿದ್ದರು. ಅವರ ಮೇಲೆ ಕ್ರಮ ಕೈಗೊಳ್ಳುವುದಕ್ಕೆ ಗೃಹ ಸಚಿವರಿಗೆ ಈಗಲೂ ಅವಕಾಶವಿದೆ. ಪೊಲೀಸ್ ಠಾಣೆಯೆನ್ನುವುದು ಎಲ್ಲ ಜಾತಿ, ಧರ್ಮಗಳಿಗೆ ನ್ಯಾಯ ಒದಗಿಸುವ ಇಲಾಖೆ. ಇತ್ತೀಚೆಗೆ ಕ್ರಿಮಿನಲ್ ಚಟುವಟಿಕೆಗಳಲ್ಲಿ ಕೇಸರಿ ಧಾರಿಗಳ ಹೆಸರುಗಳು ಮುನ್ನೆಲೆಗೆ ಬರುತ್ತಿವೆ. ಇದೀಗ ಪೊಲೀಸರು ಠಾಣೆಗಳಲ್ಲಿ ಗಣೇಶೋತ್ಸವ, ಆಯುಧ ಪೂಜೆ ಆಚರಿಸಿ ಕೇಸರಿ ಧರಿಸಿ ನಿಂತರೆ, ದುಷ್ಕರ್ಮಿಗಳ ವಿರುದ್ಧ ದೂರು ಸಲ್ಲಿಸಲು ಬರುವ ಅಮಾಯಕರ ಸ್ಥಿತಿ ಏನಾಗಬೇಕು? ಆದುದರಿಂದ ಪೊಲೀಸ್ ಇಲಾಖೆಗಳನ್ನು ಧರ್ಮಾತೀತಗೊಳಿಸಬೇಕು. ಜೊತೆಗೆ ಯಾವುದೇ ಸರಕಾರಿ ಕಚೇರಿಗಳಲ್ಲಿ ಯಾವುದೇ ಧರ್ಮದ ಪೋಟೊಗಳು ಇಡದಂತೆ ಆದೇಶ ನೀಡಬೇಕಾಗಿದೆ.

ಪೂಜೆ, ನಮಾಝ್ ಯಾವುದಕ್ಕೂ ಅಲ್ಲಿ ಅವಕಾಶ ವಿರಬಾರದು. ಸರಕಾರಿ ಬಸ್‌ಗಳಲ್ಲಿ ಯಾವುದೇ ಧರ್ಮದ ಫೋಟೊಗಳನ್ನು ನೇತು ಹಾಕಲು ಅವಕಾಶ ನೀಡಬಾರದು. ಬಸ್ಸು ಆಯಾ ಚಾಲಕನದ್ದಲ್ಲ. ಸಾರ್ವಜನಿಕರದ್ದು. ಒಬ್ಬ ಮುಸ್ಲಿಮ್ ಚಾಲಕ ತಾನು ಚಲಾಯಿಸುವ ಬಸ್‌ನಲ್ಲಿ ಮಕ್ಕಾದ ಫೋಟೊ ಹಾಕಿದರೆ, ಅಲ್ಲಿರುವ ಪ್ರಯಾಣಿಕರು ಏನು ಭಾವಿಸಬೇಕು? ಆದುದರಿಂದ ಯಾವುದೇ ಧರ್ಮದ ದೇವರ ಭಾವಚಿತ್ರಗಳು ನೇತು ಹಾಕದಂತೆ ಕೆಎಸ್ಸಾರ್ಟಿಸಿ ಸಂಸ್ಥೆಗೆ ಆದೇಶ ನೀಡಬೇಕಾಗಿದೆ. ಈ ಮೂಲಕ ರಾಜ್ಯ ಸರಕಾರ ಸಾರ್ವಜನಿಕ ಸಂಸ್ಥೆಗಳನ್ನು ಜಾತಿ, ಧರ್ಮಗಳಿಂದ ಮುಕ್ತಗೊಳಿಸಿ ಭಾರತವನ್ನು ಸರ್ವಜನಾಂಗದ ತೋಟವಾಗಿ ಮಾರ್ಪಡಿಸಬೇಕು. ಸಾರ್ವಜನಿಕ ಕಚೇರಿಗಳು, ಶಾಲೆಗಳು, ಕಾಲೇಜುಗಳು, ಬಸ್‌ಗಳು ಭಾರತೀಯತೆಯನ್ನು ಎತ್ತಿ ಹಿಡಿಯುವಂತಹ ಸಂಕೇತಗಳಿಗಷ್ಟೇ ಜಾಗವನ್ನು ನೀಡಿ, ಎಲ್ಲ ಜಾತಿ ಧರ್ಮಗಳನ್ನು ಒಂದೇ ತೆಕ್ಕೆಯಲ್ಲಿ ತೆಗೆದುಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ಗೃಹ ಸಚಿವರು ತಾವು ಆಡಿದ ಮಾತುಗಳನ್ನು ಅನುಷ್ಠಾನಕ್ಕೆ ತರಲು ಯೋಜನೆಗಳನ್ನು ಹಮ್ಮಿಕೊಳ್ಳಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News