ಉತ್ತರಪ್ರದೇಶ: ಸೋಲಿನ ಭೀತಿಯಿಂದ ಬಿಜೆಪಿ ಕಂಗಾಲು

Update: 2022-02-13 18:35 GMT

ಕಿವಿಯ ಮೇಲೆ ಬರೀ ಹಿಂದುತ್ವದ ಹೂವನ್ನಿಟ್ಟು ಮೇಲ್ವರ್ಗ, ಮೇಲ್ಜಾತಿಗಳ ಹಿತಾಸಕ್ತಿಗಳನ್ನು ರಕ್ಷಿಸುವ ಬಿಜೆಪಿಯ ಹಿಂದುತ್ವದ ಬೂಟಾಟಿಕೆ ಉತ್ತರ ಪ್ರದೇಶದ ದಮನಿತ ಸಮುದಾಯಗಳಿಗೆ ಅರ್ಥವಾಗಿದೆ. ಕೈಗೆ ಕೆಲಸ ನೀಡದ, ಶಾಲೆ ಕಾಲೇಜುಗಳಲ್ಲಿ ಪ್ರವೇಶ ಸಿಗದ, ಹೊಟ್ಟೆಗೆ ಅನ್ನ ನೀಡದ ರಾಜಕೀಯ ಹಿಂದುತ್ವದ ಟೋಪಿ ಹಾಕಿಸಿಕೊಳ್ಳಲು ವಂಚಿತ ಸಮುದಾಯಗಳು ಈ ಬಾರಿ ತಯಾರಿಲ್ಲ.



ಹಿಜಾಬ್-ಕೇಸರಿ ಶಾಲುಗಳ ಸೃಷ್ಟಿತ ವಿವಾದದಲ್ಲಿ ಕರ್ನಾಟಕ ತತ್ತರಿಸಿದೆ. ಆದರೆ, ಗುಜರಾತ್ ನಂತರ ಉತ್ತರ ಪ್ರದೇಶವನ್ನು 'ಹಿಂದುತ್ವ'ದ ಪ್ರಯೋಗ ಶಾಲೆ ಮಾಡಲು ಹೊರಟ ಬಿಜೆಪಿಯು ಪ್ರತಿರೋಧದ ಅಲೆಗಳ ಅಬ್ಬರದಿಂದ ಏದುಸಿರು ಬಿಡುತ್ತಿದೆ.
ಭಾರತದ ಅತ್ಯಂತ ದೊಡ್ಡ ರಾಜ್ಯವೆಂದು ಹೆಸರಾದ ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗಳ ಮೇಲೆ ಪರಿಣಾಮ ಬೀರುವುದರಿಂದ ಶತಾಯ ಗತಾಯ ಆ ರಾಜ್ಯವನ್ನು ಗೆಲ್ಲಲೇಬೇಕೆಂದು ಪ್ರಧಾನಿ ಮೋದಿ, ಯೋಗಿ, ಅಮಿತ್ ಶಾ ಹಗಲೂ ರಾತ್ರಿ ಬೆವರಿಳಿಸುತ್ತಿದ್ದಾರೆ. ಆದರೆ, ಫಲಿತಾಂಶ ತಮ್ಮ ಪರವಾಗಿ ಬರುತ್ತದೆ ಎಂಬ ಭರವಸೆ ಅವರಿಗೆ ಇಲ್ಲ.
ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಉರುಳಿಸಿ, ರಾಮ ಮಂದಿರ ನಿರ್ಮಿಸಲು ಶಿಲಾನ್ಯಾಸ ನೆರವೇರಿಸಿದ ನಂತರ ಶೂದ್ರ ಸಮುದಾಯಗಳ ಸಹಿತ ಎಲ್ಲ ಮುಸ್ಲಿಮೇತರ ಸಮುದಾಯಗಳ ಜನರಲ್ಲಿ ಅದರಲ್ಲೂ ಯುವಕರಲ್ಲಿ ಏರಿದ್ದ ಹಿಂದುತ್ವದ ನಶೆ ಇಳಿಯತೊಡಗಿದೆ. ಆದಿತ್ಯನಾಥ್‌ರ ಐದು ವರ್ಷಗಳ ಆಡಳಿತದ ಕಹಿ ಫಲವನ್ನು ಸವಿದ ಜನ ಸಾಮಾನ್ಯರು ಬದುಕಿನ ಎಲ್ಲ ಪ್ರಶ್ನೆಗಳಿಗೆ ಧರ್ಮದಲ್ಲಿ ಮತ್ತು ಜಾತಿ ಮತದಲ್ಲಿ ಉತ್ತರ ಸಿಗುವುದಿಲ್ಲ ಎಂಬ ಕಟು ಸತ್ಯವನ್ನು ಅರಿತುಕೊಳ್ಳುತ್ತಿದ್ದಾರೆ. ಈ ಅರಿವಿನ ಸುಳಿವು ಸಿಕ್ಕಿರುವ ಬಿಜೆಪಿ ನಾಯಕರು ಮಾತ್ರವಲ್ಲ ಅವರ ನಾಗಪುರದ ಗುರುಗಳು ಕಂಗಾಲಾಗಿದ್ದಾರೆ.

ಅದರಲ್ಲೂ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದು ರೈತಾಪಿ ವರ್ಗವನ್ನು ನೇಣುಗಂಬಕ್ಕೇರಿಸಲು ಹೊರಟಿದ್ದ ಮೋದಿ ನೇತೃತ್ವದ ಸರಕಾರದ ವಿರುದ್ಧ ಪಶ್ಚಿಮ ಉತ್ತರ ಪ್ರದೇಶದ ಜಾಟ್ ಸಮುದಾಯ ತಿರುಗಿ ಬಿದ್ದಿದೆ. ಜಾಟರನ್ನು ಪ್ರತಿನಿಧಿಸುವ ರಾಷ್ಟ್ರೀಯ ಲೋಕದಳ ಈ ಸಲ ಅಖಿಲೇಶ್ ಯಾದವರ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಬಿಜೆಪಿಗೆ ದಿಕ್ಕು ತಪ್ಪಿದಂತಾಗಿದೆ.ಜಾಟರನ್ನು ಒಲೈಸಲು ಕೃಷಿ ಕಾಯ್ದೆಯನ್ನು ಮೋದಿ ಸರಕಾರ ವಾಪಸ್ ಪಡೆದುಕೊಂಡಿದ್ದರೂ ಜಾಟ್ ಸಮುದಾಯದ ರೈತರು ಇವರನ್ನು ನಂಬುತ್ತಿಲ್ಲ.

ನೀವೆಲ್ಲ ಹಿಂದೂಗಳೆಂದು ಕರೆದ ಮಾತ್ರಕ್ಕೆ, ಹಿಂದೂ ಸಮಾಜೋತ್ಸವ ಮಾಡಿದ ಮಾತ್ರಕ್ಕೆ ತಳ ಸಮುದಾಯಗಳ ಬಡವರಿಗೆ ಒಮ್ಮಿಂದೊಮ್ಮೆಲೆ ಸಾಮಾಜಿಕ ಘನತೆ ಗೌರವಗಳು ಸಿಗುವುದಿಲ್ಲ. ಹಿಂದೂ ಎಂದು ಗರ್ವದಿಂದ ಕೂಗಿದ ತಕ್ಷಣ ಆಹಾರ ಧಾನ್ಯಗಳ ಬೆಲೆ ಇಳಿಯುವುದಿಲ್ಲ. ಪೆಟ್ರೋಲ್, ಡಿಸೇಲ್, ಅಡುಗೆ ಅನಿಲದ ಧಾರಣೆ ಕಡಿಮೆಯಾಗುವುದಿಲ್ಲ. ಹಿಂದೂ ಬಂಧು ಎಂದು ಓಟಿಗಾಗಿ ಹೇಳಿದ ತಕ್ಷಣ ಕೈಗೆ ಕೆಲಸ ಸಿಗುವುದಿಲ್ಲ ಎಂಬುದು ತಡವಾಗಿ ತಿಳಿದುಕೊಂಡ ಉತ್ತರ ಪ್ರದೇಶದ ಮತದಾರರು ಧರ್ಮದ ಹೆಸರಿನಲ್ಲಿ ದ್ವೇಷವನ್ನು ಬಿಟ್ಟು ಇನ್ನೇನನ್ನೂ ನೀಡದ ಮಾತಿನ ಮಲ್ಲರಿಗೆ ಪಾಠ ಕಲಿಸಲು ಮುಂದಾಗಿರುವ ವರದಿಗಳು ಬರುತ್ತಲೇ ಇವೆ.

ಕೃಷಿ ಕಾಯ್ದೆಗಳ ವಿರುದ್ಧ ಲಖೀಂಪುರ ಖೇರಿಯಲ್ಲಿ ರೈತರ ಮೇಲೆ ಜೀಪು ಹರಿಸಿ ನಾಲ್ವರು ರೈತರನ್ನು ಹಾಡು ಹಗಲೇ ಕೊಂದಿದ್ದ ಕೇಂದ್ರ ಸಚಿವ ಅಜಯ್ ಮಿಶ್ರಾನ ಮಗ ಆಶಿಷ್ ಮಿಶ್ರಾನನ್ನು ರಕ್ಷಿಸಲು ಮೋದಿ, ಯೋಗಿ ಜೋಡಿ ನಡೆಸಿದ ಪ್ರಯತ್ನವನ್ನು ರೈತರು ಮರೆತಿಲ್ಲ. ಕೊನೆಗೆ ರೈತರು ಪಟ್ಟು ಹಿಡಿದಾಗ ಈ ಆಶಿಷ್ ಮಿಶ್ರಾನನ್ನು ಬಂಧಿಸಲಾಯಿತು. ಆದರೆ, ಇದೀಗ ಆತನಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿದೆ. ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಆಶಿಷ್‌ನಿಗೆ ಜಾಮೀನು ನೀಡಲಾಗಿದೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ. ನಾಲ್ವರು ರೈತರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಘಟನೆ ನಡೆದು ನಾಲ್ಕೇ ತಿಂಗಳಲ್ಲಿ ಜಾಮೀನು ದೊರೆತಿರುವುದು ನಮ್ಮ ನ್ಯಾಯಾಂಗ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಆದಿತ್ಯನಾಥ್‌ರನ್ನು ಮುಖ್ಯಮಂತ್ರಿ ಮಾಡಿ ಬಿಜೆಪಿ ಹೇಳಿಕೊಳ್ಳುವ ಯಾವ ಸಾಧನೆಯನ್ನೂ ಮಾಡಿಲ್ಲ. ಬದಲಾಗಿ ಇವರ ಆಡಳಿತದಲ್ಲಿ ಅಲ್ಪಸಂಖ್ಯಾತ ಮಾತ್ರವಲ್ಲ, ದಲಿತ, ದಮನಿತ ಸಮುದಾಯಗಳ ಜನರಿಗೆ ರಕ್ಷಣೆ ಇರಲಿಲ್ಲ. ಹಾಥರಸ್‌ನಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ ಮಾಡಿದ ಮೇಲ್ವರ್ಗದ ಬಿಜೆಪಿ ನಾಯಕನನ್ನು ರಕ್ಷಿಸಲು ಬಿಜೆಪಿ ಯೋಗಿ ಸರಕಾರ ನಡೆಸಿದ ಕಸರತ್ತನ್ನು ಅಲ್ಲಿನ ದಮನಿತ ಸಮುದಾಯ ಮರೆತಿಲ್ಲ.

ಸಮಾಜವಾದಿ ಪಕ್ಷದ ಸಾಮಾಜಿಕ ನ್ಯಾಯದ ತತ್ವ ಪ್ರಣಾಳಿಕೆಗೆ ಎದುರಾಗಿ ತಮ್ಮದೇ ಸಾಮಾಜಿಕ ಸಾಮರಸ್ಯ ಸಿದ್ಧಾಂತ ಎಂದು ಮೋದಿ, ಯೋಗಿ ಜೋಡಿ ರೈಲು ಬಿಡುತ್ತಿದ್ದರೂ ಇವರ ಸಾಮರಸ್ಯ ಎಂಥದು ಎಂದು ಅರಿತುಕೊಂಡ ಉತ್ತರ ಪ್ರದೇಶದ ಬಿಜೆಪಿ ಶಾಸಕರೇ ಪಕ್ಷಕ್ಕೆ ರಾಜೀನಾಮೆ ನೀಡಿ ಸಮಾಜವಾದಿ ಪಕ್ಷವನ್ನು ಸೇರುತ್ತಿದ್ದಾರೆ. ಹೀಗಾಗಿ ಕುಸಿಯುತ್ತಿರುವ ಕೋಟೆಯನ್ನು ಉಳಿಸಿಕೊಳ್ಳಲು ಮೋದೀಜಿ ಅವರು ಔರಂಗಜೇಬ್, ಶಿವಾಜಿಯ ಕತೆಗಳನ್ನು ಹೇಳುತ್ತಿದ್ದಾರೆ.
ತನ್ನ ಆಡಳಿತದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎಂದು ಆದಿತ್ಯನಾಥ್ ಹೇಳುತ್ತಾರೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ತಳ ಸಮುದಾಯಗಳ ಯುವತಿಯರು ಹೊಲದ ಕೆಲಸಕ್ಕೆ ಅಥವಾ ದನ ಕರುಗಳನ್ನು ಮೇಯಿಸಲು ಹೊರಗೆ ಹೋದರೆ ಸುರಕ್ಷಿತವಾಗಿ ಮನೆಗೆ ವಾಪಸಾಗಲು ಸಾಧ್ಯವಿಲ್ಲ. ಅತ್ಯಾಚಾರ, ಮಾನಭಂಗ, ಕೊಲೆ ಅಲ್ಲಿ ಸಾಮಾನ್ಯ ಸಂಗತಿಗಳಾಗಿವೆ ಎಂದು ಅಧಿಕೃತ ಅಂಕಿ ಅಂಶಗಳೇ ಹೇಳುತ್ತವೆ.

2020ರ ವರ್ಷದಲ್ಲಿ ಯೋಗಿ ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಚಾರ ಮತ್ತು ದೌರ್ಜನ್ಯದ 9,864 ಪ್ರಕರಣಗಳು ನಡೆದಿವೆ ಎಂದು ನ್ಯಾಷನಲ್ ಕ್ರೈಂ ಬ್ಯುರೊ ತಿಳಿಸಿದೆ. 2018ರಲ್ಲಿ ಮಹಿಳೆಯರ ಮೇಲೆ 59,445 ದೌರ್ಜನ್ಯದ ಪ್ರಕರಣಗಳು ನಡೆದಿವೆ. 2019ರಲ್ಲಿ ಮಹಿಳೆಯರ ಮೇಲೆ 59,853 ದೌರ್ಜನ್ಯದ ಪ್ರಕರಣಗಳು ನಡೆದಿವೆ. ಈ ಅಂಕಿ ಅಂಶಗಳಿಗೆ ಆದಿತ್ಯನಾಥ್‌ರ ಬಳಿ ಉತ್ತರವಿಲ್ಲ. ಪ್ರಧಾನಿ ಮೋದೀಜಿ ಚುನಾವಣಾ ಭಾಷಣಗಳಲ್ಲಿ ಅದೇ ಹಳೆಯ ಔರಂಗಜೇಬ್, ಶಿವಾಜಿಯ ಕತೆ ಹೇಳುತ್ತಾರೆ.
ಬಾಬಾಸಾಹೇಬರ ಕಾಲದಿಂದಲೂ ಬಹುತೇಕ ಎಲ್ಲ ಪ್ರಗತಿಪರರಾಗಲಿ ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ಪ್ರತಿಪಾದಿಸುತ್ತ ಬಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಸಂಘಪರಿವಾರ ಸಾಮರಸ್ಯ ಎಂಬ ವಂಚನೆಯ ಹುಸಿ ತತ್ವ ಪ್ರಣಾಳಿಕೆಯನ್ನು ಮುಂದೆ ಮಾಡಿ ದಲಿತ, ದಮನಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ನಿರಾಕರಿಸುತ್ತ ಎಷ್ಟೇ ತುಳಿತಕ್ಕೊಳಗಾದರೂ ಮೈಮೇಲೆ ಬಾಸುಂಡೆಗಳು ಮೂಡಿದರೂ ಬರೆ ಕೊಟ್ಟವರೊಂದಿಗೆ ಸಾಮರಸ್ಯದಿಂದಿರಿ ಎಂದು ಬುರುಡೆ ಬಿಡುತ್ತಾ ಬಂದಿದ್ದಾರೆ. ಇದರ ಹಿಂದಿನ ವಂಚನೆ ಉತ್ತರ ಪ್ರದೇಶದ ಮತದಾರರಿಗೆ ಅರಿವಾಗಿದೆ ಎಂದು ಇತ್ತೀಚಿನ ವರದಿಗಳು ತಿಳಿಸುತ್ತವೆ.

ನಿತ್ಯ ಮಾನಭಂಗ, ಅತ್ಯಾಚಾರ ಮತ್ತು ಹತ್ಯೆಗೀಡಾಗುವ ಮಹಿಳೆಯರು ಯಾವ ಸಮುದಾಯದವರೆಂದು ಪ್ರತ್ಯೇಕಿಸಿ ಹೇಳಬೇಕಾಗಿಲ್ಲ. ಶತಶತಮಾನಗಳಿಂದ ಈ ಕ್ರೌರ್ಯವನ್ನು ಅನುಭವಿಸುತ್ತ ಬಂದ ಸಮುದಾಯಗಳ ಮಹಿಳೆಯರೇ ಮತ್ತೆ ಬಲಿಪಶುವಾಗುತ್ತಿದ್ದಾರೆ.
ಇತರ ಹಿಂದುಳಿದ ಸಮುದಾಯಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.27ರಷ್ಟು ಮೀಸಲು ಒದಗಿಸಲು ತಾನೇ ನೇಮಿಸಿದ ಸಾಮಾಜಿಕ ನ್ಯಾಯ ಆಯೋಗದ ವರದಿಯ ಜಾರಿಗೆ ಯೋಗಿ ಸರಕಾರ ತಯಾರಿಲ್ಲ ಎಂಬುದು ಹಿಂದುಳಿದ ಸಮುದಾಯಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಕಿವಿಯ ಮೇಲೆ ಬರೀ ಹಿಂದುತ್ವದ ಹೂವನ್ನಿಟ್ಟು ಮೇಲ್ವರ್ಗ, ಮೇಲ್ಜಾತಿಗಳ ಹಿತಾಸಕ್ತಿಗಳನ್ನು ರಕ್ಷಿಸುವ ಬಿಜೆಪಿಯ ಹಿಂದುತ್ವದ ಬೂಟಾಟಿಕೆ ಉತ್ತರ ಪ್ರದೇಶದ ದಮನಿತ ಸಮುದಾಯಗಳಿಗೆ ಅರ್ಥವಾಗಿದೆ. ಕೈಗೆ ಕೆಲಸ ನೀಡದ, ಶಾಲೆ ಕಾಲೇಜುಗಳಲ್ಲಿ ಪ್ರವೇಶ ಸಿಗದ, ಹೊಟ್ಟೆಗೆ ಅನ್ನ ನೀಡದ ರಾಜಕೀಯ ಹಿಂದುತ್ವದ ಟೋಪಿ ಹಾಕಿಸಿಕೊಳ್ಳಲು ವಂಚಿತ ಸಮುದಾಯಗಳು ಈ ಬಾರಿ ತಯಾರಿಲ್ಲ.

ಗ್ರಾಮೀಣ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಂದ ಹಣಕಾಸು ನೆರವನ್ನು ದಲಿತ, ದಮನಿತ ಸಮುದಾಯಗಳಿಗೆ ನೀಡಲಾಗುತ್ತಿಲ್ಲ. ತಳ ಸಮುದಾಯಗಳ ಯುವತಿಯರ ಮೇಲೆ ಅತ್ಯಾಚಾರ, ಬಲಾತ್ಕಾರ ನಡೆದರೆ ಅಪರಾಧಿಗಳನ್ನು ಹಿಡಿಯಬೇಕಾದ ಪೊಲೀಸರು ಅಪರಾಧ ಎಸಗಿದವರ ಪರವಾಗಿ ನಿಲ್ಲುತ್ತಾರೆ. ಇದರಿಂದ ರೋಸಿ ಹೋದ ನೊಂದ ಜನ ಯೋಗಿಗೆ ಪಾಠ ಕಲಿಸಲು ಸಜ್ಜಾಗಿ ನಿಂತಿದ್ದಾರೆ.
ಇದರಿಂದ ಹತಾಶರಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್‌ನಲ್ಲಿ ಮಾತನಾಡುವಾಗ ಚುನಾವಣಾ ಸಭೆಯಲ್ಲಿ ಮಾತನಾಡಿದಂತೆ ವರ್ತಿಸಿದ್ದಾರೆ. ರಾಷ್ಟ್ರಪತಿಯವರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರ ಕೊಡುವುದನ್ನು ಬಿಟ್ಟು ಸರಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಏನೇನೋ ಮಾತನಾಡಿದ್ದಾರೆ.
ಕೋವಿಡ್ ಸಾಂಕ್ರಾಮಿಕ ನಿರ್ವಹಣೆಯನ್ನು ಸರಿಯಾಗಿ ಮಾಡಿಲ್ಲ ಎಂಬ ಪ್ರತಿಪಕ್ಷ ಗಳ ಟೀಕೆಗೆ ಉತ್ತರಿಸುವಾಗ ಲಾಕ್‌ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲು ಪ್ರತಿಪಕ್ಷಗಳು ಪ್ರಚೋದನೆ ನೀಡಿದ್ದರಿಂದ ಕೊರೋನ ಭಾರತದಾದ್ಯಂತ ವ್ಯಾಪಿಸಿತು ಎಂಬ ಹಾಸ್ಯಾಸ್ಪದ ಮಾತನ್ನು ಮೋದಿ ಆಡಿದರು.
ಸಮಾಜವಾದಿ ನಾಯಕರಾದ ಮುಲಾಯಮ್ ಸಿಂಗ್ ಯಾದವ್ ಮತ್ತು ಲಾಲೂ ಪ್ರಸಾದ್ ಯಾದವರ ಅಹಿಂದ ತತ್ವ ಪ್ರಣಾಳಿಕೆಗೆ ಪ್ರತಿಯಾಗಿ ಆರೆಸ್ಸೆಸ್ ಚಿಂತಕ ಗೋವಿಂದಾಚಾರ್ಯ ಅವರು ರೂಪಿಸಿದ ಸೋಶಿಯಲ್ ಇಂಜಿನಿಯರಿಂಗ್ ಸೂತ್ರ ಇಲ್ಲಿಯವರೆಗೆ ಬಿಜೆಪಿಗೆ ನೆರವಾಗುತ್ತ ಬಂದಿದೆ. ಅಂದರೆ ಹಿಂದುಳಿದ ವರ್ಗಗಳಲ್ಲೇ ನಿರ್ಲಕ್ಷಿತ ಸಣ್ಣ ಜಾತಿಗಳನ್ನು ಬುಟ್ಟಿಗೆ ಹಾಕಿಕೊಂಡು ತನ್ನದೇ ಹಿಂದುತ್ವದ ಓಟ್ ಬ್ಯಾಂಕನ್ನು ಬಿಜೆಪಿ ನಿರ್ಮಿಸಿಕೊಂಡಿದೆ.
(ಉದಾಹರಣೆಗೆ ಕರ್ನಾಟಕದಲ್ಲಿ ದಲಿತರನ್ನು ಬಲಗೈ ಎಡಗೈ ಎಂದು ವಿಭಜಿಸಿ ತನ್ನದೇ ಓಟ್ ಬ್ಯಾಂಕ್ ನಿರ್ಮಿಸಿಕೊಂಡಂತೆ) ಆದರೆ, ಉತ್ತರ ಪ್ರದೇಶದಲ್ಲಿ ಈ ಚುನಾವಣಾ ಉದ್ದೇಶದ ಓಟ್ ಬ್ಯಾಂಕ್ ಈ ಸಲ ಕೈ ಕೊಡುವ ಸೂಚನೆಗಳಿವೆ. ಸಮಾನತೆ, ಸಾಮಾಜಿಕ ನ್ಯಾಯ ಬಯಸುವ, ಸರಕಾರದ ನೌಕರಿಗಳಲ್ಲಿ ತಮ್ಮ ಪಾಲು ಕೇಳುವ, ಶಾಲೆ ಕಾಲೇಜುಗಳಲ್ಲಿ ಪ್ರವೇಶ ಕೇಳುವ ತಳ ಸಮುದಾಯಗಳು ಈ ಸಲ ಬಿಜೆಪಿಗೆ ಪಾಠ ಕಲಿಸುವ ಸೂಚನೆಗಳಿವೆ.
ಬಿಜೆಪಿ ಆಡಳಿತದ ರುಚಿ ಕಂಡ ಉತ್ತರ ಪ್ರದೇಶದ ಮತದಾರರು ಈ ಸಲ ಅದಕ್ಕೆ ಪಾಠ ಕಲಿಸುವ ಸೂಚನೆಗಳಿವೆ. ಉತ್ತರ ಪ್ರದೇಶ ಸೌಹಾರ್ದ ಕರ್ನಾಟಕದತ್ತ ಬರುತ್ತಿದೆ. ಆದರೆ, ಕರ್ನಾಟಕ ಯೋಗಿಯ ಉತ್ತರ ಪ್ರದೇಶದತ್ತ ಹೊರಟಿದೆ. ಇದೇ ನಮ್ಮ ನಾಡಿನ ದುರಂತ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News