×
Ad

ಕೆಎಂಸಿ ವೈದ್ಯರಿಂದ ಯಶಸ್ವಿ ಅಲೋಜೆನಿಕ್ ಅಸ್ಥಿಮಜ್ಜೆಯ ಕಸಿ

Update: 2022-02-08 20:31 IST

ಉಡುಪಿ, ಫೆ.8: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೋಲಜಿ ವಿಭಾಗದ ವೈದ್ಯರ ತಂಡವು ರೋಗನಿರೋಧಕ ಅಸ್ವಸ್ಥತೆಯ (ಹಿಮೋಫಾಗೊಸೈಟಿಕ್ ಲಿಂಫೋಹಿಸ್ಟಿಯೊ ಸೈಟೋಸಿಸ್) ನಿಂದ ಬಳಲುತ್ತಿದ್ದ ಬಾಲಕಿಗೆ ಯಶಸ್ವಿಯಾಗಿ ಅಲೋಜೆನಿಕ್ ಅಸ್ಥಿಮಜ್ಜೆಯ ಕಸಿಯನ್ನು ನಿರ್ವಹಿಸಿದೆ.

ಚಿತ್ರದುರ್ಗದ ಎರಡುವರೆ ವರ್ಷದ ಬಾಲಕಿ ಜ್ವರ ಮತ್ತು ದುಗ್ಧರಸ ಗ್ರಂಥಿಗಳ ಹಿಗ್ಗುವಿಕೆಯ ತೊಂದರೆಯಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಕರೆತರಲಾಗಿತ್ತು. ಕೆಲವು ವರ್ಷಗಳ ಹಿಂದೆ ಇಂತದೇ ವೈದ್ಯಕೀಯ ತೊಂದರೆಗಳಿಂದ ಅವಳು ತನ್ನ ಸಹೋದರನನ್ನು ಕಳೆದು ಕೊಂಡಿದ್ದಳು.

ದೀರ್ಘ ತಪಾಸಣೆ ಮತ್ತು ರೋಗ ಮೌಲ್ಯಮಾಪನದ ನಂತರ ಆಕೆಗೆ ರೋಗ ನಿರೋಧಕ ಅಸ್ವಸ್ಥತೆ (ಇಮ್ಯೂನ್ ಡಿಸಾಡರ್ರ್) ಇರುವುದು ಪತ್ತೆಯಾಗಿತ್ತು. ಹಾಗೂ ಅಸ್ಥಿಮಜ್ಜೆಯ ಕಸಿ ಮಾತ್ರ ಅವಳಿಗೆ ರೋಗ ಗುಣಪಡಿಸುವ ಚಿಕಿತ್ಸೆಯ ಆಯ್ಕೆಯಾಗಿತ್ತು. ಅದೃಷ್ಟವಶಾತ್, ಅಸ್ಥಿಮಜ್ಜೆಯ ಕಸಿಗೆ ಆಕೆ ತಂದೆ 10/10 ಎಚ್‌ಎಲ್‌ಎ ಹೊಂದಾಣಿಕೆಯಾಗಿದ್ದರು. ಇದರಿಂದಾಗಿ ಅವರೇ ಮಗಳಿಗೆ ದಾನಿಯಾಗಿ ಆಯ್ಕೆಯಾದರು. ಇದರಿಂದ ಆಕೆಗೆ ಅಸ್ಥಿಮಜ್ಜೆಯ ಕಸಿಯನ್ನು ಯಶಸ್ವಿಯಾಗಿ ನಡೆಸಲಾಯಿತು.

ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೋಲಜಿ ವಿಭಾಗದ ಡಾ.ವಾಸುದೇವ ಭಟ್ ಕೆ. ನೇತೃತ್ವದಲ್ಲಿ ಅಸ್ಥಿಮಜ್ಜೆ ಕಸಿಯನ್ನು ನಡೆಸಲಾಯಿತು. ಡಾ.ಅರ್ಚನಾ ಎಂ.ವಿ, ಡಾ.ಕುಲಶೇಖರ್, ಡಾ.ರಮಿತಾ ಆರ್. ಭಟ್ ಮತ್ತು ಡಾ.ಅತುಲ್ ಅಚ್ಯುತ ರಾವ್ ತಂಡದಲ್ಲಿದ್ದರು. ಡಾ. ಶಮೀ ಶಾಸ್ತ್ರಿ ನೇತೃತ್ವದ ರಕ್ತನಿಧಿಯ ವೈದ್ಯರ ತಂಡವು ಅಸ್ಥಿಮಜ್ಜೆಯ ಕಸಿಗೆ ಸಹಕರಿಸಿತು. ಕುಟುಂಬ ಚಿಕಿತ್ಸೆಗಾಗಿ ಸಾಕಷ್ಟು ಹಣಕಾಸಿನ ಸಮಸ್ಯೆಗಳನ್ನು ಎದುರಿಸಿದ್ದರೂ, ಅನೇಕ ದಾನಿಗಳು, ಸರ್ಕಾರೇತರ ಸಂಸ್ಥೆಗಳು ಮುಖ್ಯವಾಗಿ ಸೇವ್-ಎ-ಲೈಫ್ ಚಾರಿಟಬಲ್ ಟ್ರಸ್ಟ್ ಈ ನಿಟ್ಟಿನಲ್ಲಿ ಸಹಾಯ ಮಾಡಿವೆ.

ಬಾಲಕಿಯು ಕಸಿಯ ನಂತರ ನಿಯಮಿತವಾಗಿ ಆಸ್ಪತ್ರೆಗೆ ಬರುತ್ತಿದ್ದು, ಪ್ರಸ್ತುತ ಒಂದು ವರ್ಷದ ಫಾಲೋ-ಅಪ್ ಅನ್ನು ಪೂರ್ಣಗೊಳಿಸಿದ್ದಾರೆ. ಈಗ ಉತ್ತಮ ವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಶಾಲೆಗೂ ದಾಖಲಾಗಿದ್ದಾರೆ.

ಕೆಎಂಸಿ ಮಣಿಪಾಲದ ಮಕ್ಕಳ ಅಸ್ಥಿಮಜ್ಜೆ ಕಸಿ ವೈದ್ಯ ಡಾ.ವಿನಯ್ ಎಂ.ವಿ. ಮಾತನಾಡಿ, ಆಕೆಯ ಸಂಕೀರ್ಣ ರೋಗನಿರೋಧಕ ಸ್ಥಿತಿಯನ್ನು ಸಂಪೂರ್ಣ ವಾಗಿ ಗುಣಪಡಿಸಲಾಗಿದೆ ಮತ್ತು ಅಸ್ಥಿಮಜ್ಜೆ ಕಸಿ ಅವಳಿಗೆ ಅಮೃತದಂತೆ ಕೆಲಸ ಮಾಡಿದೆ. ದೇಶದಲ್ಲಿ ಅಸ್ಥಿಮಜ್ಜೆ ಕಸಿ ಸೇವೆಗಳ ಅವಶ್ಯಕತೆ ದೊಡ್ಡದಿದೆ. 130 ಕೋಟಿ ಜನಸಂಖ್ಯೆಗೆ, ಪ್ರತಿ ವರ್ಷ ಕನಿಷ್ಠ 10,000 ಕಸಿ ಅಗತ್ಯವಿದೆ. ಪ್ರಸ್ತುತ, ದೇಶದಲ್ಲಿ ಕೇವಲ 2500 ಕಸಿಗಳನ್ನು ಮಾಡಲಾಗುತ್ತದೆ ಎಂದರು.

ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ ಅವರು, ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿ ಅಸ್ಥಿಮಜ್ಜೆ ಕಸಿ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಡಾ.ವಾಸುದೇವ ಭಟ್ ಕೆ. ನೇತೃತ್ವದ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೋಲಜಿ ವಿಭಾಗದ ಕಾರ್ಯವನ್ನು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News