ಇನ್ನು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕಲು ಅವಕಾಶವಿಲ್ಲ: ಸಚಿವ ಸುನೀಲ್ ಕುಮಾರ್‌

Update: 2022-02-05 07:58 GMT

ಮಂಗಳೂರು, ಫೆ. 5: ಇನ್ನು ಮುಂದೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಯಾರಿಂದಲೂ ಅರ್ಜಿಯನ್ನು ಪಡೆಯದೆ, ಆಯ್ಕೆ ಸಮಿತಿಯನ್ನು ರಚಿಸಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರೂ ಆಗಿರುವ ವಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿರುವ ಅಮೈ ಮಹಾಲಿಂಗ ನಾಯ್ಕರಿಗೆ ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಶಾರದಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಹಾಲಿಂಗರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.

ಕಳೆದ ಸುಮಾರು ಮೂರು ವರ್ಷಗಳಿಂದ ದೇಶದ ಅತ್ಯುನ್ನತ ಪ್ರಶಸ್ತಿಗಳು ಅರ್ಹ ಸಾಧಕರಿಗೆ ದೊರೆಯುತ್ತಿದೆ. ಪ್ರಶಸ್ತಿಗಾಗಿ ನಾವು ಹುಡುಕಿಕೊಂಡು ಹೋಗಬಾರದು. ಪ್ರಶಸ್ತಿ ಸಾಧಕರನ್ನು ಗುರುತಿಸಿ ನೀಡುವಂತಾಗಬೇಕು. ಆ ನಿಟ್ಟಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ಸಾಧಕರ ಆಯ್ಕೆ ನಡೆಯಲಿದೆ ಎಂದು ಅವರು ಹೇಳಿದರು.

ಮಹಾಲಿಂಗ ನಾಯ್ಕರದ್ದು ಮೌನ ಕ್ರಾಂತಿ. ತಾವು ವಾಸವಿದ್ದ ಗುಡ್ಡದಲ್ಲಿ ಬಾವಿ ತೋಡಿ ನೀರು ಸಿಗದಾದ ವಿಚಲಿತರಾಗದೆ ಕಲಿಯುಗದಲ್ಲಿ ಸುರಂಗವನ್ನು ಕೊರೆದ ದ.ಕ. ಜಿಲ್ಲೆಯ ಸಾಧಕ. ನೀರಿಗಾಗಿ ಗಲಾಟೆ, ಸಂಘರ್ಷ, ನ್ಯಾಯಾಲಯದ ಮೆಟ್ಟಿಲೇರುವ ಈ ಸಂದರ್ಭದಲ್ಲಿ ಮಹಾಲಿಂಗ ನಾಯ್ಕರ ಸಾಧನೆ ಯುವ ಪೀಳಿಗೆಗೆ ಪ್ರೇರಣೆಯಾಗಿದೆ ಎಂದು ಅವರು ಹೇಳಿದರು.

10 ವರ್ಷದ ಬಳಿಕ ನೀರು ಬಂಗಾರಕ್ಕಿಂತಲೂ ಬೆಲೆಬಾಳಲಿದೆ!

ಇಂದು ನೀರಿಗಾಗಿ ಸಮಸ್ಯೆ ಹೆಚ್ಚಾಗುತ್ತಿರುವಂತೆಯೇ ಮುಂದಿನ 10 ವರ್ಷಗಳ ಬಳಿಕ ನೀರು ಬಂಗಾರಕ್ಕಿಂತಲೂ ಹೆಚ್ಚು ಬೆಲೆಬಾಳಲಿದೆ. ಅದಕ್ಕಾಗಿ ನೀರಿನ ಮಹತ್ವವನ್ನು ಅರಿತು ಸಾರ್ವಜನಿಕರು ಉಪಯೋಗಿಸಬೇಕು ಎಂದು ಸನ್ಮಾನ ಸ್ವೀಕರಿಸಿದ ಮಹಾಲಿಂಗ ನಾಯ್ಕ ಅಭಿಪ್ರಾಯಿಸಿದರು.

ಗುಡ್ಡದಲ್ಲಿ ಮೂರು ಬಾವಿ ಅಗದೆ ನೀರು ಸಿಗದೆ ಸುರಂಗ ತೋಡಲು ಮುಂದಾದಾಗ ಇವನ್ಯಾಕೆ ಗುಡ್ಡದಲ್ಲಿ ಇನ್ನೂ ಇದ್ದಾನೆ, ಅಲ್ಲಿ ನೀರು ಸಿಗದು ಎಂದೇ ಹೆಚ್ಚಿನವರು ಹೇಳಿದ್ದರು. ಆದರೆ ಅಂದು ನನಗೆ ಅದು ಅನಿವಾರ್ಯವಾಗಿತ್ತು. ನಾನು ಛಲ ಬಿಡದೆ ಯಾಕೆ ನೀರು ಸಿಗುವುದಿಲ್ಲ ಎಂದು ನನ್ನ ಕಾಯಕ ಮಾಡಿದೆ. ಅದಕ್ಕೆ ಪ್ರತಿಫಲ ದೊರಕಿದೆ. ಇಂದು ಬೋಳುಗುಡ್ಡದಲ್ಲಿ ಹಚ್ಚ ಹಸಿರಿನ ಕೃಷಿ ಇದೆ. ಮಳೆ ನೀರನ್ನು ಕೂಡಾ ನನ್ನ ಜಾಗದಿಂದ ಹೊರಹೋಗದಂತೆ ಮಾಡಿ ಅಂತರ್ಜಲವನ್ನು ಕಾಪಾಡಿಕೊಂಡು ಬಂದಿದ್ದೇನೆ ಎಂದು ಅವರು ಹೇಳಿದರು.

ಶಾಸಕ ವೇದವ್ಯಾಸ ಕಾಮತ್, ಶಾರದಾ ವಿದ್ಯಾಲಯದ ಮುಖ್ಯಸ್ಥ ಎಂ.ಬಿ. ಪುರಾಣಿಕ್ ಮಾತನಾಡಿದರು.

ವೇದಿಕೆಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸುಧಾಕರ ರಾವ್ ಪೇಜಾವರ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜೇಶ್ ಸ್ವಾಗತಿಸಿದರು. ಶಾರದಾ ವಿದ್ಯಾಲಯದ ಉಪ ಪ್ರಾಂಶುಪಾಲ ದಯಾನಂದ ಕಟೀಲು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News