ಸಾಣೇಹಳ್ಳಿ ಶ್ರೀಗೆ ‘ರಂಗ ಪಂಚಾನನ’ ಬಿರುದಿನೊಂದಿಗೆ ರಂಗಭೂಮಿ ಪ್ರಶಸ್ತಿ ಪ್ರದಾನ

Update: 2022-02-13 16:48 GMT

ಉಡುಪಿ, ಫೆ.13: ರಂಗಭೂಮಿ ಉಡುಪಿ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರವಿವಾರ ನಡೆದ ರಂಗೋತ್ಸವ ಕಾರ್ಯ ಕ್ರಮದಲ್ಲಿ ಸಾಣೇಹಳ್ಳಿ ಶ್ರೀತರಳಬಾಳು ಜಗದ್ಗುರು ಶಾಖಾ ಮಠದ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗೆ ‘ರಂಗ ಪಂಚಾನನ’ ಬಿರುದಿನೊಂದಿಗೆ ರಂಗಭೂಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸ್ವಾಮೀಜಿ, ನಾಟಕ ಕೇವಲ ಮನೋರಂಜನೆ ನೀಡಿದರೆ ಮಾತ್ರ ಯಶಸ್ವಿ ಆಗುವುದಿಲ್ಲ. ಮನೋವಿಕಾಸ, ಆಲೋಚನೆ, ಬದುಕಿ ದೊಂದು ಉತ್ತಮ ತತ್ವಗಳನ್ನು ಅಳವಡಿಸಿಕೊಳ್ಳುವ ವಿಶ್ವಾಸ ಮೂಡಿಸಿದರೆ ಮಾತ್ರ ನಾಟಕ ಯಶಸ್ವಿ ಆಗುತ್ತದೆ ಎಂದು ತಿಳಿಸಿದರು.

ಪ್ರಸ್ತುತ ಸಮಾಜದಲ್ಲಿನ ವ್ಯವಸ್ಥೆಗೆ ಕೇವಲ ಶಿಕ್ಷಣ ಕೊಟ್ಟರೆ ಮಾತ್ರ ಸಾಲುದಿಲ್ಲ. ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸಬೇಕು. ರಂಗಭೂಮಿ ಸಮಾಜದ ಅಂಕುಡೊಂಕುಗಳನ್ನು ತೊಳೆಯುವ ಕೆಲಸ ಮಾಡುತ್ತಿದೆ. ಸಮಾಜದ ಅನಿಷ್ಠಗಳ ಬಗ್ಗೆ ಬೆಳಕು ಚೆಲ್ಲಿ ನಾಟಕ ಕಲೆಯ ಮೂಲಕ ಪ್ರಸ್ತುತಪಡಿಸಿ ಜನರ ಮನಸ್ಸು ಪರಿವರ್ತಿಸುತ್ತಿದೆ ಎಂದು ಅವರು ಹೇಳಿದರು.

ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು. ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಕಲಾ ಪೋಷಕ ಯು.ವಿಶ್ವನಾಥ ಶೆಣೈ, ರಂಗಭೂಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಉಪಾಧ್ಯಕ್ಷ ಎಂ.ನಂದಕುಮಾರ್, ಭಾಸ್ಕರ್ ರಾವ್ ಕಿದಿಯೂರು ಉಪಸ್ಥಿತರಿದ್ದರು.ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಅಭಿನಂದನಾ ಭಾಷಣ ಮಾಡಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News