×
Ad

ಮಂಗಳೂರು: ಎಬಿವಿಪಿ ಗೂಂಡಾಗಿರಿ ಖಂಡಿಸಿ ಎನ್‌ಎಸ್‌ಯುಐ ಪ್ರತಿಭಟನೆ

Update: 2022-02-09 16:49 IST

ಮಂಗಳೂರು, ಫೆ.9: ಹಿಜಾಬ್ ವಿಷಯದಲ್ಲಿ ರಾಜ್ಯಾದ್ಯಂತ ಎಬಿವಿಪಿ ವಿದ್ಯಾರ್ಥಿ ಸಂಘಟನೆಯ ಸದಸ್ಯರು ನಡೆಸುತ್ತಿರುವ ಗೂಂಡಾಗಿರಿಯನ್ನು ಖಂಡಿಸಿ ಎನ್‌ಎಸ್‌ಯುಐ ದ.ಕ.ಜಿಲ್ಲಾ ಸಮಿತಿಯು ಬುಧವಾರ ನಗರದ ಕ್ಲಾಕ್ ಟವರ್ ಬಳಿ ಮಾನವ ಸರಪಳಿಯೊಂದಿಗೆ ಪ್ರತಿಭಟನೆ ನಡೆಸಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎನ್‌ಎಸ್‌ಯುಐ ದ.ಕ.ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಸಾಂವಿಧಾನಿಕ ಹಕ್ಕಾಗಿದೆ. ಅದನ್ನು ಕಸಿಯಲು ಪ್ರಯತ್ನಿಸುತ್ತಿರುವುದು ಖಂಡನೀಯ. ಸಂಘಪರಿವಾರ, ಎಬಿವಿಪಿ ಸಂಘಟನೆಯು ವಿದ್ಯಾರ್ಥಿಗಳ ಮಧ್ಯೆ ಕೋಮುಭಾವನೆ ಕೆರಳಿಸಿ ಒಡಕು ಸೃಷ್ಟಿಸುತ್ತಿದೆ. ಶಿವಮೊಗ್ಗದ ಶಾಲೆಯ ಧ್ವಜ ಸ್ತಂಭದಲ್ಲಿದ್ದ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಕೇಸರಿ ಪತಾಕೆ ಹಾರಿಸಿದ್ದರೂ ಸರಕಾರ ಮೌನವಾಗಿದೆ. ಗಂಭೀರ ಸ್ವರೂಪ ಪಡೆಯುತ್ತಿರುವ ಪರಿಸ್ಥಿತಿಯನ್ನು ನಿಯಂತ್ರಿಸಬೇಕಿದ್ದ ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವುದು ಆಘಾತಕಾರಿಯಾಗಿದೆ ಎಂದರು.

ಸ್ವತಃ ತಾವು ಕಲಿಯುವ ವಿದ್ಯಾ ಕೇಂದ್ರಕ್ಕೆ ಕಲ್ಲೆಸೆಯುವ ಮೂಲಕ ಎಬಿವಿಪಿ ಗೂಂಡಾಗಳು ತಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸಿ ದ್ದಾರೆ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರ ಮುಂದೆ ಕೇಸರಿ ಪತಾಕೆ ಪ್ರದರ್ಶಿಸಿ ಭಯದ ವಾತಾವರಣ ಸೃಷ್ಟಿಸಿದ್ದಾರೆ. ತಕ್ಷಣ ಸರಕಾರ ಎಬಿವಿಪಿ ಗೂಂಡಾಗಳ ಮೇಲೆ ಕ್ರಮ ಜರಗಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಸವಾದ್ ಸುಳ್ಯ ಎಚ್ಚರಿಸಿದರು.

ಪ್ರತಿಭಟನೆಗೆ ಎನ್‌ಎಸ್‌ಯುಐ ರಾಜ್ಯ ಮುಖಂಡ ಸುಹಾನ್ ಆಳ್ವ, ಪವನ್ ಸಾಲ್ಯಾನ್ ಮತ್ತಿತರರು ನೇತೃತ್ವ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News