×
Ad

ಆತ್ಮಹತ್ಯೆಯ ಹಾದಿಯಲ್ಲಿ ಆರ್ಥಿಕತೆ

Update: 2022-02-12 00:05 IST

‘‘ದೇಶದಲ್ಲಿ ನಿರುದ್ಯೋಗವೆನ್ನುವುದು ಇಲ್ಲವೇ ಇಲ್ಲ’’ ಎಂದು ಸಂಸದ ತೇಜಸ್ವಿ ಸೂರ್ಯ ಘೋಷಿಸಿದ್ದಾರೆ. ಅವರ ಈ ಹೇಳಿಕೆಗೆ ಬಿಜೆಪಿ ಕಾರ್ಯಕರ್ತರಿಂದಲೇ ವ್ಯಾಪಕ ಅಸಮಾಧಾನ ಹೊರ ಬಿದ್ದಿದೆ. ಭವಿಷ್ಯದಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ ಎನ್ನುವ ಕನಿಷ್ಠ ಭರವಸೆಯನ್ನು ಕೊಡುವ ಅವಕಾಶ ಸಂಸದರಿಗಿತ್ತು. ದೇಶದಲ್ಲಿ ನಿರುದ್ಯೋಗ ಇಲ್ಲವೇ ಇಲ್ಲ ಎಂದ ಮೇಲೆ ಉದ್ಯೋಗ ಸೃಷ್ಟಿಸುವ ಅಗತ್ಯವೇ ಇಲ್ಲವೆಂದಾಯಿತಲ್ಲ? ಪ್ರಧಾನಿ ಉದ್ಯೋಗ ಸೃಷ್ಟಿಗಾಗಿ ವಿವಿಧ ಯೋಜನೆಗಳನ್ನು ಈಗಾಗಲೇ ಘೋಷಿಸಿರುವಾಗ ನಿರುದ್ಯೋಗ ಇರಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ. ಅವರು ಯೋಜನೆಗಳನ್ನು ಘೋಷಿಸಿದ ಆನಂತರವೂ ನಿರುದ್ಯೋಗ ತಾಂಡವವಾಡುತ್ತಿದೆ ಎಂದರೆ, ಅದು ಆ ಯೋಜನೆಯ ವೈಫಲ್ಯ. ಸಂಸದರು ಈ ಯೋಜನೆಗಳನ್ನು ಪ್ರಶ್ನಿಸಬೇಕೇ ಹೊರತು, ದೇಶದಲ್ಲಿ ‘ನಿರುದ್ಯೋಗ ಇಲ್ಲವೇ ಇಲ್ಲ’ ಎಂದು ಕಣ್ಮುಚ್ಚಿ ಬೆತ್ತಲಾಗುವುದಲ್ಲ. ಸಂಸದರು ಕಣ್ಮುಚ್ಚಿದಾಕ್ಷಣ ಅವರಿಗಷ್ಟೇ ಕತ್ತಲಾಗುತ್ತದೆ.

ದೇಶದಲ್ಲಿ ನಿರುದ್ಯೋಗ ಇದೆಯೋ ಇಲ್ಲವೋ ಎನ್ನುವುದನ್ನು ಈಗಾಗಲೇ ಸರಕಾರವೇ ಅಧಿವೇಶನದಲ್ಲಿ ತಿಳಿಸಿದೆ. ರಾಜ್ಯಸಭೆಯಲ್ಲಿ ಸಹಾಯಕ ಗೃಹ ಸಚಿವರು ಉದ್ಯೋಗಕ್ಕೆ ತಾವು ನೀಡಿದ ಕೊಡುಗೆಗಳ ಅಂಕಿಅಂಶಗಳನ್ನು ಬಹಿರಂಗಪಡಿಸಿದ್ದಾರೆ. ರಾಜ್ಯ ಸಭೆಯಲ್ಲಿ ಸಹಾಯಕ ಗೃಹ ಸಚಿವ ನಿತ್ಯಾನಂದ ರಾಯ್ ಅವರು ನೀಡಿದ ಅಂಕಿಅಂಶಗಳ ಪ್ರಕಾರ ‘ನಿರುದ್ಯೋಗ ಮತ್ತು ಸಾಲಗಳಿಂದಾಗಿ 25 ಸಾವಿರಕ್ಕೂ ಹೆಚ್ಚು ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’’. ಕನಿಷ್ಠ ಪತ್ರಿಕೆಗಳನ್ನು ಓದುವ ಅಭ್ಯಾಸವಿದ್ದರೂ ಸಂಸದರಿಗೆ ಈ ಬಗ್ಗೆ ವಿವರಗಳು ದೊರಕುತ್ತಿದ್ದವು. ಆದರೆ ಅವರು ಕಾಲೇಜುಗಳ ವಿದ್ಯಾರ್ಥಿಗಳ ಕಣ್ಣಿಗೆ ಕೇಸರಿ ಪಟ್ಟಿ ಕಟ್ಟಿ ಅವರಿಂದ ಕಾಲೇಜುಗಳಿಗೆ ಕಲ್ಲುತೂರಾಟ ಮಾಡಿಸುವಲ್ಲಿ ಬಿಸಿಯಾಗಿದ್ದಾರೆ. ಬಹುಶಃ ರಾಜ್ಯಾದ್ಯಂತ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಮಾಡುತ್ತಿರುವ ಅನಾಹುತಗಳೇ, ಸಂಸದರು ಹೇಳುತ್ತಿರುವ ‘ಉದ್ಯೋಗಗಳು’ ಇರಬೇಕು. ಸರಕಾರವೇ ಹೇಳುವಂತೆ ಎರಡು ವರ್ಷಗಳಲ್ಲಿ 25,000ಕ್ಕೂ ಅಧಿಕ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎನ್‌ಸಿಆರ್‌ಬಿ ದತ್ತಾಂಶಗಳಂತೆ ನಿರುದ್ಯೋಗಿಗಳ ಆತ್ಮಹತ್ಯೆಗಳು ಹೆಚ್ಚುತ್ತಿದ್ದು, 2020ನೇ ಸಾಂಕ್ರಾಮಿಕ ವರ್ಷದಲ್ಲಿ ಇದು ಗರಿಷ್ಠ ಪ್ರಮಾಣವನ್ನು ತಲುಪಿತ್ತು. 2018ರಲ್ಲಿ 2,741 ಮತ್ತು 2019ರಲ್ಲಿ 2,851 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸಾಲದಿಂದ ಸತ್ತವರ ಸಂಖ್ಯೆ ಇದಕ್ಕಿಂತಲೂ ಭೀಕರವಾಗಿವೆ. ಸರಕಾರದ ಪ್ರಕಾರ ದಿವಾಳಿತನದಿಂದಾಗಿ 2018ರಲ್ಲಿ 4,970 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019ರಲ್ಲಿ 5,908, 2020ರಲ್ಲಿ 5,213ರಷ್ಟು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆನಪಿರಲಿ, ಇದು ಸರಕಾರ ನೀಡಿದ ಅಧಿಕೃತ ಅಂಕಿಅಂಶಗಳಷ್ಟೇ. ಸಾಧಾರಣವಾಗಿ ಸರಕಾರ ಯಾವ ಪ್ರಶ್ನೆ ಕೇಳಿದರೂ ‘ನಮ್ಮಲ್ಲಿ ಅಂಕಿಅಂಶಗಳು ಇಲ್ಲ’ ಎಂದು ಹೇಳುತ್ತಾ ಬಂದಿದೆ. ಇವೆಲ್ಲ ಅನಿವಾರ್ಯವಾಗಿ ದಾಖಲಾಗಿರುವ ಅಂಕಿಅಂಶಗಳು ಮತ್ತು ಹೀಗೆ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಬಹುತೇಕ ಮಧ್ಯಮ ಮತ್ತು ಮೇಲ್‌ಮಧ್ಯಮ ವರ್ಗದ ಜನರು. ಆದುದರಿಂದ ಸರಕಾರ ಅನಿವಾರ್ಯವಾಗಿ ಈ ಆತ್ಮಹತ್ಯೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿ ಬಂದಿದೆ. ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳದೇ ಜೀವಂತ ಶವವಾಗಿರುವ ಲಕ್ಷಾಂತರ ಯುವಕರ ಪಟ್ಟಿ ಬೇರೆಯೇ ಇದೆ.

ಕೊರೋನ ಕಾಲದಲ್ಲಿ ವಲಸೆ ಕಾರ್ಮಿಕರ ಸಾವು ನೋವುಗಳ ಬಗ್ಗೆ ಸರಕಾರದ ಬಳಿ ಯಾವುದೇ ಅಂಕಿ ಅಂಶಗಳಿಲ್ಲ. ಇಂತಹ ಕಾರ್ಮಿಕರ ಸಾವು, ಆತ್ಮಹತ್ಯೆಗಳನ್ನು ಸರಕಾರ ಗಣನೆಗೇ ತೆಗೆದುಕೊಂಡಿಲ್ಲ. ಬಡವರು, ರೈತರು, ಕೂಲಿ ಕಾರ್ಮಿಕರ ಆತ್ಮಹತ್ಯೆಗಳೆಲ್ಲ ಕುಟುಂಬ ಕಲಹ, ಕುಡಿತ, ಮಾನಸಿಕ ಖಿನ್ನತೆ ಇತ್ಯಾದಿಗಳ ಹೆಸರಲ್ಲಿ ಮುಚ್ಚಿ ಹೋಗಿವೆ. ಕೊರೋನದ ಹೆಸರಿನಲ್ಲಿ ಈ ವರ್ಗದ ಮಾರಣ ಹೋಮ ನಡೆದಿದೆ. ಇವರೆಲ್ಲರು ಬಲಿಯಾಗಿರುವುದು ಕೊರೋನಕ್ಕಲ್ಲ. ಬದಲಿಗೆ ನಿರುದ್ಯೋಗ, ಹಸಿವು, ಬಡತನಕ್ಕೆ. ಮೇಲಿನ ಆತ್ಮಹತ್ಯೆಗಳಿಗೆಲ್ಲ ಸರಕಾರ ಕೊರೋನ ಸಾಂಕ್ರಾಮಿಕ ರೋಗವನ್ನು ಹೊಣೆ ಮಾಡಿ ನುಣುಚಿಕೊಳ್ಳಲು ಹೊರಟಿದೆ. ಆದರೆ ಯಾವಾಗ ಈ ದೇಶದಲ್ಲಿ ನೋಟು ನಿಷೇಧವಾಯಿತೋ ಅಲ್ಲಿಂದಲೇ ಈ ಆತ್ಮಹತ್ಯೆಗಳು ಶುರುವಾಗಿವೆ. ಆರಂಭದಲ್ಲಿ ಒಂದೊಂದೇ ಸಣ್ಣ ಉದ್ದಿಮೆಗಳು ಸಾಯ ತೊಡಗಿದವು. ಬಳಿಕ ಅದರ ಮಾಲಕರು. ಸರಕಾರದ ಜೊತೆಗೆ ಸಹಕರಿಸದ, ಸರಕಾರದ ವಿರುದ್ಧ ಧ್ವನಿಯೆತ್ತಿದ್ದ ಉದ್ಯಮಿಗಳನ್ನೆಲ್ಲ ಐಟಿ ದಾಳಿಗಳ ಮೂಲಕ ಮಾನಸಿಕವಾಗಿ ಚಿತ್ರ ಹಿಂಸೆ ಕೊಟ್ಟು ಆತ್ಮಹತ್ಯೆ ದಾರಿ ಹಿಡಿಯುವಂತೆ ಮಾಡಲಾಯಿತು. ಜಿಎಸ್‌ಟಿ ವ್ಯವಹಾರವನ್ನು ಸುಲಭಗೊಳಿಸದೆ ಇನ್ನಷ್ಟು ಜಟಿಲವಾಗಿಸಿತು.

ಹಲವರು ಜಿಎಸ್‌ಟಿಯಿಂದ ತೊಂದರೆಗೀಡಾಗಿ ತಮ್ಮ ಉದ್ದಿಮೆಗಳನ್ನು ಮುಚ್ಚಬೇಕಾಗಿ ಬಂತು. ನೂರಾರು ಜನರಿಗೆ ಉದ್ಯೋಗ ನೀಡುತ್ತಿದ್ದ ಉದ್ಯಮಿಗಳೇ ಒಬ್ಬೊಬ್ಬರಾಗಿ ಆತ್ಮಹತ್ಯೆಯ ದಾರಿ ಹಿಡಿದರೆ, ದೇಶದಲ್ಲಿ ನಿರುದ್ಯೋಗ ತಾಂಡವವಾಡದೆ ಇನ್ನೇನಾಗುತ್ತದೆ? ಉದ್ದಿಮೆಗಳು ಮುಚ್ಚಿದರೆ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಯೇನು ಮಾಡಬೇಕು? ಅವರಿಗೂ ಸರಕಾರ ಒದಗಿಸಿರುವ ಒಂದೇ ದಾರಿ ಆತ್ಮಹತ್ಯೆ. ವಿಪರ್ಯಾಸವೆಂದರೆ, ಇಂದು ಆತ್ಮಹತ್ಯೆಗಳನ್ನು ತಡೆಯಲು ಸರಕಾರ ಸೇತುವೆಗಳಿಗೆ ಬೇಲಿ ಹಾಕುತ್ತಿದೆೆ. ಪದೇ ಪದೇ ಆತ್ಮಹತ್ಯೆಗಳು ನಡೆದ ಕಾರಣಕ್ಕಾಗಿ ಉಳ್ಳಾಲ ನೇತ್ರಾವತಿ ಸೇತುವೆಯ ಇಕ್ಕೆಲಗಳಿಗೆ ಬೇಲಿ ಹಾಕಿರುವುದನ್ನು ನಾವು ನೋಡಿದ್ದೇವೆ. ಆತ್ಮಹತ್ಯೆಗಳ ಕಾರಣ ಹುಡುಕಿ ಅವುಗಳಿಗೆ ಪರಿಹಾರ ನೀಡುವ ಬದಲು, ಸೇತುವೆ, ಬಾವಿಗಳಿಗೆ ಬೇಲಿ ಹಾಕಿದರೆ ಆತ್ಮಹತ್ಯೆ ನಿಲ್ಲುತ್ತದೆಯೇ? ಇಷ್ಟಕ್ಕೂ ದೇಶದಲ್ಲಿ ಇಂದು ನಡೆಯುತ್ತಿರುವುದು ಆತ್ಮಹತ್ಯೆಗಳಲ್ಲ. ಸರಕಾರದ ಆರ್ಥಿಕ ನೀತಿಯ ವೈಫಲ್ಯಗಳಿಂದ ನಡೆಯುತ್ತಿರುವ ಕೊಲೆಗಳು ಇವು. ಇಡೀ ದೇಶ ಬಡವಾದರೂ ಅದಾನಿ ಮತ್ತು ಅಂಬಾನಿಗಳು ಶ್ರೀಮಂತರಾಗಿಯೇ ಕಂಗೊಳಿಸುತ್ತಿದ್ದಾರೆ ಮತ್ತು ಅವರಿಗಾಗಿಯೇ ಬಜೆಟ್‌ಗಳು ರೂಪುಗೊಳ್ಳುತ್ತಿವೆ. ಕಳೆದ ಬಾರಿಯ ಬಜೆಟ್ ಕೂಡ ಆತ್ಮಹತ್ಯೆಯ ದಾರಿ ಹಿಡಿದಿರುವ ಉದ್ಯಮಿಗಳಿಗೆ ಪೂರಕವಾಗಿಲ್ಲ. ಬದಲಿಗೆ ಕಾರ್ಪೊರೇಟ್ ಶಕ್ತಿಗಳಿಗೆ ಪೂರಕವಾಗಿವೆ. ಒಟ್ಟಿನಲ್ಲಿ ದೇಶದ ಆರ್ಥಿಕತೆಯೇ ಆತ್ಮಹತ್ಯೆಯ ಹಾದಿ ಹಿಡಿದಿದೆ. ಜನರ ಗಮನ ಬೇರೆಡೆಗೆ ಸೆಳೆಯುವುದಕ್ಕಾಗಿ ಬಿಜೆಪಿ ಸ್ಕಾರ್ಫ್, ಕೇಸರಿ ಶಾಲುಗಳ ನಡುವೆ ಗದ್ದಲ ಸೃಷ್ಟಿಸಿದೆ. ಇಂದು ಕೇಸರಿ ಶಾಲು ಹಾಕಿ ಶಾಲೆಗಳಿಗೆ ಕಲ್ಲು ತೂರಾಟ ಮಾಡುತ್ತಿರುವ ತರುಣರಿಗಾಗಿ ಸರಕಾರ ನೇಣು ಕುಣಿಕೆಗಳನ್ನು ಹೆಣಿಯುತ್ತಿವೆ. ಯುವಕರ ಪಾಲಿಗೆ ಕಾದಿರುವುದು ಅಮೃತಕಾಲವಲ್ಲ, ಮೃತ್ಯು ಕಾಲ ಎನ್ನುವುದು ಆ ವಿದ್ಯಾರ್ಥಿಗಳ ಪೋಷಕರಿಗೆ ಇನ್ನಾದರೂ ಅರಿವಿಗೆ ಬರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News