ಶಾಲೆ-ಕಾಲೇಜುಗಳಲ್ಲಿ ಝೋಂಬಿ ವೈರಸ್!
ಶಾಲೆ ಕಾಲೇಜುಗಳಿಗೆ ಮೂರು ದಿನಗಳ ಕಾಲ ಸರಕಾರ ರಜೆ ಘೋಷಿಸಿದೆ. ಅಂದ ಹಾಗೆ ರಜೆ ಘೋಷಿಸಿರುವುದು ಕೊರೋನ ವೈರಸ್ ಕಾರಣಕ್ಕಾಗಿ ಅಲ್ಲ. ಅದಕ್ಕಿಂತಲೂ ಭೀಕರವಾದ ವೈರಸ್ ಶಾಲಾ ಕಾಲೇಜುಗಳಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದೆ. ಇದು ಕೇಸರಿ ಝೋಂಬಿ ವೈರಸ್. ಸಿನೆಮಾಗಳಲ್ಲಿ ಅದರಲ್ಲೂ ಮುಖ್ಯವಾಗಿ ಹಾಲಿವುಡ್ ಸಿನೆಮಾಗಳಲ್ಲಿ ಇಂತಹ ರೆಂಬಿಗಳನ್ನು ನಾವು ಬಹಳಷ್ಟು ನೋಡುತ್ತಾ ಬಂದಿದ್ದೇವೆ. ಝೋಂಬಿ ವೈರಸ್ ಹರಡಿದಾತ ಇನ್ನೊಬ್ಬನನ್ನು ಸಂಪರ್ಕಿಸಿದರೆ ವೈರಸ್ ಆತನಿಗೂ ಹರಡಿ ಆತನೂ ರೆಂಬಿಯಾಗಿ ಅಥವಾ ರಾಕ್ಷಸ ಮನುಷ್ಯನಾಗಿ ಬಿಡುತ್ತಾನೆ. ಉಡುಪಿಯ ಕಾಲೇಜೊಂದರಲ್ಲಿ ಪ್ರಾಂಶುಪಾಲರ ತಲೆಯೊಳಗೆ ಸಣ್ಣದಾಗಿ ಕಾಣಿಸಿಕೊಂಡಿದ್ದ ವೈರಸ್ ಇದೀಗ ಉಡುಪಿ, ಕುಂದಾಪುರದ ಮೂಲಕ ಮಲೆನಾಡನ್ನು ಹರಡಿದೆ. ಅಷ್ಟೇ ಅಲ್ಲ, ಮಂಡ್ಯ, ಮೈಸೂರಿನ ಕಾಲೇಜುಗಳಲ್ಲೂ ಇದು ಕಾಣಿಸಿಕೊಂಡಿವೆ.
ಸುಮಾರು ಎರಡು ವರ್ಷಗಳ ಕಾಲ ಭಾಗಶಃ ಶಾಲಾ ಕಾಲೇಜುಗಳು ಮುಚ್ಚಿಕೊಂಡಿದ್ದವು. ವಿದ್ಯಾರ್ಥಿಗಳ ಭವಿಷ್ಯ ಕತ್ತಲಲ್ಲಿವೆ, ದಯವಿಟ್ಟು ಶಾಲಾ ಕಾಲೇಜುಗಳ ಬಾಗಿಲು ತೆರೆಯಿರಿ ಎಂಬ ಪ್ರಗತಿಪರ ಚಿಂತಕರ ಅವಿರತ ಶ್ರಮದಿಂದ ವಿದ್ಯೆಯ ಬಾಗಿಲು ತೆರೆದುಕೊಂಡಿದೆೆ. ಈ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಶಾಲೆ ಮತ್ತು ವಿದ್ಯೆಯ ಮಹತ್ವವನ್ನು ಅರಿತಿರಬಹುದು ಎಂದು ಭಾವಿಸಲಾಗಿತ್ತು. ಶೂದ್ರರು, ದಲಿತರು, ಮಹಿಳೆಯರು ಈ ಕೊರೋನ ಅವಧಿಯಲ್ಲಿ ಶಿಕ್ಷಣದ ವಿಷಯದಲ್ಲಿ ಮುಖ್ಯ ಸಂತ್ರಸ್ತರಾಗಿದ್ದರು. ಅವರಿಗೆ ಶಾಲಾ, ಕಾಲೇಜುಗಳು ತೆರೆಯದೇ ಬೇರೆ ದಾರಿಯೇ ಇದ್ದಿರಲಿಲ್ಲ. ಕೊರೋನ ಬದುಕಿನಲ್ಲಿ ಹತ್ತು ಹಲವು ಪಾಠಗಳನ್ನು ಕಲಿಸಿ ಹೋಗಿದೆ. ಕೊರೋನ ವ್ಯಾಪಕವಾಗಿದ್ದಾಗ, ಜಾತಿ ಧರ್ಮಗಳನ್ನು ಮರೆತು ಪರಸ್ಪರ ಕೈಜೋಡಿಸಿದ್ದರು. ರಾಜಕಾರಣಿಗಳು ಕೊರೋನದ ಹೆಸರಿನಲ್ಲೂ ಕೋಮು ರಾಜಕಾರಣ ನಡೆಸುವುದಕ್ಕೆ ಮುಂದಾಗಿದ್ದರು. ಆದರೆ ಜನಸಾಮಾನ್ಯರ ಮಾನವೀಯ ಪ್ರಜ್ಞೆ ಎಲ್ಲ ರಾಜಕಾರಣಗಳನ್ನು ವಿಫಲಗೊಳಿಸಿತು. ಹಿಂದೂಗಳ ಮೃತದೇಹವನ್ನು ಮುಸ್ಲಿಮರು ದಫನ ಮಾಡಿದರು. ಪರಸ್ಪರರಿಗೆ ನೆರವಾದರು. ಮುಸ್ಲಿಮರಿಗೆ ಹಿಂದೂಗಳು ಆಶ್ರಯ ನೀಡಿದರು. ಹಸಿವು ಬಡತನದ ಸಂದರ್ಭದಲ್ಲೂ ಜಾತಿ ಭೇದಗಳನ್ನು ಮರೆತು ಪರಸ್ಪರ ನೆರವಾದರು. ಕೊರೋನ ನೆಪದಲ್ಲಿ ಮತ್ತೆ ಒಂದಾದ ಜನರನ್ನು ಕಂಡು ರಾಜಕಾರಣಿಗಳಿಗೆ ಕಳವಳವಾಗಿತ್ತು. ಇದೀಗ ಆ ಒಂದಾದ ಮನಸ್ಸುಗಳನ್ನು ಬೇರೆ ಬೇರೆ ದಾರಿಯ ಮೂಲಕ ಒಡೆಯುವುದಕ್ಕೆ ರಾಜಕಾರಣಿಗಳು ಮುಂದಾಗಿದ್ದಾರೆ.
ಶಾಲೆ, ಕಾಲೇಜುಗಳು ತೆರೆಯುತ್ತಿದ್ದಂತೆಯೇ ಏಕಾಏಕಿ ಸಮವಸ್ತ್ರದ ಹೆಸರಿನಲ್ಲಿ ಶಾಲೆ ಕಾಲೇಜುಗಳಲ್ಲಿ ದಾಂಧಲೆ ಎಬ್ಬಿಸಿ ಕೊನೆಗೂ ಅವರು ಶಾಲೆ ಕಾಲೇಜುಗಳನ್ನು ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇಸರಿ ಧಾರಿ ವಿದ್ಯಾರ್ಥಿಗಳು ಪ್ರತಿಭಟನೆಯ ಹೆಸರಿನಲ್ಲಿ ನಡೆಸಿರುವುದು ಅಕ್ಷರಶಃ ದಾಂಧಲೆಗಳನ್ನು. ಶಾಲುಗಳನ್ನು ಧರಿಸಿ ತಾವು ಏನನ್ನು ಮುಚ್ಚಿಕೊಳ್ಳಲು ಹೊರಟಿದ್ದೇವೆ ಎನ್ನುವುದರ ಅರಿವೇ ಅವರಿಗೆ ಇರಲಿಲ್ಲ. ‘ಮುಸ್ಸಿಮ್ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಬಾರದು’ ಎನ್ನುವುದರಿಂದ ತಮಗೆ ಯಾವ ರೀತಿಯ ಲಾಭಗಳಾಗುತ್ತವೆ ಎನ್ನುವುದರ ಬಗ್ಗೆಯೂ ಅವರಿಗೆ ತಿಳಿವಿರಲಿಲ್ಲ. ಅವರು ಝೋಂಬಿಗಳಂತೆ ಪ್ರಜ್ಞೆಯನ್ನು ಕಳೆದುಕೊಂಡಿದ್ದರು. ಅವರನ್ನು ಕೋಮು ವೈರಸ್ ಸಂಪೂರ್ಣವಾಗಿ ನಿಯಂತ್ರಿಸುತ್ತಿತ್ತು. ‘ಶಾಲೆಗಳಲ್ಲಿ ಸಮಾನತೆ ಇರಬೇಕು’ ಎಂದು ಹೇಳುವ ಅವರಿಗೆ ಶಾಲೆಗಳ ಬಗ್ಗೆ ಒಂದಿಷ್ಟು ಗೌರವ ಇದ್ದಿದ್ದರೆ ನಿನ್ನೆ ಶಾಲೆಗಳ ಮೇಲೆ, ಗ್ರಂಥಾಲಯಗಳ ಮೇಲೆ ಕಲ್ಲುಗಳನ್ನು ತೂರುತ್ತಿರಲಿಲ್ಲ. ರಾಷ್ಟ್ರ ಧ್ವಜವಿರಬೇಕಾದ ಧ್ವಜಸ್ತಂಭದಲ್ಲಿ ಕೇಸರಿ ಧ್ವಜವನ್ನು ಹಾರಿಸುತ್ತಿರಲಿಲ್ಲ. ಶಾಲಾ ಶಿಕ್ಷಕರು ಇದ್ದಂತೆಯೇ ಕೊಠಡಿಯೊಳಗೆ ನುಗ್ಗುತ್ತಾ ರಾಜಕೀಯ ಘೋಷಣೆಗಳನ್ನು ಕೂಗುತ್ತಿರಲಿಲ್ಲ. ಈ ದಾಂಧಲೆಗಳ ಮೂಲಕ ಸ್ವತಃ ತಮಗೆ ತಾವೇ ಹಾನಿ ಮಾಡಿಕೊಳ್ಳುತ್ತಿದ್ದೇವೆ ಎನ್ನುವುದೂ ಅವರಿಗೆ ಗೊತ್ತಿರಲಿಲ್ಲ.
ಇದೀಗ ಶಾಲಾ ಕಾಲೇಜುಗಳಿಗೆ ಮೂರು ದಿನ ರಜೆ ಘೋಷಿಸಲಾಗಿದೆ. ಶ್ರೀಮಂತ ಮಕ್ಕಳ ಮೇಲೆ ಈ ರಜೆಗಳು ಯಾವ ಪರಿಣಾಮವನ್ನೂ ಉಂಟು ಮಾಡಲಾರವು. ನಾಳೆ ಆನ್‌ಲೈನ್ ತರಗತಿಗಳು ಮುಂದುವರಿದರೆ, ಶಿಕ್ಷಣದಿಂದ ವಂಚಿತರಾಗುವವರು ಇದೇ ಕೇಸರಿಧಾರಿ ವಿದ್ಯಾರ್ಥಿಗಳು. ‘ಸ್ಕಾರ್ಫ್’ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಮನೆಯ ನಾಲ್ಕು ಗೋಡೆಗಳಿಂದ ಶಾಲಾ ಕಾಲೇಜುಗಳ ವರೆಗೆ ತಲುಪಿಸಿದೆ. ಅವರಿಗದು ಅಪಾರ ಸಾಧನೆಗಳಿಗೆ ಕೈಮರವಾಗಿದೆ. ಇಂದು ಸ್ಕಾರ್ಫ್ ಧರಿಸಿ ಓದಿಯೇ ಹತ್ತು ಹಲವು ಸಾಧನೆಗಳನ್ನು ಮಾಡಿದ ಮುಸ್ಲಿಮ್ ವಿದ್ಯಾರ್ಥಿನಿಯರಿದ್ದಾರೆ. ಇದೇ ಸಂದರ್ಭದಲ್ಲಿ ಕೇಸರಿ ಶಾಲುಗಳ ಮೂಲಕ, ಈ ಹುಡುಗರು ಏನನ್ನು ಪಡೆದುಕೊಂಡರು? ಕೇಸರಿ ಶಾಲು ತಾವು ವಿದ್ಯೆ ಕಲಿತ ಶಾಲೆಗಳ ಮೇಲೆ ಕಲ್ಲು ತೂರುವಂತೆ ಮಾಡಿತು. ಪರಸ್ಪರ ಹೊಡೆದಾಟಗಳಿಗೆ ಅವರನ್ನು ನೂಕಿತು. ಹಲವರು ಪೊಲೀಸರ ಲಾಠಿ ಏಟು ತಿನ್ನುವಂತೆ ಮಾಡಿತು. ಹಲವರು ಪೊಲೀಸರ ವಶವಾದರು. ಇವರೆಲ್ಲರೂ ಬಡವರ್ಗದ ಮಕ್ಕಳು ಎನ್ನುವುದನ್ನು ನಾವು ಗಮನಿಸಬೇಕು. ಇಂದು ಕೇಸರಿ ಶಾಲು ಹಾಕಿ ಚೀರಾಡಿದ ಹುಡುಗರು ವಾಸ್ತವದಲ್ಲಿ ಅಮಾಯಕರು. ಅವರಲ್ಲಿ ಝೋಂಬಿ ವೈರಸ್‌ನ್ನು ಬಿತ್ತಿದವರೇ ನಿಜವಾದ ಅಪರಾಧಿಗಳು.
ಇಂದು ಆ ವೈರಸ್‌ನ ಮೂಲಕ್ಕೆ ಚಿಕಿತ್ಸೆ ನೀಡದೇ ಈ ವಿದ್ಯಾರ್ಥಿಗಳನ್ನು ಶಿಕ್ಷಿಸುವುದರಿಂದ ಸಮಸ್ಯೆ ಪರಿಹಾರವಾಗದು. ಶಾಲಾ ಕಾಲೇಜುಗಳಲ್ಲಿ ಕೆಲವು ಶಿಕ್ಷಕರ ಮೆದುಳಿಗೇ ಈ ಝೋಂಬಿ ವೈರಸ್ ಸೋಂಕಾಗಿದೆ. ಮೊದಲು ಈ ಶಿಕ್ಷಕರನ್ನು, ಶಾಲಾ ಮುಖ್ಯಸ್ಥರನ್ನು ಗುರುತಿಸಿ ಅವರನ್ನು ಕ್ವಾರಂಟೈನ್‌ನಲ್ಲಿ ಇಡಬೇಕಾಗಿದೆ. ಅದರ ಜೊತೆ ಜೊತೆಗೇ ಶಾಲಾ ಕಾಲೇಜುಗಳನ್ನು ನಿಯಂತ್ರಿಸಿ ಅಲ್ಲಿ ವೈರಸ್‌ಗಳನ್ನು ಹರಡುತ್ತಿರುವ ರಾಜಕಾರಣಿಗಳನ್ನೂ ಗುರುತಿಸುವ ಕೆಲಸ ನಡೆಯಬೇಕಾಗಿದೆ. ಇವೆರಲ್ಲರಿಗೂ ಅಂಬೇಡ್ಕರ್ ಲಸಿಕೆಯನ್ನು ನೀಡಬೇಕು. ಹೇಗೆ ಪೋಷಕರು ಕೊರೋನ ವಿಷಯದಲ್ಲಿ ತಮ್ಮ ಮಕ್ಕಳನ್ನು ಜಾಗರೂಕತೆ ವಹಿಸಿದ್ದರೋ ಅದಕ್ಕಿಂತ ಹೆಚ್ಚು ಈ ಕೋಮು ಝೋಂಬಿ ವೈರಸ್ ಬಗ್ಗೆ ಜಾಗರೂಕತೆವಹಿಸಬೇಕಾಗಿದೆ. ಇಲ್ಲವಾದರೆ ತಮ್ಮ ಮಕ್ಕಳು ಝೋಂಬಿಗಳಾಗಿ ರಸ್ತೆ ಬೀದಿಯಲ್ಲಿ ಯಾರ್ಯಾರದೋ ಒಳಸಂಚುಗಳಿಗೆ ಬಲಿಯಾಗುವುದನ್ನು ನೋಡಬೇಕಾಗುತ್ತದೆ. ಆದುದರಿಂದ, ಈ ಝೋಂಬಿ ವೈರಸ್‌ಗಳ ಬಗ್ಗೆ ಪೋಷಕರು ಎಚ್ಚೆತ್ತುಕೊಳ್ಳಬೇಕು. ನಮ್ಮ ಮಕ್ಕಳನ್ನು ನಿಮ್ಮ ರಾಜಕೀಯಕ್ಕೆ ಬಲಿಪಶು ಮಾಡುವುದಿಲ್ಲ ಎಂದು ಸ್ಪಷ್ಟ ಧ್ವನಿಯಲ್ಲಿ ಹೇಳಬೇಕು. ತಮ್ಮ ಮಕ್ಕಳ ಹೆಗಲಿಗೆ ಕೇಸರಿ ಶಾಲುಗಳನ್ನು ಹಾಕಿ ಅವರ ಭವಿಷ್ಯವನ್ನು ಬಲಿ ತೆಗೆದುಕೊಂಡವರು ಯಾರು ಎನ್ನುವುದನ್ನು ಗುರುತಿಸಿ ಪ್ರಶ್ನಿಸಬೇಕು. ನಮ್ಮ ಮಕ್ಕಳಿಗೆ ಬೇಕಾಗಿರುವುದು ಕೇಸರಿ ಶಾಲುಗಳಲ್ಲ, ಉತ್ತಮ ವಿದ್ಯಾಭ್ಯಾಸ, ಉತ್ತಮ ಸಂಸ್ಕಾರ ಎನ್ನುವುದನ್ನು ಶಾಲಾ ಕಾಲೇಜುಗಳಿಗೆ ಮನವರಿಕೆ ಮಾಡಬೇಕು. ಇದೇ ಸಂದರ್ಭದಲ್ಲಿ ಶಾಲೆಗಳಿಂದ ಹೊರ ದಬ್ಬಲ್ಪಟ್ಟಿರುವ ವಿದ್ಯಾರ್ಥಿನಿಯರ ಪರವಾಗಿ ನಿಂತು, ಅವರ ಶಿಕ್ಷಣಕ್ಕೆ ಅಡ್ಡಿ ಮಾಡುತ್ತಿರುವವರ ಪ್ರಯತ್ನವನ್ನು ವಿಫಲಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಈ ರಾಜಕಾರಣಿಗಳು ಶಾಲಾ ಕಾಲೇಜುಗಳನ್ನು ತಮ್ಮ ರಾಜಕೀಯಕ್ಕಾಗಿ ಶಾಶ್ವತವಾಗಿ ಮುಚ್ಚಿಸುವ ಅಪಾಯವಿದೆ