×
Ad

ಲಾಕ್‌ಡೌನ್: ರಾಜಕೀಯ ಪಕ್ಷಗಳು ಡಬ್ಲುಎಚ್‌ಒಗೆ ಅವಿಧೇಯವಾಗಿದ್ದವೇ?

Update: 2022-02-10 13:06 IST

ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗಳಿಗೆ ಉತ್ತರಿಸುತ್ತ ಭಾರತದಲ್ಲಿ ಕೋವಿಡ್ ಲಾಕ್‌ಡೌನ್ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ಮಾರ್ಗದರ್ಶನಕ್ಕೆ ಅನುಗುಣವಾಗಿತ್ತು ಎಂದು ಹೇಳಲು ಯತ್ನಿಸಿದ್ದರು. ಕೆಲವು ರಾಜಕೀಯ ಪಕ್ಷಗಳು ಲಾಕ್‌ಡೌನ್ ಜಾರಿಯಲ್ಲಿದ್ದಾಗ ವಲಸೆ ಕಾರ್ಮಿಕರ ಪ್ರಯಾಣಕ್ಕೆ ನೆರವಾಗಿದ್ದವು ಮತ್ತು ಡಬ್ಲುಎಚ್‌ಒ ಜನರನ್ನು ಇದ್ದಲ್ಲೇ ಇರುವಂತೆ ಸೂಚಿಸುತ್ತಿದ್ದಾಗಲೇ ಈ ಬೆಳವಣಿಗೆ ಸಂಭವಿಸಿತ್ತು ಎಂದು ಮೋದಿ ಹೇಳಿದ್ದರು.

ಆದರೆ ಇದು ನಿಜವಲ್ಲ. ಸಾಂಕ್ರಾಮಿಕದ ಆರಂಭದಿಂದಲೇ ಸಾರಾಸಗಟು ಲಾಕ್‌ಡೌನ್‌ಗಳಿಗೆ ಡಬ್ಲುಎಚ್‌ಒ ಎಂದೂ ಒಲವು ತೋರಿಸಿರಲಿಲ್ಲ. ಆದರೆ ತುರ್ತು ಸಂದರ್ಭವಿದ್ದರೆ ಮಾತ್ರ ಜನರು ಮನೆಯಿಂದ ಹೊರಗೆ ಹೋಗಬೇಕು ಎಂಬ ಆದೇಶವನ್ನು ಅದು ಬೆಂಬಲಿಸಿತ್ತು.

2020,ಮಾ.24ರಂದು ಮೋದಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ಆರು ದಿನಗಳ ಬಳಿಕ ಡಬ್ಲುಎಚ್‌ಒದ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಈ ವರದಿಗಾರ್ತಿ ಭಾರತದಲ್ಲಿನ ಲಾಕ್‌ಡೌನ್ ಕುರಿತು ಮತ್ತು ಭಾರತ ಸರಕಾರಕ್ಕೆ ನಿಮ್ಮ ಸಲಹೆಯೇನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದರು.

ಇದಕ್ಕೆ ಉತ್ತರಿಸಿದ್ದ ಡಬ್ಲುಎಚ್‌ಒದ ತುರ್ತು ಕಾರ್ಯಕ್ರಮ ನಿರ್ದೇಶಕ ಮೈಕ್ ರ್ಯಾನ್ ಅವರು, ಲಾಕ್‌ಡೌನ್‌ಗಳು ಅಥವಾ ಶಟ್‌ಡೌನ್‌ಗಳು ಅಥವಾ ಚಲನವಲನ ನಿರ್ಬಂಧಗಳು ಜನರ ಚಲನವಲನ ಸ್ವಾತಂತ್ರದ ಮೇಲೆ ಪ್ರಭಾವ ಬೀರುತ್ತವೆಯಾದ್ದರಿಂದ ಅವುಗಳು ಏಕೆ ಅನಿವಾರ್ಯ ಎನ್ನುವುದರ ಬಗ್ಗೆ ಸರಕಾರಗಳು ತಮ್ಮ ಜನರೊಂದಿಗೆ ಮುಕ್ತ ಮತ್ತು ಪಾರದರ್ಶಕ ಸಂವಹನವನ್ನು ನಡೆಸುವುದು ಮುಖ್ಯವಾಗಿದೆ.

ರ್ಯಾನ್ ನಿಸ್ಸಂಶಯವಾಗಿ ‘ಮುಕ್ತ ಸಂವಹನ’ವನ್ನು ಒತ್ತಿ ಹೇಳಿದ್ದರು. ಆದರೆ ಮೋದಿಯವರು ಕೇವಲ ನಾಲ್ಕು ಗಂಟೆಗಳ ಕಾಲಾವಕಾಶ ನೀಡುವುದರೊಂದಿಗೆ ದೇಶದ 130 ಕೋ.ಜನರಿಗೆ ಅಭೂತಪೂರ್ವ ಲಾಕ್‌ಡೌನ್ ಅನ್ನು ಘೋಷಿಸಿದ್ದರು.

ಚಲನವಲನಗಳ ಮೇಲೆ ನಿರ್ಬಂಧಗಳು ಎಲ್ಲ ಸಂದರ್ಭಗಳಲ್ಲೂ ವಿಷಾದನೀಯವಾಗಿವೆ ಮತ್ತು ಅವುಗಳನ್ನು ಯಾರೂ ಬಯಸುವುದಿಲ್ಲ. ಆದರೆ ದೇಶದ ಒಂದು ಭಾಗದಲ್ಲಿ ಸಾಂಕ್ರಾಮಿಕ ಅತ್ಯಂತ ತೀವ್ರವಾಗಿದ್ದಾಗ ಮತ್ತು ದೇಶದ ಇನ್ನೊಂದು ಭಾಗದಲ್ಲಿ ಅಷ್ಟೊಂದು ತೀವ್ರವಾಗಿರದಿದ್ದಾಗ ನೀವು ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗಬಹುದು ಎಂದೂ ರ್ಯಾನ್ ವಿವರಿಸಿದ್ದರು.

ರ್ಯಾನ್ ‘ಸಾಂಕ್ರಾಮಿಕ ಅತ್ಯಂತ ತೀವ್ರವಾಗಿದ್ದಾಗ’ ಎಂದು ಉಲ್ಲೇಖಿಸಿದ್ದರು. ಮೋದಿ ಟಿವಿಯಲ್ಲಿ ಪ್ರತ್ಯಕ್ಷರಾಗಿ ಲಾಕ್‌ಡೌನ್ ಘೋಷಿಸಿದ್ದ ದಿನ ಭಾರತದಲ್ಲಿ ಕೇವಲ 37 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಅದು ನಿಜಕ್ಕೂ ‘ಅತ್ಯಂತ ತೀವ್ರ’ ಸಂದರ್ಭವಾಗಿತ್ತೇ? ಇಲ್ಲ... ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ನೆರವಾಗುವ ಮೂಲಕ ಇತರ ರಾಜಕೀಯ ಪಕ್ಷಗಳು ಮತ್ತು ಸರಕಾರಗಳು ಬಹಳ ದೊಡ್ಡ ಪಾಪವನ್ನು ಎಸಗಿದ್ದವು ಎಂದೂ ಮೋದಿ ಸೋಮವಾರ ತನ್ನ ಭಾಷಣದಲ್ಲಿ ಹೇಳಿದ್ದರು. ದೇಶಾದ್ಯಂತ ಕಾರ್ಖಾನೆಗಳು ಮತ್ತು ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿದ್ದರಿಂದ ವಲಸೆ ಕಾರ್ಮಿಕರು ಒಂದು ತುತ್ತು ಕೂಳಿಗೂ ಪರದಾಡುತ್ತಿದ್ದರು ಮತ್ತು ಸುಡುವ ಬಿಸಿಲಿನಲ್ಲಿ ನಡೆದುಕೊಂಡೇ ತಮ್ಮ ಊರುಗಳಿಗೆ ಪ್ರಯಾಣಿಸುವಂತಾಗಿತ್ತು. ಹೆದ್ದಾರಿಯೊಂದರಲ್ಲಿ ವಲಸೆ ಕಾರ್ಮಿಕನೋರ್ವ ಹಸಿವು ನೀಗಿಸಿಕೊಳ್ಳಲು ನಾಯಿಯ ಕಳೇಬರವನ್ನು ತಿನ್ನುತ್ತಿದ್ದ ಘಟನೆಯೂ ವರದಿಯಾಗಿತ್ತು.

ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ನೆರವಾಗುವ ಮೂಲಕ ರಾಜ್ಯ ಸರಕಾರಗಳು ಮತ್ತು ರಾಜಕೀಯ ಪಕ್ಷಗಳು ನಿಜಕ್ಕೂ ಪಾಪವನ್ನು ಎಸಗಿದ್ದವೇ? ಇಲ್ಲ...

ರ್ಯಾನ್ ಉತ್ತರಕ್ಕೆ ಪೂರಕವಾಗಿ ಡಬ್ಲುಎಚ್‌ಒದ ಮಹಾ ನಿರ್ದೇಶಕ ಟೆಡ್ರೋಸ್ ಅಧನಾಮ್ ಗೇಬ್ರಿಯೆಸಸ್ ಅವರು, ಹೆಚ್ಚಿನ ಜನರು ತಮ್ಮ ದಿನದ ಕೂಳಿಗಾಗಿ ಪ್ರತಿದಿನ ದುಡಿಯಲೇಬೇಕು ಎನ್ನುವುದು ನಿಮಗೆ ಮತ್ತು ನನಗೆ ಗೊತ್ತು. ಸರಕಾರಗಳು ಈ ಜನರನ್ನೂ ಗಮನಕ್ಕೆ ತೆಗೆದುಕೊಳ್ಳಬೇಕು. ನಾವು ಲಾಕ್‌ಡೌನ್ ಅಥವಾ ಚಲನವಲನ ನಿರ್ಬಂಧಗಳನ್ನು ಹೇರಿದರೆ ಈ ಜನರ ಸ್ಥಿತಿ ಏನಾಗುತ್ತದೆ ಎಂದು ಪ್ರಶ್ನಿಸಿದ್ದರು.

ಮೋದಿ ಲಾಕ್‌ಡೌನ್ ಘೋಷಿಸಿದಾಗ ದಿನವೂ ದುಡಿದು ತಿನ್ನುವ ಈ ಜನರಿಗಾಗಿ ಯಾವುದೇ ಯೋಜನೆಯನ್ನು ಪ್ರಕಟಿಸಿರಲಿಲ್ಲ. ನೀವು ಎಲ್ಲಿದ್ದೀರೋ ಅಲ್ಲಿಯೇ ಇರಿ ಎಂದಷ್ಟೇ ಮೋದಿ ಸರಕಾರವು ಈ ಜನರಿಗೆ ಸೂಚಿಸಿತ್ತು.

ಮೊದಲ ಕೋವಿಡ್ ಅಲೆಯ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಪ್ರತಿದಿನ ಸುದ್ದಿಗೋಷ್ಠಿ ನಡೆಸಿ ಸಾಂಕ್ರಾಮಿಕದ ಬೆಳವಣಿಗೆಯ ಬಗ್ಗೆ ವಿವರಗಳನ್ನು ನೀಡುತ್ತಿದ್ದರು. 2020 ಎಪ್ರಿಲ್ ಸುಮಾರಿಗೆ ಈ ಸುದ್ದಿಗೋಷ್ಠಿಗಳಲ್ಲಿ ಮುಸ್ಲಿಮ್ ಸಮುದಾಯವನ್ನು ಖಳನಾಯಕನೆಂಬಂತೆ ಬಿಂಬಿಸಲಾಗಿತ್ತು. ಸಮುದಾಯದ ಸದಸ್ಯರು ಸಾಂಕ್ರಾಮಿಕದ ‘ಸೂಪರ್ ಸ್ಪ್ರೆಡರ್’ ಗಳಾಗಿದ್ದಾರೆ ಎಂದು ಸರಕಾರಿ ಅಧಿಕಾರಿಗಳು ಸುಳ್ಳು ಆರೋಪಗಳನ್ನು ಮಾಡಿದ್ದರು.

 2020, ಎ.5ರ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಅವರು, ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಮ್ಮಡಿಗೊಳ್ಳುವ ದರ 4.1 ದಿನಗಳಾಗಿವೆ. ನಿಝಾಮುದ್ದೀನ್‌ನಲ್ಲಿ ತಬ್ಲೀಗಿ ಜಮಾಅತ್‌ನ ಸಮಾವೇಶ ನಡೆದಿರದಿದ್ದರೆ ಇದು 7.14 ದಿನಗಳಾಗಿರುತ್ತಿತ್ತು ಎಂದೂ ಹೇಳಿದ್ದರು.

ಒಂದು ದಿನದ ಬಳಿಕ ಇನ್ನೊಂದು ಸುದ್ದಿಗೋಷ್ಠಿಯಲ್ಲಿ ಈ ವರದಿಗಾರ್ತಿಯ ಪ್ರಶ್ನೆಗಳಿಗೆ ಉತ್ತರಿಸಿದ್ದ ರ್ಯಾನ್, ಕೋವಿಡ್ ಪ್ರಕರಣಗಳನ್ನು ಧರ್ಮದ ಮೂಲಕ ಬಿಂಬಿಸುತ್ತಿರುವುದಕ್ಕಾಗಿ ಭಾರತವನ್ನು ಖಂಡಿಸಿದ್ದರು.

‘ಇದರಿಂದೇನೂ ಉಪಯೋಗವಿಲ್ಲ. ಕೋವಿಡ್‌ಗೆ ತುತ್ತಾಗುವುದು ಯಾರದೇ ತಪ್ಪಲ್ಲ, ಪ್ರತಿಯೊಂದೂ ಪ್ರಕರಣವೂ ಬಲಿಪಶುವಾಗಿದೆ. ಧಾರ್ಮಿಕ ಮತ್ತು ಜನಾಂಗೀಯ ಆಧಾರದ ಮೇಲೆ ಪ್ರಕರಣಗಳನ್ನು ವಿವರಿಸದಿರುವುದು ಅತ್ಯಂತ ಮುಖ್ಯವಾಗಿದೆ ಎಂದು ರ್ಯಾನ್ ಹೇಳಿದ್ದರು. ಸೋಮವಾರ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಮೋದಿ ಈ ವಿಷಯದ ಬಗ್ಗೆ ಏನೂ ಹೇಳಿರಲಿಲ್ಲ.

ಒಟ್ಟಾರೆಯಾಗಿ ಡಬ್ಲುಎಚ್‌ಒ ನಿರ್ಬಂಧಗಳನ್ನು ಬೆಂಬಲಿಸಿತ್ತು, ಆದರೆ ಯಾವುದೇ ಮುನ್ಸೂಚನೆಯಿಲ್ಲದೆ ದೇಶಾದ್ಯಂತ ಎಲ್ಲ ಚಟುವಟಿಕೆಗಳನ್ನು ನಿರ್ಬಂಧಿಸುವುದನ್ನು ಅದು ಬೆಂಬಲಿಸಿರಲಿಲ್ಲ. ಮುಕ್ತ ಸಂವಹನದಿಂದ ಹಿಡಿದು ಪ್ರಕರಣಗಳನ್ನು ಧಾರ್ಮಿಕವಾಗಿ ಚಿತ್ರಿಸದಿರುವುದರವರೆಗೆ ಹಲವಾರು ಎಚ್ಚರಿಕೆಗಳನ್ನು ನೀಡಿತ್ತು ಮತ್ತು ವಿವಿಧ ಬೆಂಬಲ ಕ್ರಮಗಳನ್ನೂ ಸೂಚಿಸಿತ್ತು.

ಪ್ರಧಾನಿ ಮೋದಿಯವರು ಲಾಕ್‌ಡೌನ್ ಜಾರಿಗೊಳಿಸಿದಾಗ ಇವೆಲ್ಲವನ್ನೂ ಕಡೆಗಣಿಸಿದ್ದರು, ಸೋಮವಾರದ ತನ್ನ ಭಾಷಣದಲ್ಲಿಯಂತೆ.....

ಕೃಪೆ : thewire.in

Writer - ಬಂಜೋತ್ ಕೌರ್

contributor

Editor - ಬಂಜೋತ್ ಕೌರ್

contributor

Similar News