ಪತ್ರಕರ್ತರಿಗೆ ನರಕವಾಗಿ ಪರಿಣಮಿಸಿದ ಆದಿತ್ಯನಾಥ್‌ ಆಡಳಿತ: 12 ಮಂದಿಯ ಕೊಲೆ, 66 ಕೇಸುಗಳು, 48 ಹಲ್ಲೆ ಪ್ರಕರಣಗಳು !

Update: 2022-02-12 17:10 GMT

ಹೊಸದಿಲ್ಲಿ: ಆದಿತ್ಯನಾಥ್ 2017ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ 48 ಪತ್ರಕರ್ತರ ಮೇಲೆ ಹಲ್ಲೆಗಳು ನಡೆದಿವೆ, 66 ಜನರ ವಿರುದ್ಧ ಪ್ರಕರಣಗಳು ದಾಖಲಾಗಿವೆ ಮತ್ತು 12 ಜನರು ಹತ್ಯೆಯಾಗಿದ್ದಾರೆ. ಕಮಿಟಿ ಅಗೇಯ್ನಸ್ಟ್ ಅಸಾಲ್ಟ್ ಆನ್ ಜರ್ನಲಿಸ್ಟ್ಸ್ (ಸಿಎಎಜೆ) ಪ್ರಕಟಿಸಿರುವ ವರದಿಯು ಇದನ್ನು ಬಹಿರಂಗಗೊಳಿಸಿದೆ.

ಉ.ಪ್ರ.ದಲ್ಲಿ ಬಿಜೆಪಿಯ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಶೇ.78ರಷ್ಟು (109) ಇಂತಹ ಪ್ರಕರಣಗಳು 2020 (52) ಮತ್ತು 2021ರ (57) ಸಾಂಕ್ರಾಮಿಕ ವರ್ಷಗಳಲ್ಲಿಯೇ ದಾಖಲಾಗಿವೆ. 2017ರಿಂದ ಈವರೆಗೆ ಸಂಗ್ರಹಿಸಲಾಗಿರುವ ಅಂಕಿಸಂಖ್ಯೆಗಳ ಆಧಾರದಲ್ಲಿ ಉ.ಪ್ರದೇಶದಲ್ಲಿ ಪತ್ರಿಕಾ ಮಾಧ್ಯಮದ ದಮನಕ್ಕೆ ಸಂಬಂಧಿಸಿದ ಘಟನೆಗಳ ವಿವರಗಳನ್ನು ‘ದಿ ಸೀಝ್ ಆಫ್ ಮೀಡಿಯಾ’ಶೀರ್ಷಿಕೆಯ ವರದಿಯು ಒದಗಿಸಿದೆ.

2017 ಮತ್ತು ಫೆ.2022ರ ನಡುವೆ ರಾಜ್ಯದಲ್ಲಿ ಪತ್ರಕರ್ತರಿಗೆ ಕಿರುಕುಳದ ಒಟ್ಟು 138 ಪ್ರಕರಣಗಳು ದಾಖಲಾಗಿವೆ. ಉ.ಪ್ರ.ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ನ ಸಹಯೋಗದಲ್ಲಿ ಸಿದ್ಧಗೊಳಿಸಲಾಗಿರುವ ವರದಿಯು ತಳಮಟ್ಟದಲ್ಲಿ ದೃಢೀಕರಿಸಿಕೊಳ್ಳಲಾಗಿರುವ ಪ್ರಕರಣಗಳನ್ನು ಮಾತ್ರ ಒಳಗೊಂಡಿದೆ, ಹೀಗಾಗಿ ಸಂಖ್ಯೆಯು ಇಂತಹ ಘಟನೆಗಳ ನೈಜ ಸಂಖ್ಯೆಗಿಂತ ಕಡಿಮೆಯಾಗಿರಬಹುದು ಎಂದು ಸಿಎಎಜೆ ಹೇಳಿದೆ.

ದಾಳಿಗಳ ಸ್ವರೂಪವನ್ನು ಆಧರಿಸಿ ವರದಿಯನ್ನು ಕೊಲೆ,ದೈಹಿಕ ಹಲ್ಲೆ, ವಿಚಾರಣೆ ಅಥವಾ ಬಂಧನ ಮತ್ತು ಕಸ್ಟಡಿ ಅಥವಾ ಬೆದರಿಕೆ ಅಥವಾ ಕಣ್ಗಾವಲು ಹೀಗೆ ನಾಲ್ಕು ವರ್ಗಗಳಲ್ಲಿ ವಿಭಜಿಸಲಾಗಿದೆ. 2017ರಲ್ಲಿ ಆದಿತ್ಯನಾಥ ಮುಖ್ಯಮಂತ್ರಿಯಾದ ಬಳಿಕ ಈ ವರದಿಯು ಪ್ರಕಟಗೊಳ್ಳುವವರೆಗೆ ಕಸ್ಟಡಿ ಅಥವಾ ಬೆದರಿಕೆ ಅಥವಾ ಕಣ್ಗಾವಲಿನ 12 ಪ್ರಕರಣಗಳು ವರದಿಯಾಗಿವೆ.

2017ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬೆನ್ನಿಗೇ ಇಬ್ಬರ ಪತ್ರಕರ್ತರು ಹತ್ಯಯಾಗಿದ್ದರು. 2018 ಮತ್ತು 2019ರಲ್ಲಿ ಇಂತಹ ಘಟನೆ ವರದಿಯಾಗಿರಲಿಲ್ಲ. 2020ರಲ್ಲಿ ಏಳು ಪತ್ರಕರ್ತರ ಹತ್ಯೆಯಾಗಿದ್ದು,ಇದು ವರ್ಷವೊಂದರಲ್ಲಿ ಗರಿಷ್ಠವಾಗಿದೆ. 2021ರಲ್ಲಿ ಇಬ್ಬರು ಮತ್ತು 2022ರಲ್ಲಿ ಒಬ್ಬು ಪತ್ರಕರ್ತರು ಹತ್ಯೆಯಾಗಿದ್ದಾರೆ.

ಈ ಅವಧಿಯಲ್ಲಿ ಕೊಲೆಯಾಗಿರುವ ಪತ್ರಕರ್ತರ ನೈಜ ಸಂಖ್ಯೆ 12ಕ್ಕಿಂತ ಹೆಚ್ಚಿರಬಹುದು ಎಂದು ವರದಿಯು ತಿಳಿಸಿದೆ.

ಕಾನೂನು ನೋಟಿಸ್ ಗಳು,ಎಫ್ಐಆರ್ ಗಳು,ಬಂಧನಗಳು,ವಶಕ್ಕೆ ತೆಗೆದುಕೊಳ್ಳುವಿಕೆ, ಕಣ್ಗಾವಲು, ಬೆದರಿಕೆಗಳು ಮತ್ತು ಹಿಂಸೆ ಸೇರಿದಂತೆ ಪತ್ರಕರ್ತರು ಮತ್ತು ಪತ್ರಿಕಾ ಸ್ವಾತಂತ್ರದ ಮೇಲಿನ ಹೆಚ್ಚಿನ ದಾಳಿಗಳು ಸರಕಾರ ಮತ್ತು ಆಡಳಿತದಿಂದ ಪ್ರಚೋದಿತವಾಗಿದ್ದವು ಎಂದು ವರದಿಯು ತಿಳಿಸಿದೆ. ಕಳೆದ ಐದು ವರ್ಷಗಳಲ್ಲಿ ಕನಿಷ್ಠ 50 ಪತ್ರಕರ್ತರ ಮೇಲೆ ದಾಳಿಗಳು ಅಥವಾ ಹಲ್ಲೆಗಳು ನಡೆದಿದ್ದು,ಹೆಚ್ಚಿನ ದಾಳಿಗಳು ಪತ್ರಕರ್ತರು ಕರ್ತವ್ಯನಿರತರಾಗಿದ್ದಾಗ ಸಂಭವಿಸಿವೆ. 2020ರಲ್ಲಿ ದೈಹಿಕ ಹಲ್ಲೆಗಳಲ್ಲಿ ಗಮನಾರ್ಹ ಏರಿಕೆಯಾಗಿದ್ದು,2021ರಲ್ಲಿ ಇಂತಹ ಗರಿಷ್ಠ ದಾಳಿಗಳು ನಡೆದಿದ್ದವು ಎಂದು ವರದಿಯು ಹೇಳಿದೆ.

2020 ಮತ್ತು 2021ರಲ್ಲಿ ಪತ್ರಕರ್ತರ ವಿರುದ್ಧ ದಾಖಲಾದ ಪ್ರಕರಣಗಳು ಮತ್ತು ಅವರಿಗೆ ಜಾರಿಗೊಳಿಸಲಾದ ನೋಟಿಸ್ ಗಳ ಸಂಖ್ಯೆಯನ್ನು ಪರಿಗಣಿಸಿದರೆ ಇವೆರಡು ವರ್ಷಗಳು ಪತ್ರಕರ್ತರ ಪಾಲಿಗೆ ಅತ್ಯಂತ ಕೆಟ್ಟದ್ದಾಗಿದ್ದವು. ಉ.ಪ್ರದೇಶದ ಪ್ರತಿಯೊಂದೂ ಜಿಲ್ಲೆಯಲ್ಲಿಯೂ ಸುದ್ದಿ ವರದಿಗಾರಿಕೆಗಾಗಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಲಾಗಿತ್ತು.

ಸರಕಾರಿ ಏಜೆನ್ಸಿಗಳು ವೈದ್ಯಕೀಯ ನಿರ್ಲಕ್ಷ,ಕ್ವಾರಂಟೈನ್ ಕೇಂದ್ರಗಳ ಅಸಮರ್ಪಕ ನಿರ್ವಹಣೆ ಮತ್ತು ಪಿಪಿಇ ಕಿಟ್ಗಳ ಅಲಭ್ಯತೆಯಂತಹ ಮೂಲಭೂತ ಸಮಸ್ಯೆಗಳ ಬಗ್ಗೆ ವರದಿ ಮಾಡಿದ್ದಕ್ಕಾಗಿಯೂ ಪತ್ರಕರ್ತರ ವಿರುದ್ಧ ಪ್ರಕರಣಗಳು ದಾಖಲಿಸಲ್ಪಟ್ಟಿದ್ದವು.
 
ಮಧ್ಯಾಹ್ನದೂಟದಲ್ಲಿ ವಿದ್ಯಾರ್ಥಿಗಳಿಗೆ ಉಪ್ಪು ಮತ್ತು ಚಪಾತಿಗಳನ್ನು ನೀಡಲಾಗುತ್ತಿದ್ದ,ಲಾಕ್ಡೌನ್ ಸಂದರ್ಭದಲ್ಲಿ ಮುಶಾಹರ ಸಮುದಾಯದ ಮಕ್ಕಳು ಹಸಿವೆಯನ್ನು ಇಂಗಿಸಿಕೊಳ್ಳಲು ಹುಲ್ಲು ತಿನ್ನುತ್ತಿದ್ದ ಮತ್ತು ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ನೆಲ ಒರೆಸಲು ಹಚ್ಚಿದ್ದಂತಹ ಘಟನೆಗಳನ್ನು ವರದಿ ಮಾಡಿದ್ದಕ್ಕಾಗಿ ಪ್ರತೀಕಾರವಾಗಿ ಪ್ರಕರಣಗಳನ್ನೂ ಸರಕಾರವು ದಾಖಲಿಸಿತ್ತು.

ಲಾಕಡೌನ್ ಸಂದರ್ಭದಲ್ಲಿ ಕೋವಿಡ್ ಸ್ಥಿತಿಯು ಹದಗೆಡುತ್ತಿದ್ದ ಬಗ್ಗೆ ವರದಿ ಮಾಡಿದ್ದಕ್ಕಾಗಿ ರಾಜ್ಯದಲ್ಲಿ ಕನಿಷ್ಠ 55 ಪತ್ರಕರ್ತರು ಮತ್ತು ಸಂಪಾದಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿತ್ತು ಅಥವಾ ಅವರನ್ನು ಬಂಧಿಸಲಾಗಿತ್ತು ಎಂದು ಸಿಎಎಜೆ ವರದಿಯು ತಿಳಿಸಿದೆ.

ಈ ಅವಧಿಯಲ್ಲಿ ಸ್ಥಳೀಯ ಅಥವಾ ಪ್ರಾದೇಶಿಕ ಪತ್ರಕರ್ತರು ಮಾತ್ರವಲ್ಲ,ಪ್ರತಿಷ್ಠಿತ ಪತ್ರಕರ್ತರೂ ರಾಜ್ಯ ಸರಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಲಾಕ್ಡೌನ್ ಸಂದರ್ಭದಲ್ಲಿ ಆಡಳಿತಾತ್ಮಕ ತಪ್ಪು ನಿರ್ವಹಣೆಯನ್ನು ಮುಚ್ಚಿಹಾಕಲು ಪ್ರಕರಣಗಳನ್ನು ದಾಖಲಿಸಿದ್ದು ಮಾತ್ರವಲ್ಲ,ಹಿರಿಯ ಪತ್ರಕರ್ತರ ಕುಟುಂಬಗಳಿಗೂ ಕಿರುಕುಳ ನೀಡಲಾಗಿತ್ತು ಎಂದು ವರದಿಯು ಬೆಟ್ಟು ಮಾಡಿದೆ.

ಐದು ವರ್ಷಗಳ ಅವಧಿಯಲ್ಲಿ ವಿವಿಧ ಕಾಯ್ದೆಗಳು ಮತ್ತು ಐಪಿಸಿಯ ಕಲಂ 188ರಡಿ ರಾಜ್ಯದಲ್ಲಿಯ ಪತ್ರಕರ್ತರಿಗೆ ಅಸಂಖ್ಯಾತ ನೋಟಿಸ್ ಗಳನ್ನು ಜಾರಿಗೊಳಿಸಲಾಗಿತ್ತು ಎಂದೂ ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News