ಆಸ್ಟ್ರೇಲಿಯಾ ರಾಯಭಾರ ಕಚೇರಿಯ ಮಹಿಳೆಯರ ಸ್ನಾನದ ಕೋಣೆಯಲ್ಲಿ ರಹಸ್ಯ ಕ್ಯಾಮೆರಾ ಪತ್ತೆ

Update: 2022-02-05 16:53 GMT

ಬ್ಯಾಂಕಾಕ್, ಫೆ.5: ಬ್ಯಾಂಕಾಕ್ನಲ್ಲಿನ ಆಸ್ಟ್ರೇಲಿಯಾ ರಾಯಭಾರ ಕಚೇರಿಯ ಮಹಿಳೆಯರ ಸ್ನಾನದ ಕೋಣೆಯಲ್ಲಿ ಹಲವು ಸ್ಪೈ‌ (ರಹಸ್ಯ) ಕ್ಯಾಮೆರಾ ಪತ್ತೆಯಾಗಿದ್ದು ಈ ಸಂಬಂಧ ಕಚೇರಿಯ ಮಾಜಿ ಉದ್ಯೋಗಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಆಸ್ಟ್ರೇಲಿಯಾದ ಅಧಿಕಾರಿಗಳು ಹೇಳಿದ್ದಾರೆ.

ಕಚೇರಿಯ ಸಿಬ್ಬಂದಿಗಳ ಯೋಗಕ್ಷೇಮ ಮತ್ತು ಖಾಸಗಿತನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಮತ್ತು ಸೂಕ್ತ ಬೆಂಬಲ ನೀಡುವುದನ್ನು ಮುಂದುವರಿಸಲಿದ್ದೇವೆ ಎಂದು ಆಸ್ಟ್ರೇಲಿಯಾದ ವಿದೇಶ ವ್ಯವಹಾರ ಇಲಾಖೆಯ ವಕ್ತಾರರು ಹೇಳಿದ್ದಾರೆ. ಈ ಮಧ್ಯೆ, ಆರೋಪಿಯಾಗಿರುವ ಮಾಜಿ ಸಿಬಂದಿಯನ್ನು ಬಂಧಿಸಲಾಗಿದೆ ಎಂದು ಥೈಲ್ಯಾಂಡ್ನ ಪೊಲೀಸ್ ಇಲಾಖೆ ದೃಢಪಡಿಸಿದೆ.

ಜನವರಿ 6ರಂದು ಆಸ್ಟ್ರೇಲಿಯಾ ರಾಯಭಾರ ಕಚೇರಿಯು ವ್ಯಕ್ತಿಯೊಬ್ಬನ ವಿರುದ್ಧ ದೂರು ದಾಖಲಿಸಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಥಾಯ್ಲಂಡ್ ಪೊಲೀಸ್ ವಿಭಾಗದ ಉನ್ನತ ಅಧಿಕಾರಿ ಖೆಮ್ಮರಿನ್ ಹಸ್ಸೀರಿ ಹೇಳಿದ್ದಾರೆ. ಕ್ಯಾಮೆರಾದ ಎಸ್ಡಿ ಕಾರ್ಡ್ ಸ್ನಾನದ ಕೋಣೆಯ ನೆಲದ ಮೇಲೆ ಬಿದ್ದಿರುವುದನ್ನು ಕಂಡು ಪರಿಶೀಲನೆ ನಡೆಸಿದಾಗ ಸ್ಪೈಕ್ಯಾಮೆರಾ ಪತ್ತೆಯಾಗಿದೆ.ಎಷ್ಟು ಸಮಯದಿಂದ ಕ್ಯಾಮೆರಾ ಅಲ್ಲಿತ್ತು ಎಂಬುದು ಸ್ಪಷ್ಟವಾಗಿಲ್ಲ. ಇದು ಗಂಭೀರ ಭದ್ರತಾ ಲೋಪದ ಪ್ರಕರಣವಾಗಿದೆ ಎಂದು ಆಸ್ಟ್ರೇಲಿಯಾದ ರಕ್ಷಣಾ ಮತ್ತು ವಿದೇಶ ಕಾರ್ಯನೀತಿ ತಜ್ಞರು ಹೇಳಿದ್ದಾರೆ.

ಬಿಗಿ ಭದ್ರತೆಯ ಪ್ರದೇಶದಲ್ಲಿ ಕ್ಯಾಮೆರಾದಂತಹ ಸಾಧನಗಳನ್ನು ಅಳವಡಿಸಲು ಸಾಧ್ಯ ಎಂದಾದಲ್ಲಿ ಇದು ಖಂಡಿತಾ ಗಂಭೀರ ಭದ್ರತಾ ಲೋಪವಾಗಿದೆ ಎಂದು ಆಸ್ಟ್ರೇಲಿಯಾ ನ್ಯಾಷನಲ್ ವಿವಿಯ ಪೆ್ರೂಫೆಸರ್ ಹ್ಯೂ ವೈಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News