ಧರ್ಮವನ್ನು ಮನೆಯೊಳಗೆ ಬಿಟ್ಟು ಬಂದರೆ ಏನಾಗುತ್ತದೆ?
ಇತ್ತೀಚಿನ ದಿನಗಳಲ್ಲಿ ಕೆಲವು ಗುಂಪುಗಳು ‘‘ನಿಮ್ಮ ಧರ್ಮವನ್ನು ಮನೆಯಲ್ಲಿ ಬಿಟ್ಟು ಬನ್ನಿ’’ ಎಂದು ಉಪದೇಶಗಳನ್ನು ನೀಡತೊಡಗಿವೆ. ಅದರಲ್ಲೂ ಮುಖ್ಯವಾಗಿ ಶಾಲೆ, ಕಾಲೇಜುಗಳಲ್ಲಿ ‘ಸಮಾನತೆ ಇರಬೇಕು’ ಎನ್ನುವ ಕಾಳಜಿಯೊಂದಿಗೆ ಅವರು ಈ ಆದೇಶಗಳನ್ನು ನೀಡುತ್ತಿದ್ದಾರೆ. ವಿಪರ್ಯಾಸವೆಂದರೆ ಕಳೆದ ಮೂರು ದಶಕಗಳಿಂದ ಧರ್ಮವನ್ನು ಶಾಲೆ, ಕಾಲೇಜುಗಳಿಗೆ, ಬೀದಿಗೆ, ರಾಜಕೀಯ ವೇದಿಕೆಗಳಿಗೆ ತಂದು ಈ ದೇಶವನ್ನು ಗಬ್ಬೆಬ್ಬಿಸಿದ ಜನರೇ ಇಂದು ‘‘ಶಾಲೆಗಳಲ್ಲಿ ಸಮಾನತೆಯನ್ನು ಕಾಪಾಡಬೇಕು. ಆದುದರಿಂದ ಧರ್ಮವನ್ನು ಮನೆಯೊಳಗೆ ಬಿಟ್ಟು ಬನ್ನಿ’’ ಎಂದು ಕರೆ ನೀಡುತ್ತಿದ್ದಾರೆ. ವಿಶೇಷವೆಂದರೆ, ಇವರ ತುತ್ತೂರಿಗೆ ಕೆಲವು ಪ್ರಗತಿಪರರೂ ಧ್ವನಿಗೂಡಿಸುತ್ತಿದ್ದಾರೆ. ಈ ಸಮಾನತೆ ವಿದ್ಯಾರ್ಥಿನಿಯರು ಹಿಜಾಬ್ ತೊರೆದು ಬಂದಾಕ್ಷಣ ಶಾಲೆಯಲ್ಲಿ ಜಾರಿಗೆ ಬಂದು ಬಿಡುತ್ತದೆ ಎನ್ನುವುದು ಇವರ ತರ್ಕ. ಹಿಜಾಬ್‌ನ್ನು ನಿರ್ದಿಷ್ಟ ಧರ್ಮವೊಂದರ ತಲೆಗೆ ಕಟ್ಟಿ ‘‘ನಿಮ್ಮ ಧರ್ಮವನ್ನು ಮನೆಯಲ್ಲಿ ಬಿಟ್ಟು ಬನ್ನಿ’’ ಎನ್ನುತ್ತಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಶಾಲೆಗಳಲ್ಲಿ ನಡೆಯುತ್ತಿರುವ ವೈದಿಕ ಆಚರಣೆಗಳು, ಉತ್ಸವಗಳ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಸರಕಾರಿ ಕಚೇರಿಗಳಲ್ಲಿ ನಡೆಯುವ ಪೂಜೆಪುನಸ್ಕಾರಗಳು ಸಮಾನತೆಗೆ ಅಡ್ಡಿ ಮಾಡುತ್ತಿವೆ ಎಂದು ಇವರಿಗೆ ಅನ್ನಿಸುತ್ತಿಲ್ಲ.
‘ಧರ್ಮವನ್ನು ಮನೆಯಲ್ಲಿ ಬಿಟ್ಟು ಬನ್ನಿ’ ಎಂದು ಸಾರ್ವಜನಿಕ ಹೇಳಿಕೆಗಳನ್ನು ಕೊಡುತ್ತಿರುವ ಬಿಜೆಪಿ ನಾಯಕರು, ಸಂಘಪರಿವಾರದ ಮುಖಂಡರು ಪರೋಕ್ಷವಾಗಿ ಈಗ ಸರಕಾರಿ ನಡೆಯುತ್ತಿರುವ ಧಾರ್ಮಿಕ ಆಚರಣೆಗಳೆಲ್ಲ ಧರ್ಮವಲ್ಲ, ಅಧರ್ಮ ಎಂದು ಹೇಳುತ್ತಿದ್ದಾರೆಯೆ? ಅವರ ಪ್ರಕಾರ ಶಾಲೆ, ಕಾಲೇಜುಗಳಲ್ಲಿ ನಡೆಯುತ್ತಿರುವ ಶಾರದ ಪೂಜೆ, ಗಣೇಶ ಉತ್ಸವಗಳೆಲ್ಲ ಧರ್ಮಕ್ಕೆ ಸಂಬಂಧಿಸಿದ್ದಲ್ಲ, ಅವರ ರಾಜಕೀಯಗಳಿಗೆ ಸಂಬಂಧಿಸಿದ್ದು. ಆದುದರಿಂದ ಅವುಗಳು ನಡೆದರೆ ಶಾಲೆಯೊಳಗಿನ ಸಮಾನತೆಗೆ ಯಾವುದೇ ಧಕ್ಕೆ ಬರುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಂತಿದೆ. ಹೇಗೂ ಪ್ರಧಾನಿ ಮೋದಿಯವರೇ ಜನರನ್ನು ‘ಬಟ್ಟೆಯ ಮೂಲಕ’ ಗುರುತಿಸಲು ಕಲಿಸಿದ್ದಾರೆ. ಆದುದರಿಂದ, ಇಂತಹ ಧಿರಿಸು ಇಂತಹ ಧರ್ಮಕ್ಕೆ ಸೇರಿದ್ದು ಎಂದು ಅವರು ಧಿರಿಸನ್ನು ಧರ್ಮಗಳಿಗೆ ಸೀಮಿತಗೊಳಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರು ಅಂತಹ ಧಿರಿಸನ್ನು ಧರಿಸಿ ಬಂದರೆ ಇತರ ಧರ್ಮೀಯರ ಭಾವನೆಗಳಿಗೆ ನೋವಾಗುತ್ತದೆ ಎನ್ನುವುದು ಅವರ ವಾದ.
ಆದರೆ ಬುಧವಾರ ‘ಧರ್ಮವನ್ನು ಮನೆಯೊಳಗೆ ಬಿಟ್ಟು ಬಂದರೆ ಏನಾಗುತ್ತದೆ?’ ಎನ್ನುವುದನ್ನು ಕೇಸರಿಧಾರಿ ವಿದ್ಯಾರ್ಥಿಗಳೇ ನಾಡಿಗೆ ತೋರಿಸಿಕೊಟ್ಟರು. ಧರ್ಮವನ್ನು ಮನೆಯೊಳಗೆ ಬಿಟ್ಟು ಬಂದ ಈ ವಿದ್ಯಾರ್ಥಿಗಳು ಸಾರ್ವಜನಿಕವಾಗಿ ಪ್ರದರ್ಶಿಸಿದ ‘ಅಧರ್ಮ’ಕ್ಕೆ ನಾಡು ಮಾತ್ರವಲ್ಲ ದೇಶವೇ ತಲೆತಗ್ಗಿಸುವಂತಾಯಿತು. ಧರ್ಮವನ್ನು ಮನೆಯೊಳಗೆ ಬಿಟ್ಟು ಬೀದಿಯಲ್ಲಿ ಅಧರ್ಮವನ್ನು ಹೊತ್ತು ಮೆರೆದ ವಿದ್ಯಾರ್ಥಿಗಳು ಶಿಕ್ಷಣದ ಹಾಲುಣಿಸಿದ ತಾಯಿಯ ಕಡೆಗೆ ಕಲ್ಲುಗಳನ್ನು ತೂರಿದರು. ಕಾಲೇಜಿನ ಗ್ರಂಥಾಲಯಗಳನ್ನು ಧ್ವಂಸ ಮಾಡಿದರು. ಒಂಟಿ ತರುಣಿಯ ವಿರುದ್ಧ ದಾಳಿ ನಡೆಸಿದರು. ಕಾಲೇಜಿನ ಆವರಣ ಅಧರ್ಮಗಳ ಕೊಚ್ಚೆ ಗುಂಡಿಯಾಗಿ ಪರಿವರ್ತನೆಯಾಯಿತು.
ಈ ದೇಶದಲ್ಲಿ ಧರ್ಮವನ್ನು ಮನೆಯೊಳಗೆ ಬಿಟ್ಟು ಬಂದಾಗಲೆಲ್ಲ ಇಂತಹ ಹಲವು ದುರಂತಗಳು ಸಂಭವಿಸಿರುವುದನ್ನು ನೋಡಿದ್ದೇವೆ. ಧರ್ಮವೆಂದರೆ ಕೇವಲ ಆಚರಣೆಯಲ್ಲ. ಕೇವಲ ಸಂಕೇತಗಳೂ ಅಲ್ಲ. ಕೇವಲ ಸಂಕೇತಗಳನ್ನು ಧರಿಸಿ, ಬಾಹ್ಯ ಆಚರಣೆ ಮಾಡಿದಾಕ್ಷಣ ಒಬ್ಬ ಹಿಂದೂ ಅಥವಾ ಮುಸ್ಲಿಮ್ ಅನ್ನಿಸಿಕೊಳ್ಳುವುದಿಲ್ಲ. ಧರ್ಮ ನಮ್ಮಿಳಗಿನ ಮಾನವೀಯತೆಯನ್ನು, ನೈತಿಕತೆಯನ್ನು ಎಚ್ಚರಿಸಬೇಕು. ಗುರುಗಳ ಜೊತೆಗೆ, ಶಾಲೆಯ ಜೊತೆಗೆ, ಹೆಣ್ಣು ಮಕ್ಕಳ ಜೊತೆಗೆ ಹೇಗೆ ವರ್ತಿಸಬೇಕು ಎಂದು ಕಲಿಸುವುದೇ ಧರ್ಮ. ಪರಸ್ಪರ ಗೌರವ, ಪರಸ್ಪರ ನೆರವು ಇವೆಲ್ಲವೂ ನಾವು ಆಚರಿಸುವ ಧರ್ಮಗಳಾಗಿವೆ. ಇಂದು ಇವೆಲ್ಲವನ್ನು ಮನೆಯಲ್ಲಿಟ್ಟು ಬಂದ ಪರಿಣಾಮವಾಗಿಯೇ ವಿದ್ಯಾರ್ಥಿಗಳು ತಾವು ಕಲಿಯುವ ಶಾಲೆಗೆ ಕಲ್ಲು ತೂರಿದರು. ರಾಷ್ಟ್ರಧ್ವಜ ಹಾರಬೇಕಾದ ಜಾಗದಲ್ಲಿ ಕೇಸರಿ ಧ್ವಜವನ್ನು ಹಾರಿಸಿದರು. ಶಿಕ್ಷಕರ ಜೊತೆಗೆ ರಾಕ್ಷಸರಂತೆ ವರ್ತಿಸಿದರು. ನೂರಾರು ಜನ ವಿದ್ಯಾರ್ಥಿಗಳು ಒಂಟಿ ಹೆಣ್ಣು ಮಗಳ ಸುತ್ತ ಕೇಕೆ ಹಾಕಿದರು.
ಧರ್ಮ ಮನೆಯಲ್ಲಿ, ದೇವಸ್ಥಾನದೊಳಗೆ, ಮಸೀದಿಯೊಳಗೆ ಮಾತ್ರ ಇದ್ದ ಪರಿಣಾಮವಾಗಿಯೇ ಗೋಧ್ರಾ ರೈಲಿಗೆ ಬೆಂಕಿ ಬಿತ್ತು. ಗುಜ ರಾತ್ ಹತ್ಯಾಕಾಂಡದಲ್ಲಿ ಮಹಿಳೆಯರ ಭೀಕರ ಅತ್ಯಾಚಾರಗಳು ನಡೆದವು. ಗರ್ಭಿಣಿಯ ಭ್ರೂಣವನ್ನು ತ್ರಿಶೂಲದಲ್ಲಿ ಕಿತ್ತು ರಾಕ್ಷಸರಂತೆ ಕುಣಿದರು. ಧರ್ಮವನ್ನು ಮನೆಯಲ್ಲಿಟ್ಟು ಬಂದ ಕಾರಣಕ್ಕೆ ರಾಜಕಾರಣಿಗಳು ಅಶ್ಲೀಲ ಸೀಡಿಗಳ ಮೂಲಕ ಸಾರ್ವಜನಿಕವಾಗಿ ಬೆತ್ತಲಾದರು. ಧರ್ಮ ಮನೆಯಲ್ಲಿಟ್ಟು ಬಂದ ಕಾರಣಕ್ಕೆ ಸದನದಲ್ಲಿ ಬ್ಲೂಫಿಲಂಗಳನ್ನು ನೋಡಿ ಜನರಿಂದ ‘ಥೂ ಛೀ’ ಎಂದು ಉಗಿಸಿಕೊಂಡರು. ಧರ್ಮ ಹೊರಗಿನ ಆಚರಣೆಗಳಲ್ಲಿ, ಬಟ್ಟೆಗಳಲ್ಲಿ ಇಲ್ಲ. ಅದು ನಮ್ಮ ಎದೆಯೊಳಗೆ ಬೆಚ್ಚಗಿದ್ದು ನಾವು ಅಧರ್ಮದ ಕಡೆಗೆ ನಡೆಯದಂತೆ ನಮ್ಮನ್ನು ಸಲಹುತ್ತಿರಬೇಕು. ಹಾಗಾದಾಗ ಇನ್ನೊಬ್ಬರ ಧಿರಿಸು ನಮ್ಮಲ್ಲಿ ಅಸಹನೆ ಹುಟ್ಟಿಸುವುದಿಲ್ಲ. ಮಹಿಳೆಯರ ಶಿಕ್ಷಣವನ್ನು ಒದಗಿಸುವುದು ನಮ್ಮ ಧರ್ಮ. ಮಹಿಳೆ ಒಂಟಿಯಾಗಿದ್ದಾಗ ಆಕೆಗೆ ದುಷ್ಕರ್ಮಿಗಳಿಂದ ರಕ್ಷಣೆ ನೀಡುವುದು ಧಮ. ಹಾಗೆಯೇ ಧರ್ಮ, ಶಿಕ್ಷಕರನ್ನು ಕಂಡಾಗ ಗೌರವಿಸಲು ಕಲಿಸುತ್ತದೆ. ಶಿಕ್ಷಣ ನೀಡುವ ಾಲೆಯನ್ನು ಪ್ರೀತಿಸಲು ಕಲಿಸುತ್ತದೆ. ಆದುದರಿಂದ, ಮುಂದಿನ ದಿನಗಳಲ್ಲಿ ಧರ್ಮವನ್ನು ಮನೆ, ಮಸೀದಿ, ಮಂದಿರಗಳಲ್ಲಿ ಬಿಟ್ಟು ಬರದೆ, ಅದನ್ನು ನಮ್ಮ ಎದೆಯೊಳಗೆ ಹೊತ್ತು ಶಾಲೆಗಳಿಗೆ ಬರೋಣ. ಅಧರ್ಮವನ್ನಷ್ಟೇ ಮನೆಯೊಳಗೆ ಬಿಟ್ಟು ಬರೋಣ.