×
Ad

ಸಂಶೋಧನೆಗಳಿಂದ ಶಿಕ್ಷಣದ ಗುಣಮಟ್ಟದ ಹೆಚ್ಚಳ: ಡಾ.ಬಲ್ಲಾಳ್

Update: 2022-02-12 21:09 IST

ಉಡುಪಿ, ಫೆ.12: ಸಂಶೋಧನೆಗಳಿಂದ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು ಮತ್ತು ಭಾರತೀಯ ಸಂಸ್ಕೃತಿಯ ಗರಿಮೆಯನ್ನು ಉನ್ನತಕ್ಕೆ ಕೊಂಡೊಯ್ಯಲು ಸಾಧ್ಯ ಎಂದು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ.ವಿಜಯ ಬಲ್ಲಾಳ ಹೇಳಿದ್ದಾರೆ.

ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಮತ್ತು ಸಾಫಲ್ಯ ಟ್ರಸ್ಟ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಡಾ.ಅಶೋಕ್ ಕಾಮತ್ ಇವರು ಬರೆದ ‘ಆತ್ಮಕಥೆಗಳಲ್ಲಿ ಶಾಲಾ ಶಿಕ್ಷಣ’ ಪುಸ್ತಕ ಪರಿಚಯ ಕಾರ್ಯಕ್ರಮ ವನ್ನು ದೇವಸ್ಥಾನದ ಭವಾನಿ ಮಂಟಪದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಶಿಕ್ಷಕರ ಬದ್ಧತೆ ಮತ್ತು ವಿದ್ಯಾರ್ಥಿಗಳ ಮೇಲಿನ ಪ್ರೀತಿ ಶಿಕ್ಷಣಕ್ಕೆ ಪೂರಕ ವಾಗಿರಬೇಕು ಎಂದು ಡಾ.ವಿಜಯ ಬಲ್ಲಾಳ್ ತಿಳಿಸಿದರು.

ತುಮಕೂರಿನ ಡಾ. ರಾಮಕೃಷ್ಣ ಭಟ್, ಮಂಗಳೂರಿನ ಓಆರ್ ಪ್ರಕಾಶ್ ಪುಸ್ತಕ ಪರಿಚಯ ಮಾಡಿದರು. ನಡೆಸಿದರು. ಶಿಕ್ಷಕ ಶಿಕ್ಷಣ ವಿದ್ಯಾಲಯಗಳಲ್ಲಿ ಪಠ್ಯಪುಸ್ತಕವಾಗುವ ಎಲ್ಲಾ ಅರ್ಹತೆಯನ್ನು ಈ ಪುಸ್ತಕವು ಗಳಿಸಿದೆ. ಸಂವೇದನಾ ಶೀಲ ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳ ಅಗತ್ಯಗಳಿಗೆ ಸ್ಪಂದಿಸುವುದು, ಉನ್ನತ ಸಾಧನೆಗೆ ಅವರನ್ನು ಪ್ರೇರೇಪಿಸುವ ಸೂಕ್ಷ್ಮ ವಿಷಯಗಳನ್ನು ಸರಳ ಭಾಷೆಯಲ್ಲಿ ಗ್ರಂಥದಲ್ಲಿ ನಿರೂಪಿಸಲಾಗಿದೆ ಎಂದು ಅವರು ವಿವರಿಸಿದರು.

ಸಂಶೋಧನೆಗೆ ಮಾರ್ಗದರ್ಶನ ನೀಡಿದ ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ಮಾತನಾಡಿ, ಈ ಸಂಶೋಧನೆ ಸಾಹಿತ್ಯಕವಾಗಿಯೂ ಶೈಕ್ಷಣಿಕವಾಗಿಯೂ ತುಂಬಾ ಮಹತ್ವದ್ದಾಗಿದೆ. ಮುಂದೆಯೂ ಹಲವಾರು ಸಂಶೋಧನೆಗಳಿಗೆ ಪೂರಕವಾಗಿದೆ ಎಂದರು.

ಸಾಫಲ್ಯ ಟ್ರಸ್ಟ್ ಅಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ.ಅಶೋಕ್ ಕಾಮತ್ ಸಂದರ್ಭೋಚಿತವಾಗಿ ಮಾತನಾಡಿದರು. ಡಾ. ಕಿಶೋರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ತಾರಾ ದೇವಿ ವಂದಿಸಿದರು. ನಾಗರಾಜ್ ಮೊಗೇರ ಕಾರ್ಯಕ್ರಮ ನಿರ್ವಹಣೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News