×
Ad

ಹಿಂದುತ್ವ ಗುಂಪುಗಳಿಂದ ಹಿಜಾಬ್‌ ವಿವಾದ: ದೇಶದಾದ್ಯಂತ ʼಹಿಜಾಬ್‌ ನಮ್ಮ ಹಕ್ಕುʼ ಟ್ರೆಂಡಿಂಗ್‌ ನಂ.1

Update: 2022-02-05 13:53 IST

ಹೊಸದಿಲ್ಲಿ: ಕರ್ನಾಟಕದ ಹಲವು ವಿದ್ಯಾಸಂಸ್ಥೆಗಳಲ್ಲಿ ಸಂಘಪರವಾರ ಸಂಘಟನಾ ಪ್ರೇರಿತ ಕೇಸರಿ ಶಾಲು- ಹಿಜಾಬ್‌ ವಿವಾದಗಳು ಹೆಡೆಯೆತ್ತಿದ್ದು, ಇದು ಹಲವು ವಿದ್ಯಾಸಂಸ್ಥೆಗಳಿಗೆ ವ್ಯಾಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ವಸ್ತ್ರಧಾರಣಾ ಹಕ್ಕನ್ನು ಬೆಂಬಲಿಸಿ ಸಾಮಾಜಿಕ ತಾಣದಾದ್ಯಂತ ವ್ಯಾಪಕ ಅಭಿಯಾನಗಳು ಪ್ರಾರಂಭವಾಗಿವೆ. ಟ್ವಿಟರ್‌ ನಲ್ಲಿ #hijabisourright (ಹಿಜಾಬ್‌ ನಮ್ಮ ಹಕ್ಕು) ಹ್ಯಾಶ್‌ಟ್ಯಾಗ್‌ ಟ್ರೆಂಡಿಂಗ್‌ ಆಗಿದೆ.

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಈ ವಿಚಾರಕ್ಕೆ ಸಂಬಂಧಿಸಿ ಟ್ವೀಟ್‌ ಮಾಡಿದ್ದು, "ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ನಾವು ದರೋಡೆ ಮಾಡುತ್ತಿದ್ದೇವೆ. ಮಾ ಸರಸ್ವತಿ ಯಾರಲ್ಲೂ ತಾರತಮ್ಯ ಮಾಡುವುದಿಲ್ಲ" ಎಂದಿದ್ದಾರೆ. ಇನ್ನು ಕಾಂಗ್ರೆಸ್‌ ಮುಖಂಡ ಸಲ್ಮಾನ್‌ ನಿಝಾಮಿ, "ಕರ್ನಾಟಕದ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್‌ ನಿರಾಕರಿಸಿರುವುದು ಇಸ್ಲಾಮೋಫೋಬಿಕ್‌ ಕಾರ್ಯವಾಗಿದೆ. ಸ್ತ್ರೀದ್ವೇಷವಾದಿ ಮತ್ತು ಧರ್ಮಾಂಧತೆಯಾಗಿದೆ. ವಿದ್ಯಾರ್ಥಿನಿಯರ ಡ್ರೆಸ್ ಕೋಡ್ ಅನ್ನು ವ್ಯಾಖ್ಯಾನಿಸುವ ಮೂಲಕ ಮಹಿಳೆಯರನ್ನು ದಬ್ಬಾಳಿಕೆ ಮಾಡುತ್ತಿರುವ ತಾಲಿಬಾನ್, ಇರಾನ್ ಅನ್ನು ಟೀಕಿಸುವ ಹಕ್ಕನ್ನು ನೀವು ಕಳೆದುಕೊಂಡಿದ್ದೀರಿ!" ಎಂದು ಟ್ವೀಟ್‌ ಮಾಡಿದ್ದಾರೆ.

ಈ ಅಭಿಯಾನದಲ್ಲಿ ಹಲವಾರು ಮಂದಿ ಖ್ಯಾತ ಪತ್ರರ್ತರು, ಮಾನವ ಹಕ್ಕು ಹೋರಾಟಗಾರರು ಕೈಜೋಡಿಸಿದ್ದಾರೆ. ಈ ನಡುವೆ ಬಲಪಂಥೀಯ ಹಿಂದುತ್ವ ಗುಂಪುಗಳು ತಮ್ಮ ಸಾಮಾಜಿಕ ತಾಣಗಳಲ್ಲಿ ಇದೇ ಹ್ಯಾಶ್‌ಟ್ಯಾಗ್‌ ಬಳಸಿಕೊಂಡು ಅಸಭ್ಯ ಮತ್ತು ಅಶ್ಲೀಲ ಚಿತ್ರಗಳನ್ನು ಹಾಗೂ ಮಾನಹಾನಿಕರ ಹೇಳಿಕೆಗಳನ್ನು ಪ್ರಕಟಿಸುತ್ತಿದ್ದು, ಈ ಕುರಿತು ಟ್ವಿಟರ್‌ ನಲ್ಲಿ ಆಕ್ರೋಶ ವ್ಯಕ್ತವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News