ಜನರನ್ನು ಜಾತಿ ಧರ್ಮದ ಬಲೆಯಲ್ಲಿ ಸಿಕ್ಕಿಸಿ ಅವರು ಬೆಳೆ-ಬೆಲೆ ವಿಷಯಗಳನ್ನು ಎತ್ತದಂತೆ ಮಾಡಲು ಬಿಜೆಪಿ ಬಯಸಿದೆ
ಸಂದರ್ಶನ
ಸಾಮರಸ್ಯ ಮತ್ತು ಭ್ರಾತೃತ್ವವನ್ನು ನಿರ್ಮಿಸಲು ಇಡೀ ದೇಶ ಪ್ರಯತ್ನಿಸುತ್ತಿದೆ. ಆದರೆ, ಸರಕಾರದ ಕೆಲವು ಶಕ್ತಿಗಳು ಅವುಗಳನ್ನು ನಾಶಗೊಳಿಸಲು ಯತ್ನಿಸುತ್ತಿವೆ. ಉತ್ತರಪ್ರದೇಶದ ಸಮಗ್ರತೆಯನ್ನು ದುರ್ಬಲಗೊಳಿಸುವ ಏಕೈಕ ಉದ್ದೇಶದಿಂದ ಚುನಾವಣೆಗೆ ಎರಡು ತಿಂಗಳಿರುವಾಗ ರಾಜ್ಯದಲ್ಲಿ ನೂತನ ಪದವೊಂದನ್ನು ಪರಿಚಯಿಸಲಾಯಿತು. ಚುನಾವಣೆ ಮುಗಿದಾಗ ಇಂತಹ ಪದಗಳೂ ನೇಪಥ್ಯಕ್ಕೆ ಸರಿಯುತ್ತವೆ. ಇದು ಸರಕಾರದ ಅಧಿಕೃತ ಭಾಷೆಯಾಗಿದೆ. ಆದರೆ ಇದಕ್ಕೆ ಗಮನ ಕೊಡುವ ಅಥವಾ ಅನುಸರಿಸುವ ಅಗತ್ಯವಿಲ್ಲ ಎಂಬುದಾಗಿ ನಾವು ಜನರಿಗೆ ಹೇಳಿದ್ದೇವೆ.
ಪ್ರಶ್ನೆ: ಮೂರು ಕೃಷಿ ಕಾನೂನುಗಳನ್ನು ತೆರವುಗೊಳಿಸುವಲ್ಲಿ ರೈತರ ಚಳವಳಿ ಯಶಸ್ವಿಯಾಯಿತು. ಆದರೆ, ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಸಮಿತಿಯೊಂದನ್ನು ರಚಿಸಬೇಕು, ರೈತ ಚಳವಳಿಯ ಅವಧಿಯಲ್ಲಿ ಪ್ರತಿಭಟನಾಕಾರರ ವಿರುದ್ಧ ದಾಖಲಾದ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಬೇಕು ಮತ್ತು ಚಳವಳಿಯ ವೇಳೆ ಮೃತರಾದ ಪ್ರತಿಭಟನಾಕಾರರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂಬ ಬೇಡಿಕೆಗಳ ಬಗ್ಗೆ ಆ ಬಳಿಕ ಯಾವುದೇ ಚರ್ಚೆ ನಡೆದಿಲ್ಲ. ಈ ವಿಷಯದಲ್ಲಿ ಸರಕಾರದ ನಿಲುವು ಏನೆಂದು ನೀವು ಭಾವಿಸುತ್ತೀರಿ? ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಮ್)ದ ಮುಂದಿನ ತಂತ್ರಗಾರಿಕೆ ಏನು?
ರಾಕೇಶ್ ಟಿಕಾಯತ್: ಇತ್ತೀಚೆಗೆ, ಹರ್ಯಾಣದಲ್ಲಿ ಕೆಲವು ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆ ಹಾಗೂ ಅಲ್ಲಿನ ಕೆಲವು ಜನರಿಗೆ ಸರಕಾರ ಪರಿಹಾರ ನೀಡಿದೆ. ಆದರೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆಗಾಗಿ ಸಮಿತಿಯು ಇನ್ನೂ ರಚನೆಗೊಂಡಿಲ್ಲ.
ಮೊನ್ನೆ (ಜನವರಿ 31) ಕೆಲವು ಬಿಜೆಪಿ ವಕ್ತಾರರು, ಸಮಿತಿಯನ್ನು ರಚಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ ಹಾಗೂ ಅದಕ್ಕೆ ಸದಸ್ಯರನ್ನು ಶಿಫಾರಸು ಮಾಡುವಂತೆ ಸಂಯುಕ್ತ ಕಿಸಾನ್ ಮೋರ್ಚಾವನ್ನು ಕೇಳಿದ್ದಾರೆ. ಆದರೆ ಸಮಿತಿಯ ರಚನೆ ಬಗ್ಗೆ ಈ ವಕ್ತಾರರಿಗೆ ಯಾವುದೇ ಮಾಹಿತಿಯಿಲ್ಲ. ಕೇಂದ್ರ ಸರಕಾರವಾಗಲಿ, ಕೃಷಿ ಸಚಿವಾಲಯವಾಗಲಿ ಅದಕ್ಕಾಗಿ ಯಾವುದೇ ಅಧಿಕೃತ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿಲ್ಲ. ಸಮಿತಿಯಲ್ಲಿ ಎಷ್ಟು ಮಂದಿ ಸದಸ್ಯರಿರುತ್ತಾರೆ ಎಂಬ ಬಗ್ಗೆಯಾಗಲಿ, ಅದರ ಇತರ ವಿವರಗಳ ಬಗ್ಗೆಯಾಗಲಿ ಎಸ್‌ಕೆಎಮ್‌ಗೆ ಈವರೆಗೆ ಮಾಹಿತಿಯಿಲ್ಲ.
ಹಾಗಾಗಿ, ಎಸ್‌ಕೆಎಮ್ ಜನವರಿ 31ರಂದು ‘ವಿಶ್ವಾಸದ್ರೋಹ ದಿನ’ವನ್ನು ಆಚರಿಸಿತು. ಎಸ್‌ಕೆಎಮ್ ದೇಶಾದ್ಯಂತವಿರುವ ಎಲ್ಲ ರೈತರನ್ನು ಸಂಪರ್ಕಿಸಿ ರೈತರ ಸಮಸ್ಯೆಗಳು ಮತ್ತು ಸರಕಾರದ ನೀತಿಗಳ ಬಗ್ಗೆ ಅವರೊಂದಿಗೆ ಚರ್ಚಿಸಲಿದೆ.
ಚುನಾವಣೆಯ ಬಳಿಕ, ಕೇಂದ್ರ ಸರಕಾರವು ಬೀಜಗಳು, ಕೀಟನಾಶಕಗಳು ಮತ್ತು ಇತರ ವಿಷಯಗಳಿಗೆ ಸಂಬಂಧಿಸಿ ಕೆಲವು ನೀತಿಗಳನ್ನು ಪರಿಚಯಿಸಬಹುದು. ಈಗ ರೂಪಿಸಲಾಗುತ್ತಿರುವ ನೂತನ ವಿದ್ಯುತ್ ಕಾನೂನುಗಳ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಹಾಗೂ ಅದರ ಸುತ್ತ ಎತ್ತಲಾಗಿರುವ ಪ್ರಶ್ನೆಗಳು ಈಗಲೂ ಉತ್ತರಕ್ಕಾಗಿ ಕಾಯುತ್ತಿವೆ. ಕೇಂದ್ರ ಸರಕಾರವು ಚರ್ಚೆಯನ್ನು ಆರಂಭಿಸಿದಾಗ ಎಸ್‌ಕೆಎಮ್ ತನ್ನ ಸಲಹೆಗಳನ್ನು ಅದರ ಮುಂದಿಡುತ್ತದೆ. ಆದರೆ, ಈಗಿನ ಮಟ್ಟಿಗೆ ಸರಕಾರವು ಯಾವುದೇ ಮತುಕತೆಗಳಿಗೆ ತೆರೆದುಕೊಂಡಿಲ್ಲ. 2021 ಜನವರಿ 22ರ ಬಳಿಕ ಅವರು ಎಸ್‌ಕೆಎಮ್‌ನ ಯಾವುದೇ ಸದಸ್ಯನನ್ನು ಭೇಟಿಯಾಗಿಲ್ಲ.
ಪ್ರಶ್ನೆ: ಮೊತ್ತ ಮೊದಲಿಗೆ, ರೈತರ ಚಳವಳಿಯು ರೈತ-ಕಾರ್ಮಿಕ ಏಕತೆಯನ್ನು ಸಾರಿತು. ಪಂಜಾಬ್‌ನ ರೈತರು 2020 ನವೆಂಬರ್ 25ರಂದು ದಿಲ್ಲಿಯತ್ತ ಮೆರವಣಿಗೆ ಪ್ರಾರಂಭಿಸಿದಾಗ, ಮರುದಿನ ಅವರಿಗೆ ಬೆಂಬಲ ಸೂಚಿಸಿ ವಿವಿಧ ಕಾರ್ಮಿಕ ಸಂಘಟನೆಗಳು ದೇಶವ್ಯಾಪಿ ಮುಷ್ಕರ ನಡೆಸಿದವು. ಈಗ ಕರಾಳ ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಹಾಗಾಗಿ, ನಾಲ್ಕು ನೂತನ ಕಾರ್ಮಿಕ ಸಂಹಿತೆಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸುತ್ತಿರುವ ಕಾರ್ಮಿಕ ಸಂಘಟನೆಗಳಿಗೆ ಎಸ್‌ಕೆಎಮ್ ಬೆಂಬಲ ನೀಡುತ್ತದೆಯೇ?
ರಾಕೇಶ್ ಟಿಕಾಯತ್: ಖಂಡಿತವಾಗಿಯೂ. ಪ್ರಸಕ್ತ ಭಾರತ ಸರಕಾರವು ದೇಶವನ್ನು ಕಾರ್ಮಿಕ ಕಾಲನಿಯಾಗಿ ಪರಿವರ್ತಿಸಲು ಬಯಸುತ್ತಿದೆ. ಬೃಹತ್ ಕೈಗಾರಿಕೆಗಳಿಗೆ ಭಾರೀ ಸಂಖ್ಯೆಯಲ್ಲಿ ಕಾರ್ಮಿಕರ ಅವಶ್ಯಕತೆಯಿರುವುದರಿಂದ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರಲಾಗಿದೆ. ಇದರ ಪರಿಣಾಮವಾಗಿ, ರೈಲ್ವೆಯನ್ನು ಈಗ ಖಾಸಗೀಕರಣಗೊಳಿಸಿರುವಂತೆ, ತಿಂಗಳಿಗೆ 7,000-8,000 ರೂಪಾಯಿಗಳಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವಂತೆ ಜನರನ್ನು ಬಲವಂತಪಡಿಸಲಾಗುತ್ತಿದೆ.
ಇದರಿಂದಾಗಿ, ದೇಶಾದ್ಯಂತವಿರುವ ಸರಕಾರದ ಪ್ರತಿಯೊಂದು ಇಲಾಖೆಗೂ ಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ನೇಮಿಸಲು ಅವಕಾಶ ಸಿಗುತ್ತದೆ. ಜನರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಕೆಲವು ಕಂಪೆನಿಗಳಿಗೆ ಗುತ್ತಿಗೆ ನೀಡಲಾಗಿದೆ. ಉದಾಹರಣೆಗೆ; ಸಕ್ಕರೆ ಕಾರ್ಖಾನೆಗಳಲ್ಲಿ ಯಾರಿಗೂ ಸಂಪೂರ್ಣ ವೇತನದ ಪ್ಯಾಕೇಜ್ ನೀಡಲಾಗುತ್ತಿಲ್ಲ. ಎಲ್ಲ ಸಕ್ಕರೆ ಕಾರ್ಖಾನೆಗಳು ಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಬಯಸಿವೆ. ದೇಶಾದ್ಯಂತ ಅಗ್ಗದ ದರದಲ್ಲಿ ಕಾರ್ಮಿಕರು ಲಭಿಸುವಂತೆ ನೋಡಿಕೊಳ್ಳುವುದು ಅವರ ಅಂತಿಮ ಯೋಜನೆಯಾಗಿದೆ.
ಅಂದ ಹಾಗೆ, ಕಾರ್ಮಿಕರು ಯಾರು? ಹಳ್ಳಿಗಳಲ್ಲಿ ಯಾವುದೇ ರೈತನ ಸಹೋದರ ಅಥವಾ ಕುಟುಂಬ ಸದಸ್ಯ ಯಾವುದಾದರೂ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದರೆ ಅವರು ಕಾರ್ಮಿಕರು. ಹಳ್ಳಿಗಳಲ್ಲಿ ರೈತನಾಗಿ ಕೆಲಸ ಮಾಡುವ ವ್ಯಕ್ತಿಯೊಬ್ಬನನ್ನು ನಗರದಲ್ಲಿ ಕಾರ್ಮಿಕ ಎಂಬುದಾಗಿ ಕರೆಯಲಾಗುತ್ತಿದೆ. ಕಾರ್ಮಿಕ ದೇಶ ನಿರ್ಮಿಸುತ್ತಾನೆ. ರೈತರು ಮತ್ತು ಕಾರ್ಮಿಕರು ಇಬ್ಬರೂ ಒಂದೇ. ಆತ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರೆ ಕಾರ್ಮಿಕ ಎಂಬುದಾಗಿ ಕರೆಯಲಾಗುತ್ತದೆ, ಹೊಲದಲ್ಲಿ ಕೆಲಸ ಮಾಡುತ್ತಿದ್ದರೆ ರೈತ ಎನ್ನಲಾಗುತ್ತದೆ. ಅವರಿಬ್ಬರೂ ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ.
ಪ್ರಶ್ನೆ: 2021 ಸೆಪ್ಟಂಬರ್ 5ರಂದು ಮುಝಫ್ಫರ್‌ನಗರದಲ್ಲಿ ಕಿಸಾನ್ ಮಹಾಪಂಚಾಯತ್ ನಡೆದಾಗ, ‘ಲಾಂಗ್ ಲಿವ್ ಬ್ರದರ್‌ಹುಡ್’ ಮತ್ತು ‘ಅಲ್ಲಾಹು ಅಕ್ಬರ್, ಹರ ಹರ ಮಹಾದೇವ್’ ಎಂಬ ಘೋಷಣೆಗಳು ಏಕಸ್ವರದಲ್ಲಿ ಕೇಳಿಬಂದವು. 2013ರಲ್ಲಿ ಮುಝಫ್ಫರ್‌ನಗರದಲ್ಲಿ ಕೋಮುಗಲಭೆಗಳು ನಡೆದ ಬಳಿಕ ತಳಮಟ್ಟದಲ್ಲಿ ಕೋಮು ಆಧಾರದಲ್ಲಿ ವಿಭಜನೆಯಾಗಿರುವ ಸಮುದಾಯಗಳನ್ನು ಒಗ್ಗೂಡಿಸುವ ಪ್ರಯತ್ನಗಳು ನಡೆದವು. ಪ್ರಸಕ್ತ ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಕೈರಾನ ಮತ್ತು ಸೋತಿಗಂಜ್ ವಿಷಯಗಳನ್ನು ತರುವ ಮೂಲಕ ಬಿಜೆಪಿಯು ಮತ್ತೊಮ್ಮೆ ಕೋಮು ಭಾವನೆಗಳನ್ನು ಕೆರಳಿಸಲು ಯತ್ನಿಸುತ್ತಿದೆ. ಬಿಜೆಪಿ ಮತ್ತು ಇತರ ಮೂಲಭೂತವಾದಿ ಶಕ್ತಿಗಳು ಜಾತಿ ಆಧಾರದಲ್ಲಿ ಮತದಾರರನ್ನು ಧ್ರುವೀಕರಿಸಲು ಯತ್ನಿಸುತ್ತಿವೆ. ಇಂಥ ಪ್ರಯತ್ನಗಳನ್ನು ಎದುರಿಸಲು ಹಾಗೂ ಸಹೋದರತ್ವ ಉಳಿಯುವಂತೆ ನೋಡಿಕೊಳ್ಳಲು ನಿಮ್ಮ ಸಂಘಟನೆಯು ಯಾವ ಪ್ರಯತ್ನಗಳನ್ನು ಮಾಡುತ್ತಿದೆ?
ರಾಕೇಶ್ ಟಿಕಾಯತ್: ಸಾಮರಸ್ಯ ಮತ್ತು ಭ್ರಾತೃತ್ವವನ್ನು ನಿರ್ಮಿಸಲು ಇಡೀ ದೇಶ ಪ್ರಯತ್ನಿಸುತ್ತಿದೆ. ಆದರೆ, ಸರಕಾರದ ಕೆಲವು ಶಕ್ತಿಗಳು ಅವುಗಳನ್ನು ನಾಶಗೊಳಿಸಲು ಯತ್ನಿಸುತ್ತಿವೆ. ಉತ್ತರಪ್ರದೇಶದ ಸಮಗ್ರತೆಯನ್ನು ದುರ್ಬಲಗೊಳಿಸುವ ಏಕೈಕ ಉದ್ದೇಶದಿಂದ ಚುನಾವಣೆಗೆ ಎರಡು ತಿಂಗಳಿರುವಾಗ ರಾಜ್ಯದಲ್ಲಿ ನೂತನ ಪದವೊಂದನ್ನು ಪರಿಚಯಿಸಲಾಯಿತು. ಚುನಾವಣೆ ಮುಗಿದಾಗ ಇಂತಹ ಪದಗಳೂ ನೇಪಥ್ಯಕ್ಕೆ ಸರಿಯುತ್ತವೆ. ಇದು ಸರಕಾರದ ಅಧಿಕೃತ ಭಾಷೆಯಾಗಿದೆ. ಆದರೆ ಇದಕ್ಕೆ ಗಮನ ಕೊಡುವ ಅಥವಾ ಅನುಸರಿಸುವ ಅಗತ್ಯವಿಲ್ಲ ಎಂಬುದಾಗಿ ನಾವು ಜನರಿಗೆ ಹೇಳಿದ್ದೇವೆ.
ದೇಶದ ಏಕತೆಯನ್ನು ಒಡೆಯುವ ಉದ್ದೇಶದ ಇಂತಹ ಮಾತುಗಳನ್ನು ಜನರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಅಥವಾ ಅದರ ಪ್ರಕಾರ ನಡೆದುಕೊಳ್ಳುತ್ತಿಲ್ಲ. ಬಿಜೆಪಿ ತನ್ನ ಅದೇ ಹಳೆಯ ಕಾರ್ಯಸೂಚಿಯ ಪ್ರಕಾರ ನಡೆದುಕೊಳ್ಳುತ್ತಿದೆ. ಇದು ಹೊಸ ಮಾದರಿಯ ಕಾರುಗಳು ಲಭ್ಯವಿರುವಾಗ 20 ವರ್ಷ ಹಳೆಯ ಕಾರನ್ನು ಸ್ಪರ್ಧೆಯಲ್ಲಿ ಓಡಿಸಿದಂತೆ. ಇದು ಸ್ಪರ್ಧೆಯ ಯುಗ. ಹಳೆಯ ಮಾದರಿಯು ಉಪಯೋಗಕ್ಕೆ ಬರುವುದಿಲ್ಲ ಹಾಗೂ ಅದನ್ನು ಜನರು ತಿರಸ್ಕರಿಸಿದ್ದಾರೆ. ಚುನಾವಣೆಗಳನ್ನು ಎದುರಿಸುವುದಕ್ಕಾಗಿಯೂ ಅವರು ಹೊಸ ಯೋಚನೆಗಳೊಂದಿಗೆ ಬರಬೇಕು. ಅವರು ಶಿಕ್ಷಣ, ಆರೋಗ್ಯ ಮತ್ತು ರಸ್ತೆಗಳ ಬಗ್ಗೆ ಮಾತನಾಡಬೇಕು. ಇದನ್ನು ಕೇಳಲು ಜನರು ಬಯಸಿದ್ದಾರೆ.
ಪ್ರಶ್ನೆ: ಪಶ್ಚಿಮ ಉತ್ತರಪ್ರದೇಶದಲ್ಲಿ 36 ರೈತ ಸಮುದಾಯಗಳು ಕೈಜೋಡಿಸಿವೆ ಹಾಗೂ ಭ್ರಾತೃತ್ವನ್ನು ನಿರ್ಮಿಸಿವೆ ಎಂದು ಹೇಳಲಾಗುತ್ತಿದೆ. ಆದರೆ, ಕೆಲವು ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ‘ಠಾಕೂರ್‌ವಾದ’ವನ್ನು ಚುನಾವಣಾ ವಿಷಯ ಎಂಬುದಾಗಿ ಪರಿಗಣಿಸಿವೆ. ಪಶ್ಚಿಮ ಉತ್ತರಪ್ರದೇಶದಲ್ಲಿ ರಜಪೂತರೂ ರೈತ ಸಮುದಾಯವಾಗಿದ್ದಾರೆ. ಇದರ ಬಗ್ಗೆ ನೀವು ಏನು ಹೇಳುತ್ತೀರಿ?
ರಾಕೇಶ್ ಟಿಕಾಯತ್: ಇಲ್ಲಿನ ಎಲ್ಲ ರೈತ ಸಮುದಾಯಗಳ ಪೈಕಿ ರಜಪೂತರ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಅವರು ಶೋಚನೀಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅದು ‘ಮೇಲ್ಜಾತಿ’ ಎನ್ನುವುದು ಹೆಸರಿಗೆ ಮಾತ್ರ ಆಗಿದೆ; ಆ ಸಮುದಾಯದ ಸದಸ್ಯರು ಕರುಣಾಜನಕ ಸ್ಥಿತಿಯಲ್ಲಿದ್ದಾರೆ. ಅವರು ಮುಖ್ಯವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಅವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಅವರು ಸುಂದರ ಹೆಸರುಗಳನ್ನು ಹೊಂದಿದ್ದಾರೆ, ಆದರೆ ಅವರಿಗೆ ಕೆಲಸವಿಲ್ಲ ಹಾಗೂ ಜೀವನೋಪಾಯಕ್ಕಾಗಿ ಅವರು ಪರದಾಡುತ್ತಿದ್ದಾರೆ. ಅವರ ಸ್ಥಳಗಳು ಮತ್ತು ಮನೆಗಳಿಗೆ ಹೋಗಿ ನೀವೇ ಕಣ್ಣಾರೆ ನೋಡಿ. ಸಮುದಾಯ ಯಾವುದೇ ಇದ್ದರೂ ಜನರು ನಷ್ಟಗಳನ್ನು ಅನುಭವಿಸುತ್ತಿದ್ದಾರೆ.
ಕೃಷಿಯಲ್ಲಿ, ಜಾತಿಯಿಂದ ಒಂದು ಬೆಳೆಯ ವೌಲ್ಯ ನಿರ್ಧಾರವಾಗುವುದಿಲ್ಲ. ಬೆಳೆಗಳಿಗೆ ಸಿಗುವ ಬೆಲೆ- ಸರಿಯಾದ ಬೆಲೆಯಾದರೂ, ಕಡಿಮೆ ಬೆಲೆಯಾದರೂ- ಎಲ್ಲರಿಗೂ ಒಂದೇ. ಅದಕ್ಕಾಗಿಯೇ ಬಿಜೆಪಿಯು ಜನರನ್ನು ಜಾತಿ, ಭ್ರಾತೃತ್ವ ಮತ್ತು ಧರ್ಮದ ಬಲೆಯಲ್ಲಿ ಸಿಲುಕಿಸಲು ಬಯಸಿದೆ. ಜನರು ತಮ್ಮ ಬೆಳೆಗಳಿಗೆ ಸರಿಯಾದ ಬೆಲೆಯನ್ನು ಕೇಳಬಾರದು ಎನ್ನುವ ಕಾರಣಕ್ಕಾಗಿ ಅದು ಹೀಗೆ ಮಾಡುತ್ತಿದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಹಳ್ಳಿಗಳಲ್ಲಿ ರೈತರು ಮತ್ತು ಕಾರ್ಮಿಕರಿಗೆ ಉಚಿತ ವೈದ್ಯಕೀಯ ಸೇವೆಗಳು ಲಭಿಸಿದರೆ ಹಾಗೂ ಅವರ ಮಕ್ಕಳಿಗೆ ಉಚಿತ ಶಿಕ್ಷಣ ಲಭಿಸಿದರೆ ಮಾತ್ರ ರೈತ ಸಮುದಾಯಗಳಿಗೆ ಲಾಭವಾಗುತ್ತದೆ. ಇಲ್ಲದಿದ್ದರೆ ಅವರು ನಷ್ಟದಲ್ಲೇ ಇರುತ್ತಾರೆ.
ಪ್ರಶ್ನೆ: ಕಳೆದ ಹಲವಾರು ವರ್ಷಗಳಲ್ಲಿ, ರೈತರು ನಿಧಾನವಾಗಿ ರೈತ ಸಂಘಟನೆಗಳಿಂದ ದೂರ ಸರಿಯುತ್ತಿರುವುದನ್ನು ಗಮನಿಸಲಾಗಿದೆ. ಆದರೆ, ರೈತ ಚಳವಳಿಯು ರೈತ ಸಮುದಾಯದಲ್ಲಿ ಹೊಸ ಭರವಸೆಯೊಂದನ್ನು ಮೂಡಿಸಿದೆ. ನಗರಗಳಲ್ಲಿ ಕಲಿಯುತ್ತಿರುವ ಅಥವಾ ಕೆಲಸ ಮಾಡುತ್ತಿರುವ ರೈತ ಕುಟುಂಬಗಳ ಹಲವು ಯುವ ಜನರು ಈಗ ಕೃಷಿ ಹಿನ್ನೆಲೆಯನ್ನು ಅಭಿಮಾನದಿಂದ ಅಪ್ಪಿಕೊಳ್ಳುತ್ತಿದ್ದಾರೆ. ಈ ಬದಲಾವಣೆಯನ್ನು ನೀವು ಹೇಗೆ ನೋಡುತ್ತೀರಿ?
ರಾಕೇಶ್ ಟಿಕಾಯತ್: ಕೃಷಿಯಿಂದ ದೂರವಾಗಿದ್ದುಕೊಂಡು ಬೆಳೆದಿದ್ದ ಯುವಜನರು ಈಗ ಕೃಷಿ ಮತ್ತು ತಮ್ಮ ಜಮೀನಿಗೆ ಮರಳುತ್ತಿದ್ದಾರೆ. ತಮ್ಮ ಜಮೀನಿನ ವೌಲ್ಯವನ್ನು ಯುವಜನರಿಗೆ ಮನಗಾಣಿಸಬೇಕು. ಇಲ್ಲದಿದ್ದರೆ ಅದರ ವೌಲ್ಯ ಕಳೆದುಹೋಗುತ್ತದೆ. ಅವರು ನಗರಗಳನ್ನೇ ಆಶ್ರಯಿಸಿದರೆ ಹಳ್ಳಿಗಳಲ್ಲಿರುವ ಅವರ ಜಮೀನು ಮಾರಾಟವಾಗುತ್ತದೆ. ಈಗ ಎಲ್ಲಿಯೂ ಉದ್ಯೋಗವಿಲ್ಲ. ಯುವಜನರು ಕೃಷಿ ಕ್ಷೇತ್ರದಲ್ಲೇ ಕೆಲಸ ಕಂಡುಕೊಳ್ಳಬೇಕಾಗುತ್ತದೆ. ಕುಟುಂಬದ ಓರ್ವ ಸದಸ್ಯ ಹಳ್ಳಿಯಲ್ಲಿ ಉಳಿದರೆ, ಇನ್ನೊಬ್ಬರು ನಗರದಲ್ಲಿ ಕೆಲಸ ಮಾಡುತ್ತಾರೆ. ನಗರದಲ್ಲಿ ಕೆಲಸ ಮಾಡುವವರು ಹಳ್ಳಿಗಳಲ್ಲಿ ನೆಲೆಸಿರುವವರ ಕೃಷಿ ಚಟುವಟಿಕೆಗಳಿಗೆ ಹಣಕಾಸಿನ ನೆರವು ಒದಗಿಸಬಹುದು. ಇದಕ್ಕೆ ಪ್ರತಿಯಾಗಿ, ಹಳ್ಳಿಗಳಲ್ಲಿ ನೆಲೆಸಿರುವವರು ನಗರದಲ್ಲಿ ನೆಲೆಸಿರುವ ಕುಟುಂಬ ಸದಸ್ಯರಿಗೆ ಧಾನ್ಯಗಳು, ತುಪ್ಪ, ತರಕಾರಿ ಮತ್ತು ದ್ವಿದಳ ಧಾನ್ಯಗಳನ್ನು ಪೂರೈಸಬಹುದು.
ಈ ರೀತಿಯಲ್ಲಿ ಇಬ್ಬರಿಗೂ ಲಾಭದಾಯಕವಾಗುವಂತೆ ಕೃಷಿಯನ್ನು ನಡೆಸಿಕೊಂಡು ಹೋಗಬಹುದು. ಅವಿಭಕ್ತ ಕುಟುಂಬಗಳು ಇದೇ ರೀತಿಯಲ್ಲಿ ಕೆಲಸ ಮಾಡುತ್ತಿದ್ದವು. ಒಂದು ಕುಟುಂಬ ನಗರದಲ್ಲಿ ವಾಸಿಸಿದರೆ, ಇನ್ನೊಂದು ಹಳ್ಳಿಯಲ್ಲಿ ವಾಸಿಸುತ್ತದೆ. ಅವರ ನಡುವೆ ಸಾಮರಸ್ಯವಿತ್ತು. ನಾವು ಇನ್ನೊಮ್ಮೆ ಇದೇ ರೀತಿಯ ಬದುಕುವ ವಿಧಾನವನ್ನು ಅಳವಡಿಸಿಕೊಳ್ಳಬೇಕಾಗಿದೆ.
ಪ್ರಶ್ನೆ: ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ರಾಜ್ಯದ ಜನರಿಗೆ ನೀವು ಕೊಡುವ ಸಂದೇಶವೇನು?
ರಾಕೇಶ್ ಟಿಕಾಯತ್: ಜಾತಿ ಅಥವಾ ಧರ್ಮದ ಆಧಾರದಲ್ಲಿ ಯೋಚಿಸಬೇಡಿ; ನಿಮ್ಮ ಉದ್ಯಮ ಅಥವಾ ಸಂಪಾದನೆಯ ಮೇಲೆ ನಿಜವಾದ ಪರಿಣಾಮವನ್ನು ಯಾವುದು ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದು ನಾನು ಜನರನ್ನು ಒತ್ತಾಯಿಸುತ್ತೇನೆ. ತಾವು ನಷ್ಟವನ್ನು ಅನುಭವಿಸುತ್ತಿದ್ದೇವೆಯೋ ಅಥವಾ ಲಾಭ ಗಳಿಸುತ್ತಿದ್ದೇವೆಯೋ ಎನ್ನುವುದನ್ನು ಅವರು ಮೊದಲು ವಿಶ್ಲೇಷಿಸಬೇಕು ಹಾಗೂ ಬಳಿಕ ಮತ ಹಾಕಬೇಕು.
ಜಾತಿ ಮತ್ತು ಧರ್ಮದ ಆಧಾರದಲ್ಲಿ ಮತ ಹಾಕಬೇಡಿ. ನಿಮ್ಮಲ್ಲಿ ಮತ ಕೇಳಲು ಯಾರು ಬರುತ್ತಾರೋ ಅವರಿಗೆ ನಿಮ್ಮ ನಿಲುವನ್ನು ನಿಮ್ಮದೇ ಭಾಷೆಯಲ್ಲಿ ವ್ಯಕ್ತಪಡಿಸಿ. ಸರಕಾರ ರಚಿಸಲಿರುವ ನಾಯಕರು ಮತ್ತು ರಾಜಕಾರಣಿಗಳು ನಿಮ್ಮ ಮನೆಬಾಗಿಲಿಗೆ ಬರುತ್ತಾರೆ. ಅವರೊಂದಿಗೆ ಮಾತನಾಡಿ.
ಕೃಪೆ : thewire.in