ಹಕ್ಕುಗಳನ್ನು ಕೇಳಿದ ವಿದ್ಯಾರ್ಥಿಗಳನ್ನು ಭಯೋತ್ಪಾದಕರೆಂದು ಕರೆದಿರುವುದು ಅಮಾನವೀಯ: ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ

Update: 2022-02-13 18:19 GMT

ಉಡುಪಿ: ವಿದ್ಯಾರ್ಥಿನಿಯರು ತಮ್ಮ ಸಂವಿಧಾನಬದ್ಧ ಹಕ್ಕಿನ ಬಗ್ಗೆ ಧ್ವನಿ ಎತ್ತಿದರೆಂಬ ಕಾರಣಕ್ಕೆ ಶಿಕ್ಷಣ ಸಂಸ್ಥೆಯ ಪದಾಧಿಕಾರಿಯೊಬ್ಬರು ಆ ವಿದ್ಯಾರ್ಥಿಗಳನ್ನು ಭಯೋತ್ಪಾದಕರೆಂದು ಕರೆಯುವುದು ಅಮಾನವೀಯ ಎಂದು ಮುಸ್ಲಿಮ್ ಒಕ್ಕೂಟ ಖಂಡನೆ ವ್ಯಕ್ತಪಡಿಸಿದೆ. 

ಉಡುಪಿ ಪದವಿಪೂರ್ವ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರು ತಮ್ಮ ಹಕ್ಕುಗಳ ಬಗ್ಗೆ ಬೇಡಿಕೆ ಇಟ್ಟಿರುವುದನ್ನು ಸಹಿಸದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಆ ವಿದ್ಯಾರ್ಥಿನಿಯರನ್ನು ಭಯೋತ್ಪಾದಕರೆಂದು ಕರೆದಿರುವುದು ಅಮಾನವೀಯ. ಅವರ ಈ ದ್ವೇಷಪೂರ್ಣ ಹೇಳಿಕೆಯನ್ನು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ. ಜವಾಬ್ದಾರಿ ಸ್ಥಾನದಲ್ಲಿರುವ ಯಾವುದೇ ವ್ಯಕ್ತಿಗಳು ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಒಂದು ಸಭ್ಯ ಸಮಾಜಕ್ಕೆ ಸಹ್ಯವಲ್ಲ. ಸಂವಿಧಾನದತ್ತ ಮೂಲಭೂತ ಹಕ್ಕು ಕೇಳಿದ ವಿದ್ಯಾರ್ಥಿಗಳಲ್ಲಿ ಉಗ್ರರನ್ನು ಕಾಣುವ ಮನಸ್ಥಿತಿ  ಕಾಲೇಜು ಅಭಿವೃದ್ಧಿ ಸಮಿತಿಯ ಪದಾಧಿಕಾರಿಯೇ ಪ್ರದರ್ಶಿಸುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಹೇಳಿದೆ.

ಕಾಲೇಜು ಅಭಿವೃದ್ಧಿ ಸಮಿತಿ ವಿದ್ಯಾರ್ಥಿನಿಯರ ಸಾಂವಿಧಾನಿಕ ಹಕ್ಕನ್ನು ಅಕ್ರಮವಾಗಿ ತಡೆಹಿಡಿದಾಗ ಅದನ್ನು ನ್ಯಾಯಯುತವಾಗಿ ನೆಲದ ನಿಯಮಗಳಿಗೆ ಅನುಸಾರವಾಗಿ ಪಡೆಯಲು ಶ್ರಮಿಸಿದರೆ ಅದು ಭಯೋತ್ಪಾದನೆ ಹೇಗಾಗುತ್ತದೆ? ಭಯೋತ್ಪಾದಕರು ನ್ಯಾಯಾಲಯದ ಮೊರೆ ಹೋಗುವುದಿಲ್ಲ. ಅವರು ನ್ಯಾಯ ವ್ಯವಸ್ಥೆಯನ್ನು ಧಿಕ್ಕರಿಸುತ್ತಾರೆ. ವಾಸ್ತವದಲ್ಲಿ ಸಂವಿಧಾನಾತ್ಮಕ ನ್ಯಾಯಯುತ ಮಾರ್ಗದ ಬೇಡಿಕೆಯನ್ನು ಬಲಪ್ರಯೋಗದ ಮೂಲಕ‌ ಅನ್ಯಾಯವಾಗಿ ಹತ್ತಿಕ್ಕುವುದೇ ಭಯೋತ್ಪಾದನೆಯಲ್ಲವೇ ಎಂದು ಒಕ್ಕೂಟ ಪ್ರಶ್ನಿಸಿದೆ. 

'ಬೇಟಿ ಬಚಾವೊ ಬೇಟಿ ಪಡಾವೊ' ಧ್ಯೇಯ ವಾಕ್ಯದೊಂದಿಗೆ ವಿದ್ಯಾರ್ಥಿನಿಯರ ಭವಿಷ್ಯವನ್ನು ರೂಪಿಸುವ ಹೊಣೆ ಹೊತ್ತು ಅಧಿಕಾರ ವಹಿಸಿರುವ ಸರಕಾರ ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯು ಅದನ್ನು ನಿರ್ವಹಿಸದೆ ಸ್ವಪ್ರತಿಷ್ಠೆಗಾಗಿ ವಿದ್ಯಾರ್ಥಿನಿಯರ ಭವಿಷ್ಯವನ್ನು ಬಲಿಗೊಡಲು ತೀರ್ಮಾನಿಸಿರುವುದರಿಂದಲೇ ಅನಿವಾರ್ಯವಾಗಿ ನ್ಯಾಯಕ್ಕಾಗಿ ವಿದ್ಯಾರ್ಥಿನಿಯರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದರಿಂದ ವಿಚಲಿತರಾದ ಉಪಾಧ್ಯಕ್ಷ ನ್ಯಾಯದ ಬೇಡಿಕೆಯನ್ನೇ ದೊಡ್ಡ ಅಪರಾಧ ಎಂಬಂತೆ ಅಸಹನೆ ಹೊರ ಹಾಕಿರುವುದನ್ನು ಸಮಾಜ ಗಮನಿಸುತ್ತಿದೆ. ಅಪರಾಧಿ ಯಾರು? ಅಮಾಯಕ ಯಾರು ? ಎಂದು ನಿರ್ಧರಿಸುವ ಹೊಣೆಗಾರಿಕೆ ನ್ಯಾಯ ವ್ಯವಸ್ಥೆಯ ಮೇಲಿದೆ. ಸಾಮಾಜಿಕ ಬದ್ದತೆ ಇಲ್ಲದ ಇಂತಹ ನಕಾರಾತ್ಮಕ ಹೇಳಿಕೆಗಳು ಕಾನೂನಿನ ಚೌಕಟ್ಟಿನಲ್ಲಿ ಪ್ರಶ್ನಾರ್ಹ. ಆದ್ದರಿಂದ ಹೊಣೆಗಾರಿಕೆಯ ಸ್ಥಾನದಲ್ಲಿರುವವರು ಮನಸೋ ಇಚ್ಛೆ ಹೇಳಿಗಳನ್ನು ನೀಡಬಾರದು ಎಂದು ಒಕ್ಕೂಟದ ಅಧ್ಯಕ್ಷರಾದ ಕೋಟ ಇಬ್ರಾಹಿಂ ಸಾಹೇಬ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News