ಗುಜ್ಜಾಡಿ: ಸೌಕರ್ಯಗಳಿಂದ ವಂಚಿತರಾದ ಕೊರಗ ಕುಟುಂಬಗಳು
ಕುಂದಾಪುರ, ಫೆ.6: ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಾಗಿರುವ 5 ಕೊರಗ ಸಮುದಾಯದ ಕುಟುಂಬಗಳ ಪರಿಸ್ಥಿತಿ ಅತ್ಯಂತ ಕೆಳ ಮಟ್ಟಕೆ ತಲುಪಿದೆ. ಮುರುಕಲು ಮನೆಯಲ್ಲಿ ಬದುಕುತ್ತಿರುವ ಈ ಕುಟುಂಬಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ.
ಗುಜ್ಜಾಡಿ ಗ್ರಾಪಂ ಮಾಜಿ ಅಧ್ಯಕ್ಷೆ ಸಿದ್ದು ಕೊರಗ ಮತ್ತು ಅವರ ಕುಟುಂಬ ಹಲವಾರು ವರ್ಷಗಳಿಂದ ಗುಜ್ಜಾಡಿ ಗ್ರಾಮದ ಹೊಲಿಕ್ರಾಸ್ ಬಳಿ ಸರ್ವೇ ನಂಬರ್ 175ರಲ್ಲಿ ವಾಸ ಮಾಡುತ್ತಿದ್ದಾರೆ. ಅವರ ಭೂಮಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಅವರಲ್ಲಿ ಇಲ್ಲ. ಆಧಾರ ಕಾರ್ಡ್ ಹೊರತುಪಡಿಸಿ ಜಾತಿ-ಆದಾಯ ಪ್ರಮಾಣ ಪತ್ರ, ಚುಣಾವಣೆ ಗುರುತಿನ ಚೀಟಿ ಕೂಡ ಇಲ್ಲ.
62 ವರ್ಷ ವಯಸ್ಸಿನ ಸಿದ್ದು ಹಾಗೂ 80ರ ಹರೆಯದ ಅವರ ಗಂಡ ಬಾಡು ಅವರಿಗೆ ಯಾವುದೇ ರೀತಿಯ ವೃದ್ಧಾಪ್ಯ ವೇತನ ಸಿಗುತ್ತಿಲ್ಲ. ಅಲ್ಲದೆ ಬಾಡು ಕೊರಗ ಹಲವಾರು ವರ್ಷ ಪಂಚಾಯಿತಿಯಲ್ಲಿ ಸ್ವಚ್ಛತೆ ಕೆಲಸದಲ್ಲಿ ದುಡಿದು ನಿವೃತ್ತಿ ಹೊಂದಿದ್ದರೂ ಪಿಂಚಣಿ ಸಿಗುತ್ತಿಲ್ಲ. ಭಿಕ್ಷೆ ಬೇಡಿ ಬದುಕುವ ಪರಿಸ್ಥಿತಿ ಎದುರಾಗಿದೆ.
ಮನೆ ಚಾವಣಿ ಬೀಳುವ ಸ್ಥಿತಿ
ಸಿದ್ದು ಅವರಿಗೆ ಸುಮಾರು 25 ವರ್ಷದ ಹಿಂದೆ ಗ್ರಾಪಂನಿಂದ ಮನೆ ನಿರ್ಮಿಸಿ ಕೊಡಲಾಗಿದೆ. ಆ ಮನೆಯ ಚಾವಣಿ ಬಿಳುವ ಹಂತಕ್ಕೆ ತಲುಪಿದ್ದು, ಅದನ್ನು 2020-21ರ ಸಾಲಿನ 15ನೆ ಹಣಕಾಸು ಆಯೋಗದ ಶಿಫಾರಸ್ಸಿನ ಅನುದಾನದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಣದಲ್ಲಿ 35 ಸಾವಿರ ರೂ. ಕ್ರಿಯಾ ಯೋಜನೆ ಮಾಡಿಕೊಂಡು ಗ್ರಾಪಂ ದುರಸ್ತಿ ಮಾಡಿದೆ.
ಆದರೆ ದುರಸ್ತಿ ಮಾಡಿದರೂ ಮನೆಯ ಪರಿಸ್ಥಿತಿ ಏನೂ ಬದಲಾಗಿಲ್ಲ. ಅದೇ ಮನೆಗೆ ಮೊದಲು ಅಳವಡಿಸಿದ ಹಳೆ ಪಕಾಸೆ, ಹೆಂಚು ಪುನಃ ಅಳವಡಿಸಲಾಗಿದೆ. ಮನೆಗೆ ಹೊಸದಾಗಿ ಗಾರೆ ಅಥವಾ ಕೋಣೆ ನಿರ್ಮಾಣ ಮಾಡಿಲ್ಲ. ಹೊಸದಾಗಿ ಅಳವಡಿಸಿರುವುದು ಕೇವಲ ಸುಮಾರು ಅಂದಾಜು 10 ಸಾವಿರ ಮೌಲ್ಯದ ರೀಪ್‌ಗಳು ಮಾತ್ರ ಎಂದು ಗ್ರಾಪಂ ಸದಸ್ಯೆ ಜಯಂತಿ ಆರೋಪಿಸಿದ್ದಾರೆ.
ಕಳಪೆ ದುರಸ್ತಿ ಮಾಡಿ 34 ಸಾವಿರ ಬಿಲ್ಲು ಪಡೆದಿರುವುದಲ್ಲದೆ, ಹೆಚ್ಚುವರಿ 30 ಸಾವಿರ ಅನುದಾನ ಅಗತ್ಯವಿದೆ ಎಂದು ಬೇರೆ ಕುಟುಂಬಗಳಿಗೆ ಮೀಸಲು ಇಟ್ಟಿರುವ ಅನುದಾನ ಮತ್ತೆ ಪಡೆಯಲು ಅಧಿಕಾರಿಗಳ ಸಹಾಯದಿಂದ ಗುತ್ತಿಗೆ ದಾರರು ಪ್ರಯತ್ನ ಪಡುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದ ನನಗೆ ಗ್ರಾಪಂ ಅಧಿಕಾರಿಗಳು ಹಾಗೂ ಸದಸ್ಯರು ಸಾಮಾನ್ಯ ಸಭೆಯಲ್ಲಿ ನಿಂದನೆ ಮಾಡಿದ್ದು, ಮಾತನಾಡಲು ಕೂಡ ಬಿಡುತ್ತಿಲ್ಲ ಎಂದು ಅವರು ದೂರಿದ್ದಾರೆ.
ಹಣ ದುರ್ಬಳಕೆಗೆ ಯತ್ನ
ಗುಜ್ಜಾಡಿ ಗ್ರಾಮ ಪಂಚಾಯತನಲ್ಲಿ 2020-21ರ ಸಾಲಿನ 15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಅನುದಾನದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಣದಲ್ಲಿ ಕೊರಗ ಕಾಲನಿಯಲ್ಲಿ ಉತ್ತಮ ಬಾವಿ ಇದ್ದರೂ 70 ಸಾವಿರ ರೂ. ಹಣವನ್ನು ಬಾವಿ ರಚನೆಗೆ ಮೀಸಲಿರಿಸಲಾಗಿದೆ.
ಈ 70 ಸಾವಿರ ರೂ. ಹಣವನ್ನು ಸಿದ್ದು ಅವರ ಮನೆ ದುರಸ್ತಿ ಹೆಸರಿನಲ್ಲಿ ಕಬಳಿಸಲು ಪ್ರಯತ್ನ ಮಾಡಲಾಗುತ್ತಿದೆ. ಈ ಹಣದಿಂದ ಬಾವಿಯ ಹೂಳು ತೆಗೆಯುವುದು, ಉಳಿದ ಹಣವನ್ನು ಕೊರಗ ಮಕ್ಕಳ ಶಿಕ್ಷಣಕೆ ಪ್ರೋತ್ಸಾಹ ಧನ, ಇನ್ನುಳಿದ ಮನೆಗಳ ದುರಸ್ತಿಗೆ ಕೇಳಿಕೊಂಡರೆ ಕೊರಗ ಸಮುದಾಯದ ಬೇಡಿಕೆಗಳಿಗೆ ಯಾವುದೇ ಮಾನ್ಯತೆ ಇಲ್ಲ. ಕೊರಗರ ಬದುಕಿನ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗದಿದ್ದರೂ ಅವರ ಹೆಸರಿನಲ್ಲಿ ಹಣ ಮಾತ್ರ ಖರ್ಚು ಆಗುತ್ತಿದೆ ಎಂದು ಕೊರಗ ಮುಖಂಡರು ದೂರಿದ್ದಾರೆ.
''ಗುಜ್ಜಾಡಿಯ ಕೊರಗ ಸಮುದಾಯದ ಕಾಲನಿಗೆ ನಾನು ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಅವರ ಪರಿಸ್ಥಿತಿ ನೋಡಿ ತುಂಬಾ ಬೇಸರವಾಗಿದೆ. ಗುಜ್ಜಾಡಿ ಗ್ರಾಪಂ ಕೊರಗ ಸಮುದಾಯದ ಕುಟುಂಬಗಳಿಗೆ ಯಾವ ಸೌಲಭ್ಯ ಬೇಕು ಎಂದು ಕೇಳಿ ಯೋಜನೆ ತಯಾರಿಸುತ್ತಿಲ್ಲ. ಬದಲಾಗಿ ಗುತ್ತಿಗೆದಾರರಿಗೆ ಬೇಕಾಗಿ ಯೋಜನೆ ತಯಾರಿಸಿ ಜಾರಿಗೆ ತರಲಾಗುತ್ತಿದೆ. ಆದರಿಂದ ಕೊರಗರ ಜೀವನ ಮಟ್ಟ ಹಾಗೇ ಹಿಂದುಳಿದಿದೆ. ಕನಿಷ್ಠ ಮೂಲಭೂತ ಸೌಕರ್ಯಗಳು ಮತ್ತು ಅಗತ್ಯ ವೈಯಕ್ತಿಕ ದಾಖಲೆಗಳು ಕೂಡ ಅವರಲ್ಲಿ ಇಲ್ಲ. ಇದು ಕೊರಗ ಸಮುದಾಯಕೆ ಮಾಡಿರುವ ಅನ್ಯಾಯ''
-ಶ್ರೀಧರ ನಾಡ, ಜಿಲ್ಲಾ ಸಂಚಾಲಕರು, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಉಡುಪಿ ಜಿಲ್ಲೆ.
''ಗುಜ್ಜಾಡಿ ಗ್ರಾಪಂ ಸದಸ್ಯೆ ಜಯಂತಿ ಕೊರಗ ಸಾಮಾನ್ಯ ಸಭೆಯಲ್ಲಿ ಕೊರಗ ಸಮುದಾಯಕೆ ಮೀಸಲು ಇಟ್ಟಿರುವ ಅನುದಾನದ ಹಂಚಿಕೆ ಸಂಧರ್ಭದಲ್ಲಿ ಜನರ ಅಗತ್ಯತೆ ಕುರಿತು ನಿರ್ಣಯ ಮಾಡಲು ಕೇಳಿಕೊಂಡಿದ್ದರು. ಆದರೆ ಆ ಬಗ್ಗೆ ನಿರ್ಣಯ ಮಾಡದೆ, ಅಧಿಕಾರಿಗಳು ಮತ್ತು ಇತರರ ಲಾಭಕ್ಕಾಗಿ ಕ್ರಿಯಾ ಯೋಜನೆ ಬಲಾವಣೆ ಮಾಡಿರುವುದು ಖಂಡನೀಯ. ಗುಜ್ಜಾಡಿಯ ಕೊರಗ ಸಮುದಾಯಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಹೋರಾಟ ಮಾಡಲಾಗುವುದು''.
-ಗೌರಿ ಕೆಂಜೂರು, ಜಿಲ್ಲಾ ಸಂಚಾಲಕರು, ಆದಿಮೂಲ ಬುಡಕಟ್ಟು ಕೊರಗರ ಸಂಘಟನೆ ಉಡುಪಿ ಜಿಲ್ಲೆ.
''ಈ ಬಾರಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸುಮಾರು 4 ಲಕ್ಷ ಅನುದಾನವಿದೆ. ಅದರಲ್ಲಿ ಕೊರಗ ಸಮುದಾಯಕ್ಕೆ ಮೀಸಲಾತಿ ಇದೆ. ಗ್ರಾಮದ 5 ಕೊರಗ ಕುಟುಂಬಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಬೇಕು ಎಂದು ನಾನು ಸಾಮಾನ್ಯ ಸಭೆಯಲ್ಲಿ ಹೇಳಿದ್ದೇನೆ. ಆದರೆ ಕೆಲವು ಸದಸ್ಯರು 2 ಮನೆಗೆ ಮಾತ್ರ ಅನುದಾನ ನೀಡಲು ಸಾಧ್ಯ ಉಳಿದ 3 ಕುಟುಂಬಗಳಿಗೆ ನೀಡಲು ಸಾಧ್ಯವಿಲ್ಲ ಎಂದು ಬಲವಂತದಿಂದ ನಿರ್ಣಯ ಮಾಡಿದ್ದಾರೆ. ಅಲ್ಲದೆ ಕೊರಗ ಸಮುದಾಯ ಬೇಡಿಕೆಗಳ ಕುರಿತು ಚರ್ಚಿಸಲು ಬಿಡುತ್ತಿಲ್ಲ. ನನಗೆ ವೈಯಕ್ತಿಕವಾಗಿ ಸಭೆಯಲ್ಲಿ ನಿಂದನೆ ಮಾಡಿ, ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ತಾಲೂಕು ಕಾರ್ಯಾನಿರ್ವಾಹಣಾಧಿಕಾರಿಯವರಿಗೆ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿಲ್ಲ''.
- ಜಯಂತಿ, ಸದಸ್ಯರು, ಗುಜ್ಜಾಡಿ ಗ್ರಾಪಂ