ರಾಜಕಾರಣಿಗಳ ‘ಪದ್ಮ’ವ್ಯೂಹದೊಳಗೆ ಅಮಾಯಕ ವಿದ್ಯಾರ್ಥಿನಿಯರು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ಮೊದಲು ಆರೋಪಿಗಳನ್ನು ಘೋಷಿಸಲಾಗುತ್ತದೆ. ಬಳಿಕ ತನಿಖೆ ಆರಂಭವಾಗಿ ಅವರ ವಿರುದ್ಧ ಸಾಕ್ಷಿಗಳನ್ನು ಸಂಗ್ರಹಿಸಲಾಗುತ್ತದೆ’ ಭಾರತದಲ್ಲಿ ಕೆಲವು ದಶಕಗಳಿಂದ ನಡೆದು ಬಂದಿರುವ ತನಿಖಾ ಪ್ರಕ್ರಿಯೆ ಇದು. ಇತ್ತೀಚಿನ ದಿಲ್ಲಿ ಗಲಭೆಯಲ್ಲಿಯೂ ಇದೇ ನಡೆಯಿತು. ಬಿಜೆಪಿಯ ನಾಯಕರು ಬಹಿರಂಗವಾಗಿಯೇ ಹಿಂಸೆಗೆ ಕರೆಕೊಟ್ಟರು. ಹಿಂಸಾಚಾರ ನಡೆದು 40ಕ್ಕೂ ಅಧಿಕ ಮಂದಿ ಮೃತಪಟ್ಟರು. ಇದಾದ ಬಳಿಕ, ಗಲಭೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಸಿಎಎ ವಿರುದ್ಧ ಹೋರಾಟ ನಡೆಸಿದ ಕಾರ್ಯಕರ್ತರನ್ನು ಬಂಧಿಸಲಾಯಿತು. ಸಂತ್ರಸ್ತರನ್ನೇ ಪೊಲೀಸರು ಆರೋಪಿಗಳನ್ನಾಗಿಸಿದರು. ಇದೀಗ ಹಿಜಾಬ್ ಸರದಿ. ರಾಜ್ಯಾದ್ಯಂತ ನೂರಾರು ಮುಸ್ಲಿಮ್ ತರುಣಿಯರನ್ನು ಶಾಲೆಗಳಿಂದ ಧಿರಿಸಿನ ಕಾರಣಕ್ಕಾಗಿ ಹೊರ ದಬ್ಬಲಾಯಿತು. ಇಡೀ ದೇಶ ಚರ್ಚಿಸಬೇಕಾಗಿದ್ದುದು ‘ಮಹಿಳೆಯರನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿರುವ ಪ್ರಕ್ರಿಯೆ’ಯ ಬಗ್ಗೆ. ಆದರೆ ಇಂದು ಚರ್ಚೆ ನಡೆಯುತ್ತಿರುವುದು ಹಿಜಾಬ್ ಧರಿಸಬಹುದೇ? ಬೇಡವೇ ಎನ್ನುವುದು. ಹಿಜಾಬ್‌ನ್ನು ಧರಿಸಿದ ಕಾರಣಕ್ಕಾಗಿ ಹಲವರು ಕೇಸರಿ ಶಾಲುಗಳನ್ನು ಧರಿಸಿ ಶಾಲೆ, ಕಾಲೇಜುಗಳನ್ನು ಪ್ರವೇಶಿಸಿದರು. ಈಗ ನಿಜಕ್ಕೂ ಪ್ರಶ್ನೆಗೊಳಗಾಗ ಬೇಕಾದವರು, ತನಿಖೆಗೆ ಒಳಗಾಗಬೇಕಾದವರು ಈ ಕೇಸರಿ ಶಾಲು ಧಾರಿಗಳು. ಆದರೆ ಸರಕಾರದ ಪ್ರಕಾರ, ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರೇ ಆರೋಪಿಗಳು. ಅವರ ಹಿನ್ನೆಲೆ, ಅವರ ಹಿಂದೆ ಯಾರಿದ್ದಾರೆ? ಎನ್ನುವುದನ್ನು ತನಿಖೆ ನಡೆಸಿ, ರಾಜ್ಯದಲ್ಲಿ ಭದ್ರತೆಯನ್ನು ಕಾಪಾಡುವ ಮಾತುಗಳನ್ನಾಡುತ್ತಿದ್ದಾರೆ ರಾಜಕಾರಣಿಗಳು. ಅತ್ಯಂತ ಹೇಯ ಕೃತ್ಯವೆಂದರೆ, ಶಿಕ್ಷಣದ ಹಕ್ಕನ್ನು ಕೇಳುವ ಸಂತ್ರಸ್ತ ತರುಣಿಯರ ಫೋನ್ ನಂಬರ್ ಜೊತೆಗೆ ಇತರ ಮಾಹಿತಿಗಳನ್ನು ಸೋರಿಕೆ ಮಾಡಿರುವುದು. ಜೊತೆಗೆ ಈ ವಿದ್ಯಾರ್ಥಿನಿಗಳನ್ನು ತನಿಖೆಯ ಹೆಸರಿನಲ್ಲಿ ರಾಜಕಾರಣಿಗಳು ಬೆದರಿಸಲು ನೋಡುತ್ತಿರುವುದು.
ಇಷ್ಟಕ್ಕೂ ಈ ತರುಣಿಯರ ಹಿಂದೆ ಯಾರಿದ್ದಾರೆ? ಎಂದು ರಾಜಕಾರಣಿಗಳು ಕೇಳುತ್ತಿರುವುದಕ್ಕೆ ಕಾರಣ ಏನು ಗೊತ್ತೆ? ‘ಅವರು ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದಾರೆ. ವಿದ್ಯಾರ್ಥಿಗಳು ಅದರಲ್ಲೂ ಮುಸ್ಲಿಮ್ ವಿದ್ಯಾರ್ಥಿನಿಯರು ಹಕ್ಕುಗಳ ಬಗ್ಗೆ ಯಾಕೆ ಮಾತನಾಡುತ್ತಿದ್ದಾರೆ? ಅವರಿಗೆ ಇದನ್ನು ಯಾರು ಹೇಳಿಕೊಟ್ಟಿದ್ದಾರೆ?’ ಎನ್ನುವುದು ರಾಜಕಾರಣಿಗಳ ಪ್ರಶ್ನೆ. ಸಂವಿಧಾನದ ಹಕ್ಕು, ಕರ್ತವ್ಯಗಳು ರಾಜಕಾರಣಿಗಳಿಗೆ ಗೊತ್ತಿಲ್ಲದೇ ಇರಬಹುದು, ಆದರೆ ವಿದ್ಯಾರ್ಥಿಗಳು ಶಾಲೆ, ಕಾಲೇಜು ಮೆಟ್ಟಿಲು ಹತ್ತಿರುವುದೇ ಸಂವಿಧಾನವನ್ನು ಕಲಿಯಲು ಎನ್ನುವ ಪ್ರಾಥಮಿಕ ಅರಿವೂ ರಾಜಕಾರಣಿಗಳಿಗೆ ಇದ್ದಂತಿಲ್ಲ. ತನ್ನ ಹಕ್ಕಿಗಾಗಿ ಓರ್ವ ವಿದ್ಯಾರ್ಥಿನಿ ಏಕಾಂಗಿಯಾಗಿ ಕೇಸರಿ ಶಾಲು ಧಾರಿ ಉನ್ಮಾದಿತ ಗುಂಪನ್ನು ಎದುರಿಸಲು ಹೇಗೆ ಸಾಧ್ಯ? ಎನ್ನುವುದು ರಾಜಕಾರಣಿಗಳ ಮುಂದಿರುವ ಇನ್ನೊಂದು ಒಗಟು. ಆದುದರಿಂದ ಆಕೆಯ ಹಿನ್ನೆಲೆಯ ಬಗ್ಗೆಯೂ ತನಿಖೆ ನಡೆಯಬೇಕು ಎಂದು ವಿತಂಡ ವಾದ ನಡೆಸುತ್ತಿದ್ದಾರೆ. ಅಂದರೆ ವಿದ್ಯಾರ್ಥಿಗಳು ತಮ್ಮ ಸಂವಿಧಾನದ ಹಕ್ಕುಗಳ ಬಗ್ಗೆ ಮಾತನಾಡುವುದು, ವಿದ್ಯಾರ್ಥಿಯರು ಸಮಾಜದ ಅನ್ಯಾಯಗಳ ವಿರುದ್ಧ ಧ್ವನಿಯೆತ್ತುವುದೇ ಇವರ ಪಾಲಿಗೆ ಅಪರಾಧವಾಗಿದೆ.
ನಿಜಕ್ಕೂ ತನಿಖೆ ಯಾವ ದಿಕ್ಕಿನಲ್ಲಿ ನಡೆಯಬೇಕಾಗಿದೆ? ಏಕಾಏಕಿ ಎಲ್ಲಾ ಕಾಲೇಜುಗಳಲ್ಲಿ ಹುಡುಗರು ತಮ್ಮ ಯಾವ ಮಾನವನ್ನು ಮುಚ್ಚುವುದಕ್ಕಾಗಿ ಕೇಸರಿ ಶಾಲುಗಳನ್ನು ಧರಿಸಿ ಬರುವ ಸ್ಥಿತಿ ನಿರ್ಮಾಣವಾದದ್ದು ಹೇಗೆ? ಉಡುಪಿಯಲ್ಲಿ ಶಾಸಕರೊಬ್ಬರು ‘ತರುಣಿಯರು ಸ್ಕಾರ್ಫ್ ಧರಿಸಿದರೆ, ಹುಡುಗರು ಕೇಸರಿ ಶಾಲು ಧರಿಸಿ ಬರುತ್ತಾರೆ’ ಎಂದು ಭವಿಷ್ಯ ನುಡಿದ ಬೆನ್ನಿಗೇ ವಿದ್ಯಾರ್ಥಿಗಳಲ್ಲಿ ಕೆಲವರು ಕೇಸರಿ ಶಾಲು ಧರಿಸಿ ಬಂದಿದ್ದಾರೆ. ಇಂದಿನ ಎಲ್ಲ ಬೆಳವಣಿಗೆಗಳ ಮೂಲ ಈ ಶಾಸಕರೇ ಆಗಿರುವುದರಿಂದ ತನಿಖೆ ಇವರಿಂದಲೇ ಆರಂಭವಾಗಬೇಕಾಗಿದೆ.ಮಹಿಳೆಯರ ಜೊತೆಗೆ ಅಶ್ಲೀಲವಾಗಿ ಕಾಣಿಸಿಕೊಂಡ ಇವರ ವೀಡಿಯೊಗಳು ಈ ಹಿಂದೊಮ್ಮೆ ರಾಜ್ಯಾದ್ಯಂತ ಹರಿದಾಡಿದ್ದವು. ತನ್ನ ಪತ್ನಿ ಪದ್ಮಪ್ರಿಯ ಅವರ ನಿಗೂಢ ಸಾವಿನ ಕಳಂಕವನ್ನು ಮೆತ್ತಿಕೊಂಡಿರುವ ಈ ಶಾಸಕ, ಇದೀಗ ಮುಸ್ಲಿಮ್ ತರುಣಿಯರ ಶಿಕ್ಷಣದ ವಿರುದ್ಧ ಸಂಚು ನಡೆಸುತ್ತಿದ್ದಾರೆ. ಆದುದರಿಂದ, ತನಿಖೆಗೆ ಸಕಲ ರೀತಿಯಲ್ಲೂ ಅವರು ಅರ್ಹರಾಗಿ ಕಾಣುತ್ತಾರೆ. ಒಂದು ವೇಳೆ ತನಿಖೆ ಪದ್ಮವ್ಯೆಹವನ್ನು ಭೇದಿಸಿದರೆ ಕೇಸರಿ ಶಾಲಿನ ಜೊತೆಗೆ ಪತ್ನಿಯ ಸಾವಿನ ರಹಸ್ಯ ಹೊರಬಿದ್ದರೂ ಅದರಲ್ಲಿ ಅಚ್ಚರಿಯಿಲ್ಲ.
ಉಳಿದಂತೆ ಶಾಲೆಗಳಲ್ಲಿ ಕಲ್ಲು ತೂರಾಟ ನಡೆಸಿರುವುದು, ಗ್ರಂಥಾಲಯಗಳನ್ನು ಧ್ವಂಸಗೊಳಿಸಿರುವುದು ಸ್ಕಾರ್ಫ್ ಧರಿಸಿದ ಮಹಿಳೆಯರಲ್ಲ. ಬದಲಿಗೆ ಈ ಕೇಸರಿ ಧಾರಿಗಳು. ಈಗಾಗಲೇ ದಾಂಧಲೆ ನಡೆಸಿದ ಹಲವು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹಾಗೆ ವಶಕ್ಕೆ ತೆಗೆದುಕೊಂಡ ವಿದ್ಯಾರ್ಥಿಗಳಿಂದ ಮೊಬೈಲ್‌ಗಳನ್ನು ಪಡೆದು ಅದರಲ್ಲಿರುವ ಎಲ್ಲ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ಅಷ್ಟು ದೊಡ್ಡ ಪ್ರಮಾಣದ ಕೇಸರಿ ಶಾಲುಗಳನ್ನು ಹಂಚಿದವರು ಯಾರು? ವಿದ್ಯಾರ್ಥಿಗಳಿಗೆ ಆ ಶಾಲುಗಳನ್ನು ಯಾವ ಪೋಷಕರೂ ಹಂಚಿಲ್ಲ . ರಾಜಕಾರಣಿಗಳೇ ಅದನ್ನು ವಿದ್ಯಾರ್ಥಿಗಳಿಗೆ ಪೂರೈಸಿದ್ದಾರೆ. ಅಂದ ಮೇಲೆ, ಕೇಸರಿ ಶಾಲು ಪೂರೈಕೆ ಮಾಡಿರುವುದರ ಹಿಂದೆ ಉದ್ವಿಗ್ನತೆ ಸೃಷ್ಟಿಸುವ ಸಂಚಿದೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಈಗಾಗಲೇ ಮಾಧ್ಯಮಗಳು, ಪೀಣ್ಯದ ಕೈಗಾರಿಕಾ ಪ್ರದೇಶದಿಂದ ಒಂದು ಲಕ್ಷಕ್ಕೂ ಅಧಿಕ ಕೇಸರಿ ಶಾಲು, ಪೇಟಾಗಳು ರವಾನೆಯಾಗಿದೆ ಎಂದು ವರದಿ ಮಾಡಿವೆ. ಉತ್ತರ ಪ್ರದೇಶದಿಂದ ಶಾಲುಗಳು ರವಾನೆಯಾಗಿವೆ ಎನ್ನುವುದೂ ಬೆಳಕಿಗೆ ಬರುತ್ತಿದೆ. ಇದರ ಹಣವನ್ನು ಪಾವತಿಸಿದವರು ಯಾರು? ಎನ್ನುವ ಪ್ರಶ್ನೆಗಳಿಗೆ ಉತ್ತರ ಕಂಡು ಹುಡುಕಿದರೆ ದುಷ್ಕರ್ಮಿಗಳು ಯಾರು, ದಾಂಧಲೆಗಳ ಹಿಂದೆ ಯಾರಿದ್ದಾರೆ ಎನ್ನುವುದು ಬಹಿರಂಗವಾಗಿ ಬಿಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸರಕಾರದ ಭಾಗವಾಗಿರುವ ಸಚಿವ ಈಶ್ವರಪ್ಪ ಅವರು ಕೇಸರಿ ಶಾಲುಗಳನ್ನು ಪೂರೈಸಿದ್ದು ನಾವೇ ಎಂದಿದ್ದಾರೆ ಮಾತ್ರವಲ್ಲ, ಕೆಂಪುಕೋಟೆಯಲ್ಲೂ ಕೇಸರಿ ಬಾವುಟವನ್ನು ಹಾರಿಸುವ ಬೆದರಿಕೆಯನ್ನು ಹಾಕಿದ್ದಾರೆ. ಕೇಸರಿ ಬಾವುಟವೇ ರಾಷ್ಟ್ರಧ್ವಜವಾಗಲಿದೆ ಎಂಬ ಹೇಳಿಕೆಯನ್ನೂ ನೀಡಿದ್ದಾರೆ. ಕಕ್ಕಸು ಗುಂಡಿಯನ್ನು ಸಾರ್ವಜನಿಕ ಸ್ಥಳದಲ್ಲಿ ತೆರೆದಿಟ್ಟ ಮೇಲೆ ಅದರಿಂದ ದುರ್ವಾಸನೆ ಬರುವುದು ಸಹಜ. ಅದನ್ನು ಶುಚಿಗೊಳಿಸುವುದು ಅಸಾಧ್ಯದ ಮಾತು. ಸಾಧ್ಯವಾದರೆ ಆ ಗುಂಡಿಯನ್ನು ಮುಚ್ಚಿ ಬಿಡಬೇಕು. ಈಶ್ವರಪ್ಪನ ವಿಷಯದಲ್ಲಿ ಜನರು ಇದೇ ತೀರ್ಮಾನಕ್ಕೆ ಬಂದಿದ್ದಾರೆ. ಆದುದರಿಂದಲೇ ಯಾರೂ ಇವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿಲ್ಲ. ಆದರೆ ಸರಕಾರ ದುಷ್ಕರ್ಮಿಗಳನ್ನು ತನ್ನ ಅಡುಗೆಯ ಮನೆಯಲ್ಲಿ ಬಚ್ಚಿಟ್ಟು ‘ಊರಿಡೀ ಹುಡುಕುವ ನಾಟಕ’ ಮಾಡುತ್ತಿರುವುದನ್ನು ರಾಜ್ಯದ ಜನತೆ ಒಕ್ಕೊರಲಲ್ಲಿ ಖಂಡಿಸಬೇಕಾಗಿದೆ.