​ಸರಕಾರದಿಂದ ಎಲ್‌ಐಸಿ ಶೇರು ವಿಕ್ರಯದ ಹೆಜ್ಜೆ: ಪ್ರತಿಭಟಿಸಿ ವಿಮಾನೌಕರರು, ಅಧಿಕಾರಿಗಳಿಂದ ಮತಪ್ರದರ್ಶನ

Update: 2022-02-14 15:55 GMT

ಉಡುಪಿ, ಫೆ.14: ಸಾರ್ವಜನಿಕ ರಂಗದ ಎಲ್‌ಐಸಿಯನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಯನ್ನು ಕೇಂದ್ರ ಸರಕಾರ ಪ್ರಾರಂಭಿಸಿದ್ದು, ಇದರ ಮೊದಲ ಹೆಜ್ಜೆಯಾಗಿ ಎಲ್‌ಐಸಿ ಶೇರು ವಿಕ್ರಯಕ್ಕೆ ಮುಂದಾಗಿರುವುದನ್ನು ಪ್ರತಿಭಟಿಸಿ ಅಜ್ಜರಕಾಡಿನ ಉಡುಪಿ ಎಲ್‌ಐಸಿ ವಿಭಾಗೀಯ ಕಚೇರಿಯ ಮುಂಭಾಗದಲ್ಲಿ ಸೋಮವಾರ ವಿಮಾ ನೌಕರರು ಹಾಗೂ ಅಧಿಕಾರಿಗಳು ಮತಪ್ರದರ್ಶನ ನಡೆಸಿ ರಕಾರದ ನಡೆಯನ್ನು ಖಂಡಿಸಿದರು.

ಎಲ್‌ಐಸಿಯ ಶೇರು ವಿಕ್ರಯದ (ಐಪಿಒ) ಮೊದಲ ಹೆಜ್ಜೆಯಾಗಿ ಭಾರತೀಯ ಜೀವವಿಮಾ ನಿಗಮವು ತನ್ನ ಶೇರು ಮಾರಾಟ ಮಾಡಲು ಅನುಮತಿ ಕೋರಿ ಡಿಆರ್‌ಎಚ್‌ಪಿ ಮೂಲಕ ಭಾರತೀಯ ಶೇರುಪೇಟೆ ನಿಯಂತ್ರಣಾ ಮಂಡಳಿ (ಸೆಬಿ)ಯಲ್ಲಿ ಅರ್ಜಿ ಸಲ್ಲಿಸಿದ್ದು, ಸರಕಾರವು ಎಲ್‌ಐಸಿಯ ಶೇ.5 ಶೇರುಗಳಾದ 31.6 ಕೋಟಿ ಶೇರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಆರಂಬಿಸಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಡಿಆರ್‌ಎಚ್‌ಪಿಯಲ್ಲಿ ನೋಂದಣಿ ಮಾಡುವ ಮೂಲಕ ಎಲ್‌ಐಸಿ ಶೇರುಗಳನ್ನು ಮಾರಾಟ ಮಾಡುವ ತನ್ನ ಪ್ರಕ್ರಿಯೆಯನ್ನು ತೀವ್ರಗೊಳಿಸಿದೆ ಮತ್ತು ಮಾರ್ಚ್ ತಿಂಗಳ ಯಾವುದೇ ಕ್ಷಣದಲ್ಲಿ ಶೇರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಸಾಧ್ಯೆಗಳಿವೆ ಎಂದು ಅವರು ದೂರಿದರು.

ಸರಕಾರದ ಈ ನಡೆಯನ್ನು ವಿರೋಧಿಸಿ ಎಲ್‌ಐಸಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ವರ್ಗದ ನೌಕರರು ಇಂದು ತಮ್ಮ ತಮ್ಮ ಕಛೇರಿಗಳ ಮುಂದೆ ಪ್ರತಿಭಟನಾ ಮತಪ್ರದರ್ಶನ ನಡೆಸಿದರು. ಅದರಂತೆ ಉಡುಪಿ ಎಲ್‌ಐಸಿ ವಿಭಾಗೀಯ ಕಛೇರಿಯ ಮುಂಭಾಗದಲ್ಲೂ ಇಂದು ಮತಪ್ರದರ್ಶನ ನಡೆಸಲಾಯಿತು.

ಈ ಮತಪ್ರದರ್ಶನವನ್ನು ಉದ್ದೇಶಿಸಿ ಮಾತನಾಡಿದ ಎಲ್‌ಐಸಿ ಅಧಿಕಾರಿಗಳ ಸಂಘಟನೆಯ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಎ.ಕುಶಾಲ್ ಕುಮಾರ್, ಸರಕಾರದ ಈ ನಡೆಯು ಎಲ್‌ಐಸಿಯ ಖಾಸಗೀಕರಣದ ಮೊದಲ ಹೆಜ್ಜೆಯಾಗಿದೆ ಮತ್ತು ಮುಂದಿನ ಹೋರಾಟಗಳಲ್ಲಿ ಎಲ್ಲರೂ ಒಂದಾಗಿ ಬಾಗವಹಿಸಬೇಕೆಂದು ಕರೆ ನೀಡಿದರು.

ವಿಮಾ ನೌಕರರ ಸಂಘ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ. ಕುಂದರ್ ಮಾತನಾಡಿ 1989ರಿಂದಲೂ ಎಲ್‌ಐಸಿಯನ್ನು ಖಾಸಗೀಕರಣಗೊಳಿಸುವ ಸರಕಾರದ ನಡೆಯನ್ನು ಸಂಘಟನೆಯು ವಿರೋಧಿ ಸುತ್ತಾ ಬಂದಿದೆ. ಎಲ್‌ಐಸಿಯನ್ನು ಸಾರ್ವಜನಿಕ ರಂಗದಲ್ಲಿ ಉಳಿಸುವ ಈ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಬೇಕು ಎಂದರು.

ಇಂದಿನ ಮತಪ್ರದರ್ಶನದಲ್ಲಿ ಅಭಿವೃದ್ಧಿ ಅಧಿಕಾರಿಗಳ ಸಂಘಟನೆಯ ಉಡುಪಿ ವಿಭಾಗದ ಪದಾಧಿಕಾರಿ ಮಂಜುನಾಥ ಹೆಬ್ಬಾರ್, ಅಧಿಕಾರಿಗಳ ಸಂಘದ ಅಧ್ಯಕ್ಷೆ ಶಶಿಕಲಾ ಹಾಗೂ ವಿಮಾ ನೌಕರರ ಸಂಘ ಉಡುಪಿ ವಿಭಾಗದ ಅಧ್ಯಕ್ಷ ಕೆ. ವಿಶ್ವನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News