ಹಿಜಾಬ್ ಕುರಿತು ಆಕ್ಷೇಪಾರ್ಹ ಪೋಸ್ಟ್ ಹಂಚಿಕೆ: ಇಬ್ಬರು ಪೊಲೀಸರ ಅಮಾನತು

Update: 2022-02-12 19:47 GMT

ಜೈಪುರ: ಹಿಜಾಬ್ ಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಫೋಟೊ ಹಂಚಿದ ಹಾಗೂ ಹೇಳಿಕೆ ನೀಡಿದ ಆರೋಪದಲ್ಲಿ ರಾಜಸ್ಥಾನದ ಪೊಲೀಸ್ ಕಾನ್ಸ್ಟೆಬಲ್ ಹಾಗೂ ಟ್ರಾಫಿಕ್ ಪೋಲೀಸ್ ನ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್‌ ನನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಜವಾಹರ್ ಸರ್ಕಲ್ ಪೊಲೀಸ್ ಠಾಣೆಗೆ ನಿಯೋಜಿತರರಾಗಿದ್ದ ಕಾನ್ಸ್ಟೆಬಲ್ ರಮೇಶ್ ಅವರು ಆಕ್ಷೇಪಾರ್ಹ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಟ್ರಾಫಿಕ್ ಪೊಲೀಸ್ ನ ಎಎಸ್ಐ ಸತ್ವೀರ್ ಸಿಂಗ್ ಅವರು ಈ ಪೋಸ್ಟ್ ಅನ್ನು ಇತರರಿಗೆ ಫಾರ್ವರ್ಡ್ ಮಾಡಿದ್ದರು.

ದುರ್ನಡತೆಗಾಗಿ ಅವರನ್ನು ಅಮಾತುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

‘‘ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಫೋಟೊ ಪೋಸ್ಟ್ ಮಾಡಿದ ಹಾಗೂ ಹೇಳಿಕೆ ನೀಡಿದ ಇಬ್ಬರು ಪೊಲೀಸರನ್ನು ಶುಕ್ರವಾರ ಅಮಾನತು ಮಾಡಲಾಗಿದೆ. ಪೊಲೀಸ್ ಅಧಿಕಾರಿಗಳಾಗಿ ಅವರು ಇಂತಹ ಕೆಲಸ ಮಾಡಬಾರದು. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’’ ಎಂದು ಪೊಲೀಸ್ ಉಪ ಆಯುಕ್ತ (ಉತ್ತರ) ಪಾರಿಸ್ ದೇಶ್ಮುಖ್ ಅವರು ಹೇಳಿದ್ದಾರೆ.

ಕಾನ್ಸ್ಟೆಬಲ್ ರಮೇಶ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್ ಅನ್ನು ಶೇರ್ ಮಾಡಿದ್ದರು. ಸತ್ವೀರ್ ಸಿಂಗ್ ಅವರು ಅದನ್ನು ಇತರ ಕೆಲವರಿಗೆ ಕಳುಹಿಸಿದ್ದರು. ಮಾನಕ್ ಚೌಕ್ ಪೊಲೀಸ್ ಠಾಣೆಯ ಪ್ರದೇಶದಲ್ಲಿರುವ ವ್ಯಕ್ತಿಗೆ ಈ ಪೋಸ್ಟ್ ತಲುಪಿತ್ತು. ಆತ ಅದನ್ನು ಪೊಲೀಸರ ಗಮನಕ್ಕೆ ತಂದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಈ ಪ್ರಕರಣವನ್ನು ಗಣನೆಗೆ ತೆಗೆದುಕೊಂಡರು ಹಾಗೂ ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News