×
Ad

ತಲೆವಸ್ತ್ರಧಾರಣೆಯ ನೆಪದಲ್ಲಿ ಶಿಕ್ಷಣದ ಹಕ್ಕನ್ನು ಕಿತ್ತುಕೊಳ್ಳುವುದು ಜನಾಂಗೀಯ ನಿಂದನೆಗೆ ಸಮಾನವಲ್ಲವೇ?

Update: 2022-02-08 00:05 IST

ಶಿಕ್ಷಣಸಂಸ್ಥೆಗಳಲ್ಲಿ ವಸ್ತ್ರಧಾರಣೆಯ ಹೆಸರಿನಲ್ಲಿ ಶಿಕ್ಷಣ ಪಡೆಯುವ ಅವಕಾಶವನ್ನು ಸಾರಾಸಗಟಾಗಿ ನಿರಾಕರಿಸುವಂತಹ ಅಕ್ರಮಗಳಿಗೆ, ಕ್ರೂರತನಗಳಿಗೆ ಶಿಕ್ಷಕ ಸಮೂಹದವರು ಇಳಿಯುತ್ತಿರುವುದು ಅವರು ಕಲಿತ ವಿದ್ಯಾಮಟ್ಟವನ್ನು ತೆರೆದಿಡುತ್ತಿದೆ. ಇದೇ ಶಿಕ್ಷಕ ಸಮೂಹ ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ನಿಯಮಬಾಹಿರವಾಗಿ ಅನೇಕ ಧಾರ್ಮಿಕ ಆಚರಣೆಗಳನ್ನು ನಡೆಸುವಲ್ಲಿ ನೇರವಾಗಿಯೇ ಪಾಲ್ಗೊಳ್ಳುತ್ತಾ ಬಂದಿರುವುದು ಬಹಿರಂಗ ಸತ್ಯ. ಹಾಗಿದ್ದಾಗ ಮುಸ್ಲಿಮ್ ಹುಡುಗಿಯರು ಧರಿಸುವ ಯಾರಿಗೂ ಹಾನಿ ಮಾಡದ ತಲೆವಸ್ತ್ರವನ್ನು ಗುರಿಮಾಡಿ ಅವರ ಶಿಕ್ಷಣದ ಹಕ್ಕನ್ನೇ ಕಿತ್ತುಕೊಳ್ಳುವ ಕಾನೂನು ಬಾಹಿರ ಕ್ರೂರ ಚಿಂತನೆ ಇವರು ತಲೆಗಳಲ್ಲಿ ತುಂಬಿಸಿಕೊಂಡಿದ್ದು ಇವರ ಕೋಮುದ್ವೇಷದ ಭಾಗವಾಗಿಯೇ ತಾನೇ.



 ಕರ್ನಾಟಕ ಇಂದು ರಾಷ್ಟ್ರ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಅದು ಹೆಮ್ಮೆ ಪಡುವಂತಹ ಕಾರಣಕ್ಕಾಗಿಯೇನೂ ಅಲ್ಲ. ಬದಲಿಗೆ ತಲೆವಸ್ತ್ರದ ಹೆಸರಿನಲ್ಲಿ ಮುಸ್ಲಿಮ್ ಹೆಣ್ಣುಮಕ್ಕಳನ್ನು ಕಾಲೇಜು ಗಳಿಂದ ಹೊರಗಡೆ ಹಾಕುತ್ತಿರುವ ಕಾರಣಕ್ಕಾಗಿ. ಬಹುಶಃ ವಸ್ತ್ರದ ಕಾರಣ ಹಿಡಿದು ಈ ಮಟ್ಟದಲ್ಲಿ ಕಾಲೇಜುಗಳ ಅದರಲ್ಲೂ ಸರಕಾರಿ ಕಾಲೇಜುಗಳ ವಿದ್ಯಾರ್ಥಿನಿಯರನ್ನು ಸಾರಾಸಗಟಾಗಿ ಕಾಲೇಜಿನಿಂದಲೇ ಹೊರಗಡೆ ಹಾಕಿರುವ ಪ್ರಕರಣಗಳು ಅಪರೂಪವಾದುದು. ಇದು ಕರ್ನಾಟಕದಲ್ಲಿ ನಡೆದಿದೆ ಎಂದರೆ ಮತ್ತೂ ಅಪರೂಪವಾದುದು. ಆದರೆ ಕರ್ನಾಟಕದಲ್ಲಿ ಆಗುತ್ತಿರುವ ಚರ್ಚೆಗಳಲ್ಲಿ ಪ್ರಧಾನವಾಗಿ ಮುಸ್ಲಿಮ್ ಹೆಣ್ಣು ಮಕ್ಕಳ ತಲೆವಸ್ತ್ರ ಮಾತ್ರ ಕೇಂದ್ರೀಕೃತವಾಗಿದೆ. ಅವರನ್ನು ವಿದ್ಯಾಸಂಸ್ಥೆಗಳಿಂದ ಹೊರಹಾಕಿರುವ ವಿಚಾರದ ಬಗ್ಗೆ, ಅವರನ್ನು ಸಾರ್ವಜನಿಕವಾಗಿ ಒಂಟಿಯಾಗಿಸಿ ಉಸಿರುಗಟ್ಟುವಂತೆ ಮಾಡಿರುವ ಬಗ್ಗೆ ಸರಕಾರ ವಾಗಲೀ ನಾಗರಿಕ ಸಮಾಜದ ಗಣ್ಯರೆನಿಸಿಕೊಂಡವರಾಗಲೀ ಅಷ್ಟಾಗಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಬದಲಿಗೆ ಕಾಲೇಜು ವಿದ್ಯಾರ್ಥಿನಿಯರು ತಲೆಗೆ ಬಟ್ಟೆ ಹಾಕುವುದು ಸರಿಯೇ ತಪ್ಪೇ ಎನ್ನುವುದಕ್ಕೇ ತಮ್ಮ ಗಮನ ಕೇಂದ್ರೀಕರಿಸುವ ಮೂಲಕ ಗೊತ್ತಿದ್ದೋ ಗೊತ್ತಿಲ್ಲದೆಯೋ ಗುಪ್ತ ಕೋಮುವಾದಿ ಫ್ಯಾಶಿಸ್ಟ್ ಕಾರ್ಯಸೂಚಿಯ ಭಾಗವಾಗಿ ವರ್ತಿಸುತ್ತಿದ್ದಾರೆ ಎನಿಸುತ್ತಿದೆ. ಇದರಲ್ಲಿ ಪ್ರಗತಿಪರ ವಲಯದಲ್ಲಿ ಗುರುತಿಸಿಕೊಂಡಿರುವ ಹಲವರೂ ಸೇರಿದ್ದಾರೆ ಎನ್ನುವುದು ನಮ್ಮ ಮುಂದಿರುವ ವಾಸ್ತವ.

ತಲೆವಸ್ತ್ರ ಧರಿಸುವುದು ಆ ಬಾಲಕಿಯರ ಮೇಲಿನ ಮತೀಯ ಬಂಧನದ ಸಂಕೇತ ಹಾಗಾಗಿ ಅದಕ್ಕೆ ಅವಕಾಶ ಇರಕೂಡದು ಅದು ಮಹಿಳಾ ಸಬಲೀಕರಣದ ವಿರುದ್ಧವಾದುದು, ಮಹಿಳೆಯರ ವಿಮೋಚನೆಗೆ, ಮಹಿಳಾ ಹಕ್ಕುಗಳಿಗೆ ವಿರುದ್ಧವಾದುದು ಇತ್ಯಾದಿ ವಾದಗಳು ಪ್ರಗತಿಪರ, ಮಹಿಳಾಪರ ಮತ್ತು ಉದಾರವಾದಿ ಪ್ರಜಾತಾಂತ್ರಿಕ ವಲಯದಲ್ಲಿ ಗುರುತಿಸಿಕೊಂಡ ಕೆಲವರಿಂದ ಹೊರಬಿದ್ದಿವೆ. ಇದರಲ್ಲಿ ಲೇಖಕರು, ಪತ್ರಕರ್ತರು, ಕವಿ ಹಾಗೂ ಕವಯಿತ್ರಿಯರು ಸೇರಿದ್ದಾರೆ.

ಇನ್ನು ಎಡಪಂಥೀಯ ವಲಯದಲ್ಲಿ ಗುರುತಿಸಿಕೊಂಡಿರುವ ಕೆಲವರು, ಬಹುಸಂಖ್ಯಾತ ಎಂದು ಬಿಂಬಿಸಿಕೊಳ್ಳುವ ಕೋಮುವಾದ ಹಾಗೂ ಮೂಲಭೂತವಾದವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುತ್ತಿದ್ದು, ಇವರೆಡರ ಮಧ್ಯೆ ವಿದ್ಯಾರ್ಥಿನಿಯರು ನಜ್ಜುಗುಜ್ಜಾಗುತ್ತಿದ್ದಾರೆ. ತಲೆವಸ್ತ್ರ, ಬುರ್ಖಾ ಧರಿಸುವುದು ನಿಲ್ಲಿಸಬೇಕು, ಅದು ಮಹಿಳಾ ಶೋಷಣೆಯ ರೂಪ ಎಂದೆಲ್ಲಾ ನಿಲುವುಗಳನ್ನು ಈ ಸಂದರ್ಭದಲ್ಲಿ ಹೊರಹಾಕುತ್ತಿದ್ದಾರೆ.

ಕರ್ನಾಟಕದಲ್ಲಿ ಈಗ ಇರುವುದು ಸಂಘ ಪರಿವಾರದ ಬಿಜೆಪಿ ಸರಕಾರ. ಅದು ಅಧಿಕಾರ ಹಿಡಿಯಲು ಬಳಸಿದ ಪ್ರಧಾನ ತಂತ್ರವೇ ಕೋಮು ಧ್ರುವೀಕರಣ. ಅದರಲ್ಲೂ ಮುಸ್ಲಿಮರು ನಂತರ ಕ್ರೈಸ್ತರು ಅವರ ಪ್ರಧಾನ ಗುರಿ. ನಂತರದ ಗುರಿ ದಲಿತ, ದಮನಿತರು, ಮಹಿಳೆಯರು, ಶೂದ್ರರು ಎನ್ನುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ದಕ್ಷಿಣ ಭಾರತದಲ್ಲಿ ಸಂಘಪರಿವಾರ ಅಧಿಕಾರ ರಾಜಕಾರಣದಲ್ಲಿ ಕಾಲೂರಿ ನಿಲ್ಲಲು ಸಾಧ್ಯವಾಗಿದ್ದು ಕರ್ನಾಟಕದಲ್ಲಿ ಮಾತ್ರ. ಅದಕ್ಕೆ ಮುಖ್ಯ ಕಾರಣ ಕರ್ನಾಟಕದಲ್ಲಿ ತಮಿಳುನಾಡಿನ ದ್ರಾವಿಡ ಚಳವಳಿ, ಕೇರಳದ ಜಾತೀಯತೆ ವಿರೋಧಿ ಚಳವಳಿ, ಸುಧಾರಣಾ ಚಳವಳಿ ಹಾಗೂ ಕೇರಳ ಹಾಗೂ ಆಂಧ್ರ ಪ್ರದೇಶಗಳಲ್ಲಿನ ಕ್ರಾಂತಿಕಾರಿ ಎಡಪಂತೀಯ ಚಳವಳಿಗಳು ಇನ್ನಿತರ ಪುರೋಗಾಮಿ ಚಳವಳಿಗಳಂತಹುವುಗಳ ಪ್ರಭಾವ ಇಡೀ ಕರ್ನಾಟಕ ವ್ಯಾಪ್ತಿಯಲ್ಲಿ ಬಹಳ ಕಡಿಮೆ. ಹಳೇ ಮೈಸೂರು ಭಾಗದ ಕೆಲವು ಪ್ರದೇಶಗಳಲ್ಲಿ ಇದ್ದರೂ ಅದು ಅಖಿಲ ಕರ್ನಾಟಕ ವ್ಯಾಪ್ತಿಯನ್ನು ಹೊಂದಿಲ್ಲ. ಅಲ್ಲದೆ ತಮಿಳು, ತೆಲುಗು, ಮಲೆಯಾಳಂ ರಾಷ್ಟ್ರೀಯತೆಗಳಲ್ಲಿದ್ದಂತೆ ಉತ್ತರ ಇಂಡಿಯಾದ ಪರವಾದ ಹಿಂದಿ ಇನ್ನಿತರ ಹೇರಿಕೆಗಳ ವಿರೋಧ ಕರ್ನಾಟಕದಲ್ಲಿ ಇಲ್ಲ. ಕನ್ನಡ ರಾಷ್ಟ್ರೀಯತಾ ಮನೋಭಾವ ಕಡಿಮೆ. ಅದರಿಂದಾಗಿ ಜನಸಾಮಾನ್ಯರಲ್ಲಿ ವೈಚಾರಿಕ ಜಾಗೃತಿ ಹೋಲಿಕೆಯಲ್ಲಿ ಕಡಿಮೆ ಪ್ರಮಾಣದ್ದಾಗಿದೆ.

ಬಾಬರಿ ಮಸೀದಿ ವಿವಾದಗೊಳಿಸಿದ್ದು, ಅಯೋಧ್ಯೆ ರಾಮಮಂದಿರ, ಹುಬ್ಬಳ್ಳಿ ಈದ್ಗಾ ಧ್ವಜಾರೋಹಣ, ಹುಬ್ಬಳ್ಳಿ ಸ್ಫೋಟ ಪ್ರಕರಣ, ಚರ್ಚ್‌ಗಳ ಮೇಲಿನ ದಾಳಿ, ಮಸೀದಿಗಳು/ಮದ್ರಸಗಳ ಮೇಲಿನ ದಾಳಿ, ಹಂದಿ ಮಾಂಸ, ಗೋಮಾಂಸ, ಚಿಕ್ಕಮಗಳೂರಿನ ಬಾಬಾಬುಡಾನ್ ಗಿರಿ ದರ್ಗಾ ವಿವಾದಗೊಳಿಸಿದ್ದು, ಲವ್ ಜಿಹಾದ್ ವಿವಾದ ಇತ್ಯಾದಿಗಳನ್ನು ಸಂಘಟಿಸುತ್ತಾ ಬರಲಾಯಿತು. ಇವುಗಳ ಮೂಲಕ ಕೋಮು ಧ್ರುವೀಕರಣವನ್ನು ಮಾಡುತ್ತಾ ಅದನ್ನು ಮತಗಳನ್ನಾಗಿ ಪರಿವರ್ತಿಸಲು ಸಂಘಪರಿವಾರ ಯಶಸ್ವಿಯಾಯಿತು. ಜೊತೆಗೆ ಶಾಸಕರನ್ನು ಕೊಂಡುಕೊಳ್ಳುವ, ಬ್ಲಾಕ್‌ಮೇಲ್ ರಾಜಕಾರಣ ಇತ್ಯಾದಿಗಳನ್ನೂ ಅಳವಡಿಸಿಕೊಂಡು ಅಧಿಕಾರ ರಾಜಕಾರಣದ ಗದ್ದುಗೆ ಹಿಡಿದರು. ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಮೊದಲಿನಿಂದಲೂ ಕೋಮುಧ್ರುವೀಕರಣದ ವಾರಸುದಾರರೇ ಆಗಿದ್ದರು. ಇನ್ನು ಜಾತ್ಯತೀತ ಜನತಾದಳವೆಂದು ಹೆಸರಿಸಿಕೊಂಡ ಪಕ್ಷವೂ ಕೂಡ ಕೋಮುವಾದದ ವಿರೋಧವಾಗಿ ನಿಂತಿರಲಿಲ್ಲ ಎನ್ನುವುದು ವಾಸ್ತವವೇ ಆಗಿದೆ. ಅಂದರೆ ಇಂಡಿಯಾದ ಅಧಿಕಾರ ರಾಜಕಾರಣದಲ್ಲಿ ಜಾತೀಯತೆ ಹಾಗೂ ಕೋಮುವಾದದ ಬಳಕೆ ಹಾಸುಹೊಕ್ಕಾಗಿ ಹೊದ್ದುಕೊಂಡೇ ಬಂದಿವೆ. ಸಂದರ್ಭಾನುಸಾರ ಬಳಸುತ್ತಾ ಬರಲಾಗಿದೆ. ಇದಕ್ಕೆ ಇತರ ಬಿಜೆಪಿಯೇತರ ಬಹುತೇಕ ಪಕ್ಷಗಳು ಹೊರತಾಗಿಯೇನೂ ಉಳಿದಿಲ್ಲ ಎನ್ನುವುದೂ ಕೂಡ ಅಷ್ಟೇ ವಾಸ್ತವ.

 ಇಂಡಿಯಾದಲ್ಲಿ ಸಂವಿಧಾನ ಮತ್ತು ಸಂಸತ್ತನ್ನು ಬಳಸಿಕೊಳ್ಳುತ್ತಲೇ ಬ್ರಾಹ್ಮಣಶಾಹಿ ನಿರಂಕುಶತೆಯ ಭಾಗಗಳಾದ ಜಾತೀಯತೆ ಹಾಗೂ ಕೋಮುವಾದವನ್ನು ಜೀವಂತವಾಗಿಡುತ್ತಾ, ಬೆಳೆಸಿ ಪೋಷಿಸುತ್ತಾ ಪಾಲಿಸುತ್ತಾ ಬರಲಾಗಿದೆ. ಇದು ದೇಶ ವಿಭಜನೆಯ ಕಾಲದಿಂದಲೂ ಇಲ್ಲಿಯವರೆಗೆ ನಾವು ಸಾಕಷ್ಟು ಉದಾಹರಣೆಗಳನ್ನು ನೋಡಬಹುದು. ಹಾಗಾಗಿಯೇ ಸರಕಾರಿ ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ ಸಂವಿಧಾನ ಹಾಗೂ ಕಾನೂನು ರೀತಿಯ ಯಾವುದೇ ಮತ ಧರ್ಮಗಳ, ಜಾತೀಯತೆಯ ಆಚರಣೆಗಳನ್ನು ಮಾಡುವಂತಿಲ್ಲದಿದ್ದರೂ ನಿರಂತರವಾಗಿ ಹಾಗೂ ನಿರಾತಂಕವಾಗಿ ಅವುಗಳನ್ನು ಆಚರಿಸುತ್ತಾ ಬರಲಾಗಿದೆ. ಸಾಂವಿಧಾನಿಕ ಸಂಸ್ಥೆ ಹಾಗೂ ಸಂವಿಧಾನವನ್ನು ಮತ್ತು ಅದರ ಸೆಕ್ಯುಲರ್ ತಿರುಳನ್ನು ಎತ್ತಿಹಿಡಿಯುತ್ತಾ ಪಾಲನೆಯಾಗುವಂತೆ ನೋಡಿಕೊಳ್ಳಬೇಕಾದ ನ್ಯಾಯಾಂಗವೂ ಇದಕ್ಕೆ ಹೊರತಾಗಿಲ್ಲ ಎನ್ನುವುದೂ ಕೂಡ ಮುಖಕ್ಕೆ ರಾಚುವಷ್ಟು ವಾಸ್ತವ ವಿಚಾರ. ಹಾಗಾಗಿಯೇ ನಮ್ಮ ದೇಶಗಳ ಹಲವು ನ್ಯಾಯಾಧೀಶರು ಕಪಟ, ಲಂಪಟ, ಅತ್ಯಾಚಾರಿ, ಜಾತೀವಾದಿ, ಬ್ರಾಹ್ಮಣಶಾಹಿ ಧಾರ್ಮಿಕ ಮುಖಂಡರ ಮೇಲಿನ ವಿಚಾರಣೆಗಳಿಗೆ ಹಿಂದೇಟು ಹಾಕುವ ಪ್ರಕರಣಗಳು ಸಹಜವೆಂಬಂತೆ ನಡೆಯುತ್ತಾ ಬಂದಿವೆ.

ವಾಸ್ತವವಾಗಿ ನಮ್ಮ ಸಮಾಜ ಬ್ರಾಹ್ಮಣಶಾಹಿ ಊಳಿಗಮಾನ್ಯ ಚಿಂತನೆಗಳು ಹಾಗೂ ಆಚರಣೆಗಳ ಹಿಡಿತಗಳಲ್ಲಿ ಸಾಗುತ್ತಾ ಬಂದಿದೆ. ಇದು ಸಾಮಾನ್ಯ ಜನಜೀವನವನ್ನು ನೇರವಾಗಿ ಹಾಗೂ ಪರೋಕ್ಷವಾಗಿ ಕಾಡುತ್ತಾ ಬಾಧಿಸುತ್ತಾ ಬರುತ್ತಿವೆ. ಇದರಿಂದಾಗಿ ಜನಸಾಮಾನ್ಯರ ದುಡಿಮೆಯ ಬಹುಪಾಲನ್ನು ಕಳೆದುಕೊಳ್ಳುತ್ತಾ ಮೂಢತ್ವದಡಿ ನಲುಗುವಂತೆ ಮಾಡಿದೆ. ಇಂತಹ ಮೂಢತ್ವ ಹಾಗೂ ಅವೈಚಾರಿಕತೆಗಳನ್ನು ಬಂಡವಾಳವಾಗಿಸಿಕೊಂಡು ಕಾರ್ಪೊರೇಟ್ ಶಕ್ತಿಗಳು ತಮ್ಮ ಆರ್ಥಿಕ ಹಾಗೂ ಸಾಮಾಜಿಕ ಹಿಡಿತಗಳನ್ನು ಬಿಗಿಗೊಳಿಸುತ್ತಾ ಬರುತ್ತಿವೆ. ಇದುವರೆಗೂ ಅವರು ಕಾಂಗ್ರೆಸ್‌ನಂತಹ ಪಕ್ಷಗಳನ್ನು ಬಳಸಿಕೊಂಡರು. ಕಾಂಗ್ರೆಸ್ ಪಕ್ಷ ಜನರ ಮನಸ್ಸಿನಲ್ಲಿ ಯಾವುದೇ ಭ್ರಮಾತ್ಮಕ ಛಾಪು ಮೂಡಿಸುವ ಶಕ್ತಿ ಈಗ ಹೊಂದಿಲ್ಲದಿರುವುದರಿಂದಾಗಿ ಈಗ ಸಂಘಪರಿವಾರ ಮತ್ತು ಬಿಜೆಪಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಅದೂ ಕೂಡ ಹತ್ತಾರು ಸಾವಿರ ಕೋಟಿ ರೂಪಾಯಿಗಳ ಕಾರ್ಪೊರೇಟ್ ಹೂಡಿಕೆ ಮತ್ತು ಹತ್ತು ಹಲವು ಕಾರ್ಪೊರೇಟ್ ಪ್ರಾಯೋಜಿತ, ತಂತ್ರ ಕುತಂತ್ರಗಳಿಂದಲೇ ಅವರಿಗೆ ಅಧಿಕಾರಕ್ಕೇರಲು ಸಾಧ್ಯವಾಗಿದ್ದು ಎನ್ನುವುದನ್ನು ಇಲ್ಲಿ ಗಮನಿಸಬೇಕಾಗಿದೆ. ಅದು ಆಳುವ ಶಕ್ತಿಗಳಿಗೆ ಅನಿವಾರ್ಯವಾಗಿ ಬಿಟ್ಟಿತ್ತು.

ಮತ್ತೊಂದು ಮುಖ್ಯವಾದ ವಿಚಾರವನ್ನು ನಾವು ಗಮನಿಸಬೇಕಾಗಿದೆ. ಸಂಘಪರಿವಾರದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಮಾಡುತ್ತಾ ಸಾಗುತ್ತಿರುವ ಹಲವಾರು ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಅವಾಂತರಗಳನ್ನು, ಜನವಿರೋಧಿ ಹಾಗೂ ದೇಶವಿರೋಧಿ ಕೃತ್ಯಗಳನ್ನು ಗಟ್ಟಿಯಾಗಿ ಮತ್ತು ಪರಿಣಾಮಕಾರಿಯಾಗಿ ವಿರೋಧ ಪಕ್ಷಗಳೆನಿಸಿಕೊಂಡಿರುವ ರಾಜಕೀಯ ಪಕ್ಷಗಳು ವಿರೋಧಿಸುತ್ತಲೂ ಇಲ್ಲ. ಕೆಲವು ಬಾಯುಪಚಾರದ ಇಲ್ಲವೇ ಸಾಂಕೇತಿಕವಾದ ಪ್ರತಿಭಟನೆಗಳನ್ನು ಮಾಡಿ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡುತ್ತಿವೆ. ಕರ್ನಾಟಕದಲ್ಲೂ ಇದೇ ಆಗುತ್ತಿರುವುದು. ಕರ್ನಾಟಕದ ಪ್ರಗತಿಪರ, ಉದಾರವಾದಿ ಪ್ರಜಾತಂತ್ರವಾದಿ, ದಲಿತ, ಹಿಂದುಳಿದ ಪರ ಶಕ್ತಿಗಳು ಹಾಗೂ ದಲಿತ ದಮನಿತ ಪರವೆಂದು ಗುರುತಿಸಿಕೊಳ್ಳುವವರಲ್ಲಿ ಹಲವರು ಸಂಘಪರಿವಾರವನ್ನು ಮತ್ತವರ ಅಕ್ರಮಗಳನ್ನು ವಿರೋಧಿಸುತ್ತಿರುವ ವೇಳೆಯಲ್ಲಿ ಅದಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬರುತ್ತಿದ್ದಾರೆ. ಮೊದಲೇ ಕಾಂಗ್ರೆಸ್ ಬಗ್ಗೆ ಬಹುತೇಕ ಜನಸಾಮಾನ್ಯರಿಗೆ ವಿಶ್ವಾಸ ಮೂಡಲಾರದಂತಹ ಪರಿಸ್ಥಿತಿ ಇದೆ. ಅಲ್ಲದೆ ಇಂತಹ ಗೊಂದಲಪೂರಿತ ನಿಲುವುಗಳಿಂದಾಗಿ ಈ ವಲಯವು ಜನರ ಮುಂದೆ ಒಂಟಿಯಾಗುತ್ತಾ ಸಾಗುತ್ತಿದೆ. ಈಗ ಸಂಘಪರಿವಾರ ಹಾಗೂ ಬಿಜೆಪಿಗೆ ಜನರನ್ನು ಕೆರಳಿಸುವಂತಹ ವಿಷಯಗಳ ಕೊರತೆಯಿವೆ. ಮೊದಲಿನಂತೆ ದನವಾಗಲೀ, ಹಂದಿಯಾಗಲೀ, ಗಲಭೆ ಸ್ಫೋಟಿಸಲು ನೆರವಾಗುತ್ತಿಲ್ಲ. ಇಂತಹ ಹುನ್ನಾರಗಳು ಜನರಿಗೂ ಸಾಕಷ್ಟು ಅರ್ಥವಾಗತೊಡಗಿದೆ. ಮೊನ್ನೆಯ ಗಣರಾಜ್ಯೋತ್ಸವ ಸಂದರ್ಭದಲ್ಲಿ ಒಕ್ಕೂಟ ಸರಕಾರವು ಕೇರಳದಿಂದ ಕಳಿಸಲು ಉದ್ದೇಶಿಸಿದ್ದ ನಾರಾಯಣಗುರುಗಳ ಟ್ಯಾಬ್ಲೋವನ್ನು ನಿರಾಕರಿಸಿದ್ದು ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ ಹಲವಾರು ಕಡೆಗಳಲ್ಲಿ ಪ್ರತಿಭಟನೆಗಳಿಗೆ ದಾರಿಮಾಡಿತ್ತು.

ಸಂಘಪರಿವಾರದ ಬಜರಂಗದಳ, ಹಿಂದೂ ವೇದಿಕೆ ಇತ್ಯಾದಿಗಳು ಈ ಪ್ರತಿಭಟನೆಗಳನ್ನು ಬಹಿರಂಗವಾಗಿ ಬೆಂಬಲಿಸಬೇಕಾಗಿ ಬಂದಿತ್ತು. ಕಾಂಗ್ರೆಸ್ ಈ ಪ್ರತಿಭಟನೆಗಳ ಲಾಭ ಪಡೆದುಕೊಳ್ಳಲು ಪ್ರಯತ್ನಿಸಿತ್ತು. ಈ ಪ್ರತಿಭಟನೆಗಳಲ್ಲಿ ಸಾವಿರಾರು ಜನರು ಬಹುತೇಕವಾಗಿ ಸ್ವಪ್ರೇರಿತರಾಗಿಯೇ ಸೇರಿದ್ದರು. ಇದು ಸಂಘಪರಿವಾರ ವಿರೋಧಿ ಭಾವನೆಗಳನ್ನು ಜನರಲ್ಲಿ ಹೆಚ್ಚು ಮಾಡಿದ್ದವು. ಅದೂ ಅಲ್ಲದೆ ಈಗ ಮೊದಲಿನಂತೆ ಮೋದಿ ಅಲೆ ಕೆಲಸ ಮಾಡುತ್ತಿಲ್ಲ. ಆಡಳಿತದಲ್ಲಿ ಬಿಜೆಪಿಯೇ ಇರುವುದರಿಂದಾಗಿ ಮೊದಲಿನಂತೆ ದಂಗೆ ಗಲಭೆಗಳನ್ನು ಸಂಘಟಿಸುವುದು ಸುಲಭವಲ್ಲ. ಅದು ತಿರುಗುಬಾಣವಾಗುವ ಆತಂಕವೂ ಅವರಿಗೆ ಇದೆ. ಹಾಗಾಗಿ ಮುಸ್ಲಿಮ್ ಹುಡುಗಿಯರು ಧರಿಸುವ ತಲೆವಸ್ತ್ರದ ಹೆಸರಿನಲ್ಲಿ ವಿದ್ಯಾರ್ಥಿ ಯುವಜನರನ್ನು ಅದರಲ್ಲೂ ದಲಿತ ದಮನಿತ ಹಿಂದುಳಿದ ಸಮೂಹಗಳಿಗೆ ಸೇರಿದವರನ್ನು ಬಳಸಿಕೊಂಡು ಕೋಮು ಉನ್ಮಾದವನ್ನು ಸೃಷ್ಟಿಸಿ ಅದರ ಲಾಭವನ್ನು ಪಡೆಯುತ್ತಾ ಮುಂದಿನ ದಿನಗಳಲ್ಲಿ ಅವರ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಕಾರ್ಯಸೂಚಿಗಳ ಜಾರಿಗೆ ದಾರಿಮಾಡಿಕೊಳ್ಳುವ ಹುನ್ನಾರ ಇದರ ಹಿಂದೆ ಇದೆ. ಶಿಕ್ಷಣಸಂಸ್ಥೆಗಳ ಮುಖ್ಯಸ್ಥರು ಹಾಗೂ ಶಿಕ್ಷಕರನ್ನು ಇದಕ್ಕಾಗಿ ಸಜ್ಜುಗೊಳಿಸಿದ್ದಾರೆ. ಶಿಕ್ಷಣಸಂಸ್ಥೆಗಳಲ್ಲಿ ವಸ್ತ್ರಧಾರಣೆಯ ಹೆಸರಿನಲ್ಲಿ ಶಿಕ್ಷಣ ಪಡೆಯುವ ಅವಕಾಶವನ್ನು ಸಾರಾಸಗಟಾಗಿ ನಿರಾಕರಿಸುವಂತಹ ಅಕ್ರಮಗಳಿಗೆ, ಕ್ರೂರತನಗಳಿಗೆ ಶಿಕ್ಷಕ ಸಮೂಹದವರು ಇಳಿಯುತ್ತಿರುವುದು ಅವರು ಕಲಿತ ವಿದ್ಯಾಮಟ್ಟವನ್ನು ತೆರೆದಿಡುತ್ತಿದೆ. ಇದೇ ಶಿಕ್ಷಕ ಸಮೂಹ ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ನಿಯಮಬಾಹಿರವಾಗಿ ಅನೇಕ ಧಾರ್ಮಿಕ ಆಚರಣೆಗಳನ್ನು ನಡೆಸುವಲ್ಲಿ ನೇರವಾಗಿಯೇ ಪಾಲ್ಗೊಳ್ಳುತ್ತಾ ಬಂದಿರುವುದು ಬಹಿರಂಗ ಸತ್ಯ. ಹಾಗಿದ್ದಾಗ ಮುಸ್ಲಿಮ್ ಹುಡುಗಿಯರು ಧರಿಸುವ ಯಾರಿಗೂ ಹಾನಿ ಮಾಡದ ತಲೆವಸ್ತ್ರವನ್ನು ಗುರಿಮಾಡಿ ಅವರ ಶಿಕ್ಷಣದ ಹಕ್ಕನ್ನೇ ಕಿತ್ತುಕೊಳ್ಳುವ ಕಾನೂನು ಬಾಹಿರ ಕ್ರೂರ ಚಿಂತನೆ ಇವರು ತಲೆಗಳಲ್ಲಿ ತುಂಬಿಸಿಕೊಂಡಿದ್ದು ಇವರ ಕೋಮುದ್ವೇಷದ ಭಾಗವಾಗಿಯೇ ತಾನೇ.

ಇದೊಂದು ಬಿಡಿಯಾದ ವಿಚಾರ ಕೂಡ ಅಲ್ಲ. ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಶಕ್ತಿಗಳು ಅಂಬೇಡ್ಕರ್‌ರನ್ನು ಸಾರ್ವಜನಿಕವಾಗಿ ನಗಣ್ಯಗೊಳಿಸುತ್ತಿರುವುದು, ಅದಕ್ಕೆ ಪೂರಕವಾಗಿರುವ ಸರಕಾರಿ ಅಂಗಗಳ ನಡೆಗಳು, ಸಂವಿಧಾನ ತಿದ್ದುಪಡಿಗಳು, ಸಂವಿಧಾನ ಬದಲಾವಣೆಯ ಪ್ರಯತ್ನಗಳು, ಚುನಾಯಿತ ಪ್ರತಿನಿಧಿಗಳ ಬಾಯಿಗಳಿಂದ ಹೊರಡುತ್ತಿರುವ ಜಾತೀಯ, ಕೋಮುವಾದಿ, ಫ್ಯಾಶಿಸ್ಟ್ ವಾಗ್ದಾಳಿಗಳು, ಮುಸ್ಲಿಮರು, ಕ್ರಿಶ್ಚಿಯನ್ನರನ್ನು, ದಲಿತರನ್ನು ಗುರಿಮಾಡುತ್ತಿರುವ ಪರಿಗಳು, ಇರುವ ಶಿಕ್ಷಣ ವ್ಯವಸ್ಥೆಯನ್ನು ನಾಶಗೊಳಿಸುತ್ತಿರುವ ಪರಿಗಳು, ಸಾರ್ವಜನಿಕ ಕ್ಷೇತ್ರದ ಎಲ್ಲವನ್ನೂ ಭಾರೀ ಕಾರ್ಪೊರೇಟ್‌ಗಳಿಗೆ ಹಸ್ತಾಂತರಿಸುವ ಧಾವಂತದ ನಡೆಗಳು ಇತ್ಯಾದಿಗಳನ್ನು ಹಿನ್ನೆಲೆಯಾಗಿಟ್ಟು ಈ ವಿವಾದವನ್ನೂ ಕೂಡ ಗ್ರಹಿಸಬೇಕಾಗಿದೆ. ಇದರಲ್ಲಿ ಮುಸ್ಲಿಮ್ ಮಹಿಳೆಯರ ವಿಮೋಚನೆಯ ವಿಚಾರವಾಗಲೀ, ಶೋಷಣೆಯ ವಿಚಾರವಾಗಲೀ, ಮುಸ್ಲಿಮ್ ಪುರುಷಾಧಿಪತ್ಯದ ವಿಚಾರವಾಗಲೀ, ಮುಸ್ಲಿಮ್ ಧಾರ್ಮಿಕ ಶೋಷಣೆಯ ವಿಚಾರವಾಗಲೀ ಕಾರಣವಲ್ಲ. ಇದು ಸಂಘ ಪರಿವಾರದ ಫ್ಯಾಶಿಸ್ಟ್ ಕಾರ್ಯಸೂಚಿಯ ಭಾಗವಾಗಿಯೇ ಪರಿಗಣಿಸಬೇಕಾಗಿದೆ. ಇದರಲ್ಲಿ ಬಲಿಪಶುಗಳನ್ನಾಗಿ ಮಾಡುತ್ತಿರುವುದು ಮುಸ್ಲಿಮ್ ಹೆಣ್ಣುಮಕ್ಕಳನ್ನು, ದಲಿತ ದಮನಿತ ಹಿಂದುಳಿದ ವರ್ಗದ ವಿದ್ಯಾರ್ಥಿ/ನಿಗಳನ್ನು ಎಂಬುದನ್ನು ಪ್ರತಿಯೊಬ್ಬರೂ ಗಮನಿಸಬೇಕು. ಇದಕ್ಕೆ ಮನ್ನಣೆ ನೀಡಿದರೆ ನಾಳೆ ಇದು ಎಲ್ಲಾ ವಿದ್ಯಾರ್ಥಿ/ನಿಗಳನ್ನು ಇಂತಹುದೇ ಉಡುಪು, ಸೀರೆ ಧರಿಸಬೇಕು, ಕುಂಕುಮ, ವಿಭೂತಿ, ಇತ್ಯಾದಿ ಧರಿಸಿದರೆ ಮಾತ್ರ ಶಾಲಾಕಾಲೇಜುಗಳಿಗೆ ಪ್ರವೇಶ ಎಂಬ ಮಟ್ಟಕ್ಕೂ ತಲುಪಬಹುದು. ಅದಕ್ಕಾಗಿ ಶಾಲಾಭಿವೃದ್ಧಿ ಸಮಿತಿಯಂತಹವುಗಳನ್ನು ಬಳಸಲು ಸರಕಾರದ ಈಗಿನ ಸುತ್ತೋಲೆಯೇ ದಾರಿ ಮಾಡಿಕೊಡುತ್ತದೆ. ಬಹುಸಂಖ್ಯಾತ ದಲಿತ, ದಮನಿತ, ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿ ಸಮೂಹಕ್ಕೆ ಯಾವುದಾದರೊಂದು ನೆಪದಲ್ಲಿ ಶಿಕ್ಷಣವನ್ನೇ ಸಂಪೂರ್ಣವಾಗಿ ನಿರಾಕರಿಸುವ ಹಂತ ಕೂಡ ತಲುಪಬಹುದು. ಅಷ್ಟೇ ಅಲ್ಲ ಶಿಕ್ಷಕ ವೃಂದ ಇದರ ಬಿಸಿಗೆ ನಲುಗಬೇಕಾಗಬಹುದು.

ಇಂತಹ ಸಂದರ್ಭದಲ್ಲಿ ಮುಸ್ಲಿಮ್ ಮಹಿಳೆಯರ ವಸ್ತ್ರಗಳು ಶೋಷಣೆಯ ಇಲ್ಲವೇ ಧಾರ್ಮಿಕ ಮೂಲಭೂತವಾದದ ಸಂಕೇತ, ಅದನ್ನು ತೆಗೆಯುವುದು ಸರಿಯಾದುದು. ಶಿಕ್ಷಣ ಸಂಸ್ಥೆಗಳಲ್ಲಿ ಅವುಗಳಿಗೆ ಅವಕಾಶ ನೀಡಬಾರದು. ಅದು ಮಹಿಳಾವಿರೋಧಿಯಾದುದು ಎಂದೆಲ್ಲಾ ನೆಪ ಹೇಳಿ ಈಗ ಶಾಲಾ ಕಾಲೇಜುಗಳ ಮುಖ್ಯಸ್ಥರುಗಳ ನಡೆಗಳನ್ನು ಸಮರ್ಥಿಸಹೊರಡುವುದು, ಅದಕ್ಕಾಗಿ ಮೂಲಭೂತವಾದ ಹಾಗೂ ಕೋಮುವಾದವನ್ನು ಒಂದೇ ರೀತಿಯಲ್ಲಿ ನೋಡುವುದು ಅಪ್ರಜಾತಾಂತ್ರಿಕ ಮಾತ್ರವಲ್ಲ ಮಹಿಳಾವಿರೋಧಿಯಾಗುತ್ತದೆ. ಅಸೂಕ್ಷ್ಮವೂ ಜನವಿರೋಧಿಯೂ ಆಗಿಬಿಡುತ್ತದೆ. ಜೊತೆಗೆ ಇಂತಹ ನಿಲುವುಗಳು ಅಂತಿಮವಾಗಿ ಸಂಘಪರಿವಾರದ ಫ್ಯಾಶಿಸ್ಟ್ ಕಾರ್ಯಸೂಚಿಗಳ ಬೆಂಬಲಕ್ಕೆ ನಿಂತುಬಿಡುತ್ತದೆ. ಇಂದಿನ ಎಲ್ಲರ ಗಮನ ಮುಖ್ಯವಾಗಿ ಮುಸ್ಲಿಮ್ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕಿನ ರಕ್ಷಣೆಯಾಗಬೇಕೇ ಹೊರತು ಅವರ ವಸ್ತ್ರಧಾರಣೆಯಲ್ಲ. ತಲೆವಸ್ತ್ರಧಾರಣೆಯ ನೆಪದಲ್ಲಿ ಯಾರಿಗೂ ಶಿಕ್ಷಣ ಸಂಸ್ಥೆಗಳಿಂದ ಹೊರದೂಡುವ ಅಧಿಕಾರವಾಗಲೀ ಹಕ್ಕಾಗಲೀ ಇರಕೂಡದು. ಹಾಗೆ ಮಾಡುವುದು ಜನಾಂಗೀಯ ನಿಂದನೆಗೆ ಸಮಾನವಾಗಿ ಕಾಣಬೇಕು. ಹಾಗೆ ಮಾಡಿದವರ ಮೇಲೆ ಕಾನೂನು ಕ್ರಮಗಳು ಜರುಗಬೇಕು. ಅದೂ ಅಲ್ಲದೆ ಕಾಲೇಜು ಮಟ್ಟದಲ್ಲಿ ಸಮವಸ್ತ್ರ ಕಡ್ಡಾಯವಾಗಬೇಕಿಲ್ಲ.

ಮಿಂಚಂಚೆ:nandakumarnandana67@gmail.com

Writer - ನಂದಕುಮಾರ್ ಕೆ.ಎನ್.

contributor

Editor - ನಂದಕುಮಾರ್ ಕೆ.ಎನ್.

contributor

Similar News