ಪತ್ರಕರ್ತೆ ರಾಣಾ ಅಯ್ಯೂಬ್‌ಗೆ ಅತ್ಯಾಚಾರದ ಬೆದರಿಕೆ: ಓರ್ವನ ಬಂಧನ

Update: 2022-02-10 16:55 GMT
ರಾಣಾ ಅಯ್ಯೂಬ್‌ (Photo: Twitter/@RanaAyyub)

ಮುಂಬೈ: ಸ್ವತಂತ್ರ ಪತ್ರಕರ್ತೆ ರಾಣಾ ಅಯ್ಯೂಬ್ ಅವರಿಗೆ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಭೋಪಾಲ್‌ನ 24 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಆರೋಪಿಯನ್ನು ಸಿದ್ಧಾರ್ಥ್ ಶ್ರೀವಾಸ್ತವ್ ಎಂದು ಗುರುತಿಸಲಾಗಿದ್ದು, ಈತ 10ನೇ ತರಗತಿವರೆಗೆ ಓದಿದ್ದಾನೆ. ಗಾರ್ಮೆಂಟ್ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಆತ ಅವಿವಾಹಿತ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

 “ರಾಣಾ ಪತ್ರಕರ್ತೆಯಾಗಿ ತನ್ನ ಕೆಲಸವನ್ನು ಮುಂದುವರೆಸಿದರೆ ಕೊಲ್ಲುವುದಾಗಿ ಶ್ರೀವಾಸ್ತವ್ ಬೆದರಿಕೆ ಹಾಕಿದ್ದಾರೆ. ಆಕೆಯ ವಿರುದ್ಧ ಅಸಭ್ಯ ಮತ್ತು ಅಶ್ಲೀಲ ಭಾಷೆಯನ್ನೂ ಬಳಸಿದ್ದಾನೆ” ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ Hindustan Times ವರದಿ ಮಾಡಿದೆ.

ಆರೋಪಿಯು ನಕಲಿ ಹೆಸರಿನಲ್ಲಿ Instagram ಬಳಸುತ್ತಿದ್ದ. ಆತನಿಗೆ ಪೊಲೀಸರು ನೋಟಿಸ್ ನೀಡಿದ್ದು, ಗುರುವಾರ ಮುಂಬೈನಲ್ಲಿ ಬಂಧಿಸಿದ್ದಾರೆ. ಆತನನ್ನು ಕಸ್ಟಡಿಗೆ ಕೋರಿ ಪೊಲೀಸರು ಬಾಂದ್ರಾದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆತನ ಆರ್‌ಟಿ-ಪಿಸಿಆರ್ ಪರೀಕ್ಷೆಯ ನಂತರ ಅವರನ್ನು ಜೈಲಿಗೆ ಹಾಕಲಾಗುತ್ತದೆ.

 “ಮುಂಬೈ ಸೈಬರ್ ಕ್ರೈಮ್ ನನಗೆ ನೀಡಿದ ಅತ್ಯಾಚಾರ ಮತ್ತು ಜೀವ ಬೆದರಿಕೆಯಲ್ಲಿ ಮೊದಲ ಬಂಧನವನ್ನು ಮಾಡಿದೆ. ನನಗೆ ಜೀವ ಬೆದರಿಕೆ ಹಾಕಿದ್ದಕ್ಕಾಗಿ ಭೋಪಾಲ್‌ನಲ್ಲಿ ಯುವಕನನ್ನು ಬಂಧಿಸಲಾಗಿದೆ. ತಡಮಾಡದೆ ನನಗೆ ನ್ಯಾಯ ಕೊಡಿಸುವುದಾಗಿ ಮುಂಬೈ ಪೋಲೀಸ್ ಭರವಸೆ ನೀಡಿದ್ದಾರೆ. ಜನವರಿ 28 ರಂದು ಕನಿಷ್ಠ ನಾಲ್ವರು ಅಪರಿಚಿತ ಶಂಕಿತರ ವಿರುದ್ಧ ಪ್ರಥಮ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ರಾಣಾ ಅಯ್ಯೂಬ್ ಗುರುವಾರ ಟ್ವೀಟ್ ಮಾಡಿದ್ದಾರೆ.

ಕೆಲವು ದಿನಗಳ ಅವಧಿಯಲ್ಲಿ ತನ್ನ ಟ್ವಿಟರ್ ಹ್ಯಾಂಡಲ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ 26,000 ಕ್ಕೂ ಹೆಚ್ಚು ನಿಂದನೀಯ, ಆಕ್ಷೇಪಾರ್ಹ ಟ್ವೀಟ್‌ಗಳನ್ನು ಪೋಸ್ಟ್ ಮಾಡಲಾಗಿದೆ ಎಂದು ರಾಣಾ ಸೈಬರ್ ಪೊಲೀಸರಿಗೆ ಮಾಹಿತಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News