×
Ad

ದ.ಕ. ಜಿಲ್ಲೆಯಲ್ಲಿ ಕನ್ನಡ ಭವನಕ್ಕೆ ಸಿಎಂ, ಸಚಿವರಿಂದ ಪೂರಕ ಸ್ಪಂದನೆ: ಡಾ. ಎಂ.ಪಿ.ಶ್ರೀನಾಥ್

Update: 2022-02-14 22:56 IST

ಬಂಟ್ವಾಳ: ಸಾಹಿತ್ಯ ಕ್ಷೇತ್ರದಲ್ಲಿ ದ.ಕ. ಜಿಲ್ಲೆಯನ್ನು ಮಾದರಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರತಿ ತಾಲೂಕಿನಲ್ಲೂ ಸಾಹಿತ್ಯ ಚಟುವಟಿಕೆಗಳನ್ನು ನಡೆಸುವಂತೆ ತಾಲೂಕು ಅಧ್ಯಕ್ಷರಿಗೆ ಪ್ರೇರಣೆ ನೀಡಲಾಗಿದೆ. ಜಿಲ್ಲೆಯಲ್ಲಿ ಕನ್ನಡ ಭವನಕ್ಕೆ ಮುಖ್ಯಮಂತ್ರಿ, ಸಚಿವರಿಗೆ ಮನವಿ ಮಾಡಲಾಗಿದ್ದು, ಮುಂದಿನ ಬಜೆಟ್‌ನಲ್ಲಿ ಅದಕ್ಕೆ ಪೂರಕ ಸ್ಪಂದನೆ ಸಿಗುವ ನಿರೀಕ್ಷೆ ಇದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ಹೇಳಿದರು.

ಅವರು ಸೋಮವಾರ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕದ ನೂತನ ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಬಂಟ್ವಾಳವು ಸಾಹಿತ್ಯ ಕ್ಷೇತ್ರದಲ್ಲಿ ಶ್ರೀಮಂತ ತಾಲೂಕು ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡಿದ್ದು, ಸಾಕಷ್ಟು ಮಂದಿ ಮೇರು ಸಾಹಿತಿಗಳು ಕನ್ನಡಕ್ಕೆ ಕೊಡುಗೆಗಳನ್ನು ನೀಡಿದ್ದಾರೆ. ಕನ್ನಡ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ವಿಶ್ವನಾಥ್ ಅವರು ತಾಲೂಕಿನ ಜವಾಬ್ದಾರಿಯನ್ನು ತೆಗೆದುಕೊಂಡಿದ್ದು, ಎಲ್ಲಾ ಕ್ಷೇತ್ರದವರನ್ನೂ ಒಳಗೊಂಡು ಉತ್ತಮ ತಂಡವನ್ನು ಕಟ್ಟಿದ್ದಾರೆ ಎಂದರು.

ನೂತನ ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ ಮಾತನಾಡಿ, ಜಾತಿ, ಮತ, ಅಂತಸ್ತು ಮೀರಿ ತನ್ನನ್ನು ಆರಿಸಿರುವುದಕ್ಕೆ ತಾನು ಕೃತಜ್ಞನಾಗಿದ್ದೇನೆ. ಹಿರಿಯ ಸಾಹಿತಿ ಏರ್ಯರ ಜತೆಗಿನ ಓಡಾಟ, ಪಂಜೆ ಸಾಹಿತ್ಯದ ಪ್ರೇರಣೆಯಿಂದ ಸಾಹಿತ್ಯ ಪರಿಚಾರಕನಾಗಲು ಅವಕಾಶ ಸಿಕ್ಕಿದೆ ಎಂದು ಭಾವಿಸಿದ್ದೇನೆ ಎಂದು ಎಲ್ಲರ ಸಹಕಾರ ಕೋರಿದರು.

ವೈದ್ಯೆ ಡಾ. ವೀಣಾ ತೋಳ್ಪಾಡಿ ಅವರು ಉಪನ್ಯಾಸ ನೀಡಿ, ಜನಸಾಮಾನ್ಯರು ಸಾಹಿತ್ಯದ ಬಾಗಿಲನ್ನು ಒಳಹೊಕ್ಕು ನೋಡಿದಾಗ ಬದುಕು ಸುಂದರವಾಗುತ್ತದೆ. ಭಾವನೆಯೇ ಸಾಹಿತ್ಯಕ್ಕೆ ಮುಖ್ಯವಾಗಿದ್ದು, ಭಾಷೆ ಕೇವಲ ಸಾಧನವಾಗಿರುತ್ತದೆ. ಪೂರ್ವಾಗ್ರಹವನ್ನು ಬಿಟ್ಟು ಓದಿಗೆ ಮಹತ್ವ ನೀಡಿದರೆ ನಮ್ಮಲ್ಲಿ ಧನಾತ್ಮಕ ಬದಲಾವಣೆ ಕಾಣುವುದಕ್ಕೆ ಸಾಧ್ಯ ಎಂದರು.

ಮುಖ್ಯಅತಿಥಿಗಳಾಗಿ ಸ್ವರ್ಣೋದ್ಯಮಿ ನಾಗೇಂದ್ರ ವಿ.ಬಾಳಿಗಾ, ಹಿರಿಯ ನ್ಯಾಯವಾದಿ ಅಶ್ವನಿಕುಮಾರ್ ರೈ, ಸಾಹಿತಿ ಸದಾನಂದ ಬಂಗೇರ, ಘಟಕದ ನಿಕಟಪೂರ್ವ ಅಧ್ಯಕ್ಷ ಮೋಹನ್ ರಾವ್, ಉಳ್ಳಾಲ ಘಟಕದ ಅಧ್ಯಕ್ಷ ಧನಂಜಯ ಕುಂಬ್ಳೆ, ಮಂಗಳೂರು ಘಟಕದ ಅಧ್ಯಕ್ಷ ಮಂಜುನಾಥ್ ರೇವಣ್ಕರ್, ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ರಾಜೇಶ್ವರಿ ಎಂ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಶಿಕ್ಷಣ ಸಂಯೋಜಕಿ ಸುಜಾತಕುಮಾರಿ ಮೊದಲಾದವರು ಉಪಸ್ಥಿತರಿದ್ದರು.

ಘಟಕದ ನೂತನ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಘಟಕದ ಗೌರವ ಕೋಶಾಧ್ಯಕ್ಷ ಡಿ.ಬಿ.ಅಬ್ದುಲ್ ರಹಿಮಾನ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ ವಂದಿಸಿದರು. ನಿವೃತ್ತ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News