ಸಾಲ ಮರುಪಾವತಿಯ ಬಿಕ್ಕಟ್ಟು ಎದುರಾಗಿಲ್ಲ: ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ಹೇಳಿಕೆ

Update: 2022-02-09 17:06 GMT

ಕೊಲಂಬೊ, ಫೆ.9: ದೇಶವು ಪಾವತಿಸಬೇಕಿರುವ ಎಲ್ಲಾ ಸಾಲಗಳನ್ನು ಕ್ಲಪ್ತ ಕಾಲಕ್ಕೆ ಪಾವತಿಸಲು ಬದ್ಧವಾಗಿದ್ದು ಅಂತರಾಷ್ಟ್ರೀಯ ಸಾಲ ಮರುಪಾವತಿಸಲು ವಿಫಲವಾಗುವ ಪರಿಸ್ಥಿತಿ ಬಂದಿಲ್ಲ ಎಂದು ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ಹೇಳಿದೆ.

ದಶಕಗಳಲ್ಲೇ ಅತ್ಯಂತ ಕಠಿಣ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ವಿದೇಶಿ ವಿನಿಮಯ ಸಂಗ್ರಹ 2.36 ಬಿಲಿಯನ್ ಡಾಲರ್ ಗೆ ಕುಸಿದಿರುವುದಾಗಿ ಸೆಂಟ್ರಲ್ ಬ್ಯಾಂಕ್ ಆಫ್ ಶ್ರೀಲಂಕಾ(ಸಿಬಿಎಸ್ಎಲ್) ವರದಿ ತಿಳಿಸಿದೆ. ಸರಕಾರ ಮತ್ತು ಸಿಬಿಎಸ್ಎಲ್ ಮುಂಬರುವ ಎಲ್ಲಾ ಸಾಲ ಬಾಧ್ಯತೆಗಳನ್ನು ಗೌರವಿಸಲು ಬದ್ಧವಾಗಿವೆ. ಶ್ರೀಲಂಕಾ ಸರಕಾರ ಸಾಲ ಪಾವತಿಗೆ ವಿಫಲವಾಗುವ ಪರಿಸ್ಥಿತಿಯಲ್ಲಿದೆ ಎಂಬ ಮಾಧ್ಯಮದ ವರದಿಯಲ್ಲಿ ಹುರುಳಿಲ್ಲ. ಮುಂಬರುವ ಸಾಲದ ಬಾಧ್ಯತೆಯನ್ನು ಇತ್ಯರ್ಥಪಡಿಸುವ ಯೋಜನೆಯೊಂದಿಗೆ ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಆರ್ಥಿಕ ವ್ಯವಸ್ಥೆಯ ಮೂಲಕ ಪರ್ಯಾಯ ವಿದೇಶಿ ವಿನಿಮಯ ಒಳಹರಿವಿಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಿರೀಕ್ಷಿತ ವಿದೇಶಿ ವಿನಿಮಯದ ಒಳಹರಿವು ಹಾಗೂ ಅಂತರಾಷ್ಟ್ರೀಯ ಮೀಸಲು ನಿಧಿಯನ್ನು ರೂಪಿಸುವ ಮೂಲಕ ಹೂಡಿಕೆದಾರರೊಂದಿಗೆ ಸಾಲದ ಮರುರಚನೆ ಕುರಿತು ಮಾತುಕತೆ ನಡೆಸುವ ಅಗತ್ಯ ಬರುವುದಿಲ್ಲ ಎಂದು ಸಿಬಿಎಸ್ಎಲ್ ಹೇಳಿಕೆ ನೀಡಿದೆ.
 
ಶ್ರೀಲಂಕಾವು ಒಟ್ಟು 12.55 ಬಿಲಿಯನ್ ಡಾಲರ್ನಷ್ಟು ಸೊವರಿನ್ ಬಾಂಡ್(ಸರಕಾರಿ ಯೋಜನೆಗಳಿಗೆ ಹಣ ಸಂಗ್ರಹಿಸಲು ರೂಪಿಸಿರುವ ಆರ್ಥಿಕ ನೆರವು ಯೋಜನೆಗೆ ನೀಡುವ ಸಾಲ ಭದ್ರತೆ) ಗಳನ್ನು ಪಾವತಿಸಬೇಕಿದ್ದು ಇದರಲ್ಲಿ 1 ಬಿಲಿಯನ್ ಡಾಲರ್ ಮೊತ್ತದ ಬಾಂಡ್ಗಳ ಅವಧಿ 2022ರ ಜುಲೈಗೆ ಅಂತ್ಯಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News