×
Ad

ರಥಬೀದಿಯ ಜಾತ್ರಾ ಮಹೋತ್ಸವ; ಮುಸ್ಲಿಂ ವ್ಯಕ್ತಿಯ ಅಂಗಡಿ ತೆರವುಗೊಳಿಸಿದ ಸಂಘ ಪರಿವಾರದ ಕಾರ್ಯಕರ್ತರು

Update: 2022-02-06 21:13 IST
ಸಾಂದರ್ಭಿಕ ಚಿತ್ರ

ಮಂಗಳೂರು, ಫೆ.6: ನಗರದ ರಥಬೀದಿಯ ವೆಂಕಟರಮಣ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ನಡೆಸುತ್ತಿದ್ದ ಲೈಮ್ ಸೋಡಾ ಮತ್ತು ಸ್ವೀಟ್‌ಕಾರ್ನ್‌ನ್ನು ಸಂಘಪರಿವಾರದ ಕಾರ್ಯಕರ್ತರು ತೆರವುಗೊಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ವಿಚಾರವಾದಿಗಳ ಸಂಘದ ರಾಷ್ಟ್ರೀಯ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್ ತನ್ನ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಕಳೆದ ಸೋಮವಾರ ನಗರದ ಮುಸ್ಲಿಂ ವ್ಯಕ್ತಿಯೊಬ್ಬರು ದೇವಸ್ಥಾನದ ಸಮೀಪದ ರಸ್ತೆಯ ಬದಿಯಲ್ಲಿ ಲೈಮ್ ಸೋಡಾ ಮತ್ತು ಸ್ವೀಟ್‌ಕಾರ್ನ್‌ನ ಸ್ಟಾಲ್ ಹಾಕಿದ್ದರು. ಅದಕ್ಕಾಗಿ ಅನಧಿಕೃತ ವ್ಯಕ್ತಿಯೊಬ್ಬರು ಈ ವ್ಯಾಪಾರಿಯಿಂದ ದಿನ ಬಾಡಿಗೆ 1,250ರೂ., ವಿದ್ಯುತ್ ಬಿಲ್ ಹಾಗೂ ಮುಂಗಡ ಹಣ ಎಂದೆಲ್ಲಾ 3 ಸಾವಿರ ರೂ. ವಸೂಲಿ ಮಾಡಿದ್ದರು. ಕೇವಲ ಎರಡು ದಿನ ಈ ವ್ಯಕ್ತಿ ವ್ಯಾಪಾರ ನಡೆಸಿದ್ದಾರೆ ಎನ್ನಲಾಗಿದೆ. ಮೂರನೇ ದಿನ ವ್ಯಾಪಾರ ಮಾಡಲು ಹೋದಾಗ ಸಂಘಪರಿವಾರದ ಕಾರ್ಯಕರ್ತರು ಎನ್ನಲಾದ ಕೆಲವರು ವ್ಯಾಪಾರ ಮಾಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿ ಅಂಗಡಿಯನ್ನು ತೆರವುಗೊಳಿಸಿದರು ಎಂದು ಹೇಳಲಾಗಿದೆ.

ಈ ಮಧ್ಯೆ ಕೆಲವು ಮಂದಿ ಸಂತೆ ವ್ಯಾಪಾರಿಗಳು ಪೊಲೀಸ್ ಆಯುಕ್ತರಿಗೆ ದೂರೊಂದನ್ನು ಸಲ್ಲಿಸಿ ಕೆಲವು ಕಿಡಿಗೇಡಿಗಳು ನಮ್ಮಿಂದ ಸಾವಿರಾರು ರೂಪಾಯಿಯನ್ನು ಒತ್ತಾಯ ಪೂರ್ವಕವಾಗಿ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ದೇವಸ್ಥಾನದ ಆಡಳಿತ ಸಮಿತಿಯವರ ಬಳಿ ವಿಚಾರಿಸಿದಾಗ ನಾವು ಯಾರ ಬಳಿಯೂ ಹಣ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದು ಅಮಾನವೀಯ: ನರೇಂದ್ರ ನಾಯಕ್

ಸಂತೆ ವ್ಯಾಪಾರಿಗಳಿಂದ ಅನಧಿಕೃತವಾಗಿ ಹಣ ವಸೂಲಿ ಮಾಡುವುದು ಅಪರಾಧವಾಗಿದೆ. ಕೇವಲ ಮುಸ್ಲಿಂ ಎಂಬ ಕಾರಣಕ್ಕೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸದೆ ಅಂಗಡಿಯನ್ನು ತೆರವುಗೊಳಿಸಿರುವುದು ಕೂಡ ಅಮಾನವೀಯವಾಗಿದೆ. ಈಗಾಗಲೆ ನಾನು ನೊಂದ ವ್ಯಾಪಾರಿಯ ಬಳಿ ಮಾತನಾಡಿರುವೆ. ಮುಸ್ಲಿಮರು ದೇವಸ್ಥಾನಗಳ ಜಾತ್ರೆ ಸಂದರ್ಭ ವ್ಯಾಪಾರ ಮಾಡುವುದನ್ನು ಸಹಿಸದವರು ಅರಬ್ ದೇಶದಿಂದ ಆಮದು ಮಾಡಲಾಗುತ್ತಿರುವ ಪೆಟ್ರೋಲ್, ಡೀಸೆಲ್, ಖರ್ಜೂರ ಇತ್ಯಾದಿಯನ್ನು ಬಳಸುವುದು ಎಷ್ಟು ಸರಿ ? ಈ ತೆರವು ಪ್ರಕ್ರಿಯೆಯೇ ಖಂಡನೀಯ. ಇಂತಹ ಕೃತ್ಯಗಳಿಗೆ ಜಿಲ್ಲಾಡಳಿತ, ಪೊಲೀಸ್ ಆಯುಕ್ತರು ಕಡಿವಾಣ ಹಾಕಬೇಕಿದೆ ಎಂದು ವಿಚಾರವಾದಿಗಳ ಸಂಘದ ರಾಷ್ಟ್ರೀಯ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್ ಒತ್ತಾಯಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News